ಪತ್ರಿಕಾ ವರದಿಯೊಂದು ನೂರು ಪದಗಳಲ್ಲಿ ಹೇಳುವ ಸಂಗತಿಯನ್ನು ವ್ಯಂಗ್ಯಚಿತ್ರವೊಂದು ಕೆಲವೇ ಗೆರೆಗಳಲ್ಲಿ ಹೇಳಬಲ್ಲದು. ಹಾಗಾಗಿ, ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ಇಂದಿಗೂ ಕಾಯಂ ಸ್ಥಾನ. ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ವ್ಯಂಗ್ಯಚಿತ್ರಕಾರ, ಅದನ್ನು ಅಷ್ಟೇ ಸೂಕ್ಷ್ಮವಾಗಿ, ಸೃಜನಶೀಲವಾಗಿ ತನ್ನ ಗೆರೆಗಳಲ್ಲಿ ಚಿತ್ರಿಸಬಲ್ಲ. ಎಷ್ಟೋ ಬಾರಿ ವರದಿಯೊಂದು ಬೀರಬಹುದಾದ ತೀವ್ರ ಪರಿಣಾಮವನ್ನು ವ್ಯಂಗ್ಯಚಿತ್ರದ ಮೊನಚು ಗೆರೆಯೊಂದೇ ಬೀರಬಲ್ಲದು.
ವ್ಯವಸ್ಥೆಗೆ ಚುರುಕು ಮುಟ್ಟಿಸಬಲ್ಲ ಭಾರತೀಯ ವ್ಯಂಗ್ಯಚಿತ್ರಕಾರರಲ್ಲಿ ಕೇಶವ್ ವೆಂಕಟರಾಘವನ್ ಅವರ ಹೆಸರು ಮಹತ್ವದ್ದು. ವ್ಯಂಗ್ಯಚಿತ್ರದ ಮೇಲಿನ ಮೋಹಕ್ಕಾಗಿಯೇ ಕೈತುಂಬಾ ಸಂಬಳ ತರುವ ಬ್ಯಾಂಕಿನ ನೌಕರಿಗೂ ಗುಡ್ ಬೈ ಹೇಳಿದವರು ಅವರು. ತಮಿಳು ವಾರಪತ್ರಿಕೆ ‘ಆನಂದ ವಿಕಟನ್’ ಮೂಲಕ ವೃತ್ತಿಜೀವನ ಆರಂಭಿಸಿದ ಅವರು, ಮುಂದೆ ‘ದ ಹಿಂದೂ’ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಓದುಗರ ಮನದಲ್ಲಿ ಸ್ಥಾನ ಪಡೆದವರು. ದಶಕಗಳ ಕಾಲ ಗೆರೆಗಳೊಂದಿಗೆ ಕಳೆದ ಒಡನಾಟದಲ್ಲಿ ಅವರು ಕಲಿತದ್ದು ಅಪಾರ. ತಮ್ಮ ವ್ಯಂಗ್ಯಚಿತ್ರಗಳ ಮೂಲಕವೇ ಜನಸಾಮಾನ್ಯರ ನೋವು–ನಲಿವುಗಳಿಗೆ ದನಿಯಾದ ಸಂತೃಪ್ತಿ ಅವರದ್ದು.
ವ್ಯಂಗ್ಯಚಿತ್ರಕಾರನೊಬ್ಬ ಗೆರೆಗಳ ಮೂಲಕ ಓದುಗರ ಮನಸನ್ನು ನಾಲ್ಕೈದು ಸೆಕೆಂಡುಗಳಷ್ಟು ಕಾಲ ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ಕೆಲವೇ ಗೆರೆಗಳ ಮೂಲಕವೇ ಜನಸಾಮಾನ್ಯರ ಒಳತುಡಿತ, ರಾಜಕಾರಣದ ನಾಡಿಮಿಡಿತ ಎರಡನ್ನೂ ಸಮರ್ಥವಾಗಿ ಒಡಮೂಡಿಸುವ ಕಲೆ ಸಿದ್ಧಿಸುವುದು ಸುಲಭವೂ ಅಲ್ಲ. ಅದಕ್ಕಾಗಿ ವ್ಯಂಗ್ಯಚಿತ್ರಕಾರನೊಬ್ಬ ಇಡೀ ದಿನದ ಸುದ್ದಿ, ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ನಿತ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಯ ಮೇಲೆ ನಿಗಾ ವಹಿಸುತ್ತಲೇ ಮನದಲ್ಲಿ ಅದನ್ನು ಚಿತ್ರಿಸುವ ಬಗ್ಗೆಯೂ ಯೋಚಿಸಬೇಕು. ಬರೆವ ಗೆರೆಗಳಲ್ಲಿ ಕೌಶಲವೂ ಇರಬೇಕು. ಗೆರೆಗಳಲ್ಲಿ ಒಂದಿಷ್ಟು ಓರೆ ಕೋರೆಯಾದರೂ ಅದರ ಧ್ವನಿ ಬೇರೆಯೇ ಆಗಿಬಿಡುತ್ತದೆ. ಹಾಗಾಗಿ, ವ್ಯಂಗ್ಯಚಿತ್ರಕಾರನ ಜವಾಬ್ದಾರಿ ದೊಡ್ಡದು ಎನ್ನುವ ಅಭಿಪ್ರಾಯ ಅವರದ್ದು.
ಕೇಶವ್ ವೆಂಕಟರಾಘವನ್ ಅವರ ಕಪ್ಪುಬಿಳುಪಿನ ಸರಳ ಗೆರೆಗಳಲ್ಲಿ ರಾಜಕಾರಣಿಗಳಾದ ಜಯಲಲಿತಾ, ಸೋನಿಯಾ, ಮನಮೋಹನ ಸಿಂಗ್ ಅವರಷ್ಟೇ ಅಲ್ಲ ಸಂಗೀತ ಲೋಕದ ದಿಗ್ಗಜರಾದ ಬಾಲಮುರಳಿ ಕೃಷ್ಣ, ಪಂ. ಹರಿಪ್ರಸಾದ್ ಚೌರಾಸಿಯಾ ಅವರೂ ಇದ್ದಾರೆ. ಷೇರುಪೇಟೆಯ ಗೂಳಿ ಬಂಡವಾಳಗಾರರ ನಿರೀಕ್ಷೆಯನ್ನೂ ಮೀರಿ ಹಾರುವ, ನ್ಯಾಯಾಂಗ ವ್ಯವಸ್ಥೆ ಹಿಡಿದಿರುವ ಹಾದಿ, ದಿನೇದಿನೇ ಕಾವೇರುತ್ತಿರುವ ಭೂಮಿಗೂ ದಾಹ ತಪ್ಪಿದ್ದಲ್ಲ... ಹೀಗೆ ಒಂದೊಂದು ವಿದ್ಯಮಾನಕ್ಕೂ ಅವರ ವ್ಯಂಗ್ಯಚಿತ್ರಗಳು ಕನ್ನಡಿ ಹಿಡಿದಿವೆ.
2019ರಲ್ಲಿ ನಿವೃತ್ತಿಯಾದ ಬಳಿಕ ಕೇಶವ್ ಅವರು ‘ಕೃಷ್ಣ ಫಾರ್ ಟುಡೇ’ (krishna for today) ಹೆಸರಿನಲ್ಲಿ ಸ್ವಂತದ್ದೊಂದು ವೆಬ್ ಸೈಟ್ ಮಾಡಿಕೊಂಡು, ಕೃಷ್ಣನ ವಿವಿಧ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಸೇರಿದಂತೆ ವಿವಿಧೆಡೆ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿರುವ ಕೇಶವ್ ವೆಂಕಟರಾಘವನ್ ಅವರು ಈ ಬಾರಿಯ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯ ‘ಬಾರ್ಟನ್ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಜುಲೈ 6ರಂದು ನಡೆಯುವ ಸಮಾರಂಭದಲ್ಲಿ ಬಾಟರ್ನ್ಸ್ ಎಂ.ಡಿ ಭರತ ಮೆಹ್ತಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂದು ನಡೆಯುವ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಅಮರನಾಥ್ ಕಾಮತ್ ಅವರು ಉದ್ಘಾಟಿಸಲಿದ್ದಾರೆ.
ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1, ಮಿಡ್‌ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ. ಜುಲೈ 6ರಿಂದ 20ರವರೆಗೆ ಪ್ರದರ್ಶನ ಇರಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 6 (ಭಾನುವಾರ ಮತ್ತು ಸಾರ್ವಜನಿಕ ರಜೆ ಹೊರತುಪಡಿಸಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.