ಮೊದಲು ನಾಲ್ಕು ಅಪರಿಚಿತ ಮುಖಗಳು ಕಂಡನಂತರ, ನೋಡಿದರೆ ಸ್ವತಃ ಮುಲ್ಲಾ ಸರ್ ನಿಂತಿದ್ದರು! ನಾನು ಸಹಜವಾಗಿ ನಮಸ್ಕಾರ ಹೇಳಿದೆ. ಅವರು ಆ ಗುಡಿಸಲಿನಲ್ಲಿ, ಆ ಸ್ಥಿತಿಯಲ್ಲಿ ನನ್ನನ್ನು ಕಂಡು ಸ್ತಂಭೀಭೂತರಾಗಿದ್ದರು!
ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಮುಲ್ಲಾ ಮಾಸ್ತರ್ ನಮಗೆ ದೈಹಿಕ ಶಿಕ್ಷಕರಾಗಿದ್ದರು. ನಾನೋ ಆಟವೆಂದರೆ ಅಲರ್ಜಿಯವಳಾಗಿದ್ದರಿಂದ ಅವರಿಗೆ ಅಷ್ಟಕ್ಕಷ್ಟೇ ಆಗಿರುತ್ತಿದ್ದೆನೇನೋ? ಆದರೆ ಅವರು ಫ್ರೀ ಪೀರಿಯಡ್‌ನಲ್ಲಿ ಬೀಜಗಣಿತವನ್ನು ಹೇಳಿಕೊಡುತ್ತಿದ್ದರು. ಆಟದ ಮಾಸ್ತರ್ ಲೆಕ್ಕ ಹೇಗೆ ಕಲಿತಿದ್ದರೋ ಕಾಣೆ. ಗಣಿತದ ಮಾಸ್ತರರನ್ನೂ ಮೀರಿಸುವಂತೆ ಅಪವರ್ತಿಸುವಿಕೆಯನ್ನು ಕಲಿಸುತ್ತಿದ್ದರು. ಮತ್ತೆ ನಾಲ್ಕಾರು ಪೀರಿಯಡ್‌ಗಳಲ್ಲಿ ಅದನ್ನೇ ಅಭ್ಯಾಸ ಮಾಡಿಸುತ್ತಿದ್ದರು. ಲೆಕ್ಕ ಬರದಿದ್ದವರಿಗೆಲ್ಲ ಥೇಟ್ ಪಿ.ಟಿ. ಮಾಸ್ತರ್ ಸ್ಟೈಲ್‌ನಲ್ಲಿ ಶಿಕ್ಷಿಸುತ್ತಿದ್ದರು.
ಅದಕ್ಕೆಂದೇ ಕೆಲವು ಉಡಾಳ ಹುಡುಗರೆಲ್ಲಾ ‘ಲೆಕ್ಕಬಿಡಿಸುವ ನೆವದಲ್ಲಿ ಹುಡುಗಿಯರನ್ನು ಮುಟ್ಟಬಹುದೆಂದು ಅವರು ಲೆಕ್ಕ ಕಲಿಸುತ್ತಾರೆ’ ಎಂದೆಲ್ಲಾ ಆಪಾದಿಸುತ್ತಿದ್ದರು. ನನಗೋ ಲೆಕ್ಕವೆಂದರೆ ನೀರು ಕುಡಿದಷ್ಟು ಸುಲಭವಾದ್ದರಿಂದ ಅವರು ಪ್ರಶ್ನೆ ಕೊಟ್ಟ ಕೂಡಲೇ ಉತ್ತರ ಬರೆದು ತೋರಿಸುತ್ತಿದ್ದೆ. ಹಾಗಾಗಿ ನಾನವರ ಮೆಚ್ಚಿನ ವಿದ್ಯಾರ್ಥಿಯಾದುದಷ್ಟೇ ಅಲ್ಲ, ಅವರಿಗೊಂದು ಅಚ್ಚರಿಯೂ ಆಗಿದ್ದೆ.
ನಮ್ಮ ಹೈಸ್ಕೂಲಿನಲ್ಲಿ ಆಗ ಕನ್ನಡ ಮತ್ತು ಉರ್ದು ಮೀಡಿಯಂ ಎಂಬ ಎರಡು ವಿಭಾಗಗಳಿದ್ದವು. ಅವರು ಅಲ್ಲಿ ಮೂರು ದಿನ, ಇಲ್ಲಿ ಮೂರು ದಿನ ಕೆಲಸ ನಿರ್ವಹಿಸುತ್ತಿದ್ದರು. ಆ ಕಾಲದಲ್ಲಿ ಸಾಮಾನ್ಯವಾಗಿ ನಮ್ಮ ಜಾತಿಯವರೆಲ್ಲ ಸ್ವಲ್ಪ ಅನುಕೂಲಸ್ಥರೇ ಆಗಿದ್ದರಿಂದ, ಜೊತೆಗೆ ಏನಿಲ್ಲವೆಂದರೂ ಊರಿನಲ್ಲಿ ದೊಡ್ಡ ಮನೆಯ ಒಡೆತನವಾದರೂ ನಮಗಿದ್ದೇ ಇರುವುದು ಎಂಬಪೂರ್ವನಿರ್ಧರಿತ ಆಲೋಚನೆಯಿಂದ ಅವರು ನನ್ನನ್ನು ಕಂಡಾಗಲೆಲ್ಲ ‘ನಿಮ್ಮ ಹಳ್ಳಿಗೆ ಉರ್ದು ಮೀಡಿಯಂನಲ್ಲಿ ಓದುವ ಮಕ್ಕಳನ್ನುಕರೆದುಕೊಂಡು ಬರುತ್ತೇನೆ’ ಎನ್ನುತ್ತಿದ್ದರು. ಊರೆಲ್ಲ ಸುತ್ತಾಡಿ, ಕಾಡು, ನದಿ ನೋಡಿ, ಆಲೆಮನೆಯಲ್ಲಿ ಕಬ್ಬಿನಹಾಲು ಕುಡಿದು,ಇವಳ ಮನೆಯಲ್ಲಿ ಊಟ ಮಾಡಿ ಬರುವುದು ಎಂದು ಎಲ್ಲರೊಂದಿಗೂ ಹೇಳುತ್ತಿದ್ದರು. ನನಗೋ ಅವರೆಲ್ಲಾದರೂ ಬಂದಾರೆಂದುಭಯವಾಗುತ್ತಿತ್ತು. ಏಕೆಂದರೆ ಅವರ ನಿರೀಕ್ಷೆಯ ನೂರೊಂದು ಭಾಗ ಭಾಗ್ಯವೂ ನಮ್ಮದಾಗಿರಲಿಲ್ಲ.
ಹೀಗಿರುವಾಗ ಒಂದು ಮಳೆಗಾಲ ನಮ್ಮ ಗುಡಿಸಲಿನಂತಹ ಮನೆಯ ಮೇಲೆ ಗುಡ್ಡ ಜರಿದು ಬಿದ್ದು ಅರ್ಧ ಮನೆ ಮುರಿದಿತ್ತು. ಉಳಿದ ಭಾಗ ಬೀಳದಂತೆ ಕಂಬ ಕೊಟ್ಟು ನಿಲ್ಲಿಸಿದ್ದರು. ನಮ್ಮ ಜಮೀನಿಗೆ ತಾಗಿ ಇರುವ ಮಾಲ್ಕಿ ಜಾಗದ ಬಗ್ಗೆ ನೆರಮನೆಯವರೊಂದಿಗೆ ಜಗಳಪ್ರಾರಂಭವಾಗಿತ್ತು. ಅಪ್ಪ ರೆಕಾರ್ಡ್ ತೆಗೆಸಿ ನೋಡಿದಾಗ ಅದು ಮಸೀದಿಗೆ ಸೇರಿದ ಜಾಗವೆಂದು ಗೊತ್ತಾಯಿತು. ಅದೇನೋ ಗೊತ್ತಿಲ್ಲ.ನಮ್ಮ ಊರಿನ ಎಲ್ಲರ ಜಮೀನಿನ ಮೇಲೆ ಸರ್ಕಾರಿ ಜಾಗದ ಗಡಿಗಿಂತ ಮೊದಲು ಒಂದಿಡೀ ಪಟ್ಟಿಯಂತೆ ಮಸೀದಿಯ ಜಮೀನುಹರಡಿಕೊಂಡಿದೆ. ಅಪ್ಪ ಹೇಗಾದರೂ ಮಾಡಿ ಅದನ್ನು ಖರೀದಿಸೋಣವೆಂದು ಸಾಹೇಬರ ಮನೆಯವರೆಗೂ ಹೋಗಿ ಬಂದಿದ್ದರು.
ಅವರ ತಂಡವೊಂದು ಜಮೀನಿನ ಪರಿಶೀಲನೆಗಾಗಿ ಬರುವುದೆಂದು ದಿನ ನಿಗದಿಯಾಯಿತು. ಅಮ್ಮ ಬೆಳಿಗ್ಗೆ ಬೇಗನೆದ್ದು ಅವರಿಗಾಗಿ ತಿಂಡಿ, ಚಾತಯಾರಿಯಲ್ಲಿ ತೊಡಗಿದ್ದರು. ನಾನು ಯಥಾಪ್ರಕಾರ ಪುಸ್ತಕದಲ್ಲಿ ಕಳೆದುಹೋಗಿದ್ದೆ. ಅವರೆಲ್ಲ ಜಾಗ ನೋಡಿದರು. ತಂಗಿ ಓಡೋಡಿಬಂದು, ಅವರೆಲ್ಲ ಮನೆಗೆ ಬರುತ್ತಿದ್ದಾರೆ ಎಂದು ಸುದ್ದಿ ಮುಟ್ಟಿಸಿದಳು. ನಾನು ಗಡಬಡಿಸಿ ಎದ್ದು ಇದ್ದ ಚೂರು ಜಾಗದಲ್ಲಿ ಕಂಬಳಿಹಾಸತೊಡಗಿದೆ.
ಮೊದಲು ನಾಲ್ಕು ಅಪರಿಚಿತ ಮುಖಗಳು ಕಂಡನಂತರ, ನೋಡಿದರೆ ಸ್ವತಃ ಮುಲ್ಲಾ ಸರ್ ನಿಂತಿದ್ದರು! ನಾನು ಸಹಜವಾಗಿ ನಮಸ್ಕಾರಹೇಳಿದೆ. ಅವರು ಆ ಗುಡಿಸಲಿನಲ್ಲಿ, ಆ ಸ್ಥಿತಿಯಲ್ಲಿ ನನ್ನನ್ನು ಕಂಡು ಸ್ತಂಭೀಭೂತರಾಗಿದ್ದರು! ಅವರು ಅಷ್ಟು ಸಲ ಬರುತ್ತೇನೆಂದುತಮಾಷೆ ಮಾಡಿದರೂ ನಾನು ಮನೆಯ ವಿಷಯ ಹೇಳಿರಲಿಲ್ಲ. ಆದರೆ ಅವರ ನಿರೀಕ್ಷೆಗಳು ನನಗೆ ಅರ್ಥವಾಗಿದ್ದು, ಹಾಗೆಲ್ಲಾದರೂಬಂದರೆ ಏನು ಮಾಡುವುದೆಂದು ಯೋಚಿಸಿ ಅನೇಕ ಸಲ ನಿದ್ದೆಯೇ ಬರುತ್ತಿರಲಿಲ್ಲ. ಅವರಿಗೆ ಆ ಕ್ಷಣಕ್ಕೆ ಅಮ್ಮ ಕೊಟ್ಟ ತಿಂಡಿಯನ್ನುತಿನ್ನಲಾಗಲಿಲ್ಲ. ಚಹವನ್ನಷ್ಟೇ ಕುಡಿದು ನನ್ನ ತಲೆಯ ಮೇಲೆ ಕೈಯಿಟ್ಟು, ‘ಚೆನ್ನಾಗಿ ಓದು ಬೇಟಿ’ ಎಂದರು.
ಅವರನ್ನು ಕಳಿಸಿ ಬಂದ ಅಪ್ಪ ಹೇಳುತ್ತಿದ್ದರು– ‘ಅಯ್ಯೋ, ನಿನ್ನ ಮಾಸ್ತರದ್ದು ಮಜಾ ಇದ್ರೇ ಮಾರಾಯ್ತಿ. ಮೇಲೆ ಹೋಗಿ ನಿನ್ನ ಸುದ್ದಿಹೇಳಿ ಜೋರು ಅಳೂಲೇ ಶುರು ಮಾಡಿದ್ರು. ನಾನು ಅವಳಿಗೆ ಇಷ್ಟು ಕಷ್ಟ ಇದೆ ಅಂದುಕೊಂಡಿರಲಿಲ್ಲ ಎಂದು ಹೇಳಿ ದುಡ್ಡಿನ ರಾಶಿನೇಕೊಡಲಿಕ್ಕೆ ಬಂದ್ರು. ನಾನು ನಗಾಡಿ ಹೇಳ್ದೆ. ಬ್ಯಾಡ ಮಾಸ್ತ್ರೆ, ಅಂತ ಕಷ್ಟ ಏನಿಲ್ಲ. ಬೇಕಾದ್ರೆ ನಾನೇ ಕೇಳ್ತೆ ಹೇಳಿ.’
ತನ್ನನ್ನು ತಾನುಭಾರಿ ಶ್ರೀಮಂತ ಅಂದುಕೊಂಡಿದ್ದ ಅಪ್ಪನಿಗೆ ಅವರ ನಡವಳಿಕೆ ಆಶ್ಚರ್ಯ ತರಿಸಿತ್ತು. ಅದಕ್ಕಿಂತ ವಿಶೇಷವೆಂದರೆ ಆ ಮುಲ್ಲಾ ಸರ್ ನನ್ನನ್ನು ಓದಿಸಿಯೇ ತೀರುತ್ತೇನೆಂದು ಅಪ್ಪನಿಂದ ಭಾಷೆ ತೆಗೆದುಕೊಂಡರಂತೆ. ‘ನೀವು ಎಷ್ಟು ಕಷ್ಟ ಆದರೂ ಅವಳನ್ನು ಮಾತ್ರಓದಿಸ್ತೇನೆ ಅಂತ ಮಾತು ಕೊಡಬೇಕು’ ಅಂತ ಹಟ ಹಿಡಿದರಂತೆ. ನಾನು ಓದುತ್ತಿರುವಾಗಲೇ ಮದುವೆಯ ಪ್ರಸ್ತಾಪ ಬಂದಾಗಲೆಲ್ಲಅಪ್ಪ ಹೇಳುತ್ತಿದ್ದರು– ‘ಜಾತ್ಯಲ್ಲ, ಧರ್ಮ ಅಲ್ಲ. ಅಂಥವರು ಮಾತು ತೆಕಂಡ್ರು ಅವಳನ್ನು ಓದಿಸು ಹೇಳಿ. ಅವಳು ನಂಗೆಓದಿದ್ದು ಸಾಕು ಅನ್ನೂವರೆಗೆ ನಾನು ಓದಿಸುವವನೆ. ಮದುವೆಯೆಲ್ಲ ಮತ್ತೆ’ ಎಂದು.
ಮುಲ್ಲಾ ಸರ್ ಈಗ ಇದ್ದಾರೋ, ಇಲ್ಲವೋ ಗೊತ್ತಿಲ್ಲ. ನೆನಪಾಗಿಯಂತೂ ಯಾವತ್ತೂ ಇರುತ್ತಾರೆ. ‘ತೆರಿ ನಾಕೆ ಸಿತೆ’ ಅಂತೇನೋ
ಅರ್ಥವಾಗದ ಭಾಷೆಯಲ್ಲಿ ಬೈಯುತ್ತಿದ್ದ ಅವರು ನನ್ನನ್ನು ತುಂಬ ಅಭಿಮಾನದಿಂದ ನೋಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.