ADVERTISEMENT

ಪಶ್ಚಾತಾಪದ ಹಾದಿಯಲ್ಲಿ

ಪ್ರಬಂಧ

ಮುನವ್ವರ್ ಜೋಗಿಬೆಟ್ಟು
Published 20 ಅಕ್ಟೋಬರ್ 2018, 19:30 IST
Last Updated 20 ಅಕ್ಟೋಬರ್ 2018, 19:30 IST
ಚಿತ್ರ: ರಾಮಕೃಷ್ಣ ಸಿದ್ರಪಾಲ
ಚಿತ್ರ: ರಾಮಕೃಷ್ಣ ಸಿದ್ರಪಾಲ   

ನಮ್ಮ ಮನೆಯ ಆಸುಪಾಸಿನಲ್ಲಿ ಕುರುಚಲು ಕಾಡು ಇದೆ. ಅಲ್ಲಿ ವಿವಿಧ ಕಾಡು ಹಣ್ಣುಗಳ ಗಿಡ ಮರಗಳಿವೆ. ನಾವು ಸಂದರ್ಭ ಸಿಕ್ಕಾಗಲೆಲ್ಲ ಕುಂಟಾಲು, ನೇರಳೆ, ಸರಳಿ ಹಣ್ಣುಗಳನ್ನು ಕೊಯ್ಯುವುದು; ಅವುಗಳ ಜಾಗ ಗುರ್ತಿಸುವುದು ಮಾಡುತ್ತಿದ್ದೆವು.ಬೇರೆ ಯಾರಿಗೂ ಗೊತ್ತಿಲ್ಲದ ಜಾಗದಲ್ಲಿ ಯಾವುದಾದರೂ ಕಾಡುಹಣ್ಣಿನ ಮರವನ್ನು ಕಂಡುಹಿಡಿದೆವೆಂದರೆ ಮಗಿಯಿತು; ಕೊಲಂಬಸ್ ಅಮೆರಿಕ ಕಂಡುಹಿಡಿದಂತೆ ಸಂಭ್ರಮಿಸುತ್ತಿದ್ದೆವು.

ಒಂದುಸಲ ಕಾಡು ಸುತ್ತಲು ಹೊರಟಿದ್ದೆವು. ನಾನು ಮತ್ತು ಮಾವನ ಮಗ ಇರ್ಷಾದ್ (ಆತ ನನ್ನ ಬಾಲಂಗೋಚಿ) ಕಾಡುದಾರಿ ಹಿಡಿದು ಅಜ್ಜಿ ಮನೆಗೆ ಬರುತ್ತಿದ್ದೆವು. ಸ್ವಲ್ಪ ದೂರ ನಡೆದಿರಬೇಕು. ಅಲ್ಲೇ ಒಂದು‌‌ ಕಡೆ ಪೇರಳೆ (ಸೀಬೆ ಹಣ್ಣು) ಮರ. ಗುಟುರ್, ಗುಟುರ್ ಎಂದು ಸದ್ದಾಗುತ್ತಲೇ ಇತ್ತು. ಯಾವುದೋ‌ ಕಾಡುಪ್ರಾಣಿ ಎಂದು ನಮಗೆ ಗೊತ್ತಿದ್ದರಿಂದಲೇ ಇಬ್ಬರಿಗೂ ಅಳುಕು. ನೀ ಮುಂದು, ನೀ ಮುಂದು ಎಂದು ಒಬ್ಬರನ್ನೊಬ್ಬರು ದೂಡಿಕೊಳ್ಳುತ್ತಾ ಶಬ್ದ ಬರುವ ಕಡೆ ಅಂಜುತ್ತ ನೋಡತೊಡಗಿದ್ದೆವು.

ನನಗೆ ಹುಚ್ಚು ಕುತೂಹಲ, ಅವನಿಗಾದರೆ ಹೆದರಿಕೆ. ನಮ್ಮ ಕಾಡು ದಾರಿಗಳಲ್ಲಿ ನಮ್ಮ ಜಮೀನಿನ ಸನಿಹದಲ್ಲೆಲ್ಲೂ ಪ್ರಾಣಾಪಾಯವಾಗುವಷ್ಟು ಕ್ರೂರ‌ ಪ್ರಾಣಿಗಳೇನೂ ಓಡಾಡಿದ್ದು ನೋಡಿರಲಿಲ್ಲ. ಮೆಲ್ಲಗೆ ಗಿಡಗಂಟಿಗಳನ್ನು ಸರಿಸಿ ಅತ್ತ ನೋಡಿದೆವು. ನಾವಾಗ ಸಣ್ಣವರು; ಹೊಸದೆಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಿದ್ದೆವು. ಮಧ್ಯಮಗಾತ್ರದ ಕೋತಿಯೊಂದು ನಮ್ಮನ್ನೇ ನೋಡಿ ಬೆದರಿಸುತ್ತಿತ್ತು. ಮಕ್ಕಳು, ಮಹಿಳೆಯರೆಂದರೆ ಕೈಲಾಗದವರು ಎಂಬ ತಿಳಿವಳಿಕೆ ಅವಕ್ಕೂ ಇದ್ದಂತಿತ್ತು. ಅದರ ನೋಟ ನೋಡಿ ನನಗೂ ಭಯ ಶುರುವಾಯಿತು. ತಗ್ಗಿನ ಪೇರಳೆ ಮರದಲ್ಲಿ ಕುಳಿತಿದ್ದ ಅದು ನಮ್ಮನ್ನು ನೋಡುತ್ತಾ ಹಲ್ಲು ಕಿರಿಯುತ್ತ ಸದ್ದು ಮಾಡುತ್ತ ಬೆದರಿಸುತ್ತಿತ್ತು.

ADVERTISEMENT

ಅಲ್ಲೇ ಬಿದ್ದಿದ್ದ ಕಲ್ಲೊಂದನ್ನು ತೆಗೆದು ಬೀಸಿ ಎಸೆದೆ. ಕಿಟಾರನೆ ಕಿರುಚಿದ ಧ್ವನಿ, ಅದರ ಬೆನ್ನಿಗೆ ದೊಪ್ಪೆಂದು ಬಿದ್ದ ಸದ್ದಷ್ಟೇ ಕೇಳಿಸಿದ್ದು. ನಾವು ಹೆದರಿ ಓಡಿ ಬಂದೆವು. ನಾವು ಹೀಗೆ ಜೀವ ಕೈಯಲ್ಲಿ ಹಿಡಿದು ಓಡಿ ಬರುವುದನ್ನು ಅಂಗಜ ನೋಡಿದ. ಅವನು ಅಲ್ಲೇ ಏನೋ ಬೀಜ ಬಿತ್ತುತ್ತಿದ್ದ. ಅಂಗಜ ಎಂದರೆ ನಮ್ಮ ಓರಗೆಯ ಹುಡುಗನಲ್ಲ, ವಯಸ್ಸಿಗೆ ನನ್ನ ಅಮ್ಮನಿಗೆ ಆಸುಪಾಸಿನ ವ್ಯಕ್ತಿ. ಕೀಳ್ಜಾತಿಯ ಹೊಲೆಯ ಎಂಬ ಕಾರಣದಿಂದ ಊರಿಗೆ ಊರೇ ಹಾಗೆ ಕರೆಯುತ್ತಿದ್ದರಿಂದ ನಾವೂ ಅವನನ್ನು ಅಂಗಜ ಎಂದೇ ಕರೆಯುತ್ತಿದ್ದೆವು.

ಅವನಮ್ಮ ಉಕ್ರು ಕೂಡಾ ಅದೇ ಪರಿಸರದ ಜಂಗಮ ಲತೆ. ಒಂದು ಕಾಲದಲ್ಲಿ ಅವರೆಲ್ಲರೂ ನನ್ನಜ್ಜನ ತೋಟದ ಐನಾತಿಗಳು. ಇಂಚಿಂಚೂ ನಮ್ಮ ಪರಿಸರದ ಬಗ್ಗೆ ಅರೆದು ಕುಡಿದವರು. ಒಂದೊಮ್ಮೆ ಸೂಲಗಿತ್ತಿಯಾಗಿ, ನಾಟಿ ವೈದ್ಯಳಾಗಿ, ನಮ್ಮನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅಜ್ಜಿ ಉಕ್ರು. ಅವಳು ಈಗ ನೆನಪು ಮಾತ್ರ.

ನಮ್ಮ ಓಟ ನೋಡಿದಂತೆ ಅಂಗಜನಿಗೆ ಈ ಹುಡುಗರೇನೋ ಕಿತಾಪತಿ ಮಾಡಿರುವುದು ಸ್ಪಷ್ಟವಾಗಿರಬೇಕು. ಹೆದರಿ ಓಡಿ ಬರುತ್ತಿದ್ದಂತೆ ಮಾವನ ಮಗ ಎಲ್ಲವನ್ನೂ‌ ಒಂದೇ ಉಸಿರಿಗೆ ಹೇಳಿ ಮುಗಿಸಿದ. ‘ಬನ್ನಿ ಇಲ್ಲಿ’ ಎಂದು ಕರೆಯುತ್ತಾ ಅಂಗಜ ನಮ್ಮನ್ನು ಮತ್ತದೇ ಪೇರಳೆ ಮರದಡಿಗೆ ಕರೆದುಕೊಂಡು ಹೋದ. ಅವನ ಹಿಂದೆ ನಾವು ಹೆದರುತ್ತಾ ಕಾಲು ಹಾಕಿದೆವು. ನೋಡಿದರೆ, ನಾವು ಕಲ್ಲು ಹೊಡೆದ ಮಂಗ ಅಂಗಾತ ನೆಲದ ಮೇಲೆ ಬಿದ್ದಿದೆ.

ನಮ್ಮನ್ನು ಮಕ್ಕಳೆಂದು ಕಡೆಗಣಿಸಿ ಸಾಧುಗಳೆಂದು ಗ್ರಹಿಸಿದ್ದೇ ಮಂಗ ಮಾಡಿದ ಮೊದಲ ತಪ್ಪು. ಹೊಡೆದ ಕಲ್ಲು ಬಹುಶಃ ಮರ್ಮಕ್ಕೆ ಬಿದ್ದಿರಬೇಕು; ಅದಾಗಲೇ ಮಂಗನ ಪ್ರಾಣಪಕ್ಷಿ ಹಾರಿಹೋಗಿತ್ತು. ಅಂಗಜನಿಗೆ ಅದನ್ನು ನೋಡಿ ಖುಷಿಯಾಯಿತೋ ಬೇಸರವಾಯಿತೋ ಸುಮ್ಮನೆ ನಕ್ಕ, ಹೆಚ್ಚಿಗೆ ಏನೂ ಹೇಳಲಿಲ್ಲ. ಕೈಯಲ್ಲೇ ಇದ್ದ ಹಾರೆಯಿಂದ ಗುಂಡಿ ತೆಗೆದು ಹಾಗೆಯೇ ಮಣ್ಣು ಮಾಡಿದ. ಅಷ್ಟೆಲ್ಲಾ ಕಷ್ಟಪಟ್ಟು ಮಾಡಿದ ಕೃಷಿಯನ್ನು ಒಂದೇ ದಿನದಲ್ಲಿ ಹಾಳು ಬೀಳುವಂತೆ ಮಾಡುವ ಕೋತಿಗಳ ಕಿತಾಪತಿಯನ್ನು ನೆನೆದು ಸತ್ತು ಹೋದದ್ದು ಒಳ್ಳೆಯದೇ ಆಯಿತೆಂದು ಅವನಿಗೂ ಅನಿಸಿರಬೇಕು. ಅದರ ಕಳೇಬರವನ್ನು ನೋಡಿ ಪಾಪ ಎಂದು ಅನಿಸಿ ಬೇಸರವೂ ಆಗಿರಬಹುದು.

ಉಮ್ಮನಿಗೂ ಮಂಗಗಳೆಂದರೆ ಆಜನ್ಮ ಶತ್ರುವಿನಂತೆ. ದಿನಾ ಮನೆಯ ಎಳನೀರು ಕಿತ್ತು ಕುಡಿಯುವುದು, ಬಸಳೆ ಬಳ್ಳಿಯ ಚಪ್ಪರವನ್ನು ಬೀಳಿಸುವುದು, ಮಾವು, ಹಲಸು‌ ಹಣ್ಣುಗಳನ್ನು ಅರ್ಧಂಬರ್ಧ ತಿಂದು ಹಾಕಿ ಹಾಳುಗೆಡಹುವುದು ಇವು ನಿತ್ಯದ ಆರೋಪಗಳು. ನಾನು ಮನೆಯಲ್ಲಿದ್ದರೆ ಒಂದರ್ಧ ಪುಟ ಪುಸ್ತಕ ಓದುವಷ್ಟಕ್ಕೇ ನನ್ನನ್ನು‌ ಕರೆದು, ‘ಮಂಗಗಳು ತುಂಬಾ ಇದೆ ಕಣೋ, ನಾವ್ಯಾರೂ ಹೆಣ್ಮಕ್ಕಳು ಬೊಬ್ಬೆ ಹಾಕಿದರೆ ಅವು ಹೋಗುವುದಿಲ್ಲ. ಗಂಡಸರ ಬೊಬ್ಬೆಗೆ ಅವು ಹೆದರುತ್ತವೆ, ಸ್ಬಲ್ಪ ಬಂದು ಬೊಬ್ಬೆ ಹಾಕಿ ದೂರ ಓಡಿಸು’ ಎಂದು ಹೇಳುವುದುಂಟು. ರಜೆಯಲ್ಲಿ ಮನೆಗೆ ಹೋದರೆ, ಓದಿನಲ್ಲಿ ಮುಳುಗುವ ನನಗೆ ಮಂಗನನ್ನು ಓಡಿಸುವುದೋ, ಅಮ್ಮನಲ್ಲಿ ಆಗದು ಎನ್ನುವುದೋ ತಿಳಿಯದೆ ಕೊನೆಗೆ ಪುಸ್ತಕ ಓದಲು ಬಿಡದ ಮಂಗಗಳಿಗೆ ಹಿಡಿ ಹಿಡಿ ಶಾಪ ಹಾಕುತ್ತಾ ‘ಹಿಡಿಯೇ, ಹಿಡಿಯೇ’ ಅನ್ನುತ್ತಾ ಗಂಟಲ ನೀರು ಬತ್ತಿಸಿ ಮತ್ತೊಂದು ಗಂಟೆ ಆ ಭಾಗಕ್ಕೆ ಬಾರದಷ್ಟು‌ ಜೋರು ಮಾಡಿ ಬಾಗಿಲು ಹಾಕಿಕೊಳ್ಳುವುದೇ ಕೆಲಸವಾಗಿಬಿಡುತ್ತಿತ್ತು.

ನಮ್ಮಕ್ಕನ ಮನೆ ಇರುವುದು ‘ಬಾಗ್ಲೋಡಿ’. ನಮ್ಮ ಜೋಗಿಬೆಟ್ಟು ಮನೆಯಿಂದ 10 ಕಿ.ಮೀ ದೂರ. ಅಲ್ಲಿಯ ಭಾವನ ಅಣ್ಣನ ಹೆಂಡತಿ ಒಮ್ಮೆ ಈ ಮಂಗಗಳ ಹಾವಳಿಗೆ ಬೇಸತ್ತು, ಮನೆಗೆ ತಂದಿದ್ದ ಇಲಿಗಳ ಪಾಷಾಣ ಸವರಿ ಒಂದು ಬಾಳೆಹಣ್ಣನ್ನು ಮನೆಯ ಬಳಿ ಇಟ್ಟಿದ್ದರಂತೆ. ಹಾಗೆಯೇ ಗುಂಪಿನಲ್ಲಿದ್ದ ಮಂಗವೊಂದು ಬಂದು ಅದೇ ಬಾಳೆ ಹಣ್ಣನ್ನು ನೋಡಿದೆ. ಅತ್ತಿಗೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದಂತೆ ನಟಿಸುತ್ತ ದೂರದಲ್ಲೇ ನಿಂತು ನೋಡುತ್ತಿದ್ದರು. ಆ ಮಂಗ ಬಂದು ಬಾಳೆಹಣ್ಣು ಹೆಕ್ಕಿಕೊಂಡು ಸಿಪ್ಪೆ ಸವರಿ ಮೂಸಿ ನೋಡಿ ಏನೋ ಸೂಚನೆ ಕೊಡುವಂತೆ ಕೀರಲುಗುಟ್ಟುತ್ತಾ ಆ ಬಾಳೆಹಣ್ಣನ್ನು ಎಸೆದು ಪೇರಿ ಕಿತ್ತಿತಂತೆ. ಹಾಗೆ ಪಾಷಾಣ ಇಟ್ಟು ಇಲಿಗಳನ್ನು ಮಂಗ ಮಾಡಬಹುದೇ ಹೊರತು ಮಂಗಗಳನ್ನಲ್ಲ ಎಂದು ಅವರು ಹೇಳಿದ್ದು ನೆನಪು.

ನನಗೆ ಈ ಕತೆ ಕೇಳಿ ವಿಪರೀತ ಕುತೂಹಲವುಂಟಾಯಿತು; ಕೇವಲ ಮೂಸಿ ನೋಡುವಷ್ಟರಲ್ಲೇ ಹಣ್ಣಿನಲ್ಲಿ ಲೇಪಿತವಾದ ವಿಷವನ್ನು ಮಂಗಗಳು ಪತ್ತೆಹಚ್ಚಿದ್ದಾದರೂ ಹೇಗೆ? ಈ ಪ್ರಶ್ನೆ ಕೊರೆಯುತ್ತಲೇ ಇತ್ತು. ಈಗ ನಮ್ಮೂರಲ್ಲಿ ಮಂಗನ ಉಪಟಳ ತಾರಕಕ್ಕೇರಿತ್ತು. ಮಾವು– ಹಲಸುಗಳನ್ನೆಲ್ಲಾ ತಿನ್ನಲು ಬರುತ್ತಿದ್ದವು. ತಮ್ಮ ಎಲ್ಲೆ ಮೀರಿ ಮನೆಯ ಹೊರಗೆ ತೊಳೆಯಲಿಟ್ಟ ಪಾತ್ರೆ ಪಗಡೆಗಳಿಗೂ ಕೈ ಹಾಕಿ ತಲೆ ಕೆಳಗು ಮಾಡಿ ಹಾಕಿಬಿಡುವಷ್ಟು ಅವುಗಳ ಉಪಟಳ ಜೋರಾಯಿತು. ಅಲ್ಪ ಸ್ವಲ್ಪ ಪಾತ್ರೆಯಲ್ಲಿ ಬಾಕಿ ಇದ್ದ ಅನ್ನದ ಅಗುಳನ್ನೆಲ್ಲಾ ಕೈ ಹಾಕಿ ಹುಡುಕಿ ತಿನ್ನುತ್ತಿದ್ದವು. ಸುಮಾರು ಸಲ ನನ್ನಲ್ಲೇನಾದ್ರೂ ಡಿ.ಎಸ್.ಎಲ್.ಆರ್ ಇದ್ರೆ ಅವುಗಳ ತುಂಟ ಪಟಗಳನ್ನೆಲ್ಲಾ ತೆಗೆದುಬಿಡಬೇಕೆಂದು ಮಾಡಿದ್ದೆ. ಸದ್ಯ ಮೊಬೈಲ್ ಕ್ಯಾಮರಾ ಅಷ್ಟು ಕ್ಲಾರಿಟಿ ಇಲ್ಲದ ಕಾರಣ‌ ಸೆರೆಹಿಡಿಯುವಾಗಲೆಲ್ಲಾ ಸ್ಲೇಟಿನಲ್ಲಿ ಬರೆದದ್ದು ಉಜ್ಜಿದಂತೆ ಗೋಜಲು ಗೋಜಲಾಗಿ ಬಿಡುತ್ತಿದ್ದವು.

ಒಮ್ಮೆ ನೆರೆ ಮನೆಯ ಹುಡುಗನಿಗೆ ಈ ಮಂಗಗಳ ಉಪಟಳದಿಂದ ರೋಸಿ ಹೋಗಿತ್ತು. ಅವುಗಳಿಗೆ ತಕ್ಕ ಪಾಠ‌ ಕಲಿಸಬೇಕೆಂದು ಆ ದಿನ ರಾತ್ರಿ ಉಳಿದಿದ್ದ ಅನ್ನಕ್ಕೆ ಪಾಷಾಣ ಸೇರಿಸಿ ತೆಂಗಿನ ಬುಡಕ್ಕೆ ಸುರುವಿದ್ದ. ಎಂದಿನಂತೆ ಬಂದ ಕೋತಿಗಳ ಗುಂಪು, ಅಲ್ಲೆಲ್ಲಾ ಅಲೆದಾಡಿ‌ ತೆಂಗಿನ ಬುಡಕ್ಕೆ ಸುರುವಿದ್ದ ಅನ್ನದ ರಾಶಿಯನ್ನು ಒಂದಗಳೂ ಬಾಕಿಯಾಗದಂತೆ ಖಾಲಿ ಮಾಡಿದ್ದವು.

ಹಾಗೆ ಹೊರಟುಹೋದ ಮಂಗಗಳ ಸುಳಿವು ಎರಡು ದಿನಗಳ ಮಟ್ಟಿಗಿರಲಿಲ್ಲ. ಮೂರನೇ ದಿನ ಅಸಹ್ಯ ವಾಸನೆ‌‌ಗೆ ಮೂಗಿನ‌‌ ಹೊಳ್ಳೆಗಳ ಕೂದಲೂ ಭಸ್ಮವಾಗುವಂತೆ ಭಾಸವಾಗತೊಡಗಿತು. ಯಾರಲ್ಲಿ ಕೇಳಿದರೂ ‘ಹಂದಿ, ಗಿಂದಿ ಏನಾದರೂ ಸತ್ತಿರಬಹುದು’ ಎಂದು ಮೂಗಿಗೆ ಕೈ ಇಟ್ಟು ಭವಿಷ್ಯ ನುಡಿದವರೇ ಹೆಚ್ಚು. ಹೊರತು ಇಂಥದ್ದೇ ಪ್ರಾಣಿ ಎಂದೂ ಯಾರಿಗೂ ಗೊತ್ತಿರಲಿಲ್ಲ. ಗಾಳಿ ಬೀಸುವ ಕಡೆಯೆಲ್ಲಾ ವಾಸನೆ ತೂರಿ ಬರುತ್ತಿದ್ದರಿಂದ ಎಲ್ಲಿ ಎಂಬುವುದು ಕಂಡುಹಿಡಿಯುವುದು ತುಂಬಾ ಕಷ್ಟವಾಗತೊಡಗಿತು. ವಾಸನೆಯ ತೀವ್ರತೆ ವಾಂತಿಯಾಗುವಷ್ಟರ ಮಟ್ಟಿಗೆ ಬಂತು. ಹಾಗೂ ಹೀಗೂ ಹತ್ತಿರದ ಪರಿಸರವೆಲ್ಲಾ ಜಾಲಾಡಿದರೂ ಯಾವುದೇ ಪ್ರಾಣಿ ಸತ್ತ ಸುಳಿವಿಲ್ಲ. ಮಧ್ಯಾಹ್ನದ ಹೊತ್ತಿಗೆ ನೆರೆಮನೆಯ ಹುಡುಗನೊಬ್ಬ ಮೂಗಲ್ಲಿಷ್ಟು ನೆಗಡಿ ಸುರಿಸಿ ನಗುತ್ತಾ ಓಡಿ ಬಂದ. ‘ಕೋತಿಯೊಂದು ತೊರೆಯ ಬಳಿಯೇ ಸತ್ತು ಬಿದ್ದಿದೆ’ ಹಲ್ಲು ಕಿಸಿಯುತ್ತಾ ಅಮ್ಮನಲ್ಲಿ ಹೇಳಿದ. ನನಗೆ ಅದರ ಪೂರ್ವಾಪರ ಎಲ್ಲಾ ಒಮ್ಮೆ ನೆನಪಿಗೆ ಬಂದಕೂಡಲೇ ಮಮ್ಮಲ ಮರುಗಿದೆ. ಉಮ್ಮ ಕೂಡಾ ‘ಪಾಪ’ ಎಂದು ದುಃಖದಲ್ಲಿ ನಿಡುಸುಯ್ದರು.

ಅದಾದ ಎರಡು ದಿನಗಳು ಕಳೆದ ನಂತರ ಇನ್ನೆರಡು ಕೋತಿಗಳ ಕಳೇಬರಗಳು ಪತ್ತೆಯಾದವು. ಕೋತಿಗಳ ಮಾರಣಹೋಮ ನನಗೆ ಬೇಸರ ತಂದಿದ್ದರಿಂದಲೇ ಅವುಗಳನ್ನು‌ ನೋಡುವುದಕ್ಕಾಗಲೀ, ಅವುಗಳು ಹೋದದ್ದು ಒಳ್ಳೆಯದಾಯಿತು ಎಂದಾಗಲೀ ಹೇಳುವ ಮನಸ್ಸೇ ಬರಲಿಲ್ಲ. ಎಲ್ಲರೂ ತೊರೆಯ ಕಡೆಗೆ ಹಾರೆ ಹಿಡಿದುಕೊಂಡು ‘ತಾವಿಟ್ಟ ವಿಷಕ್ಕೆ ಮಂಗಗಳು ತೀರಿದವು’ ಎಂದು ಹೇಳಿಕೊಳ್ಳುತ್ತಾ ಕಾಲು ಹಾಕಿದರು. ನಾನು ಮರುಗುತ್ತಾ ಮತ್ತೆ ಪುಸ್ತಕದೊಳಗೆ ಹುದುಗಿಬಿಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.