ಕಿಸ್ಯಾಗಿನ ರೊಕ್ಕ ಖಾಲಿಯಾಗಿದ್ದರಿಂದ ಬೈಕ್‌ಗೆ ಪೆಟ್ರೋಲ್ ತುಂಬಸಾಕ ಕೈಗಡ ಕೇಳಬೇಕಂತ ಪ್ರಭ್ಯಾನ್ ಮನಿ ಬಾಗಿಲಿಗೆ ಹೋದಾಗ ಪಡಸಾಲಿಯಿಂದ ದೊಡ್ಡ ಸದ್ದು ಕೇಳಿ ಬರಾಕತ್ತಿತ್ತು. ಹತ್ತೆಂಟು ಹುಡುಗರು ಜೋರು ದನಿಯಲ್ಲಿ ಕೂಗಾಡುತ್ತಿದ್ದರು. ‘ನನ್ನ ಬಳಿ ಸರ್ಕಾರ ಐತಿ. ನಮ್ಮ ಹಿಂದ್ ಮೋದಿ ಅದಾರ. ಸರ್ಕಾರ ಪತನದ ವ್ಯಸನಿಗಳಿಗೆ ಧಿಕ್ಕಾರ. ನೀ ಆಪರೇಷನ್ ಕಮಲಕ್ಕೆ ಕಪ್ಪು ಹಣ ಬಳಸುವ ಕಿಂಗ್‌ಪಿನ್ ಇದ್ಹಂಗ್. ನೀ, ಸರ್ಕಾರ ಉಳಿಸಿಕೊಳ್ಳಲು ತಿಪ್ಪರ್‌ಲಾಗ್ ಹಾಕ್ತಾ ಇರೊ ಮಾಸ್ಟರ್‌ಪಿನ್. ಸರ್ಕಾರ್ ಬೀಳ್ಸಾಕ್ ಹೊಂಟ್ರ ದಂಗೆಗೆ ಕರೆ ಕೊಡಬೇಕಾಗ್ತೈತಿ ಹುಷಾರ್. ದಂಗೆಗೆ ಕರೆ ಕೊಟ್ಟ ದೇಶದ್ರೋಹಿ. ಕಮಲಕ್ಕೆ ಕೆಸರು ಮೆತ್ತೊ ಪಕ್ಷದ್ರೋಹಿ. ಹಹಹ ನಾನೊಬ್ಬನೆ ಟ್ರಬಲ್ ಷೂಟರ್...’ ಅಂತ ಒಬ್ರ ಹಿಂದ್ ಒಬ್ರು ಬಾಯಿ ಬಡ್ಕೊತಿದ್ರು. ಮನಿ ಅಂದ್ರ ಮೀನಿನ ಬಜಾರ್ ಆಗಿತ್ತು. ಬೆಂಗ್ಳೂರ್ ಮೇಯರ್ ಚುನಾವಣೆದಾಗ್ ಬೀದಿನಾಯಿಗಳು ಕಚ್ಚಾಡಿದ್ಹಂಗ್ ಒಬ್ಬರ್‌ಮ್ಯಾಲ್ ಒಬ್ರು ಬಿದ್ದು ಕತ್ತಿನ ಪಟ್ಟಿ ಹಿಡ್ದು ಹೊಡೆದಾಡಿಕೊಳ್ಳತಿದ್ರು.
‘ಇದೇನೊ ಓಣ್ಯಾಗಿನ ಮಕ್ಕಳೆಲ್ಲ ದಂಗೆ ಎದ್ದವರ ಥರಾ ಹಾರ‍್ಯಾಡಾಕತ್ತಾರ್. ನೀ ಸುಮ್ನ ಕುಂತಿಯಲ್ಲೊ. ಗಲಿ ಗಲಿ ಮೇ ಷೋರ್ ಹೈ, ಹಿಂದೂಸ್ತಾನ್ ಕಾ ಚೌಕಿದಾರ್ ಚೋರ್ ಹೈ’ ಎಂದು ಹೇಳುತ್ತ ನಾ ಮನಿ ಒಳಗ್ ಕಾಲಿಟ್ಟೆ.
‘ಈ ದಂಗೆ ಎದ್ದ ಮಕ್ಕಳನ್ನ ಸಂಭಾಳಿಸೋದ್ ದೊಡ್ಡ ತಲೆ ನೋವಾಗೇದ್. ಅಂಥಾದ್ರಾಗ್ ನಿಂದೆನೊ. ಚೌಕಿದಾರ್‌ನ ಹೆಸರ್ ತಗೋಳ್‌ದಿದ್ರ ತಿಂದ್ ಅನ್ನ ಹೊಟ್ಟಿಗೆ ಹತ್ತುದಿಲ್ಲೇನ್’ ಎಂದು ಪ್ರಭ್ಯಾ ಬೈದ.
‘ಇದು ನನ್ನದಲ್ಲಪ್ಪ. ಕಾಂಗ್ರೆಸ್ ಪಕ್ಷದವ್ರ ಹೊಸ ‘ರಾಗಾ’. ಹುಡುಗ್ರುದು ಏನೊ ಇದು ಗದ್ಲ’ ಎಂದೆ.
‘ದಂಗೆ ಬಗ್ಗೆ ನಿಬಂಧ್ ಬರ್ಕೊಂಡ್ ಬರಾಕ್ ಸಾಲ್ಯಾಗ್ ಹೇಳ್ಯಾರಂತ. ಅದ್ಕ ದಂಗೆ ಅಂದ್ರ ಏನಂತ್ ಹೇಳಿಕೊಡಾಕತ್ತಿದ್ಯಾ’ ಅಂದ.
‘ಅದಿರ್ಲಿ. ಸುಪ್ರೀಂ ಕೋರ್ಟ್‌ನ ತೀರ್ಪು ಓದಿ ನಿನ್ನ ರೊಟ್ಟಿ ಜಾರಿ ತುಪ್ಪದಾಗ್ ಬಿದ್ದಿರಬೇಕಲ್ಲ’ ಅಂತ ಮಾತಿನ ದಿಕ್ಕ ಬದಲಿಸುತ್ತಿದ್ದಂತೆ ಪ್ರಭ್ಯಾನ ಮುಖದ ಬಣ್ಣನs ಬದಲಾಯ್ತು. ‘ಏಯ್ ಬಾಯ್ ಮುಚ್ಚೊ. ಮನ್ಯಾಗಿನ ‘ಸುಪ್ರೀಂ’ ಕಿವಿಗೆ ಬಿದ್ರ ದೊಡ್ಡ ಹಗರಣ ಆಗ್ತೈತಿ ಸುಮ್ನಿರೊ’ ಅಂದ.
‘ರೀ.., ಏನ್ರಿ ಅದು ಸುಪ್ರೀಂ ಕೋರ್ಟ್ ಅಂತ ಏನೋ ಹೇಳ್‌ತಿದ್ರಿ ಅಂತ ಪ್ರಭ್ಯಾನ ಹೆಂಡ್ತಿ ಪಾರೂತಿ ಚಹಾ ತಂದು ಟೀಪಾಯ್ ಮೇಲಿಟ್ಟಳು. ಪಂಖಾದ ಕೆಳಗ್ ಕುಂತಿದ್ರೂ ಪ್ರಭ್ಯಾ ಕುಂತಲ್ಲೇ ಬೆವರಾಕತ್ತಿದ್ದ.
‘ಏನಿಲ್ಲಬೆ. ಮಹಿಳೆಯರಿಗೂ ಅಯ್ಯಪ್ಪನ ದರ್ಶನ ಭಾಗ್ಯ ಕರುಣಿಸಿ ಕೋರ್ಟ್ ತೀರ್ಪು ನೀಡಿದೆಯಲ್ಲಾ. ಅದರ್ ಬಗ್ಗೆ ಮಾತಾಡ್‌ತಿದ್ವಿ’ ಎಂದು ತಿಪ್ಪೆ ಸಾರಿಸಿದೆ.
‘ಅರೆ, ಹೌದಲ್ರೀ. ಈ ಬಾರಿ ನಾವೂ ಶಬರಿಮಲೆಗೆ ಹೋಗೋಣಾರಿ’ ಅಂತ ಪಾರೂತಿ ಫರ್ಮಾನ್ ಹೊರಡಿಸಿ ಅಡುಗೆ ಮನೆ ಹೊಕ್ಕಳು.
‘ಸ್ವಾಮಿಯೇ ಶರಣಂ ಅಯ್ಯಪ್ಪ, ಕಾಪಾಡಪ್ಪ’ ಅಂತ ಗಲ್ಲ, ಗಲ್ಲ ಬಡಿದುಕೊಂಡ ಪ್ರಭ್ಯಾ, ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದ್ದ ದಂಗೆ ಎದ್ದ ಶಾಸಕರ ಕಂಟಕ ದೂರವಾದಂತೆ ದೊಡ್ಡದೊಂದ್ ನಿಟ್ಟುಸಿರಬಿಟ್ಟ.
‘ಏಯ್ ಮಾನಗೇಡಿ ಅದಿಯೋ ಖೋಡಿ. ನನ್ನ ಮಾನಾ ಕಳ್ಯಾಕ್ ಬಂದಿ ಏನ್. ಪರಸಂಗದ ಆಪರೇಷನ್ ಮಾಡು ಉದ್ದೇಶ ಅದ ಏನಪಾ’ ಎಂದು ಗುರಾಯಿಸಿದ.
‘ಏನ್ ಅಂತಾಳಪ್ಪ ನಿನ್ನ ಗರ್ಲ್‌ಫ್ರೆಂಡ್’ ಎಂದು ಪಿಸುಗುಟ್ಟಿದೆ.
‘ಕೋರ್ಟ್ ಹೇಳಿದ ಪರಸಂಗದ, ಲೀಲಾದೇವಿ ಪ್ರಸಾದ್ ಹೇಳಿದ ಗರ್ಲ್‌ಫ್ರೆಂಡ್ ಮಾತನ್ನ ನಿಲ್‌ಸ್ತಿಯಾ ಇಲ್ಲಾ ಎದ್ದ ಹೋಗ್ತಿಯಾ’ ಅಂತ ಬೆದರಿಕೆ ಹಾಕ್ದ.
‘ಅರೆ ಹಿಂಗ್ಯಾಕೊ, ಬೌಲಿಂಗ್ ಮಾಡ್ತಿಯಾ ಇಲ್ಲಾ ಬೌಲರ್ ಬದಲಿಸಬೇಕಾ ಅಂತ ಧೋನಿ ಬೆದರಿಕೆ ಹಾಕ್ದಂಗ್ ಮಾತಾಡ್ತಿಯಲ್ಲೊ. ಸಿಟ್ ಮಾಡ್ಕೊಬ್ಯಾಡಪಾ. ಸನ್ನಿ ಲಿಯೊನ್ ಬೆಂಗ್ಳೂರಿಗೆ ಬರಾಕತ್ತಾಳ್. ಟಿಕೆಟ್ ಬೇಕೆನ್’ ಎಂದೆ ಕಣ್ಣು ಮಿಟುಕಿಸುತ್ತಾ.
ಖುರ್ಚಿಯಿಂದ ಧಿಗ್ಗನೆ ಎದ್ದ ಪ್ರಭ್ಯಾ. ‘ಹೌದೇನೊ. ಯಾವಾಗ್, ಎಲ್ಲಿ ಬರ್ತಾಳ್. ಖರೇ ಹೇಳ್. ಈ ಸಲಾನೂ
ಸಂಸ್ಕೃತಿ ರಕ್ಷಕರು ಕಲ್ ಹಾಕುದಿಲ್‌ತಾನೆ’ ಅಂದ.
‘ಪೊ(ಪೋ)ಲೀಸ್ರ ಹ್ಞೂ ಅಂದಾರ್. ನವೆಂಬರ್ ಕನ್ನಡಿಗರ ಸಂಭ್ರಮ ಹೆಚ್ಚಿಸಲಿಕ್ಕ ಬರಾಕತ್ತಾಳ್’ ಎಂದೆ.
‘ರಾಜಕಾರಣಿಗಳ ಮಾತ್ ಕೇಳಿ, ಕೇಳಿ ತಲಿ ಚಿಟ್ ಹಿಡ್ದದ. ಆಕಿ ಕುಣಿತಾ ನೋಡಿಯಾದ್ರು ದಂಗೆ ಎದ್ದ ಮನ್ಸನ್ನ ತಂಪ್ ಮಾಡ್ಕೊಬಹುದು’ ಎಂದ.
‘ಟಿಕೆಟ್ ತಗೋಳಾಕ್ ಹೋಗೂನು ಬಾ’ ಅಂತ ಹೇಳಿ ಬೈಕ್ ಮ್ಯಾಲೆ ಕುಂದರಿಸಿಕೊಂಡು ಗಾಡಿ ಓಡಿಸಿದೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸಿಗ್ನಲ್‌ದಾಗ್ ನಿಲ್ಲಬೇಕಾತು.
‘ಯಾಕೊ ನಿಲ್ಸಿದಿ’ ಅಂದ ಬೇಸರದಿಂದ.
‘ತಾವು ಹೋಗು ದಾರ‍್ಯಾಗ್ ಯಾರೂ (ಬೆಕ್, ನಾಯಿನೂ) ಅಡ್ಡ ಬರಬಾರ್ದು ಅಂತ ಡಿಸಿಎಂ ಪರಂ ಸಾಹೇಬ್ರು ಸ್ವಯಂ ಫರ್ಮಾನ್ ಹೊರಡಸ್ಯಾರ್. ಹೊಟ್ಟೆಕಿಚ್ ಪಡಪ್ಯಾಡ್ರಿ ಅಂತಾನೂ ಕೇಳ್ಕೊಂಡಾರ್. ಅದ್ಕ ಸಿಗ್ನಲ್‌ದಾಗ್ ಕಾಯಬೇಕು’ ಎಂದೆ.
‘ಅಧಿಕಾರದ ಪಿತ್ ನೆತ್ತಿಗೇರಿದ್ರ ಹೀಂಗs ಆಗೋದು.ಆಂಬುಲನ್ಸ್, ಸವಾರರನ್ನ ದಾರ‍್ಯಾಗ್ ನಿಲ್ಸಿ ಏನ್ ನಟ್ಕಡಿಯುವಂತ್ಹಾ ಕೆಲ್ಸ್ ಇರ್ಬೇಕು ಇವುಕ್ಕ. ಮಾಜಿ ಆದ್ ಮ್ಯಾಲೆ ಇವ್ಕ ಬೀದಿ ನಾಯಿನೂ ಮೂಸಿ ನೋಡುದಿಲ್ಲ’ ಎಂದ.
ಪರಂ ಮೇಲಿನ ಸಿಟ್ಟನ್ನು ನಾನೂ ಹಾರ್ನ್ ಮೇಲೆ ತೋರಿಸಿ ಟ್ರಾಫಿಕ್ ಪೊಲೀಸಪ್ಪನ ಗಮನ ಸೆಳೆದೆ. ‘ಏನ್ ಮಾಡೋದ್ರಿ. ಇಂಥಾ ಅಡ್ಡಕಸಬಿ ರಾಜಕಾರಣಿಗಳಿಂದ ನಮ್ಗೂ ಕೆಟ್ ಹೆಸ್ರ ಬರ್ತೈತಿ. ಇಂಥವ್ರ ವಿರುದ್ಧ ಜನಾ ದಂಗೆ ಏಳಬೇಕ್ ನೋಡ್ರಿ’ ಅಂದ.
‘ಈ ಟ್ರಾಫಿಕ್‌ದಾಗ್ ಹಿಂಗs ನಿಂತ್ರ ಸನ್ನಿ ಕುಣಿತದ ಷೋದ ಟಿಕೆಟ್ ಸಿಕ್ಹಂಗ್. ನೀ ಇಲ್ಲೆ ಇರು. ನಾ ನಡಕೊಂಡ್ ಹೋಗಿ ಟಿಕೆಟ್ ತಗೋತಿನಿ ಅಂತ ಅವಸರದಿಂದ್ಲೆ ಬೈಕ್‌ನಿಂದ ಇಳಿದ ಪ್ರಭ್ಯಾ, ‘ನೋಟದಾಗೆ ನಗೆಯಾಮೀಟಿ, ಮೋಜಿನಾಗೆ ಎಲ್ಲೆಯ ದಾಟಿ... ಮೋಡಿಯ ಮಾಡಿದವಳ ಪರಸಂಗ ಐತೆ...’ ಅಂತ ಗುನುಗುನಿಸುತ್ತ ಓಡು ನಡಿಗೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್‌ನತ್ತ ಪೇರಿಕಿತ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.