ಶಾಂತಿ ಎಂಬ ದೇಶದ ಜನರಲ್ಲಿ ಇದ್ದಕ್ಕಿದ್ದಂತೆ ಅಶಾಂತಿ ಹರಡತೊಡಗಿತು. ಎಲ್ಲೆಲ್ಲೂ ಅಸಮಾಧಾನದ ದಟ್ಟ ಹೊಗೆ. ಅವರೆಲ್ಲಾ ತಮ್ಮ ಮೂಲಭೂತ ಹಕ್ಕುಗಳು ಎಲ್ಲಿ ಮಂಗಮಾಯವಾಗಿಬಿಡುತ್ತವೋ ಎಂಬ ಭಯದಲ್ಲಿದ್ದರು. ಈ ‘ಭೂತ’ದ ಭಯ ಹುಟ್ಟುವುದಕ್ಕೆ ಕಾರಣ, ಸರ್ಕಾರ ಜಾರಿಗೊಳಿಸಲು ಅಣಿಯಾಗಿ ನಿಂತಿರುವ ‘ಶೂರತ್ವ ಕಾಯ್ದೆ’. ದೇಶದ ಒಳಿತಿಗಾಗಿ ಪ್ರಧಾನಮಂತ್ರಿಗೆ ಹೆಚ್ಚುವರಿ ಅಧಿಕಾರ ಕೊಡುವುದೇ ‘ಶೂರತ್ವ ಕಾಯ್ದೆ’ಯ ಪರಮೋದ್ದೇಶ ಎಂದಷ್ಟೇ ಹೇಳಿ ಗೃಹಮಂತ್ರಿ ಕೈತೊಳೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಈ ಕಾಯ್ದೆಗೆ ದೇಶದ ಜನರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಪ್ರಧಾನಿ ಮತ್ತು ಗೃಹಮಂತ್ರಿಯವರು ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ. 56 ಇಂಚಿನ ಎದೆಯಿರುವ (!) ಮಾನ್ಯ ಪ್ರಧಾನಿಗೆ ಇಂತಹ ಒಂದು ಎದೆಗಾರಿಕೆಯ ಕಾಯ್ದೆಯ ಅಗತ್ಯವಿತ್ತು. ಆದರೆ ಹೆಚ್ಚುವರಿ ಅಧಿಕಾರದೊಂದಿಗೆ ಪ್ರಧಾನಿ ಏನೆಲ್ಲಾ ರಂಪಾಟ ಮಾಡಹೊರಟಿದ್ದಾರೆ ಎಂಬುದನ್ನು ಜನರಿಗೆ ಬಹಿರಂಗಗೊಳಿಸದೇ ಇದ್ದುದರಿಂದ ಕೆಲವು ವರ್ಗದ ಜನರು ಕಳವಳಕ್ಕೀಡಾದರು. ಅವರ ಗೊಂದಲ ಹೆಚ್ಚಿಸುವಲ್ಲಿ ವಿರೋಧ ಪಕ್ಷಗಳು ನಾ ಮುಂದು, ತಾ ಮುಂದು ಎಂದು ವೇದಿಕೆ ಹತ್ತಿದವು. ಪ್ರಧಾನಿ ಹಾಗೂ ಗೃಹಮಂತ್ರಿ ಇಬ್ಬರಿಗೆ ಮಾತ್ರ ಗೊತ್ತಿದ್ದ ಗೋಪ್ಯ ವಿಷಯಗಳನ್ನು ಗಲ್ಲಿ ಗಲ್ಲಿಗಳಲ್ಲಿ ಜನ ಮಾತನಾಡ
ತೊಡಗಿದರು.
‘ತುಕ್ಡೆ ತುಕ್ಡೆ ಗ್ಯಾಂಗ್‌ಗಳಿಗೆ ಮೊದಲು ಕಡಿವಾಣ ಹಾಕಲಿದ್ದಾರಂತೆ. ಅವರನ್ನು ಉಗ್ರಸ್ತಾನದವರೆಂದು ಪರಿಗಣಿಸಿ ಜೈಲಿಗೆ ಹಾಕಿ, ಕೈ ಕಾಲುಗಳನ್ನು ತುಕ್ಡೆ ತುಕ್ಡೆ ಮಾಡಲಿದ್ದಾರಂತೆ. ಅಂತಹವರಿಗೆಂದೇ ಹೊಸತಾಗಿ ‘ತುಕ್ಡೆ ಜೈಲು’ ಎಂಬ ಖಾರ-ಗೃಹ ತೆರೆಯಲಿದ್ದಾರೆ’ ಎಂದು ಬಿಸಿರಕ್ತದ ಯುವಕನೋರ್ವ ಹೇಳುತ್ತಿದ್ದಾಗ ಇನ್ನೊಬ್ಬ ಅವಸರವಸರವಾಗಿ ಬಂದು, ‘ಕಾಲೇಜು ವಿದ್ಯಾರ್ಥಿಗಳು ಖಾವಿ ವಸ್ತ್ರ ಧರಿಸುವುದು ಕಡ್ಡಾಯ ಮಾಡುವುದು ಗ್ಯಾರಂಟಿ ಕಣ್ರೋ!’ ಎಂದು ಬೊಬ್ಬಿಟ್ಟಾಗ ಅಲ್ಲಿ ಸೇರಿದವರೆಲ್ಲಾ ಸುಸ್ತು!
‘ಪ್ರಧಾನಿಯವರಿಗೆ ಹೆಚ್ಚುವರಿ ಅಧಿಕಾರವಿರುವ ‘ಶೂರತ್ವ ಕಾಯ್ದೆ’ಯಿಂದಾಗಿ ಪ್ರಜಾಪ್ರಭುತ್ವದ
ಕೊಲೆಯಾಗಲಿದೆ. ಪ್ರಧಾನಿ ಅವರನ್ನು ಅವಮಾನಿಸು
ವಂತಹ ಯಾವುದೇ ಪದಗಳನ್ನು ಬಳಸಿದರೆ, ಅಂತಹವರ ನಾಲಗೆಯನ್ನೇ ಕತ್ತರಿಸಲಾಗು
ವುದಂತೆ! ಆ ಜವಾಬ್ದಾರಿಯನ್ನು ‘ಪ್ರೈವೇಟ್ ಸೇನೆ’ ಅಥವಾ ‘ದಳ’ಗಳಿಗೆ ಕೊಡಲಾಗುವುದು. ಇದು ನಮ್ಮ ವಾಕ್ ಸ್ವಾತಂತ್ರ್ಯಕ್ಕೆ ಕೊನೆಯ ಮೊಳೆ’ ಎಂದು ವಿರೋಧ ಪಕ್ಷದ ನಾಯಕ ಬೊಗಲೇಕರ್ ಟ್ವೀಟ್ ಮಾಡಿದ್ದಾರೆ.
ಈ ಕಾಯ್ದೆಯಿಂದ ಜರ್ಜರಿತರಾದವರಲ್ಲಿ ಭ್ರಷ್ಟಾಚಾರ ಸಮುದಾಯದವರು ಪ್ರಮುಖರು. ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಹಣ ಗುಳುಂ ಮಾಡುವ ನುಂಗಪ್ಪರನ್ನು ‘ಎನ್‌ಕೌಂಟರ್’ ಮಾಡಲಾಗುವುದೆಂದು ಅದ್ಯಾರೋ ವಾಟ್ಸ್‌ಆ್ಯಪ್‌ನಲ್ಲಿ ಬರೆದಿದ್ದರು. ಇದರಿಂದಾಗಿ ದೇಶದ ಭ್ರಷ್ಟರೆಲ್ಲರೂ ‘ಮಾನವ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡೆವು!’ ಎಂದು ಅನಿರ್ದಿಷ್ಟಾವಧಿ ಧರಣಿ ಕೂತಿದ್ದಾರೆ.
ಪದೇ ಪದೇ ಈರುಳ್ಳಿ ಬೆಲೆ ವಿಪರೀತವಾಗಿ ಏರುವುದನ್ನು ತಡೆಯಲು ಸ್ಥಿರ ಪರಿಹಾರ ಕೂಡಾ ಈ ಕಾಯ್ದೆಯಲ್ಲಿದೆ. ಈರುಳ್ಳಿಯನ್ನು ‘ದೇಶವಾಸಿಯೋ’
ಗಳು ಯಾರೂ ತಿನ್ನಬಾರದು. ಅಂದರೆ ಈರುಳ್ಳಿ ಬೆಳೆಯುವುದನ್ನೇ ನಿಷೇಧಿಸಲಾಗುತ್ತದೆ. ಗಾಂಜಾ ಬೆಳೆಸಿ ಸಿಕ್ಕಿಬಿದ್ದರೆ ಆಗುವ ಶಿಕ್ಷೆಯೇ ಇದಕ್ಕೂ ಅನ್ವಯವಾಗುತ್ತದೆ. ಇದರ ಪೂರ್ತಿ ಜವಾಬ್ದಾರಿಯನ್ನು ಈರುಳ್ಳಿ ತಿನ್ನದ ವಿತ್ತ ಸಚಿವೆಗೆ ಕೊಡಲಾಗಿದೆ. ‘ಶೂರತ್ವ ಕಾಯ್ದೆ’ಯಲ್ಲಿರುವ ಈ ‘ವಿಶೇಷ’ ಮಾಹಿತಿಯನ್ನು ‘ಕೆಸರಿನ ಮಗ’ ಖ್ಯಾತಿಯ ದ್ಯಾವಣ್ಣ ಮಾಧ್ಯಮದ ಮುಂದೆ ಕಣ್ಣೀರಿಡುತ್ತಲೇ ಉಸುರಿದ್ದನ್ನು ಕೇಳಿ ರೈತರೆಲ್ಲ ಗೊಳೋ ಎಂದು ಅಳತೊಡಗಿದರು. ಈಗ ಅವರೆಲ್ಲಾ 365 ದಿವಸಗಳೂ ಕಣ್ಣೀರಿಡುತ್ತಲೇ ‘ಈರುಳ್ಳಿ ಚಳವಳಿ’ ನಡೆಸಲು ಸನ್ನದ್ಧರಾಗಿದ್ದಾರೆ!
‘ಶೂರತ್ವ ಕಾಯ್ದೆ’ಯಲ್ಲಿರುವ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟವರು ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಪ್ರಶಸ್ತಿ ವಾಪಸಿ’ ಲೇಖಕ ಗೋಕುಮಾರ. ಅವರ ಪ್ರಕಾರ, ಕಾಯ್ದೆ ಜಾರಿಗೆ ಬಂದರೆ ಗೋಚರ್ಮವನ್ನು ಬಳಸಿದ ಎಲ್ಲಾ ಸಂಗೀತ ಉಪಕರಣಗಳ ಮೇಲೆ ನಿರ್ಬಂಧ ಹೇರಲು ಅವಕಾಶ ದೊರೆಯಲಿದೆ! ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಅದಕ್ಕೆ ಸಂಬಂಧವೇ ಇಲ್ಲದ ಈ ವಿಷಯವನ್ನೂ ಗೋಕುಮಾರರು ಹೇಳಿದ ತಕ್ಷಣ, ಅಲ್ಲಿ ಸೇರಿದವರೆಲ್ಲಾ ಪುರಭವನದತ್ತ ‘ಬೀಫ್’ ತಿನ್ನಲು ಓಡಿದರು!
ಈ ಖತರ್‌ನಾಕ್ ಕಾಯ್ದೆಯನ್ನು ಜಾರಿಗೊಳಿಸದ ರಾಜ್ಯಗಳ ಮುಖ್ಯಮಂತ್ರಿಗಳನ್ನು ‘ನಗರ ನಕ್ಸಲ್’ ಎಂದು ಪರಿಗಣಿಸಲಾಗುವುದು ಮತ್ತು ಅವರನ್ನು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗುವುದೆಂಬ ವಿಚಾರ ಗೊತ್ತಿದ್ದರೂ, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ‘ಶೂರತ್ವ ಕಾಯ್ದೆ’ಯನ್ನು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಶೂರತ್ವ ಪ್ರದರ್ಶಿಸಿದ್ದಾರೆ!
ಮೈನಸ್ ಸೆಲ್ಸಿಯಸ್ ಚಳಿಯಲ್ಲೂ ಪ್ರಧಾನಿ ಸಾಹೇಬ್ರು ಬೆವರತೊಡಗಿದರು. ಗೃಹಮಂತ್ರಿಯವರಿ
ಗಂತೂ ತಮ್ಮ ಬಾಣಲೆ ತಲೆಯಲ್ಲಿ ಜಿನುಗುತ್ತಿರುವ ಬೆವರನ್ನು ಆಗಾಗ ಕರ್ಚೀಫ್‌ನಿಂದ ಒರೆಸುವುದೇ ಕೆಲಸವಾಯಿತು. ಅವರಿಬ್ಬರೂ ಕೊನೆಗೊಂದು ತೀರ್ಮಾನಕ್ಕೆ ಬಂದರು. ಪಕ್ಷದ ನಾಯಕರು ಪಬ್ಲಿಕ್ ಟಾಯ್ಲೆಟ್‌ಗಳನ್ನೂ ಬಿಡದೆ ಸಿಕ್ಕ ಸಿಕ್ಕ ಜಾಗಗಳಲ್ಲಿ ಜನಜಾಗೃತಿಗೆ ಇಳಿಯಬೇಕೆಂದು ಕರೆ ಕೊಟ್ಟರು. ‘ಈ ಕಾಯ್ದೆಯಿಂದ ಯಾರಿಗೂ ಅಪಾಯವಿಲ್ಲ, ಅತ್ಯಂತ ಖುಷಿಯ ದಿನಗಳನ್ನು ಮುಂದೆ ಕಾಣುವಿರಿ’ ಎಂದು ಜನಜಾಗೃತಿ ಶುರುವಾಗಿಯೇ ಬಿಟ್ಟಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.