ADVERTISEMENT

ಅಂದು ಗಾಂಧೀಜಿ, ಇಂದು ಫೋರ್ ಜಿ!

ಪ್ರಕಾಶ ಶೆಟ್ಟಿ
Published 27 ಸೆಪ್ಟೆಂಬರ್ 2019, 20:00 IST
Last Updated 27 ಸೆಪ್ಟೆಂಬರ್ 2019, 20:00 IST
   

ಹೈಸ್ಕೂಲ್‌ನಲ್ಲಿ ಓದುತ್ತಿರುವ ಮಗರಾಯ ಭಾಷಣ ಬರೆದುಕೊಡಬೇಕೆಂದು ಕಿ.ತಾ.ಪತಿಗೆ ದುಂಬಾಲು ಬಿದ್ದಿದ್ದ. ವಿಷಯ- ಬಾಪೂ 150. ಸರಿ, ಈಚೆಗೆ ತನ್ನನ್ನು ಯಾರೂ ಭಾಷಣ ಬಿಗಿಯುವುದಕ್ಕೆ ಆಹ್ವಾನಿಸದೆ ಇದ್ದುದರಿಂದ ಬೇಸತ್ತಿದ್ದ ಆತ, ಈ ಅವಕಾಶವಾದರೂ ಸಿಕ್ಕಿತಲ್ಲ ಎಂಬ ಖುಷಿಯಲ್ಲಿ ಭಾಷಣ ಬರೆಯುವುದಕ್ಕೆ ಕುಳಿತ.

ನನ್ನ ಮೆಚ್ಚಿನ ಉಪಾಧ್ಯಾಯರೇ, ಉಪಾಧ್ಯಾಯಿನಿಯರೇ ಹಾಗೂ ನನ್ನ ಪ್ರೀತಿಯ ಸೋದರ, ಸೋದರಿಯರೇ ನಮಸ್ಕಾರಗಳು. ಇವತ್ತು ನನಗೆ ಮಹಾತ್ಮ ಗಾಂಧಿ ಅವರ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ಎಷ್ಟು ಸಂತೋಷವಾಗಿದೆ ಎಂದರೆ, ಒಂಬತ್ತನೇ ಕ್ಲಾಸಿನಲ್ಲಿ ಜಸ್ಟ್ ಪಾಸಾದಾಗಲೂ ಇಷ್ಟು ಸಂತೋಷ ಪಟ್ಟಿರಲಿಲ್ಲ.

ನಾನು ಏಳೆಂಟು ವರ್ಷದವನಿದ್ದಾಗಲೇ ಬಾಪೂ ಬಗ್ಗೆ ಅಪ್ಪ ನನಗೆ ಅನೇಕ ವಿಷಯಗಳನ್ನು ಹೇಳುತ್ತಿದ್ದರು. ಅವರಂತೆ ಸತ್ಯ ಹೇಳಬೇಕು, ಸುಳ್ಳು ಹೇಳಿದರೆ ಮನೆಯಲ್ಲಿ ನಾಗರಬೆತ್ತ ಇದೆ ಎಂಬುದನ್ನು ಮರೆಯಬಾರದೆಂದು ನೆನಪಿಸುತ್ತಿದ್ದರು. ನಾನು ಅಪ್ಪನಿಗೆ ಸತ್ಯ ಮಾತ್ರವಲ್ಲ, ಮುಂದೆ ದೊಡ್ಡವನಾದ ಮೇಲೆ ಗಾಂಧೀಜಿ ಅವರ ತತ್ವಗಳನ್ನೆಲ್ಲಾ ಅನುಸರಿಸಿ ‘ರಾಷ್ಟ್ರಪಿತ’ನೆಂದು ಕರೆಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದೇನೆ. ಅಚ್ಚರಿಯ ಸಂಗತಿಯೆಂದರೆ, ಬಾಪೂ ಇಲ್ಲದೆ ಇಂದಿಗೆ 70 ವರ್ಷಗಳು ಕಳೆದರೂ, ಅವರಂತೆ ‘ಮಹಾತ್ಮ’ನೆಂದು ಕರೆಸಿಕೊಳ್ಳುವವರು ಒಬ್ಬರೂ ಹುಟ್ಟಿಲ್ಲ! ಆದರೆ ಮುಂದೆ ಹೇಳಕ್ಕಾಗಲ್ಲ. ಯಾರಾದರೊಬ್ಬ ರಾಜಕೀಯ ಮುಖಂಡರಿಗೆ ‘ಮಹಾತ್ಮ’ ಎಂಬ ಬಿರುದು ಕೊಟ್ಟು, ನಮ್ಮ ಬಾಪೂವಿಗೆ ‘ಪರಮಾತ್ಮ’ ಎಂದು ಪ್ರೊಮೋಷನ್ ನೀಡಬಹುದು.

ADVERTISEMENT

ಇಂದಿನ ನಮ್ಮ ಯುವಜನಾಂಗ, ಗಾಂಧೀಜಿ ತತ್ವಗಳಿಗಿಂತ ‘ಫೋರ್ ಜಿ’ ತತ್ವಗಳನ್ನೇ ಹೆಚ್ಚು ನೆಚ್ಚಿಕೊಂಡಿದೆ. ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಕೈಗೊಂಡ ಚಾತುರ್ಯಗಳು ಯಾವ ‘ಫೋರ್ ಜಿ’ ಸಾಮರ್ಥ್ಯಕ್ಕೂ ಕಡಿಮೆಯೇನಲ್ಲ! ತುಂಬಾ ಬೇಸರದ ಸಂಗತಿಯೇನೆಂದರೆ, ನಮ್ಮ ನೆಚ್ಚಿನ ಬಾಪೂಗೆ ನಮ್ಮ ದೇಶದಲ್ಲೇ ಅವಮಾನವಾಗುತ್ತಿದೆ. ನೀವು ಯಾವುದೇ ಗಾಂಧಿ ಪ್ರತಿಮೆ
ಯನ್ನು ನೋಡಿ, ಕಪ್ಪು ಮಸಿ ಬಳಿದು
ಬಿಟ್ಟಿರುತ್ತಾರೆ! ಕೆಲವೆಡೆ ಬರೀ ಕುತ್ತಿಗೆ ಭಾಗ ಮಾತ್ರವಷ್ಟೇ ಇರುತ್ತದೆ! ಬೇರೆ ಏನಾದರೂ ಮಾಡಲಿ, ನಿಧಾನ ಸೌಧದ ಪಕ್ಕ ಆ ಗಾಂಧಿ ಪ್ರತಿಮೆ ಯಾಕೆ ಬೇಕಾಗಿತ್ತು? ಬರೀ ಕೊಳಕು ಮನಸ್ಸಿನವರೇ ಮೊಕ್ಕಾಂ ಹೂಡಿರುವ ಆ ಜಾಗದಲ್ಲಿ... ಅದೂ ಧ್ಯಾನಮಗ್ನರಾಗಿ ಕುಳಿತಿರುವುದಕ್ಕೆ ಅವರಿಗೆ ಸಾಧ್ಯವೇ ಹೇಳಿ?! ಇನ್ನು ಪೊಲೀಸ್ ಸ್ಟೇಶನ್‌
ಗಳ ಗೋಡೆ ಮೇಲಿರುವ ಫೋಟೊದಿಂದ ಗಾಂಧೀಜಿ ಒಂದು ವೇಳೆ ಮಾತನಾಡುವಂತಿದ್ದರೂ, ಅಲ್ಲಿ ಭ್ರಷ್ಟಾಚಾರ ತಾಂಡವವಾಡೋದು ನಿಲ್ಲುತ್ತಿರಲಿಲ್ಲ.

ಭ್ರಷ್ಟಾಚಾರ ಅಂದಾಗ ನೆನಪಾಗುವುದು ಗಾಂಧಿ ನೋಟುಗಳು. ನಮ್ಮ ಸರ್ಕಾರಕ್ಕೆ ಆ ಮಹಾತ್ಮರ ಬಗ್ಗೆ ಗೌರವವಿದ್ದಿದ್ದರೆ ಈಚೆಗೆ ಹೊಸ ವಿನ್ಯಾಸದ ನೋಟುಗಳನ್ನು ಹೊರತಂದಾಗ ಗಾಂಧೀಜಿ ಅವರ ಚಿತ್ರಗಳನ್ನು ಅಚ್ಚು ಮಾಡುವ ಸಂಪ್ರದಾಯಕ್ಕೆ ತೆರೆ ಎಳೆಯಬೇಕಾಗಿತ್ತಲ್ಲವೇ? ಬರೀ ಲಂಚಕ್ಕಷ್ಟೇ ಗಾಂಧಿ ನೋಟು ಉಪಯೋಗಿಸುತ್ತಾರೆ ಅಂದುಕೊಳ್ಳಬೇಡಿ. ನಕಲಿ ನೋಟುಗಳನ್ನು ಪ್ರಿಂಟ್ ಮಾಡುವ ಜಾಲ ಪತ್ತೆಯಾದಾಗಲೆಲ್ಲಾ ‘ಕಳ್ಳ ನೋಟು’ಗಳೊಂದಿಗೆ ನಮ್ಮ ಬಾ‍ಪೂ ‘ಸೆರೆ’ಯಾಗುವುದನ್ನು ನೋಡುವುದಕ್ಕೆ ತುಂಬಾ ವ್ಯಸನವಾಗುತ್ತದೆ. ಇನ್ನೊಂದು ಬೇಸರದ ವಿಚಾರವೇನೆಂದರೆ, ಬಾಪೂವಿನ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಡಿಮೆಯಾಗುತ್ತಿರೋದು! ನಾವೆಲ್ಲಾ ಆಗಾಗ ರೂಪಾಯಿ ಬೆಲೆ ಕುಸಿತದ ಸುದ್ದಿ ಕೇಳುತ್ತಿರುವುದೇ ಅದಕ್ಕೆ ಕಾರಣ. ಆದ್ದರಿಂದ ನೋಟುಗಳಲ್ಲಿ ಅವರ ಚಿತ್ರವನ್ನು ಪ್ರಕಟಿಸಬಾರದೆಂದು ನನ್ನ ವಿನಮ್ರ ಪ್ರಾರ್ಥನೆ.

ದೇಶದ ಮೂಲೆ ಮೂಲೆಗಳಲ್ಲಿ ಮಹಾತ್ಮ ಗಾಂಧಿ ರಸ್ತೆಗಳಿವೆ. ಆದರೆ ನಮ್ಮ ಜನ ‘ಮಹಾತ್ಮ ಗಾಂಧಿ ರಸ್ತೆ’ ಎಂದು ಗೌರವ ಕೊಟ್ಟು ಹೇಳುವುದಿಲ್ಲ! ಎಲ್ಲರೂ ‘ಎಂ.ಜಿ. ರಸ್ತೆ’ ಎಂದೇ ಕರೆಯುವುದು ಒಪ್ಪದ ವಿಚಾರ. ಬಹುಶಃ ಅಂತಹ ರಸ್ತೆಯಲ್ಲೇ ಹೆಚ್ಚಾಗಿ ಹಿಂಸೆ, ಕುಡಿತ, ವಿದೇಶಿ ಬ್ರ್ಯಾಂಡ್ ಬಟ್ಟೆ ಬರೆಗಳ ಮಾರಾಟವಿರುವುದರಿಂದಲೋ ಏನೋ ಆ ರಸ್ತೆಗಳನ್ನು ‘ಮಹಾತ್ಮ ಗಾಂಧಿ ರಸ್ತೆ’ ಎಂದು ಕರೆಯುವುದಕ್ಕೆ ಜನರೇ ಮುಜುಗರ ಪಡುತ್ತಿರಬೇಕು. ಕೆಲವು ಕಡೆ ‘ಗಾಂಧಿ ನಗರ’ಗಳಿವೆ. ಇಂತಹ ಸ್ಥಳಗಳಲ್ಲಿ ಹೆಚ್ಚಾಗಿ ವೈನ್‌ ಶಾಪ್ ಮತ್ತು ಬಾರ್‌ಗಳದ್ದೇ ಕಾರುಬಾರು. ಈ ಎಲ್ಲದರ ನಡುವೆ ಅತ್ಯಂತ ಸಂತೋಷ ತರುವ ವಿಷಯವೇನೆಂದರೆ, ಇಲ್ಲಿ ಬರುವ ಗುಂಡುಪ್ರಿಯರು ಗಾಂಧಿ ತತ್ವಗಳಲ್ಲಿ ಒಂದನ್ನು ಮಾತ್ರ ತಪ್ಪದೆ ಪಾಲಿಸುತ್ತಾರೆ. ಅದು- ಸತ್ಯ ನುಡಿಯೋದು.

ಈಗ ದೊಡ್ಡ ಪಟ್ಟಣಗಳಲ್ಲಿ ಗಾಂಧಿ ತತ್ವಗಳು ಮೂಲೆಗುಂಪಾಗುತ್ತಿರುವುದಕ್ಕೆ ಮಲ್ಟಿಪ್ಲೆಕ್ಸ್‌ಗಳೂ ಕಾರಣ. ಅಲ್ಲಿ ‘ಗಾಂಧಿ ಕ್ಲಾಸ್’ಗಳೇ ಇಲ್ಲ! ಚಲನಚಿತ್ರ ಪ್ರದರ್ಶನಕ್ಕೆ ಮುನ್ನ ಜನ ಗಣ ಮನ ಪ್ರಸಾರ ಮಾಡಿದಂತೆ, ಸರ್ಕಾರ ‘ಗಾಂಧಿ ಕ್ಲಾಸ್’ ಆರಂಭಿಸಬೇಕು.

ಕೊನೆಗೆ... ಗಾಂಧೀಜಿ ಅವರಂತಹ ದೊಡ್ಡ ವ್ಯಕ್ತಿಯ ಬಗ್ಗೆ ಬರೀ ಐದೇ ನಿಮಿಷದಲ್ಲಿ ಮಾತನಾಡಿ ಮುಗಿಸಬೇಕೆಂದು ನನಗೆ ತಾಕೀತು ಮಾಡಿರುವುದು ಆ ಮಹಾತ್ಮರಿಗೆ ಮಾಡಿದ ಅವಮಾನವೆಂದು ಹೇಳುತ್ತಾ, ನನ್ನ ಈ ಎರಡು ಮಾತುಗಳನ್ನು ಮುಗಿಸುತ್ತೇನೆ, ವಂದನೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.