ADVERTISEMENT

ಸಂಗೀತ | ನಾದ ‘ಉಪಾಸನಾ’

ಸುಕೃತ ಎಸ್.
Published 3 ಆಗಸ್ಟ್ 2024, 0:40 IST
Last Updated 3 ಆಗಸ್ಟ್ 2024, 0:40 IST
   

ಭಾವಗೀತೆಗಳ ಕುರಿತು ನನಗೆ ತೀವ್ರ ತುಡಿತವಿತ್ತು. ನನ್ನ ತಾತನವರೇ ನನಗೆ ಮೊದಲ ಸಂಗೀತ ಗುರು. ಭಾವಗೀತೆ ಗಾಯನದಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಬೆಂಗಳೂರಿಗೂ ಬಂದೆ. ಆದರೆ, ಇಲ್ಲಿನ ಪ್ರಸಿದ್ಧ ಗಾಯಕರ ಮನೆ ಮನೆ ಸುತ್ತಿದೆ. ಕಲಿಕೆಗೆ ಅವಕಾಶ ಸಿಗಲಿಲ್ಲ. ಆಮೇಲೆ ಜಿ.ವಿ. ಅತ್ರಿ ಅವರಲ್ಲಿ ಶಾಲೆಗೆ ಸೇರಿಕೊಂಡೆ. ಆಮೇಲಿನದು ಇತಿಹಾಸ. ನನ್ನ ಹಾಗೆ ಕನಸು ಕಾಣುವವರಿಗೆ ಅವಕಾಶ ಇಲ್ಲ ಎಂಬಂತಾಗಬಾರದು. ಇದಕ್ಕಾಯೇ ಹುಟ್ಟಿಕೊಂಡದ್ದು ‘ಉಪಾಸನ’.

‘ಉಪಾಸನ’ವನ್ನು ನಾನು 1999ರಲ್ಲಿ ಆರಂಭಿಸಿದೆ. ಮೊದಲಿಗೆ ಕೀಬೋರ್ಡ್‌, ಮೆಂಡೊಲಿನ್ ಸೇರಿ ಕೆಲವು ವಾದ್ಯಗಳನ್ನು ಹೇಳಿಕೊಡುತ್ತಿದ್ದೆ. ಎರಡು ವರ್ಷ ಕಳೆದಿರಬಹುದಷ್ಟೆ. ವಾದ್ಯ ಕಲಿಸುವುದನ್ನು ಬೇರೆಯವರಿಗೆ ಬಿಟ್ಟುಕೊಟ್ಟೆ. ಕೆಲವು ವರ್ಷಗಳ ಬಳಿಕ ಈ ವಿಭಾಗವನ್ನೇ ನಿಲ್ಲಿಸಿದೆ. ನನ್ನ ಇಡೀ ಶಾಲೆಯಲ್ಲಿ ಈಗ ಭಾವಗೀತೆಗಳನ್ನು ಮಾತ್ರ ಹೇಳಿಕೊಡುತ್ತೇನೆ. 25 ವರ್ಷಗಳಲ್ಲಿ ಸುಮಾರು 5ರಿಂದ 6 ಸಾವಿರ ವಿದ್ಯಾರ್ಥಿಗಳು ಭಾವಗೀತೆಗಳನ್ನು ಕಲಿತಿದ್ದಾರೆ. ಸುಮಾರು 25 ಉತ್ತಮ ಗಾಯಕರನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ನೀಡಿದ್ದೇನೆ ಎಂಬ ಹೆಮ್ಮೆ ಇದೆ.

ಶಾಲೆಗೆ ಸೇರಿಕೊಳ್ಳಬೇಕು ಎಂದರೆ, ನನ್ನದೊಂದು ಷರತ್ತು ಇದೆ. ಕನ್ನಡ ಓದಲು, ಬರೆಯಲು ಬರಲೇಬೇಕು. ಭಾವಗೀತೆಗಳು ಎಂದರೆ ಕೇವಲ ಸಂಗೀತವಲ್ಲ. ಅಲ್ಲಿ ಸಾಹಿತ್ಯವೂ ಮುಖ್ಯ. ಸಾಹಿತ್ಯ ಅರ್ಥವಾದರೆ ಮಾತ್ರವೇ ಅಕ್ಷರಗಳಿಗೆ ಗಾಯನದ ಮೂಲಕ ಭಾವ ತುಂಬಲು ಸಾಧ್ಯ. ಇಲ್ಲಿ ಸೇರುವವರಿಗೆ ಕನ್ನಡ ಬರಲೇಬೇಕು. ನನ್ನಲ್ಲಿ ಬರುವ ಹೆಚ್ಚಿನವರು ಅದಾಗಲೇ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ. ಒಂದೊಮ್ಮೆ ಶಾಸ್ತ್ರೀಯ ಸಂಗೀತ ಕಲಿತಿಲ್ಲ ಎಂದಾದರೆ, ನಾನು ಅವರನ್ನು ಮೊದಲು ಶಾಸ್ತ್ರೀಯ ಸಂಗೀತ ಕಲಿಯಲು ಹೇಳುತ್ತೇನೆ. ಭಾವಗೀತೆಗಳ ಅಭಿವ್ಯಕ್ತಿ ಸಂಗೀತದಿಂದ ತಾನೆ?

ADVERTISEMENT

ಈವರೆಗೂ ಸುಮಾರು 600 ಕವಿತೆಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ನನ್ನ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನನ್ನ ಸಂಯೋಜನೆಯ ಗೀತೆಗಳನ್ನು ಮಾತ್ರವೇ ನಾನು ಕಲಿಸಿಕೊಡುತ್ತೇನೆ. ನಾನು ಯಾರ ಕವಿತೆಗಳಿಗೆ ರಾಗ ಸಂಯೋಜನೆ ಮಾಡುತ್ತೇನೊ ಅವರನ್ನು ನನ್ನ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತೇನೆ. ನನ್ನ ಶಾಲೆಗೆ ಕರೆಸಿ, ಅವರೊಂದಿಗೆ ಮಾತುಕತೆ ಮಾಡಿಸುತ್ತೇನೆ. ಆಗ ವಿದ್ಯಾರ್ಥಿಗಳಿಗೆ ತಾವು ಹಾಡುವ ಕವಿತೆಗಳ ಕುರಿತು, ಕವಿಗಳ ಕುರಿತು ಹೆಚ್ಚಿನ ತಿಳಿವಳಿಕೆ ಮೂಡುತ್ತದೆ. ಇದು ನನ್ನ ಶಾಲೆಯ ವೈಶಿಷ್ಟ್ಯ. ಎಷ್ಟೋ ಹಿರಿಯ ಕವಿಗಳು ಈಗ ನಮ್ಮೊಂದಿಗಿಲ್ಲ. ಆದರೆ, ಈಗಿರುವ ಕವಿಗಳಿಂದಲೇ ಹಿರಿಯ ಕವಿಗಳ ಕವಿತೆಗಳ ಕುರಿತು ಪರಿಚಯಿಸುವ ಕಾರ್ಯ ಮಾಡುತ್ತಿದ್ದೇನೆ.

ನನ್ನಲ್ಲಿಗೆ ಭಾವಗೀತೆಗಳನ್ನು ಕಲಿಯಲು ಬರುವ ವಿದ್ಯಾರ್ಥಿಗಳು ಸುಗಮ ಸಂಗೀತ ಕ್ಷೇತ್ರಕ್ಕೆ ಕೊಡುಗೆ ಆಗಬೇಕು. ಹಾಡುಗಾರಿಕೆ ಮಾತ್ರವಲ್ಲ, ವೇದಿಕೆ ಮೇಲೆ ನಿಂತು ಹೇಗೆ ಹಾಡಬೇಕು, ರೆಕಾರ್ಡಿಂಗ್‌ ಹೇಗಿರುತ್ತದೆ ಎಂಬ ಕೌಶಲಗಳನ್ನು ಕಲಿಸಿಕೊಡುತ್ತೇನೆ. ನನ್ನ ವಿದ್ಯಾರ್ಥಿಗಳಿಗೆ ಹಾಡಲು ಹಲವು ವೇದಿಕೆಗಳನ್ನೂ ಕಲ್ಪಿಸಿಕೊಡುತ್ತೇನೆ.

ಹಲವಾರು ವರ್ಷಗಳಿಂದ ‘ಮನೆಯಂಗಳದಲ್ಲಿ ಕವಿತಾ ಗಾಯನ’ದಂತಹ ಹಲವು ಕಾರ್ಯಕ್ರಮಗಳನ್ನು ನಾನೇ ಮುಂದೆ ನಿಂತು, ನನ್ನ ಕೆಲವು ಸ್ನೇಹಿತರೊಂದಿಗೆ ಸೇರಿ ಆಯೋಜನೆ ಮಾಡುತ್ತೇನೆ. ಬೆಂಗಳೂರಿನ ಸಾಹಿತ್ಯಾಸಕ್ತರ ಅಥವಾ ಸಂಗೀತಾಸಕ್ತರ ಮನೆಗಳ ಅಂಗಳದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಒಂದೊಂದು ಕಾರ್ಯಕ್ರಮದಲ್ಲಿಯೂ ಒಬ್ಬೊಬ್ಬ ಕವಿಗಳ ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನನ್ನ ವಿದ್ಯಾರ್ಥಿಗಳು ಇಲ್ಲಿ ಹಾಡುತ್ತಾರೆ. ಇದು ಅವರಿಗೆ ವೇದಿಕೆಯಲ್ಲಿ ಹಾಡುವ ಭಯವನ್ನು ನಿಭಾಯಿಸುವುದನ್ನು ಹೇಳಿಕೊಡುತ್ತದೆ. ಒಬ್ಬ ಪರಿಪೂರ್ಣ ಗಾಯಕ/ಗಾಯಕಿಯನ್ನು ತಯಾರು ಮಾಡುವುದು ನನ್ನ ಕನಸು.

ಯಾರೊ ವಿದ್ಯಾರ್ಥಿಗೆ ಶಾಲೆಯ ಶುಲ್ಕ ನೀಡಲು ಸಾಧ್ಯವಾಗಲಿಲ್ಲ ಎಂದಾದರೆ, ನಾನು ಅವರಲ್ಲಿ ಶುಲ್ಕ ಕೇಳುವುದಿಲ್ಲ. ನನಗೆ ಸಂಗೀತ ಮುಖ್ಯ. ಮಕ್ಕಳು ಸಂಗೀತ ಕಲಿಯಬೇಕು. ನನ್ನ ಶಾಲೆಗೆ ಸೇರುವ ವಿದ್ಯಾರ್ಥಿಗಳು ರಿಯಾಲಿಟಿ ಶೋಗಳಿಗೆ ಹೋಗುವುದು ನನಗೆ ಇಷ್ಟವಿಲ್ಲ. ಅಲ್ಲಿಗೆ ಹೋಗುವುದು ಬಿಡುವುದು ಅವರ ಇಚ್ಛೆಗೆ ಬಿಟ್ಟ ವಿಚಾರ. ಆದರೆ, ಅವರು ಉತ್ತಮ ಗಾಯಕರಾಗಬೇಕು ಎನ್ನುವುದಷ್ಟೇ ಮುಖ್ಯ. ನನ್ನ ಬಳಿ ಕೆಲವು ಪೋಷಕರು ಬರುತ್ತಾರೆ. ಶಾಲೆಗೆ ಸೇರಿದ ಎಷ್ಟು ದಿನಕ್ಕೆ ರಿಯಾಲಿಟಿ ಶೋನಲ್ಲಿ ಭಾಗವಹಿಸಬಹುದು ಎಂದು ನನ್ನನ್ನು ಕೇಳುತ್ತಾರೆ. ರಿಯಾಲಿಟಿ ಶೋಗಳಿಗೆ ಹೋಗುವುದೇ ಉದ್ದೇಶವಾದರೆ, ಶಾಲೆಗೆ ಸೇರಿಸಬೇಡಿ ಎಂದು ನಾನು ನಿಷ್ಠುರವಾಗಿಯೇ ಹೇಳಿಬಿಡುತ್ತೇನೆ. ⇒v

ಕ್ಯೂಆರ್‌ ಕೋಡ್‌ ಪುಸ್ತಕ!

ಬೆಂಗಳೂರಿನಲ್ಲಿ ಅಷ್ಟೇ ಅಲ್ಲ. ಜಿಲ್ಲೆ, ತಾಲ್ಲೂಕುಗಳಿಗೂ ಹೋಗಿ ನಾನು ಸುಗಮ ಸಂಗೀತ ಶಿಬಿರಗಳನ್ನು ಆಯೋಜಿಸುತ್ತೇನೆ. ಈಗ ಸಂಗೀತದ ಕಲಿಕಾ ವಿಧಾನ ಬದಲಾಗಿದೆ. ಹಾಡು ಹೇಳಿಕೊಡುವಾಗಲೇ ಕೆಲವು ವಿದ್ಯಾರ್ಥಿಗಳು ರೆಕಾರ್ಡ್‌ ಮಾಡಿಕೊಳ್ಳುತ್ತಾರೆ. ಕೆಲವರು ಯೂಟ್ಯೂಬ್‌ ನೋಡಿಯೂ ಕಲಿಯುತ್ತಾರೆ. ಆದರೆ, ಈ ಎಲ್ಲದರಲ್ಲಿಯೂ ಸಾಹಿತ್ಯವನ್ನು ಕೇಳಿಸಿಕೊಂಡು ಬರೆದುಕೊಳ್ಳಬೇಕು. ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ, ನಾನು ಪುಸ್ತಕವೊಂದನ್ನು ಅಚ್ಚು ಹಾಕಿಸಿದ್ದೇನೆ.

‘ಉಪಾಸನ’ ಎನ್ನುವ ಈ ಪುಸ್ತಕದಲ್ಲಿ ನಾನು ಸಂಯೋಜಿಸಿದ 502 ಹಾಡುಗಳ ಸಾಹಿತ್ಯವನ್ನು ಅಚ್ಚು ಹಾಕಿಸಿದ್ದೇನೆ. ಈ ಕವಿತೆಗಳ ಕೆಳಗೆ ಕ್ಯೂಆರ್‌ ಕೋಡ್‌ ಅನ್ನು ನೀಡಿದ್ದೇನೆ.  ಸಂಗೀತಾಸಕ್ತರು ಸಾಹಿತ್ಯವನ್ನು ನೋಡುತ್ತಾ, ಹಾಡುಗಳನ್ನು ಕೇಳಬಹುದು, ಕಲಿಯಬಹುದು. ಕನ್ನಡದ ಮಟ್ಟಿಗೆ ಇದು ವಿನೂತನ ಪ್ರಯೋಗವಾಗಿದೆ. 

ಆಗಸ್ಟ್‌ 10ರಂದು ‘ಉಪಾಸನ’

ಸಂಗೀತ ಶಾಲೆಯ ಬೆಳ್ಳಿಹಬ್ಬ ಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಎಲ್‌.ಎ. ರವಿಸುಬ್ರಮಣ್ಯ ಉದ್ಘಾಟಿಸಲಿದ್ದಾರೆ. ಬಿ.ಕೆ. ಸುಮಿತ್ರಾ ಅಧ್ಯಕ್ಷತೆವಹಿಸಲಿದ್ದಾರೆ. ವಿ.ಎಸ್‌. ಭಾಗ್ಯಲಕ್ಷ್ಮೀ, ಡಾ. ಜೆ. ಬಾಲಸುಬ್ರಮಣ್ಯಂ, ಮಂಗಳ ಎಂ. ನಾಡಿಗ್‌ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಉಪಾಸನಾ ‍ಪ್ರಶಸ್ತಿ’ಯನ್ನು ಗಾಯಕಿ ಸುಪ್ರಿಯಾ ರಘುನಂದನ್‌ ಅವರಿಗೆ ನೀಡಲಾಗುತ್ತಿದೆ. ಜೊತೆಗೆ, ‘ನಾದೋಪಾಸನಾ ಪ್ರಶಸ್ತಿ’ಯನ್ನು ಕೀಬೋರ್ಡ್‌ ವಾದಕ ಸಂಗೀತ್‌ ಥಾಮಸ್‌ ಅವರಿಗೆ ನೀಡಲಾಗುತ್ತಿದೆ. ಎನ್‌.ಆರ್‌. ಕಾಲೊನಿಯ ಪತ್ತಿ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

10ಕ್ಕೆ ಬೆಳ್ಳಿ ಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ

ಆಗಸ್ಟ್‌ 10ರಂದು ‘ಉಪಾಸನ’ ಸಂಗೀತ ಶಾಲೆಯ ಬೆಳ್ಳಿಹಬ್ಬ ಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಎಲ್‌.ಎ. ರವಿಸುಬ್ರಮಣ್ಯ ಉದ್ಘಾಟಿಸಲಿದ್ದಾರೆ. ಬಿ.ಕೆ. ಸುಮಿತ್ರಾ ಅಧ್ಯಕ್ಷತೆವಹಿಸಲಿದ್ದಾರೆ. ವಿ.ಎಸ್‌. ಭಾಗ್ಯಲಕ್ಷ್ಮೀ, ಡಾ. ಜೆ. ಬಾಲಸುಬ್ರಮಣ್ಯಂ, ಮಂಗಳ ಎಂ. ನಾಡಿಗ್‌ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಉಪಾಸನಾ ‍ಪ್ರಶಸ್ತಿ’ಯನ್ನು ಗಾಯಕಿ ಸುಪ್ರಿಯಾ ರಘುನಂದನ್‌ ಅವರಿಗೆ ನೀಡಲಾಗುತ್ತಿದೆ. ಜೊತೆಗೆ, ‘ನಾದೋಪಾಸನಾ ಪ್ರಶಸ್ತಿ’ಯನ್ನು ಕೀಬೋರ್ಡ್‌ ವಾದಕ ಸಂಗೀತ್‌ ಥಾಮಸ್‌ ಅವರಿಗೆ ನೀಡಲಾಗುತ್ತಿದೆ. ಎನ್‌.ಆರ್‌. ಕಾಲೊನಿಯ ಪತ್ತಿ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.