ಸೂರಿಗರು ಮರೆಯಲು ಸಾಧ್ಯವೇ ಆಗದಂತಹ ಅಪೂರ್ವ ಶಿಸ್ತಿನ ಸರದಾರ ಪ್ರೊ.ಜಿ.ಟಿ.ನಾರಾಯಣರಾವ್. ವಿಜ್ಞಾನ, ಸಾಹಿತ್ಯ ಮತ್ತು ಸಂಗೀತ ವಿಮರ್ಶಾ ಕ್ಷೇತ್ರಗಳಲ್ಲಿ ಅಚ್ಚಳಿಯದ ಕಾರ್ಯ ಮಾಡಿ ಹೋಗಿರುವ ಅವರ ಬದುಕಿನ ಪ್ರತಿಯೊಂದು ಆದರ್ಶವೂ ಅನುಕರಣೀಯ. ಪಂಡಿತರಿಂದ ಪಾಮರರವರೆಗೆ ಎಲ್ಲರೂ ಅವರಿಂದ ಉಪಕೃತರಾದವರೇ. ತಮ್ಮ ವಿದ್ವತ್ತಿನ ಹಿರಿತನವನ್ನು ಎಂದೂ ಯಾರ ಮೇಲೂ ಹೇರದ ಸರಳತೆಯ ಸಾಕಾರ ಮೂರ್ತಿ ಅವರಾಗಿದ್ದರು. ಪ್ರಾಮಾಣಿಕತೆ ಅವರ ಹೆಗ್ಗುರುತು.
ಮೈಸೂರಿನ ‘ಭ್ರಮರಾ ಟ್ರಸ್ಟ್ ಆಫ್ ವೈ.ಟಿ. ಅಂಡ್ ಮಾಧುರಿ ತಾತಾಚಾರಿ’ಯು ಕರ್ನಾಟಕ ಸಂಗೀತ ಕ್ಷೇತ್ರದ ಯುವ ಕಲಾವಿದರಿಗೆ ಜಿಟಿಎನ್ ಅವರ ಹೆಸರಿನ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಜಿಟಿಎನ್ ಅವರು ಯುವ ಕಲಾವಿದರಿಗೆ ನೀಡುತ್ತಿದ್ದ ಅನನ್ಯ ಪ್ರೋತ್ಸಾಹದ ಮುಂದುವರಿಕೆಯಂತಿರುವ ಇದನ್ನು ಈ ಬಾರಿ ಪಡೆದವರು ಮೈಸೂರಿನ ಯುವ ವಿದ್ವಾನ್ ಹರೀಶ್ ಪಾಂಡವ ಅವರು. ವಿದೇಶಿ ವಾದ್ಯವಾದ ಸ್ಯಾಕ್ಸೊಫೋನ್‌ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಈ ಯುವ ಕಲಾವಿದನಿಗೆ ಕಲಾಕ್ಷೇತ್ರದಲ್ಲಿ ಭದ್ರವಾಗಿ ಕಾಲೂರಲು ಬೇಕಾದ ಅರ್ಹತೆಗಳು ಧಾರಾಳವಾಗಿಯೇ ಇದೆ.
ನಿರಂತರ ಸಾಧನೆಯೊಂದಿಗೆ ಆತ ಬಲು ಎತ್ತರಕ್ಕೆ ಏರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ. ಮೈಸೂರಿನ ಶ್ರೀಕೃಷ್ಣ ಸಂಗೀತ ಸಭಾದ ಆಶ್ರಯದೊಂದಿಗೆ ನಡೆದ ಸರಳ ಸಮಾರಂಭದಲ್ಲಿ ಜಿಟಿಎನ್ ಅವರ ಕಿರಿಯ ಸಹೋದರ ಜಿ.ಟಿ.ದಿವಾಕರ ರಾವ್ ಹಾಗೂ ಅವರ ಕಿರಿಯ ಪುತ್ರ ಅನಂತವರ್ಧನ ಮತ್ತು ಮಾಧುರಿ ತಾತಾಚಾರಿಯವರ ಉಪಸ್ಥಿತಿಯಲ್ಲಿ ’ಜಿ.ಟಿ.ನಾರಾಯಣರಾವ್ ಪ್ರಶಸ್ತಿ’ಯನ್ನು ಹರೀಶ್ ಪಾಂಡವ ಅವರಿಗೆ ಪ್ರದಾನ ಮಾಡಲಾಯಿತು.
ನಂತರ ಹರೀಶ್ ಪಾಂಡವ ಅವರಿಂದ ಸ್ಯಾಕ್ಸೊಫೋನ್ ವಾದನ ಕಛೇರಿಯು ನಡೆಯಿತು. ಅವರೊಂದಿಗೆ ಪಿಟೀಲಿನಲ್ಲಿ ವಿದ್ವಾನ್ ಸಿ.ಎನ್.ತ್ಯಾಗರಾಜು, ಮೃದಂಗದಲ್ಲಿ ವಿದ್ವಾನ್ ಸಾಯಿಕೇಶವ ಮತ್ತು ಘಟದಲ್ಲಿ ವಿದ್ವಾನ್ ಶರತ್ ಕೌಶಿಕ್ ಅವರ ಸಹಕಾರವಿತ್ತು.
ಉತ್ತಮ ಮನೋಧರ್ಮ ಮತ್ತು ಸಾಹಿತ್ಯಕ್ಕೆ ಪೂರಕವಾಗುವಂತಹ ವಾದನಶೈಲಿಯನ್ನು ರೂಢಿಸಿಕೊಂಡಿರುವ ಹರೀಶ್ ಅವರು ಜೋರು ಧ್ವನಿಯ ವಾದ್ಯವನ್ನು ಹಿತವಾಗುವಂತೆ ನುಡಿಸಬಲ್ಲ ಕೌಶಲವನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಅದು ಕೇಳುಗರನ್ನು ಸಹಜವಾಗಿಯೇ ಆಕರ್ಷಿಸುವ ಗುಣವನ್ನು ಹೊಂದಿದೆ.
ಅಂದು ಅವರಿಗೆ ಇದ್ದ ಸೀಮಿತ ಅವಧಿಯಲ್ಲಿ ಅವರು ಸಂಗೀತಪ್ರೇಮಿಗಳನ್ನು ತೃಪ್ತಿ ಪಡಿಸುವಂತಹ ವಾದನವನ್ನು ಪ್ರಸ್ತುತಪಡಿಸಿದರು. ಅಭೋಗಿ ರಾಗದ ಆದಿತಾಳದ ವರ್ಣ ‘ಯವರಿಬೋಧ’ದಿಂದ ತಮ್ಮ ಕಛೇರಿಯನ್ನು ಚುರುಕಾಗಿ ಪ್ರಾರಂಭಿಸಿ, ಪೂರ್ವಾರ್ಧವನ್ನು ಎರಡು ಕಾಲಗಳಲ್ಲಿ ನುಡಿಸಿ ಉತ್ತರಾರ್ಧವನ್ನು ತ್ವರಿತವಾಗಿಸಿ ಕೇಳುಗರು ಎಚ್ಚರದಿಂದಿರುವಂತೆ ಮಾಡಿದರು. ಅದಕ್ಕೆ ಕಲ್ಪನಾ ಸ್ವರಗಳ ಅಲಂಕಾರವೂ ಜೊತೆಗೂಡಿತು.
ಮುತ್ತುಸ್ವಾಮಿ ದೀಕ್ಷಿತರ ಹಂಸಧ್ವನಿ ರಾಗದ ಕೀರ್ತನೆ ‘ಗಂಗಣಪತೆ’ಯು ಆಲಾಪನೆ ಮತ್ತು ಸ್ವರ ಕಲ್ಪನೆಯೊಡನೆ ಚೊಕ್ಕವಾಗಿ ಮೂಡಿಬಂದಿತು. ಅವರದೇ ಮತ್ತೊಂದು ಜನಪ್ರಿಯ ರಚನೆ ‘ಅಖಿಲಾಂಡೇಶ್ವರಿ’ (ದ್ವಿಜಾವಂತಿ) ಕುಂದಿಲ್ಲದಂತೆ ಮೂಡಿಬಂದಿತು. ಪೂರ್ವಿಕಲ್ಯಾಣಿ ರಾಗಾಲಾಪನೆಯು ಆ ರಾಗದ ಸೂಕ್ಷ್ಮತೆಗಳನ್ನು ನವಿರಾದ ಅಲಂಕಾರಗಳಿಂದ ಅಂದಗೊಳಿಸಿ ಕೇಳುಗರಿಗೆ ಅದರ ಸೊಬಗನ್ನು ತೋರುತ್ತಾ ಹೋಯಿತು. ಸಿ.ಎನ್.ತ್ಯಾಗರಾಜು ಅವರು ಪಿಟೀಲಿನಲ್ಲಿ ಅವರ ಮನೋಧರ್ಮದ ಅನಾವರಣ ಮಾಡಿ ರಂಜಿಸಿದರು. ತ್ಯಾಗರಾಜರ ರಚನೆಯಾದ ‘ಜ್ಞಾನಮೊಸಗರಾದ’ವು ಸಾಹಿತ್ಯಕ್ಕೆ ಅನುಗುಣವಾಗಿ ಚೊಕ್ಕವಾಗಿ ಮೂಡಿಬಂದಿತು.
ಅಂದಿನ ಮುಖ್ಯ ರಾಗ ಚಾರುಕೇಶಿ. ಅದರ ಸಂಚಾರಗಳು ಥಟ್ಟನೆ ಕೇಳುಗರನ್ನು ಆಕರ್ಷಿಸುವಂತಹವು. ರಾಗವನ್ನು ವೈವಿಧ್ಯಮಯವಾಗಿ ವಿಸ್ತರಿಸುತ್ತಾ ಹೋದಂತೆ ಕೇಳುಗರು ಪರವಶರಾಗುವುದರಲ್ಲಿ ಸಂಶಯವಿಲ್ಲ. ಅದನ್ನು ಸಮರ್ಥವಾಗಿ ಇಬ್ಬರೂ ವಾದಕರು ಮಾಡಿದರು. ತ್ಯಾಗರಾಜರ ಮತ್ತೊಂದು ಸುಂದರ ಕೃತಿ ‘ಆಡ ಮೋಡಿ ಗಲದೆ?’ಯು ಬಲು ಚುರುಕಾದ ಕಲ್ಪನಾ ಸ್ವರಗಳೊಡನೆ ರಂಜಿಸಿತು.
ಸಾಯಿಕೇಶವ ಮತ್ತು ಶರತ್ ಕೌಶಿಕ್ ಅವರ ತನಿಯಾವರ್ತನವು ವೈವಿಧ್ಯಮಯ ಜತಿಗಳಿಂದ ಕೂಡಿ ಆಸಕ್ತಿಕರವಾಗಿತ್ತು. ವ್ಯಾಸರಾಯರ ‘ಕೃಷ್ಣಾ ನೀ ಬೇಗನೆ’ (ಯಮುನಕಲ್ಯಾಣಿ) ಮತ್ತು ಪುರಂದರದಾಸರ ‘ಭಾಗ್ಯದ ಲಕ್ಷ್ಮಿ’ (ಮಧ್ಯಮಾವತಿ) ದೇವರ ನಾಮಗಳೊಡನೆ ಕಛೇರಿಯು ಸಂಪನ್ನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.