ADVERTISEMENT

ಇದು ಅಮೃತ ಖಂಜಿರ: ಪಕ್ಕ ವಾದ್ಯಕ್ಕೆ ಸಂಗೀತ ಕಛೇರಿಯಲ್ಲಿ ಪ್ರಧಾನ‌ ಸ್ಥಾನ

ಅವಿನಾಶ್ ಬಿ.
Published 29 ಆಗಸ್ಟ್ 2021, 3:45 IST
Last Updated 29 ಆಗಸ್ಟ್ 2021, 3:45 IST
ಅಮೃತ್ ಖಂಜಿರ
ಅಮೃತ್ ಖಂಜಿರ   

ಮನ ಕೆರಳಿಸುವ ಆಧುನಿಕತೆಯ ಗದ್ದಲದ ಉಪದ್ವ್ಯಾಪಗಳ ನಡುವೆ, ಮನಶ್ಶಾಂತಿ ನೀಡಬಲ್ಲ, ಮನವರಳಿಸುವ ಕಲೆಯು ಮೊಬೈಲ್ ಫೋನ್‌ನ ಗೀಳು ಬಿಟ್ಟ ಮಕ್ಕಳಿಗಷ್ಟೇ ಒಲಿಯುವ ಕಾಲವಿದು.ಅಂತಹುದರಲ್ಲಿ ಪರಿಶ್ರಮದಿಂದ ಪಕ್ಕ ವಾದ್ಯ 'ಖಂಜಿರ' ಈಗ ಪ್ರಧಾನ ವಾದ್ಯವಾಗಿ ಸಂಗೀತ ಕಛೇರಿಗಳಲ್ಲಿ ಪ್ರಧಾನ ಸ್ಥಾನ ಅಲಂಕರಿಸುತ್ತಿದೆ. ಇದರ ಹಿಂದಿನ ಪರಿಶ್ರಮ, ಶ್ರದ್ಧೆ, ಛಲದ ದಾರಿಯನ್ನು ವಿವರಿಸಿದ್ದಾರೆ ಬೆಂಗಳೂರು ಬಸವನಗುಡಿಯ ಸಂಗೀತ ವಿದ್ವಾಂಸ ಅಮೃತ್ ಖಂಜಿರ.

ಸಂಗೀತ ಕಛೇರಿಯಲ್ಲಿ ಖಂಜಿರಕ್ಕೆ ಪ್ರಧಾನ ವಾದ್ಯದ ಸ್ಥಾನದೊರಕಿಸಿದ್ದಲ್ಲಿ ಅಮೃತ್ ಕೈಚಳಕದ ಪುಳಕ

ಶ್ರದ್ಧೆ, ಪರಿಶ್ರಮ ಮತ್ತು ಛಲ - ಇವು ಮೇಳೈಸಿದರೆ ಕಲಾಮಾತೆ ಒಲಿಯುತ್ತಾಳೆ. ಈ ಸೇವ್ಯ-ಸೇವಕ ಭಾವದಿಂದಲಷ್ಟೇ ಕಲೆ ಮತ್ತು ಕಲಾವಿದ - ಇಬ್ಬರೂ ಔನ್ನತ್ಯಕ್ಕೇರಬಲ್ಲರು. ಈ ಮಾತಿಗೆ ಖಚಿತ ಉದಾಹರಣೆಯೆಂದರೆ, ಖಂಜಿರ ಎಂಬ ಪುಟ್ಟ ವಾದ್ಯವು ಸಂಗೀತ ಕಛೇರಿಗಳಲ್ಲಿ ಪ್ರಧಾನ ಸ್ಥಾನಕ್ಕೇರಿದ ಬಗೆ. ಇದರ ಹಿಂದೆ ಅದೆಷ್ಟೋ ಸಂಗೀತ ವಿದ್ವಾಂಸರ ಶ್ರಮವಿದೆ. ಈ ಕಾಲದಲ್ಲಿ ಖಂಜಿರವನ್ನು ಒಲಿಸಿಕೊಂಡು, ಅಳಿಯುತ್ತಿರುವ ವಾದ್ಯನಾದವೊಂದರ ಝೇಂಕಾರವನ್ನು ಮೆರೆಸಿದ ತೀರಾ ಅಪರೂಪದ ಕಲಾವಿದರಲ್ಲಿ ಪ್ರಮುಖ ಹೆಸರು ಬೆಂಗಳೂರಿನ ಸಂಗೀತ ವಿದ್ವಾನ್ ಅಮೃತ್.

ADVERTISEMENT

ಎರಡೂ ಕೈಗಳಲ್ಲಿ ನುಡಿಸುವ ವಾದ್ಯಗಳ ನಾದವನ್ನು ಒಂದೇ ಕೈಯಲ್ಲಿ ಪಡಿಮೂಡಿಸಬಲ್ಲ ಚಾಕಚಕ್ಯತೆಯ ಅಗತ್ಯವಿದೆ ಖಂಜಿರಕ್ಕೆ. ದಕ್ಷಿಣಾದಿ ಸಂಗೀತದ ಇತರ ಕೆಲವೊಂದು ಪರಿಕರಗಳಂತೆಯೇ ಬಹುತೇಕ ಮೂಲೆಗುಂಪಾಗುವ ಹಂತದಲ್ಲಿದ್ದ ಖಂಜಿರ ಇದೀಗ ಸಂಗೀತ ಕಛೇರಿಗಳಲ್ಲಿ, ತಾಳ ವಾದ್ಯ ಗೋಷ್ಠಿಗಳಲ್ಲಿ ಕೇಂದ್ರ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗುತ್ತಿದೆ ಎಂದರೆ ಅದಕ್ಕೆ ಅಮೃತ್ ಸಹಿತ ಹಲವು ಕಲಾವಿದರ ಕೊಡುಗೆ ಬಹಳಷ್ಟಿದೆ.

ಬೆರಳುಗಳ ಮೂಲಕವೇ ಪವರ್‌ಫುಲ್ ನುಡಿಸಾಣಿಕೆ, ವೇಗದ ನುಡಿತ, ವೈವಿಧ್ಯ ಮತ್ತು ಶಾಸ್ತ್ರೀಯತೆ ಮೇಳೈಸಿ ಈ ವಾದನವನ್ನು ದೇಶ-ವಿದೇಶದ ಸಂಗೀತಪ್ರಿಯರಲ್ಲಿ ಹುಚ್ಚೆಬ್ಬಿಸುವಂತೆ ಮಾಡಿದವರಲ್ಲಿ ಪ್ರಮುಖರು ಅಮೃತ್. ಆಕಾಶವಾಣಿಯ 'ಎ' ಶ್ರೇಣಿಯ ಮೃದಂಗ ಕಲಾವಿದರಾಗಿದ್ದರೂ, ಅವರು ಖಂಜಿರವಾದಕರೆಂದೇ ಪ್ರಸಿದ್ಧಿ ಪಡೆದಿದ್ದಾರೆ. ಖಂಜಿರದಲ್ಲಿ 'ಏ-ಟಾಪ್' ಶ್ರೇಣಿ ಪಡೆದ ಅತಿ ಕಿರಿಯ ಕಲಾವಿದರಾಗಿದ್ದಾರೆ. ಅಷ್ಟೇ ಅಲ್ಲ, ಹಲವಾರು ವಯಲಿನ್ ಕಛೇರಿಗಳನ್ನೂ ನಡೆಸಿಕೊಟ್ಟಿರುವ ಬಹುಮುಖಿ ಪ್ರತಿಭೆ.

ಕಲೆಯ ಮೇಲಿನ ಒಲವು ಮತ್ತು ಖಂಜಿರವೆಂಬ ಪುಟ್ಟ ತಾಳವಾದ್ಯಕ್ಕೆ ದೊಡ್ಡ ಹೆಸರು ತಂದುಕೊಡಬೇಕೆಂಬ ತುಡಿತ ಎಷ್ಟಿದೆಯೆಂದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನೇ 'ಅಮೃತ್ ಖಂಜಿರ' ಎಂದೇ ಬದಲಿಸಿಕೊಂಡಿದ್ದಾರೆ.

ಮೃದಂಗದಿಂದ ಖಂಜಿರದತ್ತ
ಖಂಜಿರವನ್ನು ಸೋಲೋ (ಏಕ ವಾದ್ಯ ಪ್ರದರ್ಶನ) ಮೂಲಕ, ಸಂಗೀತ ಕಛೇರಿಯೊಂದರ ಕೇಂದ್ರಬಿಂದುವಾಗಿ ಬೆಳೆಸಿದ ಅಮೃತ್ ಅವರನ್ನು ಖಂಜಿರ ಎಂಬ ತಾಳವಾದ್ಯವು ಸೆಳೆದುಕೊಂಡ ಬಗೆಯೇ ಅನನ್ಯ.

ವಯಲಿನ್ ವಿದ್ವಾನ್, ಕೀರ್ತಿಶೇಷ ಬಸವನಗುಡಿ ಜಿ.ನಟರಾಜ್‌ರ ಪುತ್ರ ಅಮೃತ್.3½ ವಯಸ್ಸಿನಲ್ಲಿ ಮನೆಯಲ್ಲೇ ಸಂಗೀತ ಅಭ್ಯಾಸ ಪ್ರಾರಂಭಿಸಿ, ತಮ್ಮ 5ನೇ ವಯಸ್ಸಿಗೇ ವಿ. ಎಂ.ವಾಸುದೇವ ರಾವ್ ಅವರಲ್ಲಿ ಮೃದಂಗಾಭ್ಯಾಸ ಆರಂಭಿಸಿ 7ನೇ ವಯಸ್ಸಿಗೇ ವೇದಿಕೆಗಳಲ್ಲಿ ಪ್ರದರ್ಶನ ನೀಡುವಷ್ಟು ತಯಾರಾಗಿದ್ದರು. ನಂತರ ಮೃದಂಗ ವಿದ್ವಾನ್ ಎ.ವಿ.ಆನಂದ್ ಅವರಲ್ಲಿ ವಿದ್ವತ್ತನ್ನು ಹೆಚ್ಚಿಸಿಕೊಂಡರು. ಆದರೆ, ರಂಗವೇರುವ ಮೊದಲು ಘಟಂನಂತಹಾ ಪಕ್ಕ ವಾದ್ಯದಲ್ಲಿ ಮೊದಲು ಕುಳ್ಳಿರಿಸುವುದು ಸಂಪ್ರದಾಯ. ಆದರೆ, ಇಲ್ಲಿ ಅವರ ಮೇಷ್ಟ್ರು, 'ಅದು ಬೇಡ, ಖಂಜಿರ ಹಿಡಿಯಲಿ' ಅಂತ ಅಪ್ಪಣೆ ಕೊಡಿಸಿದರು. ಈ ರೀತಿಯಾಗಿ ಅಮೃತ್ ಅವರ ಖಂಜಿರ ಜತೆಗಿನ ಬಾಂಧವ್ಯ ಆರಂಭವಾಯಿತು.

ಖಂಜಿರ ನುಡಿಸಲು ಗುರುಗಳು ಹೇಳಿದರಲ್ಲ, ಆ ಸಂದರ್ಭದಲ್ಲಿ ಕಾರೈಕುಡಿ ಮಣಿಯವರು ಹೊರತಂದಿದ್ದ 'ಶ್ರುತಿಲಯ' ಕ್ಯಾಸೆಟ್ ಕೇಳುವ ಹುಚ್ಚು ಬಾಲಕ ಅಮೃತ್‌ಗೆ. ಖಂಜಿರದ ನಾದವು ಅವರನ್ನು ಇನ್ನಿಲ್ಲದಂತೆ ಸೆಳೆದುಕೊಂಡು, ಕ್ಯಾಸೆಟ್ ಪ್ಲೇಯರ್‌ನಲ್ಲಿ ರೀವೈಂಡ್ ಮಾಡಿ, ನಿಲ್ಲಿಸಿ, ಪ್ಲೇ ಮಾಡುತ್ತಾ, ಖಂಜಿರದಲ್ಲಿ ಅಭ್ಯಾಸ ಮಾಡಿ, ಮತ್ತೆ ಮತ್ತೆ ಕೇಳುತ್ತಾ, ಮತ್ತೆ ಮತ್ತೆ ನುಡಿಸುತ್ತಾ, ಏಕಲವ್ಯನ ತೆರನಾಗಿ ಸಾಧನೆ ಮಾಡಿದರು. ನುಡಿಸಿದವರು ಯಾರೆಂದು ತಿಳಿಸದೆಯೇ ಸತತ ಪರಿಶ್ರಮ ತೋರಿಸಿ ಅಭ್ಯಾಸ ಮಾಡಿದರು. 'ಖಂಜಿರ ನುಡಿಸಿದರೆ ಈ ರೀತಿ ನುಡಿಸಬೇಕು' ಎಂದು ನಿಶ್ಚಯಿಸಿದ ಈ ಬಾಲಕ. ಫಿಂಗರಿಂಗ್ ಗೊತ್ತಿಲ್ಲದೆಯೇ, ಧ್ವನಿಯನ್ನು ಅನುಸರಿಸಿ ಖಂಜಿರವನ್ನು ತಾವಾಗಿ ನುಡಿಸಲಾರಂಭಿಸಿದರು. ಬಳಿಕ, ಈ ಕ್ಯಾಸೆಟ್‌ಗಳಲ್ಲಿ ಖಂಜಿರವನ್ನು ನುಡಿಸಿದವರು ಪ್ರಖ್ಯಾತ ಖಂಜಿರ ವಾದಕ, ಚೆನ್ನೈಯ ವಿದ್ವಾನ್ ಜಿ.ಹರಿಶಂಕರ್ ಎಂಬ ವಿಷಯ ತಿಳಿಯುತ್ತಲೇ, ಪುಂಗಿಯ ನಾದಕ್ಕೆ ನಾಗರ ತಲೆದೂಗುವಂತೆ ಖಂಜಿರದ ನಾದಾಮೃತದ ಮೂಲವನ್ನು ಅರಸಿ ಹೊರಟರು ಅಮೃತ್.

ಬೆಂಗಳೂರಿನಿಂದ ಚೆನ್ನೈಗೆ ಹುಡುಕಿಕೊಂಡು ಹೋಗಿ, ಹಲವು ಬಾರಿ ವಿನಂತಿಸಿದ ಬಳಿಕ ಶಿಷ್ಯನಾಗಿಸಿಕೊಳ್ಳಲು ಒಪ್ಪಿದ್ದರು ಹರಿಶಂಕರ್. ಆದರೆ ಈ ಯುವಕನ ಸಾಧನೆ ನೋಡಿ ತಮ್ಮಲ್ಲಿನ ವಿದ್ವತ್ತನ್ನೆಲ್ಲ ಹಸ್ತಾಂತರಿಸಿಬಿಟ್ಟಿದ್ದರವರು. ಖಂಜಿರ ಕಲಿಕೆಗಾಗಿಯೇ ಕೇಂದ್ರ ಸರಕಾರದಿಂದ ಸ್ಕಾಲರ್‌ಶಿಪ್ ಕೂಡ ಸಿಕ್ಕಿತು. ಅದಾಗಲೇ ಖಂಜಿರ ನುಡಿಸುತ್ತಿದ್ದರೂ, ಸೊಲ್ಲುಗಳು, ಉರುಟುಗಳು ಪ್ರಯೋಗಿಸಬೇಕಿದ್ದರೆ ಅದಕ್ಕೆ ವಿಶೇಷ ಪಾಠ ಬೇಕೇಬೇಕು. ಕಛೇರಿಗಳಲ್ಲಿ ತುಂಬ ವೇಗದ ನಡೆಯಲ್ಲಿ ನುಡಿಸುವುದು ಇಲ್ಲಿನ ಕಲಿಕೆಯಿಂದ ಸುಲಲಿತವಾಯಿತು. ಆದರೆ, ಕಲಿಕಾ ಹಂತದಲ್ಲೇ ಗುರು ಹರಿಶಂಕರ್ ಅವರು ಇಹಲೋಕ ತ್ಯಜಿಸಿದಾಗ, ಅಲ್ಲೊಂದು ನಿರ್ವಾತ ಸೃಷ್ಟಿಯಾಗಿತ್ತು. ಅಷ್ಟರಲ್ಲಾಗಲೇ ಅನೂಹ್ಯ ವೇಗದಲ್ಲಿ ಅಂದರೆ ಕೇವಲ ಮೂರುವರೆ ವರ್ಷಗಳಲ್ಲಿಯೇ ತೀವ್ರ ಪರಿಶ್ರಮದ ಮೂಲಕ ಖಂಜಿರದ ನುಡಿ-ನಡೆಗಳ ವೈವಿಧ್ಯವನ್ನು ತಮ್ಮದಾಗಿಸಿಕೊಂಡಿದ್ದರು ಅಮೃತ್. ಹರಿಶಂಕರ್ ಗತಿಸಿದಾಗ ಅವರು ನೆಟ್ಟ ಸಸಿ ಹೆಮ್ಮರವಾಗುವಂತೆ ನೋಡಿಕೊಂಡರು.

ಹರಿಶಂಕರ್ ಅವರದು ಕ್ಲಿಷ್ಟವಾದ ಪಾಠಾಂತರ. ಪೂರ್ಣ ಗಮನ ಇರಬೇಕು. ಅದಕ್ಕೂ ಸಿದ್ಧಪಠ್ಯವಿದೆ ಎಂಬುದು ಗೊತ್ತಾಗಿದ್ದೇ ಅಲ್ಲಿ ಹೋದಮೇಲೆ. ಅಲ್ಲಿಂದ ಶುರು ಮಾಡಿದ್ದೇ 'ತ ಧಿ ತೋಂ ನ' ಆರಂಭಿಕ ಪಾಠ. "ಅವರು ನನ್ನ ಖಂಜಿರವಾದನ ದಿಕ್ಕನ್ನು ಪೂರ್ತಿ ಬದಲಿಸಿಬಿಟ್ಟರು. ಖಂಜಿರದ ಬಗ್ಗೆ ನನಗಿದ್ದ ಆಲೋಚನೆಯನ್ನೇ ಬದಲಿಸಿಬಿಟ್ಟರು. ಖಂಜಿರ ಕಲಿಸಿದ ಅವರು, ಕೈಹಿಡಿದು ಅದರ ಶಿಖರಕ್ಕೇ ಕೈಹಿಡಿದು ಒಯ್ದರು. ಹಲವಾರು ವರ್ಷ ಕೇಳಿಕೊಂಡೇ ಕಲಿತಿದ್ದ ಖಂಜಿರದ ದಿಕ್ಕು ಬದಲಿಸಿದ ಮಹಾನ್ ಗುರುಗಳವರು" ಎಂದು ಸ್ಮರಿಸುತ್ತಾರೆ ಅಮೃತ್.

ವಿದೇಶಿಗರ ಮನ್ನಣೆ
ತವಿಲ್‌ನಂತಹ ತಾರಸ್ಥಾಯಿಯ ವಾದ್ಯದ ಜೊತೆಗಿನ ಜುಗಲ್‌ಬಂದಿಯಲ್ಲಿ ಸುಮಧುರ ಖಂಜಿರವನ್ನೂ ಮೆರೆಸಿದ ಸಂದರ್ಭದಲ್ಲಿ ವಿಶ್ವವಿಖ್ಯಾತ ತವಿಲ್ ವಾದಕ, ಏ. ಕೆ. ಪಳನಿವೇಲ್ ಹಾಗು ತಬಲ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅಂತಹವರು ಶಹಬ್ಬಾಸ್ ಹೇಳಿದ್ದಾರೆಂದರೆ ಅಮೃತ್ ಅವರ ವಾದನ ವೈಖರಿ ತಿಳಿದೀತು.

2019ರಲ್ಲಿ ನಡೆದ 'ಗ್ಲೋಬಲ್ ಸಾಯಿ ಸಿಂಫೋನಿ'ಯಲ್ಲಿ ಘಟಾನುಘಟಿಗಳಾದ ಕಾರೈಕುಡಿ ಮಣಿ (ಮೃದಂಗ), ಗಣೇಶ್-ಕುಮರೇಶ್ (ವಯಲಿನ್), ರಾಜೇಶ್ (ಮ್ಯಾಂಡೊಲಿನ್), ಸುರೇಶ್ ವೈದ್ಯನಾಥನ್ (ಘಟಂ), ಶಶಾಂಕ ಸುಬ್ರಹ್ಮಣ್ಯಂ (ಕೊಳಲು), ಪಂ.ದೇಬಶಿಷ್ ಭಟ್ಟಾಚಾರ್ಯ (ಗಿಟಾರ್), ಸುಧಾ ರಘುನಾಥನ್ (ಹಾಡುಗಾರಿಕೆ), ಜರ್ಮನಿಯ ಹೈನರ್ ವಿಬೆರ್ನಿ, ಸೆನೆಗಲ್‌ನ ಪೇಪ್ ಸಮೋರಿ ಸೆಕ್ (ಆಫ್ರಿಕನ್ ಕಾಂಗೋ), ಮೌರಿಟಾನಿಯಾ ಶೆಯಿಕ್ ಲೇಬ್ಲಾಡ್ ಮುಂತಾದವರೊಂದಿಗೆ ಅಮೃತ್ ಅವರೂ ಖಂಜಿರದ ನುಡಿಸುವ ಮೂಲಕ ತಮ್ಮ ಕೈಚಳಕ ಮೆರೆದಿದ್ದಾರೆ. ಯೂಟ್ಯೂಬ್‌ನಲ್ಲಿರುವ ಈ ವಿಡಿಯೊ 41 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಜೋರ್ಡಾನ್‌ನಲ್ಲಿ ಮೆಹಮೆಟ್ ಅಕಟೆ, ರಿಶ್ಲೂ ಲಾಹಿರಿ ಹಾಗೂ ನಾಸಿರ್ ಸಲಾಮೇ ಅವರಿಂದ ಅಲ್ಲಿನ ವಾದ್ಯಗಳ ಜುಗಲ್‌ಬಂದಿ ಕಾರ್ಯಕ್ರಮದಲ್ಲಿ ಅಮೃತ್ ತಮ್ಮ ಖಂಜಿರ ವಾದನ ವೈಖರಿಯಿಂದ ಕಲಾವಿದರನ್ನು, ಪ್ರೇಕ್ಷಕರನ್ನು ನಿಬ್ಬೆರಗಾಗಿಸಿ, ಚಪ್ಪಾಳೆ-ಶಿಳ್ಳೆಗಳಿಂದಲೇ ತುಂಬಿಹೋಗಿತ್ತು ಸಭಾಂಗಣ.

ಜೆರುಸಲೆಂನ ಅಬ್ಬೋಸ್ ಕೊಸಿಮೊವ್, ಮಾರ್ಕ್ ಮೋಶಾಯೆವ್, ಅಲೆಕ್ಸ್ ಟೋಬಿಯಸ್, ಆಂಡ್ರೀ ಪಿಕ್ಕಿಯೋನಿ ಜೊತೆಗೆ ಖಂಜಿರದ ತಾಳವಾದ್ಯ ಒಡನಾಟವನ್ನು ಸಂಯೋಜಿಸುವಲ್ಲಿ ಮತ್ತು ಆ ಕಾರ್ಯಕ್ರಮ ಯಶಸ್ವಿಯಾಗಿಸುವುದರಲ್ಲಿ ಅಮೃತ್ ಪಾತ್ರ ಹಿರಿದು. ಇಂಥದ್ದೇ ಅದೆಷ್ಟೋ ಪ್ರದರ್ಶನಗಳ ಮೂಲಕ ಸಂಗೀತಕ್ಕೆ ಎಲ್ಲೆ ಇಲ್ಲ ಎಂಬುದು ಸಾಬೀತಾಗುವುದರೊಂದಿಗೆ, ಹೋದಲ್ಲೆಲ್ಲಾ ಖಂಜಿರ ಕುರಿತ ಉಪನ್ಯಾಸ, ಪ್ರದರ್ಶನಗಳ ಮೂಲಕ ಪುಟ್ಟ ವಾದ್ಯದ ಸಾಧ್ಯತೆಗಳು ಅಪರಿಮಿತ ಎಂಬುದನ್ನು ಲೋಕಮುಖಕ್ಕೆ ತೋರಿಸಿಕೊಟ್ಟವರು ಅಮೃತ್.



ಡಾ. ಆರ್. ಕೆ. ಶ್ರೀಕಂಠನ್, ಪ್ರೊ. ಟಿ.ಎನ್. ಕೃಷ್ಣನ್, ಡಾ. ಎಂ. ಬಾಲಮುರಳೀಕೃಷ್ಣ, ಡಾ. ಎನ್. ರಮಣಿ, ಡಾ. ಟಿ. ಕೆ. ಮೂರ್ತಿ, ಪಾಲ್ಘಾಟ್ ಆರ್. ರಘು, ಉಮಯಾಳಪುರಂ ಕೆ. ಶಿವರಾಮನ್, ಪ್ರೊ. ಟಿ.ವಿ. ಗೋಪಾಲಕೃಷ್ಣನ್, ಪ್ರೊ. ತ್ರಿಚಿ ಶಂಕರನ್, ಪ್ರೊ.ಎಲ್ಲಾ ವೆಂಕಟೇಶ್ವರ ರಾವ್, ಟಿ.ವಿ. ಶಂಕರನಾರಾಯಣನ್, ಡಾ. ಎಲ್. ಸುಬ್ರಮಣ್ಯಂ, ಮಧುರೈ ಟಿ. ಎನ್. ಶೇಷಗೋಪಾಲನ್, ಡಾ. ಕದ್ರಿ ಗೋಪಾಲನಾಥ್, ಕುಮಾರಿ ಎ. ಕನ್ಯಾಕುಮಾರಿ, ಅರಿದ್ವಾರಮಂಗಲಂ, ಎ.ಕೆ. ಪಳನಿವೇಲ್ (ತವಿಲ್), ತಂಜಾವೂರು ಗೋವಿಂದರಾಜನ್ (ತವಿಲ್), ತಿರುಪುಂಗೂರು ಮುತ್ತುಕುಮಾರಸ್ವಾಮಿ, ಚಿತ್ರವೀಣಾ ರವಿಕಿರಣ್, ಮೈಸೂರು ಎಂ. ನಾಗರಾಜ್, ಮೈಸೂರು ಡಾ. ಎಂ. ಮಂಜುನಾಥ್ ಮುಂತಾದ ಪ್ರಮುಖ ಕಲಾವಿದರೊಂದಿಗೆ ಅಮೃತ್‌ರವರು ಕಛೇರಿ ನೀಡಿದ್ದಾರೆ.

ಕಲೆಯಿಂದಲ್ಲವೇ ಕಲಾವಿದ...
"ಕಲೆಯಿಂದ ಕಲಾವಿದ. ಕಲೆಯ ಸಾಧ್ಯತೆಗಳನ್ನೆಲ್ಲ ಅವಲೋಕಿಸಿ, ತಮಗೆ ಹೆಸರು ತಂದುಕೊಟ್ಟ ವಾದ್ಯಕ್ಕೂ ಹೆಸರು ತಂದುಕೊಡುವುದು ಅವನ ಕರ್ತವ್ಯ. ಜನ ಮಾನಸದಿಂದ ದೂರವಾಗುವಂತಿದ್ದ ವಾದ್ಯವನ್ನು ಪೋಷಿಸಿಕೊಂಡು ಹೋಗುವುದು, ಮುಂದಿನ ಪೀಳಿಗೆಗೆ ದಾಟಿಸುವುದು ಕಲಾವಿದನಾದವನ ಜವಾಬ್ದಾರಿಯೂ ಹೌದು" ಎನ್ನುತ್ತಾರೆ ಅಮೃತ್ ಖಂಜಿರ. ಮೂರುವರೆ ದಶಕಗಳಲ್ಲಿ ಅವರು ದೇಶದ ಎಲ್ಲ ಪ್ರಮುಖ ಸಂಗೀತೋತ್ಸವಗಳು, ಆಕಾಶವಾಣಿ, ದೂರದರ್ಶನ, ಸಂಗೀತ ಸಭಾಗಳಲ್ಲಿ ಸಂಗೀತ ಕ್ಷೇತ್ರದ ಬಹುತೇಕ ಹಿರಿಯರಿಗೆ ಮೃದಂಗಕ್ಕೆ ಸಾಥಿಯಾಗಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಕಾರಣ, ಅವರು ಖಂಜಿರದಲ್ಲಿ ಮಾಡಿದ ಸಾಧನೆ.

ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಕದ್ರಿ ಗೋಪಾಲನಾಥ್ (ಸ್ಯಾಕ್ಸೊಫೋನ್), ಜಾಕೀರ್ ಹುಸೇನ್ (ತಬಲ), ಡಾ.ರಮಣಿ (ಕೊಳಲು), ಕಾರೈಕುಡಿ ಮಣಿ- ಪಾಲ್ಘಾಟ್ ಮಣಿ (ಮೃದಂಗ), ಮಂಜುನಾಥ್ ಹಾಗೂ ವಿಕ್ಕು ವಿನಾಯಕರಾಮ್ (ಘಟಂ), ರವಿಶಂಕರ್ (ಸಿತಾರ್), ಶ್ರೀನಿವಾಸ್ (ಮ್ಯಾಂಡೊಲಿನ್), ಕನ್ಯಾಕುಮಾರಿ (ವಯಲಿನ್) ಮುಂತಾದವರೆಲ್ಲರೂ ವಾದ್ಯದ ಸಾಧ್ಯತೆಗಳನ್ನು ಸಂಶೋಧಿಸುತ್ತಾ ಹೋದರು ಮತ್ತು ಆ ವಾದ್ಯಗಳನ್ನೂ ಜಗತ್ಪ್ರಸಿದ್ಧವಾಗಿಸಿದರು. ಸಿದ್ಧಿಯಿಂದ ಪ್ರಸಿದ್ಧಿ ಪ್ರಾಪ್ತಿಯಾಯಿತು. ಅದೇ ಹಾದಿಯಲ್ಲಿ ಖಂಜಿರದಲ್ಲಿ ಹೆಸರು ಮಾಡಿದ್ದಾರೆ ಅಮೃತ್.

ಸೋಲೋ ಕಛೇರಿ
ಸಂಗೀತ ಕಛೇರಿಗಳಲ್ಲಿ ಪಕ್ಕ ವಾದ್ಯವಾಗಿದ್ದ ಖಂಜಿರಕ್ಕೆ ಪ್ರಧಾನ ತಾಳವಾದ್ಯದ ಹೊಳಪು ನೀಡಿ, ಏಕಮಾತ್ರ ತಾಳವಾದ್ಯದ ಪ್ರತ್ಯೇಕ ಕಛೇರಿಯನ್ನೇ ನುಡಿಸಿ, ಸಾಧಿಸಿ ತೋರಿಸಿದವರು ಅಮೃತ್. ಅವರು ಅನಿವಾರ್ಯತೆಯಿಂದಲ್ಲ, ಬದಲಾಗಿ, ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ವಾದ್ಯ ಖಂಜಿರ. "ಇದರ ಸಾಮರ್ಥ್ಯವನ್ನು ಹೊರಪ್ರಪಂಚಕ್ಕೆ ತೋರ್ಪಡಿಸುವುದು ನನ್ನ ಉದ್ದೇಶ" ಎನ್ನುತ್ತಾರೆ ಅಮೃತ್. ಫ್ಯೂಶನ್ ಸಂಗೀತದಲ್ಲಿ ಖಂಜಿರವನ್ನು ಅನ್ಯರು ಬಳಸಿದ್ದಾರಾದರೂ, ಶಾಸ್ತ್ರೀಯ ಸಂಗೀತದಲ್ಲಿ ಖಂಜಿರದ ಸೋಲೋ ಕಛೇರಿಯಲ್ಲಿ ಸದ್ಯ ಅಮೃತ್ ಹೆಸರು ಮಾತ್ರ ಕೇಳಿಬರುತ್ತಿದೆ.

ಎರಡು ದಶಕಗಳ ಕಾಲ ಕಾರೈಕುಡಿ ಆರ್.ಮಣಿ ಅವರ 'ಶ್ರುತಿಲಯ' ತಾಳವಾದ್ಯ ಸಮೂಹದಲ್ಲಿ ಪ್ರಮುಖ ಸದಸ್ಯರಾಗಿ ಖಂಜಿರವನ್ನು ಮೆರೆಸಿದರಲ್ಲದೆ, ಜಾಗತಿಕ ಸಿಂಫೋನಿಯಲ್ಲಿ ಸೋಲೋ ಕಲಾವಿದರಾಗಿ ಜರ್ಮನಿ, ಚೀನಾ, ಮೆಕ್ಸಿಕೋ, ಜೆರುಸಲೇಂ, ಓಹಿಯೋ, ಬೋಸ್ಟನ್, ಅರಿಜೋನಾಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆರ್ಯಭಟ ಯುವ ಪ್ರಶಸ್ತಿ, ಖಂಜಿರ ಪ್ರವೀಣ, ಅನನ್ಯ ಯುವ ಪುರಸ್ಕಾರ, ಸಲ್ಲರಿ ಗಾನ ಲಯ ವಿಟಗಾರ, ಯುವ ಕಲಾ ಭಾರತಿ, ಲಯ ಪ್ರತಿಭಾಮಣಿ, ನಾದ ಜ್ಯೋತಿ ಪುರಸ್ಕಾರ, ಗುರು ಕಲಾಶ್ರೀ, ಸತ್ಯಶ್ರೀ, ಲಲಿತ ಕಲಾ ಸುಮ ಮುಂತಾದ ಬಿರುದು-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಖಂಜಿರದ ಉಗಮ
ಈ ಪುಟ್ಟ ಚರ್ಮವಾದ್ಯವನ್ನು ಖಂಜಿರ, ಖಂಜರಿ ಎಂದೂ ಹೇಳುತ್ತಾರೆ. 18ನೇ ಶತಮಾನದ ಕೊನೆಯಲ್ಲಿ, ಬಹುಶಃ 1870-80ರ ಸುಮಾರಿಗೆ ಈ ವಾದ್ಯವನ್ನು ಸೃಷ್ಟಿ ಮಾಡಿದವರು ಪುದುಕೋಟ್ಟೈ ಮಾಂಪುಂಡ್ಯ ಪಿಳ್ಳೈ. ಪುದುಕೋಟ್ಟೈ ಸಂಸ್ಥಾನದ ಲೈಟ್ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದವರು. ಕತ್ತಲಾದ ತಕ್ಷಣ ಎಣ್ಣೆ ಹಾಕಿ ದೀಪ ಹಚ್ಚುವುದು ಅವರ ಕಾಯಕ. ಆದರೆ ಸಂಗೀತ ಪ್ರಿಯ. ತವಿಲ್ ತಾಳವಾದ್ಯವನ್ನು ಕಲಿಯುತ್ತಿದ್ದರು. ಅದೇ ರೀತಿ, ತಪಟ್ಟೆ ಅಥವಾ ಕೈಯಲ್ಲಿ ನುಡಿಸೋ ತಮಟೆಯ ರೀತಿಯ ವಾದ್ಯದಲ್ಲಿ ಒಂದು ಕೈಯಲ್ಲೇ ನುಡಿಸುವ ಪ್ರಾವೀಣ್ಯವನ್ನು ಅವರ ತವಿಲ್ ಗುರುಗಳು ಗಮನಿಸಿ, ವಾದ್ಯವೊಂದನ್ನು ಸಂಶೋಧಿಸಬಾರದೇಕೆ ಎಂದು ಕೇಳಿದರು. ಅದರ ಪರಿಣಾಮವಾಗಿ ಮಾಂಪುಂಡ್ಯ ಪಿಳ್ಳೈ ಅವರು ಸಾಕಷ್ಟು ಸಂಶೋಧನೆ ಮಾಡಿ, ಈ ಚರ್ಮವಾದ್ಯವನ್ನು ರೂಪಿಸಿದರು. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಇದರ ನಾದವು ಒಗ್ಗಿಕೊಂಡಿತು. ಅಂದಿನಿಂದ ಕಛೇರಿಗಳಲ್ಲಿ ಇದರ ನಾದ ಕೇಳಿಬರತೊಡಗಿತು.

ಎಲ್ಲಿ ಕಲಿಯುವುದು
ಖಂಜಿರ ಕ್ಲಿಷ್ಟ ವಾದ್ಯ ಹೌದು. ಮೃದಂಗ, ಘಟಂ, ತವಿಲ್ - ಇವುಗಳಿಗಿಂತ ಭಿನ್ನ. ಇದನ್ನು ಕಲಿಯಲು ಆಸಕ್ತಿ ಇರುವವರಿಗಾಗಿಯೇ ಪಠ್ಯ ಸಿದ್ಧಪಡಿಸಿ, ವ್ಯವಸ್ಥಿತವಾದ ಪ್ರೋಗ್ರಾಮಿಂಗ್ ಮತ್ತು ಲರ್ನಿಂಗ್ ಮೆಥಡಾಲಜಿ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿರುವ ಕೋರ್ಸ್ ಒಂದನ್ನು ಆರಂಭಿಸಿದ್ದಾರೆ ಅಮೃತ್. ಇದು ಲಾಕ್‌ಡೌನ್ ಕಾಲದಲ್ಲಿ ಅವರು ಮಾಡಿದ 'ಸಮಯದ ಸದುಪಯೋಗ'. ಖಂಜಿರ ಕಲಿಕಾಸಕ್ತರಿಗೆ ಇದು ಅತ್ಯುತ್ತಮ ಆಯ್ಕೆ. ಆದರೆ ಸತತ ಪರಿಶ್ರಮ ಬೇಕೇಬೇಕು ಎನ್ನುತ್ತಾರೆ ಅಮೃತ್. ಆಸಕ್ತಿ ತೋರಿ ಬಂದು ಶಿಷ್ಯರಾದವರಿಗೆ ಮನೆಯಲ್ಲೇ ಅವರು ಪಾಠ ಹೇಳಿಕೊಡುತ್ತಿದ್ದಾರೆ.ಈ ಪಾಠವನ್ನು ಶಾಲೆ ಡಾಟ್ ಕಾಮ್‌ನಲ್ಲಿ ನೋಡಬಹುದು.

ಶ್ರುತಿ ಕಾಯ್ದುಕೊಳ್ಳುವ ಸವಾಲು
ಖಂಜಿರಕ್ಕೂ ಶ್ರುತಿ ಎಂಬುದು ಇದೆ ಎನ್ನುತ್ತಾ, ಅದರಲ್ಲೇ ಸಪ್ತ ಸ್ವರಗಳನ್ನೂ ನುಡಿಸಿ ತೋರಿಸಿದರು ಅಮೃತ್. ಅದೇ ರೀತಿ, ರಾಗಕ್ಕೆ ತಕ್ಕಂತೆ ನುಡಿಸಿದರಷ್ಟೇ ಚೆನ್ನ. ಉದಾಹರಣೆಗೆ, ಹಿಂದೋಳ ರಾಗದಲ್ಲಿ 'ಪ' ಸ್ವರ ಇಲ್ಲ. ಅದನ್ನು ನುಡಿಸಿದರೆ ಅಲ್ಲಿ ಅಪಶ್ರುತಿ ಆಗಬಲ್ಲುದು ಎಂಬಷ್ಟು ಖಚಿತತೆ ಹೊಂದಿದ್ದಾರೆ ಅಮೃತ್. ಆದರೆ, ವಾತಾವರಣದ ತೇವಾಂಶಕ್ಕನುಗುಣವಾಗಿ ಖಂಜಿರದ ಶ್ರುತಿಯೂ ಬದಲಾಗುವಾಗ ಶ್ರುತಿ ಕಾಯ್ದುಕೊಳ್ಳುವುದು ದೊಡ್ಡ ಸಮಸ್ಯೆ ಮತ್ತು ಚಾಕಚಕ್ಯತೆ ಎನ್ನುತ್ತಾರೆ ಅವರು.

ಜೊತೆಗೊಂದು ಕಿವಿ ಮಾತು. ಖಂಜಿರವನ್ನು ಖಂಜಿರವಾಗಿಯೇ ನುಡಿಸಿ. ತವಿಲ್ ಅಥವಾ ಮೃದಂಗ, ಇಲ್ಲವೇ ಚೆಂಡೆ, ಡ್ರಮ್ - ಇವುಗಳಿಗೂ ಇದೇ ಮಾತು ಅನ್ವಯ. ಯಾಕೆಂದರೆ ಆಯಾ ವಾದ್ಯಗಳ ನಡೆಯನ್ನು ಅವುಗಳಲ್ಲಿ ಕೇಳುವುದೇ ಚಂದ. ನಾದ ಸಂಕರ ಆಗಬಾರದು, ಪರಂಪರೆಗೆ ಧಕ್ಕೆಯಾಗಬಾರದು ಎನ್ನುತ್ತಾರವರು.

ಖಂಜಿರ ಜನರ ಬಳಿಗೆ ತಲುಪಿದ್ದು ಕಡಿಮೆ. ಹೀಗಾಗಿ, ನನಗೆ ಹೆಸರು ತಂದುಕೊಟ್ಟ ಅದರ ಖ್ಯಾತಿಯನ್ನು ಉತ್ತುಂಗಕ್ಕೇರಿಸುವುದೇ ಗುರಿ. ಗುರುಗಳ ಹೆಸರು ಚಿರಸ್ಥಾಯಿ ಆಗಿಸಬೇಕಿದೆ ಎಂದ ಅಮೃತ್ ಇನ್ನೂ ಹೆಚ್ಚಿನ ಸಾಧನೆಯೆಡೆಗೆ ದಾಪುಗಾಲು ಹಾಕುತ್ತಾ ಮುನ್ನುಗ್ಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.