ಒಮ್ಮೆ ಹಾವಾಡಿಗರ ಪುಂಗಿಯಂತೆ, ಮತ್ತೊಮ್ಮೆ ಬಿಸ್ಮಿಲ್ಲಾ ಖಾನರ ಶಹನಾಯ್‌ನಂತೆ, ಮಗದೊಮ್ಮೆ ಯುರೋಪಿಯನ್ನರ ಬ್ಯಾಗ್‌ಪೈಪರ್‌ನಂತೆ ನಾದದ ಅಲೆ ಎಬ್ಬಿಸುವ ಈ ವಾದ್ಯ, ಆಕಾರದಲ್ಲೂ ಸೊಬಗಿನಲ್ಲೂ ಅವುಗಳನ್ನೆಲ್ಲ ಮೀರಿಸಿ ನಿಲ್ಲುವಂಥದ್ದು. ತನ್ನ ಮೇಲಿನ ಅಲಂಕಾರ ಹೆಚ್ಚಿದಂತೆಲ್ಲ ಮನುಷ್ಯನಿಗಿಂತಲೂ ಎತ್ತರವಾಗಬಲ್ಲ ಈ ವಾದ್ಯವನ್ನು ಊದುವಾಗ, ವಾದಕ ತನ್ನ ಕೊರಳಿಗೆ ಅದನ್ನು ಬಿಗಿದು ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಊದಲು ಬ್ಯಾಲೆನ್ಸ್ ಸಿಗುವುದಿಲ್ಲ. ನಾದದ ಅಲೆಯೂ ಏಳುವುದಿಲ್ಲ. ಆಗ ಹುಡುಗಿಯರಿಗೆ ಹೆಜ್ಜೆ ಹಾಕಲೂ ಆಗುವುದಿಲ್ಲ.
ನೆತ್ತಿಯ ಮೇಲೆ ನವಿಲಿನಾಕಾರದ ಮುಖವನ್ನೂ ಕೆಳಗೆ ತಾಳೆ ಎಲೆಗಳಿಂದ ಮಾಡಿದ ಅಗಲವಾದ ಕೊಳವೆಯನ್ನೂ ಹೊಂದಿದ ಈ ವಾದ್ಯವನ್ನು ನೋಡುವುದೇ ಒಂದು ಚೆಂದ. ಅಂದಹಾಗೆ, ವರ್ಲಿ ಬುಡಕಟ್ಟು ಜನರ ಸಾಂಪ್ರದಾಯಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿರುವ ಈ ವಾದ್ಯದ ಹೆಸರು ತಾರಪಾ ಎಂದು. ಪುಂಗಿ, ಶಹನಾಯ್, ಕೊಳಲು, ಬ್ಯಾಗ್‌ಪೈಪರ್‌ನಂತೆ ತಾರಪಾ ಸಹ ಒಂದು ‘ಊದುವ ವಾದನ’. ಯಾವುದೇ ವರ್ಲಿ ಕಲಾಕೃತಿಯಲ್ಲಿ, ಆ ಕಲೆಗಾರಿಕೆಯ ಠಸ್ಸೆ ಎಂಬಂತೆ, ತಾರಪಾ ಚಿತ್ರ ಇದ್ದೇ ಇರುವುದನ್ನು ಕಾಣಬಹುದು.
ಭಿಕ್ಲ್ಯಾ ಲಡ್ಕ್ಯಾ ಧಿಂಡಾ – ಈ ವಾದ್ಯವನ್ನು ತಯಾರಿಸಿ, ನುಡಿಸುವ ವರ್ಲಿ ಬುಡಕಟ್ಟಿನ ಕೊನೆಯ ಕುಡಿಗಳಲ್ಲಿ ಒಬ್ಬರು. ಅವರಿಗೀಗ ಬರಿ 85 ವರ್ಷ! ಅವರನ್ನು ಮಾತನಾಡಿಸಬೇಕಲ್ಲ ಎಂದು ಮುಂಬೈಯಲ್ಲಿರುವ ಗೆಳೆಯ ರಾಘವೇಂದ್ರನನ್ನು ಕೇಳಿದೆ. ಅವನಿಗೆ ಭಿಕ್ಲ್ಯಾ ಅವರನ್ನು ಸಂಪರ್ಕಿಸಲು ಅಸಾಧ್ಯವಾದರೂ ಆ ಮಹಾನ್ ಸಂಗೀತ ಕಲಾವಿದನನ್ನು ಸಂದರ್ಶಿಸಿ ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರವೊಂದನ್ನು ಕಳುಹಿಸಿಕೊಟ್ಟ. ಜತೆಗೆ ಅವರನ್ನು ಮಾತನಾಡಿಸಿ ಬಂದವರ ಸಂಪರ್ಕವೂ ಸಿಕ್ಕಿತು. ಹಾಗೆಯೇ ತಾರಪಾದೊಡನೆ ಹೆಜ್ಜೆ ಹಾಕುವುದೂ ಶುರುವಾಯಿತು.
‘ನನ್ನ ಈ ಸಂಗೀತವು ನನ್ನ ನೆಲ ನನಗೆ ಕೊಟ್ಟಿರುವ ಕಾಣಿಕೆ. ಈ ಸಂಗೀತವೇ ನನ್ನ ಬದುಕು. ನನ್ನ ಬದುಕಿಗೆ ಬೇಕಾದ ಎಲ್ಲವನ್ನೂ ಅದು ಕೊಟ್ಟಿದೆ’ ಎಂದೆನ್ನುವ ಭಿಕ್ಲ್ಯಾ, ಮಹಾರಾಷ್ಟ್ರದ ಕೊಂಕಣ ಪ್ರದೇಶದ ವಾಲ್ವಂಡಾ ಗ್ರಾಮದವರು. ‘ನೀವು ತಾರಪಾ ನುಡಿಸಬೇಕೆಂದರೆ ಅದನ್ನು ನೀವೇ ತಯಾರಿಸಿಕೊಳ್ಳಬೇಕು. ಏಕೆಂದರೆ, ಬೇರೆ ವಾದ್ಯಗಳಂತೆ ಇದು ನಿಮಗೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ’ ಎಂದೆನ್ನುವ ಈ ಅಜ್ಜ, ಸ್ವತಃ ವಾದ್ಯ ತಯಾರಕ, ವಾದಕ ಹಾಗೂ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನೂ ಕಲಿಸುವ ಸಾಧಕ.
ಹಳ್ಳಿಯ ಸುತ್ತಲಿನ ಕಾಡಿನಲ್ಲಿ ಸಿಗುವ ಸೋರೆಕಾಯಿ, ಬಿದಿರು, ತಾಳೆ ಮರದ ಎಲೆ ಹಾಗೂ ಜೇನುಗೂಡಿನ ಮೇಣ – ಇಷ್ಟೇ ಈ ವಾದ್ಯವನ್ನು ತಯಾರಿಸಲು ಬೇಕಾಗಿರುವ ಪರಿಕರಗಳು. ಅವುಗಳನ್ನೆಲ್ಲ ಸುತ್ತ ಹರಡಿಕೊಂಡು ಕುಳಿತ ಉದ್ದನೆಯ ಬಿಳಿಗಡ್ಡದ ಈ ಅಜ್ಜ, ಪ್ರಯೋಗಶಾಲೆಯೊಂದರಲ್ಲಿ ಯಾವುದೋ ಗಹನವಾದ ಪ್ರಯೋಗದಲ್ಲಿ ತಲ್ಲೀನರಾದ ವಿಜ್ಞಾನಿಯಂತೆ ಗೋಚರಿಸುತ್ತಾರೆ. ಮೊತ್ತಮೊದಲು ಬಿದಿರಿನಿಂದ ಕೊಳಲಿನಂತಹ ಎರಡು ಸಾಧನಗಳನ್ನು ಸಿದ್ಧಪಡಿಸಿಕೊಳ್ಳುವ ಈ ಅಜ್ಜ, ಅವೆರಡನ್ನೂ ಅಕ್ಕಪಕ್ಕ ಜೋಡಿಸಿ ಕಟ್ಟುತ್ತಾರೆ. ಕಟ್ಟಿದ ಮೇಲೆ ಒಮ್ಮೆ ಊದಿ ನೋಡುತ್ತಾರೆ. ಅವುಗಳಿಂದ ಕೀರಲು ಧ್ವನಿ ಹೊರಟ ಮೇಲೆ, ‘ಇದೇ ನೋಡಿ ನಮ್ಮ ವಾದ್ಯದ ಧ್ವನಿಪೆಟ್ಟಿಗೆ. ಇಲ್ಲಿಂದ ಉಗಮವಾಗುವ ಧ್ವನಿಗೆ ಮಾರ್ದವತೆಯನ್ನು ತುಂಬುವುದು ಮೇಲಿನ ಸೋರೆಕಾಯಿ ಮತ್ತು ಕೆಳಗಿನ ತಾಳೆ ಎಲೆಯ ಕೊಳವೆ’ ಎಂದು ವಿವರಿಸುತ್ತಾರೆ.
ಹೊಟ್ಟೆ ಬಗೆದು, ಒಳಗೆಲ್ಲ ಖಾಲಿಮಾಡಿದ ಮತ್ತು ಒಣಗಿದ, ಉದ್ದನೆಯ ಸೋರೆಕಾಯಿಯನ್ನು ವಾದ್ಯದ ಮೇಲ್ಭಾಗದಲ್ಲಿ ಜೋಡಿಸುತ್ತಾರೆ. ಗಾಳಿಯು ಸೋರದಂತೆ ಮೇಣದಿಂದ ಎಲ್ಲ ಕಡೆಗಳ ಬಿರುಕುಗಳನ್ನೂ ಮುಚ್ಚುತ್ತಾರೆ. ಅದಕ್ಕೆ ಮತ್ತೊಂದು ಸೋರೆಕಾಯಿಯನ್ನು ಜೋಡಿಸಿ ನವಿಲಿನ ಮುಖದ ಆಕಾರವನ್ನು ಕೊಡುತ್ತಾರೆ. ಅದರ ಮೇಲೆ ತುರಾಯಿ ಬೇರೆ! ಕೆಳತುದಿಯಲ್ಲಿ ತಾಳೆಮರದ ಎಲೆಗಳಿಂದ ಸುತ್ತುತ್ತಾ ದೊಡ್ಡ ಕೊಳವೆಯನ್ನು ಮಾಡುತ್ತಾರೆ. ನಾವು ಚಿಕ್ಕವರಿದ್ದಾಗ ತೆಂಗಿನ ಗರಿಯಿಂದ ಪೀಪಿ ಮಾಡುತ್ತಿದ್ದೆವಲ್ಲ, ಅದೇ ರೀತಿ. ಎಲೆ ಸುತ್ತುತ್ತಾ ಹೋದಂತೆ ಆ ಕೊಳವೆ ಗಾತ್ರ ಸಣ್ಣದರಿಂದ ದೊಡ್ಡದಾಗುತ್ತಾ ಸಾಗುತ್ತದೆ. ಆ ಕೊಳವೆಯನ್ನು ತುಸು ಬಾಗಿಸಿ, ದಾರದಿಂದ ಮಧ್ಯದ ಭಾಗಕ್ಕೆ ಕಟ್ಟುತ್ತಾರೆ. ಮೇಲೆ ನವಿಲಿನ ಗರಿಯನ್ನೂ ಸಿಕ್ಕಿಸುತ್ತಾರೆ. ಇಷ್ಟಾದರೆ ತಾರಪಾ ನುಡಿಸಲು ಸಿದ್ಧ.
ನವಿಲಿನಾಕಾರ ತೊಟ್ಟುಕೊಂಡು ಸಂಪೂರ್ಣ ಸಿದ್ಧವಾದ ತಾರಪಾ ವಾದ್ಯವನ್ನು ನುಡಿಸಲು ನಿಂತರೆ, ಆಹಾ... ಸ್ವರ್ಗ ಮೂರೇ ಗೇಣು! ಅದಕ್ಕೇ ಭಿಕ್ಲ್ಯಾ ಅಜ್ಜ ಹೇಳುತ್ತಾರೆ: ‘ನಾನು ತಾರಪಾ ನುಡಿಸಲು ನಿಂತರೆ ಎದುರಿಗೆ ಇರುವ ಜನರಿಗೆ ಬೇರೆ ಆಯ್ಕೆಯೇ ಇರುವುದಿಲ್ಲ, ಕುಣಿಯುವುದೊಂದನ್ನು ಬಿಟ್ಟು.’ ತಾವು ಬಾಳಿ ಬದುಕಿದ ನೆಲದ ಮೇಲೆ ಈ ಅಜ್ಜನಿಗೆ ಎಲ್ಲಿಲ್ಲದ ಪ್ರೇಮ. ‘ನನ್ನ ನೆಲದ ಒಳಿತಿಗಾಗಿಯೇ ನಾನು ತಾರಪಾವನ್ನು ನುಡಿಸುವುದು. ದೇವರಿಗೆ ಅತ್ಯಂತ ಪ್ರಿಯವಾದ ವಾದನ ಇದಾಗಿದೆ. ಏಕೆಂದರೆ, ಆತಕೊಟ್ಟ ವಸ್ತುಗಳಿಂದಲೇ ಈ ವಾದ್ಯ ರೂಪುಗೊಂಡಿದೆ. ಲವಲೇಷದಷ್ಟೂ ಕೃತ್ರಿಮತೆ ಇದರಲ್ಲಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ತಾರಪಾ ವಾದನದ ಊದುಗೊಳವೆ ಒಮ್ಮೆ ಭಿಕ್ಲ್ಯಾ ಅವರ ಬಾಯಿಯನ್ನು ಹೊಕ್ಕಿತೆಂದರೆ ಮುಗಿಯಿತು, ಗಂಟೆಗಟ್ಟಲೆ ವಿಶ್ರಾಂತಿ ಇಲ್ಲ. ಬಲೂನಿನಂತೆ ಬಾಯಿ ಉಬ್ಬಿಸಿ, ಊದುಗೊಳವೆಯೊಳಗೆ ಗಾಳಿಯನ್ನು ತೂರಿಸುತ್ತಲೇ ಇರಬೇಕು. ತಾರಪಾ ನೃತ್ಯದಲ್ಲಿ ಜೋರು ‘ಆ್ಯಕ್ಷನ್’ ಇರುವುದರಿಂದ ಅರೆಕ್ಷಣವೂ ಸುಧಾರಿಸಿಕೊಳ್ಳಲು ಅವಕಾಶ ಇರುವುದಿಲ್ಲ. ವಾದನವನ್ನು ಕತ್ತಿಗೆ ಬಿಗಿದು ಕಟ್ಟುವ ಕಾರಣ ‘ಆ್ಯಕ್ಷನ್’ ಮುಗಿಯುವವರೆಗೆ ಬಾಯಿಯಿಂದ ಊದುಗೊಳವೆ ತೆಗೆಯಲೂ ಆಗುವುದಿಲ್ಲ. ತಂಗಾಳಿ ಬೀಸುವಾಗ ಅಗ್ಗಿಷ್ಟಿಕೆಯ ಮುಂದೆ ವರ್ಲಿ ಯುವತಿಯರು ಒಬ್ಬರ ಸೊಂಟ ಒಬ್ಬರು ಹಿಡಿದುಕೊಂಡು ಹೆಜ್ಜೆ ಹಾಕತೊಡಗಿದಾಗ ತಾರಪಾ ವಾದ್ಯಗೋಷ್ಠಿ ತಾರಕಕ್ಕೇರುತ್ತದೆ. ಭಿಕ್ಲ್ಯಾ ಅಜ್ಜ, ತನಗೆ ವಯಸ್ಸು ಆಗಿರುವುದನ್ನೂ ಮರೆತು ಅತ್ತಿಂದಿತ್ತ ಹೆಜ್ಜೆ ಹಾಕುತ್ತಾ, ತಾರಪಾ ನುಡಿಸುತ್ತಾ, ಗೋಷ್ಠಿಗೆ ಒಂದು ಅಲೌಕಿಕವಾದ ಸೊಬಗನ್ನು ತುಂಬುತ್ತಾರೆ.
ಭಿಕ್ಲ್ಯಾ ಅಜ್ಜನ ಪಾಲಿಗೆ ಇದೊಂದು ದೈವೀ ಕಲೆ. ಅವರ ಮಾತುಗಳೂ ಅಷ್ಟೆ. ಶಾಲೆಯ ಮೆಟ್ಟಿಲನ್ನೇ ಏರದ ಈ ಅಜ್ಜ ತತ್ವಜ್ಞಾನಿಯಂತೆ ಮಾತನಾಡುತ್ತಾರೆ ಮತ್ತು ಕೇಳಿಸಿಕೊಳ್ಳುವವರು ‘ಅಹುದು ಅಹುದು’ ಎಂದು ತಲೆ ಆಡಿಸುವಂತೆ ಆ ಮಾತುಗಳು ಇರುತ್ತವೆ. ‘ನನ್ನೂರು ನನಗೆ ಇರಲೊಂದು ಸೂರು ಕೊಟ್ಟಿದೆ. ಹೊಟ್ಟೆ–ಬಟ್ಟೆಗೆ ಕೊರತೆ ಮಾಡಿಲ್ಲ. ಬೇರೆ ವೈಭೋಗ ತೆಗೆದುಕೊಂಡು ನಾನೇನು ಮಾಡಲಿ’ ಎಂದು ಕೇಳುತ್ತಾರೆ. ‘ನನಗೀಗ 85 ವರ್ಷ. ಹಲ್ಲುಗಳು ಇನ್ನೂ ಗಟ್ಟಿಯಾಗಿವೆ. ಎಂದಿಗೂ ಉಸಿರಾಟದ ಸಮಸ್ಯೆ ಕಾಡಿಲ್ಲ. ಜ್ವರ ಎಂದರೆ ಏನೆಂಬುದು ನನಗೆ ಗೊತ್ತಿಲ್ಲ. ಏಳು ವರ್ಷದ ಮರಿಮೊಮ್ಮಗನೂ ಇದ್ದಾನೆ. ಇಂತಹ ತುಂಬು ಜೀವನ ನನ್ನದು. ತಾರಪಾದೊಂದಿಗಿನ ಬದುಕಿನ ಯಾನ ಸುಂದರವಾಗಿದೆ. ನನಗೆ ಎಲ್ಲವನ್ನೂ ಕೊಟ್ಟಿರುವ ದೇವರಿಗೆ ಈ ವಾದ್ಯವನ್ನು ನುಡಿಸುವುದೇ ನಾನು ಸಲ್ಲಿಸುವ ಪೂಜೆ’ ಎನ್ನುತ್ತಾರೆ.
ನಮ್ಮ ರಾಜ್ಯದ ಕುಣಬಿ ಸಮುದಾಯದಲ್ಲೂ ತಾರಪಾದಂತಹ ವಾದ್ಯ ಬಳಕೆಯಲ್ಲಿತ್ತಂತೆ. ಆದರೆ, ಇತ್ತೀಚಿನ ದಶಕಗಳಲ್ಲಿ ಅದರ ಬಳಕೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದ್ದು, ಈಗ ಜೋಯಿಡಾ ಭಾಗದಲ್ಲಿ ಹುಡುಕಿದರೂ ಈ ವಾದ್ಯ ಸಿಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.