ADVERTISEMENT

ಮಂಗಳೂರಿನ ವನಿಲ್‌ ವೇಗಸ್‌, ದೀಪಕ್‌ ಅವರಿಗೆ ತಲುಪಿದ ಗ್ರ್ಯಾಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 13:24 IST
Last Updated 20 ಜುಲೈ 2022, 13:24 IST
ಗ್ರ್ಯಾಮಿ ಪ್ರಶಸ್ತಿಯ ಟ್ರೋಫಿಯೊಂದಿಗೆ ಪಿ.ಎ. ದೀಪಕ್‌ (ಎಡ), ರಿಕಿ ಕೇಜ್‌, ವನಿಲ್‌ ವೇಗಸ್‌. 
ಗ್ರ್ಯಾಮಿ ಪ್ರಶಸ್ತಿಯ ಟ್ರೋಫಿಯೊಂದಿಗೆ ಪಿ.ಎ. ದೀಪಕ್‌ (ಎಡ), ರಿಕಿ ಕೇಜ್‌, ವನಿಲ್‌ ವೇಗಸ್‌.    

ಬೆಂಗಳೂರು: ‘ಡಿವೈನ್‌ ಟೈಡ್ಸ್‌’ ಸಂಗೀತ ಆಲ್ಬಂಗೆ ಖ್ಯಾತ ಗಾಯಕ ರಿಕಿ ಕೇಜ್‌ ಅವರ ಜೊತೆ ಕನ್ನಡಿಗ ವನಿಲ್‌ ವೇಗಸ್‌ ಹಾಗೂ ಮುಂಬೈನ ಪಿ.ಎ. ದೀಪಕ್‌ ಅವರಿಗೂ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ತಲುಪಿದೆ.

ಈ ವರ್ಷ ಏಪ್ರಿಲ್‌ 4ರಂದು ಈ ಪ್ರಶಸ್ತಿ ಪ್ರಕಟವಾಗಿತ್ತು. ರಿಕಿ ಅವರು ಲಾಸ್‌ವೇಗಸ್‌ನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದರು. ವನಿಲ್‌ ಅವರಿಗೆ ಗ್ರ್ಯಾಮಿ ಟ್ರೋಫಿ ಇತ್ತೀಚೆಗೆ ಕೈ ಸೇರಿದೆ.

‘‘ಬೆಸ್ಟ್ ನ್ಯೂ ಏಜ್’ ವಿಭಾಗದಲ್ಲಿಈ ಆಲ್ಬಂನ ಧ್ವನಿ ವಿನ್ಯಾಸ (ಸೌಂಡ್‌ ಎಂಜಿನಿಯರಿಂಗ್‌ ಮತ್ತು ಮಿಕ್ಸಿಂಗ್‌)ಕ್ಕೆ ಈ ಪ್ರಶಸ್ತಿ ಸಿಕ್ಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ’ ಎಂದು ವನಿಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಈ ಹಿಂದೆ (2015) ರಿಕಿ ಅವರು ‘ವಿಂಡ್ಸ್‌ ಆಫ್‌ ಸಂಸಾರ’ ಆಲ್ಬಂ ಮಾಡಿದಾಗ ಅವರಿಗೆ ‘ಗ್ರ್ಯಾಮಿ’ ಪ್ರಶಸ್ತಿ ಒಲಿದಿತ್ತು. ನನಗೆ ಗ್ರ್ಯಾಮಿ ಪ್ರಮಾಣಪತ್ರ ಸಿಕ್ಕಿತ್ತು. ಈಗ ಕರ್ನಾಟಕಕ್ಕೆ ಸಿಕ್ಕಿರುವುದು ಎರಡನೇ ಗ್ರ್ಯಾಮಿ ಪ್ರಶಸ್ತಿ’ ಎಂದು ವನಿಲ್‌ ಅವರು ಹೇಳಿದರು.

ವನಿಲ್‌ ಅವರು ಮೂಲತಃ ಮಂಗಳೂರಿನ ಉಳ್ಳಾಲದವರು. 2000ನೇ ಇಸವಿ ವೇಳೆಗೆ ಕೀಬೋರ್ಡ್‌ ವಾದಕರಾಗಿ ಸಂಗೀತ ಕ್ಷೇತ್ರ ಪ್ರವೇಶಿಸಿದವರು. ಹಲವು ಸಂಗೀತ ತಂಡಗಳಲ್ಲಿ ಕೀಬೋರ್ಡ್‌ ವಾದಕರಾಗಿದ್ದರು. ಮುಂದೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು. ‘ವೈಲ್ಡ್‌ ಕರ್ನಾಟಕ’ ಸಾಕ್ಷ್ಯಚಿತ್ರ, ರಮೇಶ್‌ ಅರವಿಂದ್‌ ನಟನೆಯ ‘ಆ್ಯಕ್ಸಿಡೆಂಟ್‌’, ‘ವೆಂಕಟ ಇನ್‌ ಸಂಕಟ’, ‘ಕ್ರೇಜಿ ಕುಟುಂಬ’ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಅಮೆರಿಕ ಸಹಿತ ವಿವಿಧ ದೇಶಗಳ ಸಂಗೀತ ಯೋಜನೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ರಿಕಿ ಕೇಜ್‌ ಅವರ ಸಂಗೀತ ಕಾರ್ಯಕ್ರಮಗಳ ಮುಖ್ಯ ಸೌಂಡ್‌ ಎಂಜಿನಿಯರ್‌ ಆಗಿದ್ದಾರೆ.

‘ಡಿವೈನ್‌ ಟೈಡ್ಸ್‌’ನ್ನು ಲಾಕ್‌ಡೌನ್‌ ವೇಳೆ ಮನೆಗಳಲ್ಲೇ ಕೆಲಸ ಮಾಡಿ ನಿರ್ಮಿಸಿದ್ದೆವು. ಅಂತರರಾಷ್ಟ್ರೀಯಮಟ್ಟದ ಸಂಗೀತ ದಿಗ್ಗಜರ ನೆರವು ಪಡೆದಿದ್ದೇವೆ. ಹಾಗಾಗಿ ಅದ್ಭುತವಾಗಿ ನಿರ್ಮಾಣಗೊಳ್ಳಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.