ADVERTISEMENT

ಪಿಟೀಲು ವಾದಕಿ ಶಿಶಿರಕಣ ಧಾರ್‌ ನಿಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 20:00 IST
Last Updated 10 ಮಾರ್ಚ್ 2021, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಖ್ಯಾತ ಪಿಟೀಲು ವಾದಕಿ ಶಿಶಿರಕಣ ಧಾರ್‌ ಚೌಧರಿ (83) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರೆನಿಸಿಕೊಂಡಿದ್ದ ಇವರನ್ನು ಧ್ರುಪದ ಶೈಲಿಯಲ್ಲಿ ಪಿಟೀಲು ನುಡಿಸುವುದರಲ್ಲಿ ಮೀರಿಸುವವರೇ ಇರಲಿಲ್ಲ. ಭಾರತದಾದ್ಯಂತ ಅಷ್ಟೇ ಅಲ್ಲ ಇತರ ಹಲವು ರಾಷ್ಟ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಅಪಾರ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.

1953ರಲ್ಲಿ ನಡೆದ ಅಖಿಲಭಾರತ ತಾನ್‌ಸೇನ್‌– ವಿಷ್ಣು ದಿಗಂಬರ ಸಂಗೀತ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುವುದರೊಂದಿಗೆ ಅವರ ಸಂಗೀತ ಸಾಧನೆ ಹೊಸ ಎತ್ತರಕ್ಕೆ ಏರಿತ್ತು. ಅನೇಕ ಕಾರ್ಯಕ್ರಮಗಳಲ್ಲಿ ಅವರಿಗೆ, ತಬಲಾ ದಿಗ್ಗಜರೆನಿಸಿರುವ ಶಂಕರ್‌ ಘೋಷ್‌, ಮಹಾಪುರುಷ ಮಿಶ್ರಾ, ಝಾಕಿರ್ ಹುಸೇನ್‌, ಸ್ವಪ್ನ ಚೌಧರಿ ಮುಂತಾದವರು ಸಾಥ್‌ ನೀಡಿದ್ದರು.

1971ರಲ್ಲಿ ಕೋಲ್ಕತ್ತದ ರವೀಂದ್ರಭಾರತಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇರಿದ್ದ ಅವರು ಸುಮಾರು 20 ವರ್ಷ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದರು. ಸಂಗೀತ ವಿಭಾಗದ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ADVERTISEMENT

ಪಿಟೀಲಿನ ಮೇಲೆ ಅವರಿಗೆ ಇದ್ದ ಮಾಂತ್ರಿಕ ಹಿಡಿತದ ಬಗ್ಗೆ ಒಂದೆಡೆ ಮಾತನಾಡಿದ್ದ ತಬಲಾ ಮಾಸ್ಟರ್‌ ಪಂ. ಸ್ವಪ್ನ ಚೌಧರಿ ಅವರು, ‘ವ್ಯಕ್ತಿಯೊಬ್ಬ ಅಸಾಧಾರಣ ಪ್ರತಿಭೆ ಹೊಂದಿದ್ದರೆ ಅದನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಅಂಥವರನ್ನು ಕೇಳಿ ಅನುಭವಿಸಬೇಕು. ಶಿಶಿರಕಣ ಧಾರ್‌ ಅವರ ಸಂಗೀತವೆಂದರೆ ಒಂದು ಧ್ಯಾನ. ಅವರು ಶ್ರೇಷ್ಠ ಕಲಾವಿದೆ ಹಾಗೂ ಶಿಕ್ಷಕಿ’ ಎಂದಿದ್ದರು.

ಸರೋದ್‌ ವಾದಕ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ ಹಾಗೂ ಖ್ಯಾತ ಪಿಟೀಲು ವಾದಕ ಪಂ. ವಿ.ಜಿ. ಜೋಗ್‌ ಅವರ ಶಿಷ್ಯೆಯಾಗಿದ್ದ ಶಿಶಿರಕಣ ಧಾರ್‌ ಅವರು, ಪಿಟೀಲಿನಲ್ಲೂ ಸರೋದ್‌ನ ಕೆಲವು ತಂತ್ರಗಳನ್ನು ಬಳಸುತ್ತಿದ್ದರು. ಪಿಟೀಲಿನ ಜತೆಗೆ ‘ವಯೋಲಾ’ ನುಡಿಸುವುದರಲ್ಲಿಯೂ ಅವರು ಪರಿಣತಿ ಹೊಂದಿದ್ದರು. ಉತ್ತರ ಭಾರತ ಶೈಲಿಯ ಸಂಗೀತ ಪರಂಪರೆಗೆ ಹೊಂದಿಕೆಯಾಗುವಂತೆ ಈ ವಾದ್ಯವನ್ನು ಬಳಸಿದವರಲ್ಲಿ ಅವರು ಮೊದಲಿಗರಾಗಿದ್ದರು. ವಿಶೇಷವಾಗಿ ಧ್ರುಪದ ಶೈಲಿಯ ಆಲಾಪಗಳಿಗೆ ಈ ವಾದ್ಯ ಹೆಚ್ಚು ಸೂಕ್ತವಾದುದು ಎಂಬುದನ್ನು ಅವರು ಕಂಡುಕೊಂಡಿದ್ದರು.

1937ರಲ್ಲಿ ಅಸ್ಸಾಂನಲ್ಲಿ ಜನಿಸಿದ್ದ ಶಿಶಿರಕಣ ಧಾರ್‌ ಅವರು ಏಳನೇ ವಯಸ್ಸಿನಲ್ಲಿಯೇ ಉಸ್ತಾದ್‌ ಮೋತಿ ಮಿಯಾ ಅವರಿಂದ ಸಂಗೀತ ಕಲಿಯಲಾರಂಭಿಸಿದ್ದರು. ಹಲವು ವರ್ಷಗಳ ಕಾಲ ಪತಿಯೊಂದಿಗೆ ಅವರು ಕೋಲ್ಕತ್ತದಲ್ಲಿ ನೆಲೆಸಿದ್ದರು. ಅವರಿಗೆ ಒಬ್ಬ ಪುತ್ರಿ ಹಾಗೂ ಮೊಮ್ಮಗಳು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.