ಸೌಂಡ್ ಆಫ್ ಮ್ಯೂಸಿಕ್ ವಾದ್ಯಗೋಷ್ಠಿಯ ರೂವಾರಿ ಕೆ.ಗುರುರಾಜ್ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಗುರು–70, ಸಂಗೀತ ಸಂಪತ್ತು’ ಕಾರ್ಯಕ್ರಮ ಚಾಮರಾಜಪೇಟೆಯ ಡಾ.ರಾಜಕುಮಾರ್ ಕಲಾಭವನದಲ್ಲಿ ಇತ್ತೀಚೆಗೆ ನೆರವೇರಿತು.
ಹಾಡಿನ ಹೊಳೆ...: ಮಂಜುನಾಥ್ ನಾಗಪ್ಪ ಅವರ ‘ಹೃದಯ ಸಮುದ್ರ ಕಲಕಿ...’ ವೆಂಕಟೇಶ್ ಮೂರ್ತಿ ಶಿರೂರ ಅವರ ‘ತರವಲ್ಲ ತಗಿ ನಿನ್ನ ತಂಬೂರಿ’, ‘ಪವಡಿಸು ಪರಮಾತ್ಮ’ ಹಾಡು ಶ್ರೋತೃಗಳ ಗಮನ ಸೆಳೆದವು. ಅಂಜಲಿ ಹಳಿಯಾಳ, ಸುಬ್ಬಲಕ್ಷ್ಮಿ ಸೇರಿ ಗುರುರಾಜ್ ಅವರ ಹಲವು ಶಿಷ್ಯರು 20ಕ್ಕೂ ಅಧಿಕ ಹಾಡುಗಳನ್ನು ಹಾಡಿ ಗುರುನಮನ ಸಲ್ಲಿಸಿದರು.
‘ಸ್ನೇಹ’ ರೆಟ್ರೋ ಸಂಗೀತ ತಂಡದ ಮುಖ್ಯ ಕಾರ್ಯನಿರ್ವಾಹಕ ವೆಂಕಟೇಶ ಮೂರ್ತಿ ಶಿರೂರ ಅವರು ಕಾರ್ಯಕ್ರಮ ಆಯೋಜಿಸಿದ್ದರು. ಗುರುರಾಜ್ ಅವರ ಕುಟುಂಬದ ಸದಸ್ಯರು, ಸ್ನೇಹಿತರು, ಶಿಷ್ಯರು ಹಾಗೂ ಅಭಿಮಾನಿಗಳು ಕಾರ್ಯಕ್ರಮ ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ.
ಸಂಗೀತದ ಜತೆಗೆ ಮಾತುಕತೆಯೂ ಈ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಹಾಡುಗಳು ಮುಗಿಯುತ್ತಿದ್ದಂತೆ, ಮಾತು, ಮಾತು ಮುಗಿಯುತ್ತಿದ್ದಂತೆ ಹಾಡು ಮೊಳಗುತ್ತಿತ್ತು.
ಗುರುರಾಜ್ ಅವರ ಮಗಳು ಸಂಗೀತಾ ಅಪ್ಪನ ಜತೆ ನೃತ್ಯ ಮಾಡಿದರು. ಈ ವೇಳೆ ವೇದಿಕೆ ಮೇಲೆಯೇ ಗುರು ಕೊಂಚ ಭಾವುಕರಾದರು. ಪತ್ನಿ ಮಂಜುಳಾ ಗುರುರಾಜ್, ಪುತ್ರ ಸಾಗರ್ ಗುರುರಾಜ್ ವೇದಿಕೆ ಮೇಲಿದ್ದರು.
ಶಾಸಕ ಎಂ. ಕೃಷ್ಣಪ್ಪ, ಕರ್ನಾಟಕ ಗಡಿ ನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಗಾಯಕ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್, ಲಹರಿ ವೇಲು, ಡಾ.ವೆಂಕಟರಮಣ, ಚಿತ್ರ ನಿರ್ದೇಶಕ ಮುರಳಿಕೃಷ್ಣ, ದೂರದರ್ಶನ ಕಾರ್ಯಕ್ರಮಗಳನಿವೃತ್ತ ನಿರ್ವಾಹಕ ಐ.ಡಿ ಹಳ್ಳಿ ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.