ಬೆಂಗಳೂರು: ‘ಕಾಲದ ಮನೋಧರ್ಮಕ್ಕೆ ತಕ್ಕಂತೆ ಚಿತ್ರಸಾಹಿತ್ಯ ಸೃಷ್ಟಿಯಾಗುತ್ತದೆ. ಹಳೆಯ ಹಾಡುಗಳೇ ಚೆನ್ನ, ಈಗಿನದು ಚೆನ್ನಾಗಿಲ್ಲ ಎನ್ನುವುದು ಎಲ್ಲಾ ಕಾಲದಲ್ಲೂ ಇದ್ದ ಮತ್ತು ಇರುವ ಗೊಣಗಾಟವಷ್ಟೇ’ - ಇದು ಭಾನುವಾರ ಆಲದಮರ ಕ್ಲಬ್‌ಹೌಸ್‌ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅತಿಥಿಗಳ ಒಕ್ಕೊರಲಿನ ಅಭಿಪ್ರಾಯವಾಗಿತ್ತು.
ಕನ್ನಡ ಸಿನಿಮಾ ಹಾಡುಗಳ ಸಾಹಿತ್ಯ ಎತ್ತ ಸಾಗುತ್ತಿದೆ? ಎನ್ನುವ ವಿಷಯದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ನಿರ್ದೇಶಕ ಎನ್.ಎಸ್. ಶಂಕರ್ , ಚಿತ್ರಸಾಹಿತಿ ಕವಿರಾಜ್, ಕವಯತ್ರಿ ಸಂಧ್ಯಾರಾಣಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಗಾಯಕಿ ಎಂ.ಡಿ.ಪಲ್ಲವಿ ಚರ್ಚೆಯಲ್ಲಿ ಭಾಗವಹಿಸಿದ್ದಲ್ಲದೆ ಕೆಲವು ಹಳೆಯ ಚಿತ್ರಗೀತೆಗಳನ್ನು ಹಾಡಿದರು.
‘ನಮ್ಮ ಕಾಲ ಚೆನ್ನಾಗಿತ್ತು ಎನ್ನುವುದು ಒಂದು ಜನ್ಮಜಾತ ಮಿಥ್ ಅಷ್ಟೆ. 1980ರ ದಶಕದ ಹಾಡುಗಳು ಆ ಕಾಲದ ಜನರಿಗೆ ಇಷ್ಟವಾಗುತ್ತವೆ. ಕಾರಣ, ಅವರು ಆ ಹಾಡುಗಳೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತಾರೆ. ಆ ದಶಕದಲ್ಲಿ ತರುಣರಾಗಿದ್ದವರ ಮಕ್ಕಳನ್ನು ಕೇಳಿದರೆ ಅವರಿಗೆ ಇಂದಿನ ಹಾಡುಗಳು ಹೆಚ್ಚು ಕನೆಕ್ಟ್ ಆಗುತ್ತವೆ’ ಎಂದು ಚಿತ್ರಸಾಹಿತಿ ಕವಿರಾಜ್ ಅಭಿಪ್ರಾಯಪಟ್ಟರು.
‘ಒಳ್ಳೆಯ ಹಾಡುಗಳು, ಕೆಟ್ಟ ಹಾಡುಗಳು ಎನ್ನುವುದು ಎಲ್ಲ ಕಾಲದಲ್ಲೂ ಇದ್ದವು. ಜನರ ಆಲೋಚನೆಗಳಿಗೆ, ಅವರ ಸಂವೇದನೆಗಳಿಗೆ ತಕ್ಕ ಹಾಗೆ ಚಿತ್ರಸಾಹಿತ್ಯ ರಚಿಸಲಾಗುತ್ತಿದೆ. ಚಿತ್ರ ನಿರ್ಮಾತೃಗಳು ಸಮಾಜವನ್ನು, ಬದುಕನ್ನು ನೋಡುವ ನೋಟ ಬದಲಾದಂತೆ ಚಿತ್ರಸಾಹಿತ್ಯ ಕೂಡ ಬದಲಾಯಿತು’ ಎಂದು ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಹೇಳಿದರು.
‘ಇತ್ತೀಚಿನ ವರ್ಷಗಳಲ್ಲಿ ಹೀರೊ ಮತ್ತು ಹೀರೋಯಿಸಂಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಥೆ, ಸನ್ನಿವೇಶಕ್ಕೆ ತಕ್ಕ ಚಿತ್ರಸಾಹಿತ್ಯ ರಚನೆಯಾಗುತ್ತಿಲ್ಲ’ ಎಂದು ಕವಯತ್ರಿ ಸಂಧ್ಯಾರಾಣಿ ಅವರು ಅಭಿಪ್ರಾಯಪಟ್ಟರು. ಇದಕ್ಕೆ ಸಂವಾದಿಯಾಗಿ ಎಂ.ಡಿ ಪಲ್ಲವಿ ಅವರು, ‘ಹೀರೋಯಿಸಂ ಕಡಿಮೆ ಆಗಿ, ಕಥೆ, ಸನ್ನಿವೇಶಕ್ಕೆ ತಕ್ಕ ಹಾಗೆ ಹಾಡುಗಳ ರಚನೆ ಆಗಬೇಕು. ಇತ್ತೀಚೆಗೆ ಹೊಸಬರು ಇಂಥ ಪ್ರಯೋಗ ಮಾಡುತ್ತಿದ್ದಾರೆ’ ಎಂದು ದನಿಗೂಡಿಸಿದರು.
ಮಡಿವಂತಿಕೆ ಇದೆ: ‘ಡಾ. ರಾಜ್‌ಕುಮಾರ್ ಅಭಿನಯದ ‘ಕವಿರತ್ನ ಕಾಳಿದಾಸ’ ಸಿನಿಮಾದಲ್ಲಿ ದೇವಿಯನ್ನು ವರ್ಣಿಸುವ ಹಾಡಿದೆ. ಅಲ್ಲಿ ದೇವಿಯ ಕುಚಗಳನ್ನು ವರ್ಣಿಸಲಾಗುತ್ತದೆ. ಅದು ಸಂಸ್ಕೃತ ಪದ. ಆ ವಿಷಯವನ್ನೇ ನಾವು ಕನ್ನಡದಲ್ಲಿ ಹೇಳಲು ಹೊರಟರೆ ಸಾಮಾಜಿಕ ನಿಷೇಧಕ್ಕೆ ಒಳಗಾಗಬೇಕಾಗುತ್ತದೆ. ಭಕ್ತಿಗೀತೆಯಲ್ಲಿ ಬಳಸುವ ಪದವನ್ನು ಪ್ರೇಮಗೀತೆಯಲ್ಲಿ ಯಾಕೆ ಬಳಸಬಾರದು’ ಎಂದು ಚಿತ್ರಸಾಹಿತಿ ಕವಿರಾಜ್ ಪ್ರಶ್ನಿಸಿದರು.
‘ಹಳೆ ಪಾತ್ರೇ, ಹಳೆ ಕಬ್ಣಾ... ಚಿತ್ರಾನ್ನ, ಚಿತ್ರಾನ್ನ... ಇಂಥವುಗಳು ಹಾಡೇ? ಎಂದು ಹಲವರು ಆಕ್ಷೇಪಿಸುತ್ತಾರೆ. ನನಗೆ ಅನ್ನಿಸೋದು ಪದಗಳ ಬಗ್ಗೆ ನಮಗೆ ಯಾಕೆ ಅಸ್ಪೃಶ್ಯತೆ ಕಾಡುತ್ತದೆ. ಅದೂ ಜನರು ಮಾತನಾಡುವ ಭಾಷೆ ಅಲ್ಲವೇ?’ ಎಂದರು.
***
‘ಚಿತ್ರಸಾಹಿತ್ಯ ಸರಳವಾದುದು ಎಂದು ಎಲ್ಲರೂ ಹೇಳುತ್ತಾರೆ. ನಿಜಾಂಶವೆಂದರೆ ಅದು ಅಷ್ಟು ಸರಳ ಇಲ್ಲ. ಸರಳವಾಗಿರುವುದೇ ಹೆಚ್ಚು ಕಷ್ಟಕರವಾಗಿರುತ್ತದೆ. ಯಾವುದೇ ಹಾಡಿಗೆ ಟ್ಯೂನ್ ಮೊದಲು ಸಿದ್ಧವಾಗುತ್ತದೆ. ಅದಕ್ಕೆ ತಕ್ಕಹಾಗೆ ಬರೆಯಬೇಕು. ಲಕ್ಷಗಟ್ಟಲೆ ಪ್ರೇಮಗೀತೆಗಳು ಈಗಾಗಲೇ ಇವೆ. ಪ್ರತೀ ಬಾರಿ ಹೊಸದನ್ನು ಬರೆಯುವ ಸವಾಲು ಇದೆ. ಹಾಡಿನಿಂದಲೇ ಸಿನಿಮಾ ಗೆಲ್ಲಬೇಕು ಅಂತಾರೆ, ಇಷ್ಟೆಲ್ಲ ಸವಾಲುಗಳ ಮಧ್ಯೆ ಕೆಲಸ ಮಾಡುತ್ತಿದ್ದೇವೆ. ಹಾಗಿದ್ದರೂ ನಮ್ಮನ್ನು ಎರಡನೇ ದರ್ಜೆ ರೀತಿ ಯಾಕೆ ನೋಡಬೇಕು?’
- ಕವಿರಾಜ್, ಚಿತ್ರಸಾಹಿತಿ
***
ಸಾಹಿತ್ಯಕ್ಕೂ, ಸಿನಿಮಾ ಸಾಹಿತ್ಯಕ್ಕೂ ಹೋಲಿಕೆ ಮಾಡುವುದರಲ್ಲೇ ಸಮಸ್ಯೆ ಇದೆ. ಹೋಲಿಕೆ ಸರಿಯಲ್ಲ.
- ಎನ್.ಎಸ್. ಶಂಕರ್, ಚಿತ್ರನಿರ್ದೇಶಕ
***
ಹೆಚ್ಚು ಜನಪ್ರಿಯವಾದುದು ಶ್ರೇಷ್ಠವಲ್ಲ; ಕೆಳದರ್ಜೆಯದ್ದು ಎನ್ನುವ ನಂಬಿಕೆ ಇದೆ. ಅದು ಹಾಗಾಗಬೇಕಿಲ್ಲ
- ಸಂಧ್ಯಾರಾಣಿ, ಕವಯತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.