ಮೇ ತಿಂಗಳ ಕೊನೆಯ ವಾರ. ಕರ್ನಾಟಕ ಸಂಗೀತದ ಸ್ವರ–ಆಲಾಪದ ಮಾಧುರ್ಯ ಚೆನ್ನೈನ ಆರ್‌ಕೆ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ಭಕ್ತಿಭಾವದ ಅಲೆಗಳೇಳುವಂತೆ ಮಾಡಿತ್ತು. ಕಛೇರಿಯ ಪ್ರಮುಖ ಅಂಗವಾದ ತೋಡಿ ರಾಗವು ಶ್ರೇಯಾ ಮತ್ತು ಅತ್ರೇಯಿ ಅವರ ಗಾಯನದ ಮೂಲಕ ವಿಸ್ತಾರ ಪಡೆದುಕೊಳ್ಳುತ್ತ ಸಾಗುತ್ತಿದ್ದಂತೆ ಶ್ರೋತೃಗಳು ತಲ್ಲೀನರಾಗತೊಡಗಿದ್ದರು. ಶ್ರುತಿ ಮತ್ತು ದಿವ್ಯಶ್ರೀ ಅವರು ನೆರವಲ್ ಪ್ರಸ್ತುತಪಡಿಸಿದಾಗ ರಾಗಭಾವ ಮತ್ತು ಸಾಹಿತ್ಯ ಭಾವ ತೆರೆದುಕೊಳ್ಳುತ್ತ ಸಹೃದಯಿಗಳ ಮನವನ್ನು ಆವರಿಸತೊಡಗಿತು. ಏಳೂ ಮಂದಿಯ ಮಧುರ ಕಂಠದಲ್ಲಿ ಕಲ್ಪನಾ ಸ್ವರಗಳನ್ನು ಹಾಡುತ್ತಿರುವಾಗ ಸಂಗೀತಪ್ರಿಯರ ಹೃದಯ ನಲಿದಾಡಿತು.
ನಾಟಕುರಿಂಜಿಯಲ್ಲಿ ಮೂಡಿಬಂದ ವರ್ಣಂನಿಂದ ತೊಡಗಿದ ಕಛೇರಿಗೆ ಚಲನಾಟ, ರೇವತಿ, ಪಟದೀಪ ಮುಂತಾದ ರಾಗಗಳು ಕೂಡ ರಂಗು ತುಂಬಿದ್ದವು. ಈ ಎಲ್ಲ ರಾಗಗಳಲ್ಲೂ ಕೇಳಿಬಂದ ಸಾಹಿತ್ಯದ ಗಂಧ ಒಂದೇ; ಅದು, ಧರ್ಮಸ್ಥಳದ ಶ್ರೀ ಮಂಜುನಾಥನ ಮಹಿಮೆ.
ಜುಲೈ ತಿಂಗಳ ಕೊನೆಯ ವಾರದಲ್ಲಿ ಈ ತಂಡದವರು ಕೇರಳದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿದ್ದರು. ಮೇಧಾ ಉಡುಪ, ಶ್ರೇಯಾ ಕೊಳತ್ತಾಯ, ಸುಮೇಧಾ ಕೆ.ಎನ್, ಶರಣ್ಯಾ ಕೆ.ಎನ್. ಅವರ ಗಾಯನ. ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಮತ್ತು ಮೃದಂಗದಲ್ಲಿ ಅಜೇಯ ಕೃಷ್ಣ ಉಪ್ಪಂಗಳ ಅವರ ಸಹಕಾರವಿದ್ದ ಕಛೇರಿಯಲ್ಲಿ ರಾಗದ ರಂಗು ಮಳೆಯ ತಂಪು ವಾತಾವರಣದ ನಡುವೆ ಶ್ರೋತೃಗಳಿಗೆ ಗುಂಗು ಹಿಡಿಸಿತ್ತು.
ಚೆನ್ನೈ–ಕಾಸರಗೋಡಿನಲ್ಲಿ ಮಾತ್ರವಲ್ಲ, ಬೆಂಗಳೂರು, ಉಡುಪಿ ಮತ್ತು ಧರ್ಮಸ್ಥಳವೂ ಸೇರಿದಂತೆ ದಕ್ಷಿಣ ಕನ್ನಡದ ವಿವಿಧ ಕಡೆಗಳಲ್ಲಿ ಇಂಥ ಕಛೇರಿಗಳು ನಡೆದಿದ್ದು ಅಲ್ಲೆಲ್ಲ ಮಂಜುನಾಥನಿಗೆ ಸಂಬಂಧಿಸಿದ ಕೃತಿಗಳ ಕರ್ಣರಸಾಯನ ಆಗಿದೆ.
ಕರ್ನಾಟಕದ ಪುಣ್ಯಕ್ಷೇತ್ರವೊಂದಕ್ಕೆ ಸಂಬಂಧಿಸಿದ ಹಾಡುಗಳನ್ನು ಶಾಸ್ತ್ರೀಯ ಸಂಗೀತ ರಾಗ–ಲಯಕ್ಕೆ ಅಳವಡಿಸಿ ‘ಕೀರ್ತನೆ’ಗಳ ಸ್ವರೂಪ ನೀಡಿದ ಅಪರೂಪದ ಪ್ರಯತ್ನದ ಇದು. ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಕರೆಯಲಾಗುವ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶಾಮಾ ಶಾಸ್ತ್ರಿಗಳು ತಮಿಳುನಾಡಿನ ಬಹುತೇಕ ಕ್ಷೇತ್ರಗಳ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಹೀಗಾಗಿ ಶಾಸ್ತ್ರೀಯ ಸಂಗೀತ ಕಿವಿಗೆ ಬಿದ್ದಾಗಲೆಲ್ಲ ಅಲ್ಲಿನ ದೇವಸ್ಥಾನಗಳು ಕಣ್ಣಮುಂದೆ ಕಟ್ಟುತ್ತವೆ. ಧರ್ಮಸ್ಥಳದ ಬಗ್ಗೆ ಇಂಥ ಅನುಭವ ಆಗಬೇಕೆಂಬ ಉದ್ದೇಶದಿಂದ ಮಂಗಳೂರು ಸುರತ್ಕಲ್‌ನ ಮಣಿಕೃಷ್ಣಸ್ವಾಮಿ ಅಕಾಡೆಮಿ ‘ಮಂಜು–ನಾದ’ ಎಂಬ ಹೆಸರಿನಲ್ಲಿ ಮಾಡಿರುವ ಪ್ರಯೋಗದ ಫಲವೇ ಈ ಕಛೇರಿಗಳು.
ಮಂಜುನಾದ ಯೋಜನೆಗೆ ಮೂರು ಹಂತಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೆಯದು ಕೃತಿ ರಚನೆ, ಎರಡನೆಯದು ಆ ಕೃತಿಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡುವುದು, ಮೂರನೆಯದು ಎರಡು ಬಗೆಯ ಕಾರ್ಯಾಗಾರ–ಆನ್‌ಲೈನ್ ಮತ್ತು ಆಫ್ ಲೈನ್. 180ಕ್ಕೂ ಹೆಚ್ಚು ಆನ್‌ಲೈನ್ ಕಾರ್ಯಾಗಾರಗಳು ಈಗಾಗಲೇ ನಡೆದಿದ್ದು, ಆಫ್‌ಲೈನ್ ಕಾರ್ಯಾಗಾರಗಳು 10ರಷ್ಟು ಅಗಿವೆ. ಈಗಾಗಲೇ ಸಂಗೀತ ಸಂಯೋಜನೆಗೊಂಡಿರುವ ಏಳು ಕೃತಿಗಳ ಪೈಕಿ ಐದನ್ನು ಕಳೆದ ವರ್ಷ ಧರ್ಮಸ್ಥಳದಲ್ಲೇ ಲೋಕಾರ್ಪಣೆಗೊಳಿಸಲಾಗಿತ್ತು. ಈಗ ಕಛೇರಿಗಳಲ್ಲಿ ಭಕ್ತಿ–ಸಂಗೀತದ ಮುದ ನೀಡುತ್ತಿರುವ ಕೃತಿಗಳು ಪುಸ್ತಕ ರೂಪದಲ್ಲೂ ಹೊರಬೀಳಲಿವೆ.
‘ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ರಚಿಸಿದ ಕೀರ್ತನೆಗಳನ್ನು ಕೇಳುವಾಗಲೆಲ್ಲ ಮೈ ಜುಮ್ಮೆನ್ನುತ್ತಿತ್ತು. ಕೆ.ಜೆ.ಜೇಸುದಾಸ್ ಅವರು ಪ್ರತಿ ವರ್ಷ ಜನ್ಮದಿನದಂದು ಕೊಲ್ಲೂರಿಗೆ ಬಂದಾಗಲೆಲ್ಲ ಮೂಕಾಂಬಿಕೆಯ ಕುರಿತು ಕೃತಿಯೊಂದನ್ನು ಹಾಡುತ್ತಿದ್ದರು. ಅದು ಕೂಡ ನನ್ನ ಅಂತರಂಗವನ್ನು ತಟ್ಟುತ್ತಿತ್ತು. ಈ ಸಂದರ್ಭದಲ್ಲಿ ಸುರತ್ಕಲ್‌ನ ಎಂ.ನಾರಾಯಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳ ಬಗ್ಗೆ ರಚಿಸಿದ, ಆದರೆ ಜನರ ಬಳಿಗೆ ತಲುಪದ ಕೃತಿಗಳ ಬಗ್ಗೆ ನೆನಪಾಗುತ್ತಿತ್ತು. ಇದೆಲ್ಲವೂ ಒಟ್ಟು ಸೇರಿ ಮಂಜು–ನಾದಕ್ಕೆ ವೇದಿಕೆಯಾಯಿತು’ ಎನ್ನುತ್ತಾರೆ, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿತ್ಯಾನಂದ ರಾವ್.
‘ಚತುರ್ದಾನಗಳಿಗೆ ಖ್ಯಾತಿ ಗಳಿಸಿರುವ ಧರ್ಮಸ್ಥಳದ ಕುರಿತು ಮೊದಲು ಪ್ರಯೋಗ ಮಾಡಲು ನಿರ್ಧರಿಸಲಾಯಿತು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರಿಗೆ ಸಂಗೀತದ ಅಪಾರ ಒಲವು ಇರುವ ಕಾರಣ ಈ ಯೋಜನೆ ಬೇಗ ಸಾಕಾರಗೊಂಡಿತು. ಹೆಗ್ಗಡೆ ಅವರ ಸಲಹೆಯಂತೆ ವಿವಿಧ ಹಂತಗಳಲ್ಲಿ ಮಂಜು–ನಾದವನ್ನು ಸಿದ್ಧಗೊಳಿಸಲು ಮುಂದಾದೆವು’ ಎಂದರು ನಿತ್ಯಾನಂದ ರಾವ್.
ಯಕ್ಷಗಾನದ ಪೂರ್ವರಂಗದಿಂದ ಎರವಲು ಪಡೆದ ‘ಕಾಮಿನಿ ಕರೆದು ತಾರೆ’ ಎಂಬ ಪದ್ಯವನ್ನು ಯೋಜನೆಯಲ್ಲಿ ಬಳಸಲಾಗಿದೆ. ನಿತ್ಯಾನಂದ ರಾವ್ ಅವರ ಎರಡು, ಶತಾವಧಾನಿ ಗಣೇಶ್ ಮತ್ತು ಎಂ.ನಾರಾಯಣ ಅವರ ಒಂದೊಂದು ಕೃತಿಗಳನ್ನು ಕೂಡ ಸದ್ಯ ಬಳಸಲಾಗಿದ್ದು, ರಾಜ್‌ಕುಮಾರ್ ಭಾರತಿ ಅವರು ರಾಗಸಂಯೋಜನೆ ಮಾಡಿದ್ದಾರೆ. ಇನ್ನೂ 2 ಕೃತಿಗಳ ಸಂಯೋಜನೆ ಅಂತಿಮ ಹಂತದಲ್ಲಿದ್ದು, ಸಿದ್ಧಗೊಂಡಿರುವ 5 ಕೃತಿಗಳನ್ನು ಒಳಗೊಂಡ 14 ಕಛೇರಿಗಳು ಈಗಾಗಲೇ ನಡೆದಿವೆ.
‘ಚತುರ್ದಾನಕ್ಕೆ ಹೆಸರಾದ ಧರ್ಮಸ್ಥಳ ಕ್ಷೇತ್ರದ ಮಹಿಮೆ ಅದ್ಭುತ. ಇಂಥ ಪುಣ್ಯ ಸ್ಥಳಕ್ಕೆ ಸಂಬಂಧಿಸಿದ ಕೃತಿಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದ್ದು ಕೃತಾರ್ಥ ಭಾವ ಮೂಡಿಸಿದೆ. ಕೃತಿಗಳಿಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ’ ಎಂದು ನಿತ್ಯಾನಂದ ರಾವ್ ಭಾವುಕರಾಗಿ ನುಡಿಯುತ್ತಾರೆ.
ಧರ್ಮಸ್ಥಳ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿ ಉದಾತ್ತ ಧ್ಯೇಯದೊಂದಿಗೆ ಕೃತಿಗಳನ್ನು ರಚಿಸಿದ್ದಾರೆ. ಈ ಪದ್ಯಗಳಲ್ಲಿ ಕೃತಿಕಾರರ ಭಾವನೆಗಳು ನಳನಳಿಸುತ್ತಿವೆ. ಲಕ್ಷಗಟ್ಟಲೆ ಭಕ್ತರು ಇರುವ ಧರ್ಮಸ್ಥಳದ ಕುರಿತ ಕೃತಿಗಳನ್ನು ಹಾಡುವಾಗ ನಮಗೂ ತಾದಾತ್ಯ್ಮ ಬರುತ್ತದೆ.
ತ್ಯಾಗರಾಜರಂಥ ಮಹಾನ್ ವಾಗ್ಗೇಯಕಾರರ ಕೃತಿಗಳನ್ನು ಗುರುಮುಖೇನ ಕಲಿತದ್ದರಿಂದ ಅವುಗಳಲ್ಲಿ ಗುರುವಿನ ಛಾಯೆ ಇರುತ್ತದೆ. ಅಧ್ಯಾತ್ಮ ಮತ್ತು ಸಂಗೀತ ಮಿಳಿತವಾಗಿರುತ್ತದೆ. ಧರ್ಮಸ್ಥಳದ ಕೃತಿಗಳು ಕೂಡ ಇದಕ್ಕಿಂತ ಭಿನ್ನವೇನೂ ಅಲ್ಲ. ಕೃತಿಗಳ ಬಿಡುಗಡೆಗೂ ಮೊದಲು ರಾಜ್‌ಕುಮಾರ್ ಭಾರತಿ ಅವರ ಸ್ಟುಡಿಯೊದಲ್ಲಿ ನಡೆದ ರೆಕಾರ್ಡಿಂಗ್ ಶಿಬಿರದಂತಿತ್ತು. ಧರ್ಮಸ್ಥಳದಲ್ಲಿ ಮೊದಲ ಬಾರಿ ಹಾಡುವುದಕ್ಕೂ ಮುನ್ನ ಒಂದು ರಾತ್ರಿ ಪೂರ್ತಿ ಅಭ್ಯಾಸ ಮಾಡಲಾಗಿತ್ತು. ಕೃತಿಕಾರರು ಮತ್ತು ಅವುಗಳನ್ನು ಸಂಗೀತಕ್ಕೆ ಅಳವಡಿಸಿದವರ ಅಪಾರ ಶ್ರಮದಿಂದಲೋ ಏನೋ ಮೊದಲ ಕಛೇರಿಯ ನಂತರ ಎಲ್ಲ ಕೃತಿಗಳು ಕೂಡ ಮನಸ್ಸಿನಲ್ಲಿ ಅಚ್ಚಾದವು. ಅದುವೇ ಮಂಜು–ನಾದದ ಯಶಸ್ಸು.
–ಶ್ರೇಯಾ ಕೊಳತ್ತಾಯ, ಗಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.