ADVERTISEMENT

ಮೈಸೂರು | ಮನಸೂರೆಗೊಂಡ ಸಂಗೀತ ಕಛೇರಿಗಳು

ಡಾ.ರಮಾ ವಿ ಬೆಣ್ಣೂರ್
Published 20 ಸೆಪ್ಟೆಂಬರ್ 2019, 19:42 IST
Last Updated 20 ಸೆಪ್ಟೆಂಬರ್ 2019, 19:42 IST
ಶ್ರೀ ಪ್ರಸನ್ನ ವಿದ್ಯಾ ಗಣಪತಿ ಮಂಡಲಿ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ) ವತಿಯಿಂದ ಮೈಸೂರಿನ ವಿ.ವಿ ಮೊಹಲ್ಲಾದ 8ನೇ ಅಡ್ಡರಸ್ತೆಯಲ್ಲಿ ನಡೆದ ‘58ನೇ ಪಾರಂಪರಿಕ ಸಂಗೀತೋತ್ಸವ’ದಲ್ಲಿ ಗಾಯಕ ವಿದ್ವಾನ್ ಟಿ.ಎಂ.ಕೃಷ್ಣ ಅವರು ಗಾಯನ ಪ್ರಸ್ತುತಪಡಿಸಿದರು
ಶ್ರೀ ಪ್ರಸನ್ನ ವಿದ್ಯಾ ಗಣಪತಿ ಮಂಡಲಿ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ) ವತಿಯಿಂದ ಮೈಸೂರಿನ ವಿ.ವಿ ಮೊಹಲ್ಲಾದ 8ನೇ ಅಡ್ಡರಸ್ತೆಯಲ್ಲಿ ನಡೆದ ‘58ನೇ ಪಾರಂಪರಿಕ ಸಂಗೀತೋತ್ಸವ’ದಲ್ಲಿ ಗಾಯಕ ವಿದ್ವಾನ್ ಟಿ.ಎಂ.ಕೃಷ್ಣ ಅವರು ಗಾಯನ ಪ್ರಸ್ತುತಪಡಿಸಿದರು   

ಎಂಟನೆಯ ಕ್ರಾಸ್ ಗಣೇಶ ಸಂಗೀತ ಮಹೋತ್ಸವದ ಆರಂಭವು ಎಷ್ಟು ಸೊಗಸಾಗಿದ್ದಿತೋ ಅಂತ್ಯವೂ ಅಷ್ಟೇ ಸಂಗೀತಮಯವಾಗಿತ್ತು. ಅದರ ಕೊನೆಯ ಎರಡು ದಿನಗಳು ಎರಡು ಭರ್ಜರಿ ಶಾಸ್ತ್ರೀಯ ಸಂಗೀತ ಕಛೇರಿಗಳು ಮಹೋತ್ಸವಕ್ಕೆ ಉತ್ತಮ ಅಂತ್ಯ ನೀಡಿ ಪರದೆಯನ್ನು ಎಳೆದವು.

ಸೆ.13 ರಂದು ವಿದ್ವಾನ್ ಟಿ.ಎಂ.ಕೃಷ್ಣ ಅವರ ಗಾಯನವು ವಿದುಷಿ ಅಕ್ಕರೈ ಶುಭಲಕ್ಷ್ಮಿ ಅವರ ಪಿಟೀಲು, ವಿದ್ವಾಂಸರಾದ ಎನ್.ಸಿ.ಭಾರದ್ವಾಜ್ ಅವರ ಮೃದಂಗ ಮತ್ತು ಕೃಷ್ಣಕುಮಾರರ ಘಟದೊಡನೆ ನಡೆಯಿತು. 14 ರಂದು ಯುವ ವಾಂಶಿಕರಾದ ಹೇರಂಬ ಮತ್ತು ಹೇಮಂತ ಅವರ ದ್ವಂದ್ವ ಕೊಳಲು ವಿದ್ವಾಂಸರಾದ ನಾಗೈ ಶ್ರೀರಾಂ ಅವರ ಪಿಟೀಲು, ಅಕ್ಷಯ್ ಆನಂದ್ ಅವರ ಮೃದಂಗ ಮತ್ತು ಎಸ್.ಮಂಜುನಾಥ್ ಅವರ ಘಟದೊಡನೆ ನಡೆಯಿತು.

ಟಿ.ಎಂ.ಕೃಷ್ಣ ಎಂದೊಡನೆ ಅದು ಎಲ್ಲರ ಕಛೇರಿಗಿಂತ ಭಿನ್ನ ಎಂಬುದು ನಿರ್ವಿವಾದ. ಸಂಗೀತದ ಅದ್ವಿತೀಯ ಪ್ರತಿಭೆಯಾದ ಇವರು, ಸಂಪ್ರದಾಯವನ್ನು ಪ್ರಶ್ನಿಸುತ್ತಲೇ ಅದನ್ನು ಮುರಿಯುತ್ತಾ ಹೋಗುವುದು ಈಗ ಎಲ್ಲರಿಗೂ ಸುಪರಿಚಿತ. ಅವರ ಕಛೇರಿಯಲ್ಲಿ ಯಾವ ಅಚ್ಚರಿಯನ್ನಾದರೂ ಎದುರುನೋಡಬಹುದು. ಅಂದೂ ಸಹ ಅದ್ಭುತ ಸಾವಕಾಶ ಲಯದಲ್ಲಿ ‘ಶ್ರೀರಂಗ ಪುರವಿಹಾರ’ದಿಂದ ತಮ್ಮ ವಿನಿಕೆಯನ್ನು ಆರಂಭಿಸಿದ ಅವರು ‘ಅಂಗಜ ಜನಕ ದೇವ’ ಎಂಬ ಸಾಲನ್ನು ಜೀವಂತಗೊಳಿಸಿದರೆಂದರೆ ಅತಿಶಯೋಕ್ತಿ ಅಲ್ಲ. ‘ಮುನಿ ಸಂಕಟ ಹರಣ’ ಎಂಬಲ್ಲಿ ಕಲ್ಪನಾ ಸ್ವರಗಳು ಪ್ರಾರಂಭವಾದುವು. ಈ ಅತೀತದ ಎಡುಪಿಗೆ ಅರ್ಧ ಆವರ್ತದ ಒಂದು ಸ್ವರ ಹಾಕಿ, ಮುಂದೆ ಅದನ್ನು ಬೆಳಸಲು ಪಿಟೀಲಿಗೇ ಬಿಟ್ಟು ತಣ್ಣಗೆ ಕೂತರು.

ADVERTISEMENT

ಮನ ಕಲಕುವ ದೇವಗಾಂಧಾರಿ ರಾಗಾಲಾಪನೆ, ‘ಶ್ರೀ ತುಳಸಮ್ಮ’ ಎಂಬ ತ್ಯಾಗರಾಜರ ಕೀರ್ತನೆಯು ಆರ್ದ್ರತೆಯ ಪ್ರತಿರೂಪವೇ ಆಗಿತ್ತು. ರಾಗಭಾವದ ಎಲ್ಲ ಸಾಧ್ಯತೆಗಳನ್ನೂ ಹೊರಹಾಕುವಂತಹ ಕಲ್ಪನಾ ಸ್ವರಗಳು ಕಳಾನಿಧಿ ರಾಗದ ‘ಚಿನ್ನನಾಡೆನಾ’ಗೆ ಜೊತೆಗೂಡಿತ್ತು. ಅಲ್ಲೇ ಮೃದಂಗದ ಒಂದು ಚಿಕ್ಕ ತನಿ. ಅತ್ಯದ್ಭುತ ಶಂಕರಾಭರಣ ರಾಗಾಲಾಪನೆ. ಅದರ ಗುಂಗಿನಿಂದ ಹೊರಬರುವ ಮೊದಲೇ ನಾಟಕುರಂಜಿ ರಾಗದಲ್ಲಿ ತಾನ. ಮುಂದೆ? ವರ್ಣ, ಅದರ ಸ್ವರ-ಸಾಹಿತ್ಯ-ಕಲ್ಪನಾ ಸ್ವರ ನಂತರ ಮೃದಂಗ -ಘಟ ಇಬ್ಬರ ತನಿ. ಹೀಗೆ ಸಂಪ್ರದಾಯವಾದಿಗಳ ಏರಿದ ಹುಬ್ಬನ್ನು ತಮ್ಮ ಕಲಾ ನಿಪುಣತೆಯಿಂದ ಸಮಾಧಾನಿಸುತ್ತಲೇ ಹೋಗುವುದು ಕೃಷ್ಣ ಅವರ ಪದ್ಧತಿ. ಅವರಿಗೆ ತಕ್ಕಂತೆ ಹೊಂದಿಕೊಂಡು ಸೊಗಸಾಗಿ ನುಡಿಸುವ ಅಕ್ಕರೈ ಶುಭಲಕ್ಷ್ಮಿ, ಭಾರದ್ವಾಜ್ ಮತ್ತು ಕೃಷ್ಣಮೂರ್ತಿ. ಒಟ್ಟಾರೆ ಅದೊಂದು ವಿಭಿನ್ನ ಅನುಭವ.

ಸಂಪ್ರದಾಯದ ಎಲ್ಲೆಯನ್ನು ಮೀರದೆ ತಮ್ಮ ವಿದ್ವತ್ತನ್ನು ಪ್ರದರ್ಶಿಸಿದ ಹೇರಂಬ ಮತ್ತು ಹೇಮಂತ ನಮ್ಮ ನಾಡಿನ ಅತ್ಯಂತ ಪ್ರತಿಭಾವಂತ ವಾಂಶಿಕ ಜೋಡಿ. ಅವರ ಸಂಗೀತವೆಂದರೆ ಭಾವ, ಸೌಖ್ಯ ಮತ್ತು ಗಾಂಭೀರ್ಯ. ಯಾವ ಕಳಪೆ ಗಿಮಿಕ್ಸ್‌ಗಳೂ ಅಲ್ಲಿ ಸುಳಿಯದು. ಈ ಚಿಕ್ಕ ವಯಸ್ಸಿಗೇ ಅಸಾಧಾರಣ ಪ್ರತಿಭೆ ಮತ್ತು ಪಾಂಡಿತ್ಯಗಳ ಸಂಗಮವಾದ ಈ ಸಹೋದರರ ಜೋಡಿಗೆ ಕೊಳಲಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಕೃತಿಯಿರಲಿ, ಆಲಾಪನೆ ಅಥವಾ ಸ್ವರ ಕಲ್ಪನೆಯಿರಲಿ ಎಲ್ಲದಕ್ಕೂ ಅಷ್ಟೇ ಆದ್ಯತೆ. ಅವರ ಆಯ್ಕೆಯಲ್ಲೂ, ಅಭಿವ್ಯಕ್ತಿಯಲ್ಲೂ ತೋರುವ ಸಂಯಮ ಸೂಕ್ಷ್ಮ ಕಣ್ಣುಗಳಿಗೆ ಗೋಚರ.

ಪ್ರಾರಂಭದ ಕಾನಡ ರಾಗದ ವರ್ಣದಿಂದ ಹಿಡಿದು ಕೊನೆಯ ಪ್ರಸ್ತುತಿಯವರೆಗೆ ಅದೇ ತಲ್ಲೀನತೆಯ ಪ್ರಾಮಾಣಿಕ ಪ್ರಸ್ತುತಿ. ಖಮಾಚ್, ರಂಜನಿ, ಕಾಂಬೋಧಿ ಒಂದೊಂದರ ವಿಸ್ತಾರದಲ್ಲೂ ಅವರಿಬ್ಬರೂ ತೋರುತ್ತಿದ್ದ ಸಂಯಮವು ಅನನ್ಯ ಭಾವಾಭಿವ್ಯಕ್ತಿಗೆ ಎಡೆ ಮಾಡಿಕೊಡುತ್ತಿತ್ತು. ಹೇರಂಬ ರಾಗದ ಅನ್ವೇಷಣೆಯನ್ನು ವೇಗದ ಉರುಟುಗಳಿಂದ, ದಾಟು ಪ್ರಯೋಗಗಳಿಂದ ಮಾಡಿದರೆ, ಹೇಮಂತ ಗಂಭೀರವಾಗಿ ರಾಗದ ಆಳ-ಅಗಲ ವಿಸ್ತಾರವನ್ನು ಪರಿಚಯಿಸುತ್ತಾ ಹೋಗುತ್ತಾರೆ.

ಒಟ್ಟಾರೆ ಇಬ್ಬರಲ್ಲೂ ಅಸಾಮಾನ್ಯ ಹೊಂದಾಣಿಕೆ. ಸ್ಪಷ್ಟವಾದ ತುತ್ತುಕಾರ, ಶುದ್ಧವಾದ ಗಾಯಕೀ ಅಂಗಗಳು ಕೇಳುಗರಿಗೆ ಆಪ್ತವಾಗುತ್ತವೆ. ನಾಗೈ ಶ್ರೀರಾಂ ಮತ್ತೊಬ್ಬ ಪ್ರತಿಭಾವಂತ. ಅವರ ಪಿಟೀಲಿನ ಸುನಾದವು ಕೊಳಲಿನ ನಾದದೊಂದಿಗೆ ಹದವಾಗಿ ಮಿಳಿತವಾಗಿತ್ತು. ಅಕ್ಷಯ್ ಆನಂದ್ ಅವರ ವೈವಿಧ್ಯಮಯ ತಾಡನವು ಸ್ವಲ್ಪ ಮೃದುವಾಗಿದ್ದಲ್ಲಿ ಮತ್ತೂ ರಂಜನೀಯವಾಗಿರುತ್ತಿತ್ತು. ಮಂಜುನಾಥ್ ಪಳಗುವ ಹಾದಿಯಲ್ಲಿದ್ದಾರೆ.

ಸಹೋದರರ ಕಾಂಬೋಧಿ ರಾಗಾಲಾಪನೆಯು ಕೇಳುಗರಿಗೆ ಅಪೂರ್ವ ಅನುಭವವಾಗಿ ಪರಿಣಮಿಸಿತ್ತು. ಶಾಸ್ತ್ರೀಯತೆಯ ಸರಹದ್ದಿನಲ್ಲೇ ಶುದ್ಧ ಗಮಕಭರಿತವಾಗಿ ರಾಗವು ಅನನ್ಯವಾಗಿ ಅನಾವರಣಗೊಂಡಿತ್ತು. ಪ್ರತಿಯೊಂದು ಅಂಶವೂ ಅಳತೆ ಮಾಡಿದಂತೆ ಹದವಾಗಿ ಮಿಳಿತವಾಗಿತ್ತು. ಕಾಲದ ಮೂಸೆಯಲ್ಲಿ ಮಿಂದೆದ್ದ ಸಂಗತಿಗಳು ಹೊಸ ಹೊಳಪಿನಲ್ಲಿ ಮಿನುಗಿದ್ದುವು. ‘ಕರಿಕಳಭ ವದನಂ ಸುಮುಖಂ ಚರಣಂ ಶರಣಂ’ ಎಂಬ ಪಲ್ಲವಿಯು ಖಂಡ ತ್ರಿಪುಟ ತಾಳದಲ್ಲಿ ಕಾನಡ, ಶುದ್ಧಸಾರಂಗ್, ದೇಸ್, ನಾಟ, ಆರಭಿ, ಮೋಹನಕಲ್ಯಾಣಿ, ಹಿಂದುಸ್ತಾನಿ ಕಾಪಿ ಮುಂತಾದ ರಾಗಗಳ ಸ್ವರದಲ್ಲಿ ರಂಜಿಸಿತ್ತು. ಹಲವು ದೇವರನಾಮಗಳೊಂದಿಗೆ ಗಣೇಶೋತ್ಸವಕ್ಕೆ ಸೂಕ್ತ ಮಂಗಳ ಒದಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.