ಸರಸ್ವತಿ ವೀಣೆ, ರುದ್ರ ವೀಣೆ (ಬೀನ್), ಚಿತ್ರ ವೀಣೆ (ಗೋಟುವಾದ್ಯ), ವಿಚಿತ್ರ ವೀಣೆ, ಮೋಹನ ವೀಣೆ... ಅರೆ ಎಷ್ಟೆಲ್ಲ ಬಗೆಯ ವೀಣೆಗಳಿವೆ! ಈ ವೀಣೆಗಳ ಸಾಲಿಗೆ ಸೇರುವ ತೀರಾ ಇತ್ತೀಚಿನ ಆವಿಷ್ಕಾರವೆಂದರೆ ಸಾಗರ ವೀಣೆ. ಇದು ಆವಿಷ್ಕಾರಗೊಂಡಿದ್ದು ಸಾಗರದಾಚೆಯಲ್ಲ, ನಮ್ಮ ಪಕ್ಕದ ಪಾಕಿಸ್ತಾನದಲ್ಲಿ. ಇದನ್ನು ನುಡಿಸುವ ಏಕೈಕ ಕಲಾವಿದೆ ನೂರ್ ಜೆಹರಾ ಕಾಜಿಮ್, ಸಾಗರ ವೀಣೆಯೊಂದಿಗಿನ ತಮ್ಮ ಸ್ವರಪಯಣವನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ...
ಭಾರತದ ಲಖನೌದಲ್ಲಿ ಬೆಳೆದು, ಮುಂದೆ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಹೆಸರಾಂತ ವಕೀಲರಾಗಿದ್ದ, ಮೊದಲು ಕಾಂಗ್ರೆಸ್ ಪಕ್ಷ, ತದನಂತರ ಮುಸ್ಲಿಂ ಲೀಗ್‌ನ ಕಾರ್ಯಕರ್ತರಾಗಿದ್ದ, ಎಡಪಂಥೀಯ ಚಿಂತಕರಾಗಿದ್ದು, ತತ್ವಶಾಸ್ತ್ರದ ವಿದ್ಯಾರ್ಥಿಯೂ ಆಗಿದ್ದ, ಸಂಗೀತದಲ್ಲಿ ಇದ್ದಷ್ಟೇ ಆಸಕ್ತಿಯನ್ನು ಫೋಟೊಗ್ರಫಿಯಲ್ಲೂ ಹೊಂದಿದ್ದ ಅಪರೂಪದ ವ್ಯಕ್ತಿತ್ವ ಪಾಕಿಸ್ತಾನದ ರಜಾ ಕಾಜಿಮ್ ಅವರದು.
ಕಾಜಿಮ್ ಅವರದು ಸಂಗೀತಗಾರರ ಮನೆತನವಲ್ಲದಿದ್ದರೂ, ಮಕ್ಕಳಿಗೆ ಹವ್ಯಾಸದ ಹಾಗೆ ಸಂಗೀತ ಕಲಿಸುವುದಕ್ಕೆ ಮನೆಗೆ ಒಬ್ಬರು ಗುರುಗಳು ಬರುತ್ತಿದ್ದರು. ಸಿತಾರ್ ಕಲಿಯುತ್ತಿದ್ದ ಇವರ ಹದಿಹರೆಯದ ಮಗಳು ನೂರ್ ಜೆಹರಾಗೆ ಗತ್‌ಗಿಂತ ಆಲಾಪ್ ನುಡಿಸುವುದು ಹೆಚ್ಚು ಮುದವೆನ್ನಿಸುತ್ತಿತ್ತು. ವಿಶೇಷವಾಗಿ ಮೀಂಡ್ ನುಡಿಸುವುದು ಹೆಚ್ಚು ಹಿತವೆನ್ನಿಸುತ್ತಿತ್ತು. ಮಗಳಿಗೆ ಆಲಾಪ್ ನುಡಿಸುವುದರಲ್ಲಿದ್ದ ಒಲವನ್ನು ಗಮನಿಸಿದ ರಜಾ ಒಂದು ಸುರಬಹಾರ್ ತರುವಂತೆ ಸಂಗೀತ ಮೇಷ್ಟ್ರಿಗೆ ಹೇಳಿದರು. ಸಿತಾರಿಗಿಂತ ಇದನ್ನು ನುಡಿಸುವುದು ಜೆಹರಾಗೆ ಇನ್ನಷ್ಟು ಖುಷಿಯೆನ್ನಿಸಿತು. ಆಗೊಮ್ಮೆ ರಜಾ ಅವರು ವಿಚಿತ್ರ ವೀಣೆಯನ್ನು ನುಡಿಸುವವರು ಯಾರಾದರೂ ಗೊತ್ತಿದ್ದಾರೆಯೇ ಎಂದು ಮೇಷ್ಟ್ರಿಗೆ ಕೇಳಿದರು. ಅವರು ಅಬ್ದುರ್ ರಶೀದ್ ಖಾನರ ಹೆಸರನ್ನು ಸೂಚಿಸಿದರು. ಅದೃಷ್ಟವಶಾತ್ ಅದೇ ಸಮಯದಲ್ಲಿ ರಶೀದ್ ಖಾನರು ಲಾಹೋರಿಗೆ ಬಂದಿದ್ದರು. ರಶೀದ್ ಖಾನರನ್ನು ರಜಾ ಅವರು ಮನೆಗೆ ಊಟಕ್ಕೆ ಆಹ್ವಾನಿಸಿದರು.
‘ನನಗೆ ನೆನಪಿರುವಂತೆ ಅವರು ಬೇರೆ ಬೇರೆ ರಾಗಗಳ ಆಲಾಪ್ ಮಾತ್ರ ನುಡಿಸಿ ತೋರಿಸಿದರು. ನಾನು ಅವರ ವೀಣೆಯನ್ನು ತೆಗೆದುಕೊಂಡು, ನುಡಿಸಲಿಕ್ಕೆ ಪ್ರಯತ್ನಿಸಿದೆ’ ಎಂದು ಜೆಹರಾ ನೆನಪಿಸಿಕೊಳ್ಳುತ್ತಾರೆ. ಮರುದಿನವೇ ರಜಾ ಮಗಳಿಗಾಗಿ ಒಂದು ವಿಚಿತ್ರವೀಣೆಯನ್ನು ಆರ್ಡರ್ ಮಾಡಿಯೇಬಿಟ್ಟರು. ಅದನ್ನು ತಯಾರಿಸಲಿಕ್ಕೆ ತಿಂಗಳುಗಟ್ಟಲೇ ಸಮಯ ಹಿಡಿಯುತ್ತಿತ್ತು. ಆ ಸಮಯದಲ್ಲಿ ರಜಾ ಕಾಜಿಮರು ಸುರಬಹಾರಿನ ಮೆಟ್ಟಿಲುಗಳು ಅಥವಾ ಪರ್ದಾಹ್‌ಗಳನ್ನು ತೆಗೆದುಹಾಕಿ, ಅದರ ಒಂದು ಭಾಗವನ್ನು ಸ್ವಲ್ಪ ಎತ್ತರಿಸಿದರು. ಮಗಳ ಕಲಿಕೆಯಲ್ಲಿ ಸಮಯ ವ್ಯರ್ಥವಾಗಬಾರದೆಂದು ರಜಾ ಈ ಎಲ್ಲ ಕಸರತ್ತು ಮಾಡಿದರು. ಆದರೆ ಎಡಗೈಯಲ್ಲಿ ನುಡಿಸುವುದಕ್ಕೆ ತುಂಬ ಸಣ್ಣದಾದ ಗಾಜಿನ ಆ್ಯಶ್‍ಟ್ರೇಯನ್ನು ಕೊಟ್ಟರು. ಹೀಗೆ ಸಾಗರ ವೀಣೆಯ ಮೊದಲ ಮಾದರಿ ಅಥವಾ ಪ್ರೋಟೋಟೈಪ್ 1970ರ ಸುಮಾರಿಗೆ ರೂಪುಗೊಂಡಿತು.
ಆಲಾಪ ನುಡಿಸುವುದರಲ್ಲಿ ಮಗಳಿಗಿದ್ದ ತನ್ಮಯತೆ ಹಾಗೂ ತಂದೆಗೆ ಸಾಂಗೀತಿಕ ಧ್ವನಿ ಸಾಧ್ಯತೆಗಳ ಕುರಿತಾದ ಅನ್ವೇಷಕ ಮನೋಭಾವ, ಎರಡೂ ಸೇರಿ ಸಾಗರ ವೀಣೆಯ ಮಾದರಿಗಳ ಶೋಧನೆ ಹಾಗೂ ಅಭಿವೃದ್ಧಿಗೆ ಅಡಿಪಾಯವಾಯಿತು. ಜೆಹರಾ ತಾವು ಸುರಬಹಾರಿನಲ್ಲಿ ಅಭ್ಯಾಸ ಮಾಡುತ್ತಿದ್ದುದ್ದನ್ನೇ ರೂಪಾಂತರಗೊಂಡ ಸುರಬಹಾರ್ ಅಂದರೆ ಸಾಗರ ವೀಣಾದ ಮೊದಲ ಮಾದರಿಯಲ್ಲಿ (ಪ್ರೋಟೋಟೈಪ್) ಮುಂದುವರಿಸಿದರು. ಈ ಮೊದಲ ಮಾದರಿಯಲ್ಲಿ ಆಳವಾದ, ಘನವಾದ ಧ್ವನಿಗೆ ನಿರಂತರತೆಯ ನಾದಗುಣ ಲಭ್ಯವಾಗಿದ್ದರಿಂದ, ಜೆಹರಾರಿಗೆ ಇದನ್ನು ನುಡಿಸುವುದು ಮತ್ತಷ್ಟು ಆಹ್ಲಾದವೆನ್ನಿಸಿತು. ಜೊತೆಗೆ ಸುರಬಹಾರಿಗಿಂತ ಇದರಲ್ಲಿ ನಾದ ಇನ್ನಷ್ಟು ಉತ್ತಮವಾಗಿರುವಂತೆ ಅನ್ನಿಸಿತು.
ಆಗ ಬೇರೆಬೇರೆ ರಾಗಗಳನ್ನು ಹೇಗೆ ನುಡಿಸುವುದು ಎಂದು ಕಂಡುಕೊಳ್ಳುವುದಕ್ಕೆ ಜೆಹರಾರಿಗೆ ಇದ್ದ ಮುಖ್ಯವಾದ ಮೂಲ ಎಂದರೆ ಅಲೆನ್ ಡೇನಿಯಲೊ ಎಂಬ ಫ್ರೆಂಚ್ ಸಂಗೀತಶಾಸ್ತ್ರಜ್ಞನ ಒಂದು ಪುಸ್ತಕ. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯವನ್ನು ಕಲಿತಿದ್ದ ಅಲೆನ್ ಡೇನಿಯಲೊ 1932ರಲ್ಲಿ ಭಾರತಕ್ಕೆ ಬಂದು, ದಶಕಗಳ ಕಾಲ ಇಲ್ಲಿದ್ದುಕೊಂಡು ಸಂಸ್ಕೃತ, ಹಿಂದೂಸ್ತಾನಿ ಸಂಗೀತ, ತತ್ವಶಾಸ್ತ್ರ ಇತ್ಯಾದಿಯನ್ನು ಹದಿನೈದು ವರ್ಷಗಳ ಕಾಲ ಕಲಿತಿದ್ದರು. ಅಲೆನ್‍ರ ‘ರಾಗಾಸ್ ಆಫ್ ನಾರ್ತ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್’ ಕೃತಿಯಲ್ಲಿ ಪಾಶ್ಚಾತ್ಯ ನೊಟೇಶನ್ ಮೂಲಕವೇ ರಾಗಗಳ ಚಲನ್ ಹಾಗೂ ಪಕರ್ ತಾನ್‍ಗಳನ್ನೂ ನೀಡಿದ್ದರು.
ಅದನ್ನು ನೋಡಿಕೊಂಡು, ಅಪರಿಚಿತ ರಾಗಗಳ ಆರೋಹಣ-ಅವರೋಹಣಗಳನ್ನು ಮೆಟ್ಟಿಲುಗಳಿಲ್ಲದ ಜಾರು ತಂತಿಗಳ ವಾದ್ಯಗಳ ಮೇಲೆ ನುಡಿಸಲು ಕಲಿಯುವುದು 15-16ರ ಆಸುಪಾಸಿನಲ್ಲಿದ್ದ ಜೆಹರಾರಿಗೆ ತುಂಬ ಮುದವೆನ್ನಿಸುವ ಸಂಗತಿಯಾಗಿತ್ತು.
ಹೇಗೆ ನುಡಿಸಬೇಕು ಎಂಬುದನ್ನು ಜೆಹರಾರೇ ಕಂಡುಕೊಳ್ಳಬೇಕಿತ್ತು. ಏಕೆಂದರೆ ಸಂಗೀತದ ಮೇಷ್ಟ್ರು ಬಂದಿಶ್‍ಗಳನ್ನು ಹಾಡಿ ತೋರಿಸುತ್ತಿದ್ದರು, ಇವರು ಅದನ್ನು ನುಡಿಸಬೇಕಿತ್ತು. ಹಾಗೆ ನೋಡಿದರೆ ನಂತರ 1973ರವರೆಗೂ ಔಪಚಾರಿಕವಾದ ತರಬೇತಿ ಎನ್ನುವುದು ಶುರುವಾಗಲಿಲ್ಲ, ಅದು ಶುರುವಾಗಿದ್ದು ಉಸ್ತಾದ್ ಶರೀಫ್ ಖಾನ್ ಪೋಂಚ್‍ವಾಲೇ ಅವರು ಜೆಹರಾರಿಗೆ ಕಲಿಸಲು ಆರಂಭಿಸಿದಾಗ. ಈ ನಡುವೆ 1971ರಲ್ಲಿ ಲಂಡನ್ನಿನಲ್ಲಿರುವ ರಾಜೇಶ್ವರಿ ದತ್ತಾ ಅವರ ಬಳಿ ಸುಮಾರು ಒಂಬತ್ತು ತಿಂಗಳು, ತದನಂತರ ಅಮೆರಿಕದಲ್ಲಿ ಅಲಿಅಕ್ಬರ್ ಖಾನ್ ಸಾಹೇಬರ ಮ್ಯೂಸಿಕ್ ಕಾಲೇಜಿನಲ್ಲಿ ಆರು ತಿಂಗಳು ಕಳೆದಿದ್ದರೂ ನಿಜವಾದ ಅರ್ಥದಲ್ಲಿ ಸಾಗರ ವೀಣೆಯ ಮೇಲೆ ಅಭ್ಯಾಸ ಶುರುವಾಗಲೇ ಇಲ್ಲ.
1972ರಲ್ಲಿ ಸಾಗರ ವೀಣೆಯ ಇನ್ನೊಂದು ಮಾದರಿ ರೂಪುಗೊಂಡಿತು. ಮಗಳಿಗೇನೋ ಸಂಗೀತ ಕಲಿಕೆ ಮನಸ್ಸಿನ ಖುಷಿಗೆ ಎಂಬಂತಿದ್ದರೂ ರಜಾ ತುಂಬ ಗಂಭೀರವಾಗಿ ತಮ್ಮ ಮನಸ್ಸಿನಲ್ಲಿದ್ದ ಧ್ವನಿಕಲ್ಪನೆಯನ್ನು ಸಾಕಾರಗೊಳಿಸಬಲ್ಲ ಹೊಸ ವಾದ್ಯವೊಂದರ ಶೋಧದಲ್ಲಿದ್ದರು. ಸಂಗೀತ, ಕಲಾಮೀಮಾಂಸೆ, ವಾದ್ಯಗಳ ಧ್ವನಿಸಾಧ್ಯತೆ ಹಾಗೂ ನಾದದ ಗುಣಮಟ್ಟ ಇಂತಹ ವಿಚಾರಗಳ ಕುರಿತು ರಜಾ ಕಾಜಿಮರ ಚಿಂತನೆ ಪ್ರಖರವಾಗುತ್ತ ನಡೆದಂತೆ, ಸಾಗರ ವೀಣೆಯನ್ನು ಮಾರ್ಪಡಿಸುತ್ತ, ಮತ್ತಷ್ಟು ಅಭಿವೃದ್ಧಿಪಡಿಸುವ ಪ್ರಕ್ರಿಯೆಯೂ ಸಾಗಿತು. ಸಾಗರ ವೀಣೆಯ ಮೇಲೆ ಅವರು ಕೆಲಸ ಮಾಡುತ್ತಿರುವಾಗ, ಅದನ್ನು ಆಗಾಗ ನುಡಿಸಿ ಪರೀಕ್ಷಿಸಲು ಹದಿನಾರರ ವಯಸ್ಸಿನ ಜೆಹರಾ ಅವರ ಜೊತೆಗೆ ಇರಬೇಕಾಗುತ್ತಿತ್ತು, ಹೀಗಾಗಿ ಕಾಲೇಜಿಗೆ ಸೇರಲಿಲ್ಲ. ರಜಾ ಒಮ್ಮೆ ಮಗಳಿಗೆ ಶಿಕ್ಷಣ ಅಥವಾ ಸಂಗೀತ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೋ ಎಂದಿದ್ದರು. ಆದರೆ ನಿಜವೆಂದರೆ ಸಂಗೀತದ ಹೊರತಾಗಿ ಬೇರೆ ಆಯ್ಕೆ ಇರಲಿಲ್ಲ. ಜೆಹರಾ ಮುಂದೆ ಇಂಟರ್‌ಮೀಡಿಯಟ್ ಹಾಗೂ ಪದವಿ ಎರಡನ್ನೂ ಖಾಸಗಿಯಾಗಿ ಮಾಡಿಕೊಂಡರು.
ಸಾಗರ ವೀಣೆಯ ಪ್ರತಿಯೊಂದು ಮಾದರಿ ಹೊರಬಂದಾಗಲೂ, ರಾಗದ ಶೋಧನೆಗೆ ಇನ್ನಷ್ಟು ಅವಕಾಶವನ್ನು ಒದಗಿಸುತ್ತಿತ್ತು. ಅಲೆನ್ ಡೇನಿಯಲೊನ ಪುಸ್ತಕ ಬೆರಳು ಹಿಡಿದೊಯ್ದು ಕರೆದೊಯ್ಯುವ ಮಾರ್ಗದರ್ಶಿಯಾಗಿತ್ತು. ಸುರಬಹಾರ್ ಹಾಗೂ ಸಾಗರ ವೀಣೆಯ ಟಿಂಬರಲ್ ವ್ಯತ್ಯಾಸ ಅಂದರೆ ನಾದಗುಣದಲ್ಲಿದ್ದ ವ್ಯತ್ಯಾಸ ಜೆಹರಾಗೊಂದು ಅನುಕೂಲ ಒದಗಿಸಿತ್ತು. ಧ್ವನಿಯು ಮೊದಲಿಗಿಂತ ಹೆಚ್ಚು ಘನವಾಗಿ, ಆಳವಾಗಿ, ಹೆಚ್ಚು ಸಮಯ ವಾದ್ಯದೊಳಗೆ ಅನುರಣಿಸುತ್ತಿತ್ತು, ಹೀಗಾಗಿ ಭೈರವದಂತಹ ರಾಗಗಳು ಬಡಿದೆಬ್ಬಿಸುವ ಭಾವನೆಗಳ ಜೊತೆಗೆ ತುಸು ಹೆಚ್ಚು ಸಮಯ ನೆಲೆಗೊಳ್ಳಲು ಸಾಧ್ಯವಾಗುತ್ತಿತ್ತು.
‘ನಾನು ಶಿವ ಭೈರವ್ ಎಂಬ ರಾಗವನ್ನು ಮೊದಲು ಕೇಳಿರಲಿಲ್ಲ. ಅಲೆನ್ ಪುಸ್ತಕದಲ್ಲಿ ಅದರ ಆರೋಹಣ, ಅವರೋಹಣವನ್ನು ಕೊಟ್ಟಿದ್ದರು. ಇದರಲ್ಲಿ ಕೋಮಲ ಧ, ರೆ ಸ್ವರಗಳಲ್ಲಿ ನಿಂತು, ನಂತರ ಎರಡೂ ನಿಷದ್ ಬಳಸುವುದು ಎಂದರೆ ಅಪರಿಚಿತ ಲೋಕದೊಳಗೆ ಸಾಗಿದಂತೆ ಎನ್ನಬಹುದು. ನಾನು ನನ್ನದೇ ವಿಧಾನವೊಂದನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೆ. ನಾನೇನು ಮಾಡುತ್ತಿದ್ದೇನೆ ಎಂಬುದನ್ನು ಯಾವುದೇ ಸಂಗೀತ ಗುರುಗಳೂ ನನ್ನ ಪ್ರಶ್ನಿಸಲಾರದ ದಾರಿಯಲ್ಲಿದ್ದೆ. ನಮ್ಮ ತಂದೆಯವರೂ ಅದನ್ನು ಪೂರ್ಣವಾಗಿ ಪ್ರೋತ್ಸಾಹಿಸಿದರು’ ಎಂದು ಜೆಹರಾ ಸ್ಮರಿಸುತ್ತಾರೆ.
‘ಸಾಗರ ವೀಣೆಯ ಘನವಾದ, ನಿರಂತರವಾದ ಧ್ವನಿ ತಂದೆಯವರಿಗೆ ನಿದ್ದೆ ತರಿಸುತ್ತಿತ್ತು. ನಿಜವೆಂದರೆ ನಾನು ಬೆಳಗ್ಗೆ ಶಿವ ಭೈರವ್ ರಾಗವನ್ನು ಅಭ್ಯಾಸ ಮಾಡುತ್ತಿದ್ದರೆ, ನಮ್ಮ ತಂದೆ ನಿದ್ದೆಗೆ ಜಾರುತ್ತಿದ್ದರು. ನಾನು ವೀಣೆ ನುಡಿಸೋದನ್ನು ನಿಲ್ಲಿಸಿದಾಗಲೇ ಅವರಿಗೆ ಎಚ್ಚರವಾಗುತ್ತಿತ್ತು. ವೀಣೆಯನ್ನು ರೂಪಿಸುತ್ತ ಹೋದ ಈ ಪ್ರಕ್ರಿಯೆ ನನ್ನತನದ ವಿವಿಧ ಮಗ್ಗುಲುಗಳನ್ನು ಅರಿಯುತ್ತ ಸಾಗುವುದಕ್ಕೆ ಸಹಾಯ ಮಾಡಿತು. ಬೇರೆ ರೀತಿಯಲ್ಲಿ ಇದೆಲ್ಲ ಸಾಧ್ಯವಾಗುತ್ತಿತ್ತು ಅಂತ ನಂಗನ್ನಿಸೋದಿಲ್ಲ’ ತಾವು ಸಾಗಿ ಬಂದ ದಾರಿಯನ್ನು ಅವಲೋಕಿಸುತ್ತ ಜೆಹರಾ ಚಿಂತನಾಮಗ್ನರಾಗಿ ಹೇಳುತ್ತಾರೆ.
1973ರಲ್ಲಿ ಉಸ್ತಾದ್ ಶರೀಫ್ ಖಾನ್ ಸಾಹೇಬರಲ್ಲಿ ಔಪಚಾರಿಕ ತರಬೇತಿಯ ಹಾಗೆ ಕಲಿಯಲು ಶುರು ಮಾಡಿದೊಡನೆ, ತುಂಬ ಕಟ್ಟುನಿಟ್ಟಿನ ಅಭ್ಯಾಸ ದಿನಚರಿ ಶುರುವಾಯಿತು. ‘ಅವರು ಬಹಳ ಶಿಸ್ತಿನ ಗುರು. ಸ್ವರಗಳ ನಿಖರತೆಯಲ್ಲಿ ಯಾವುದೇ ರಾಜಿಗೆ ಆಸ್ಪದವಿಲ್ಲ. ಆಲಾಪದಿಂದ ಶುರು ಮಾಡಿ, ದ್ರುತ್ ಗತ್‌ವರೆಗೆ ಅವರು ಕಲಿಸಿದ ಕ್ರಮದಲ್ಲಿಯೇ ಸಾಗಬೇಕಿತ್ತು. ಅವರು ಬಹುಶಃ ಮೂರು ರಾಗಗಳನ್ನು ಕಲಿಸಿದರು ಎನ್ನಿಸುತ್ತೆ. ಒಂದೆರಡು ರಾಗಗಳ ಕಿರು ಆವೃತ್ತಿಗಳು. ಎರಡು ವರ್ಷಗಳ ಕಠಿಣ ಅಭ್ಯಾಸದ ನಂತರ ಇನ್ನು ಸಾಧ್ಯವಿಲ್ಲ ಎನ್ನಿಸಿ ನಾನು ಕೈಬಿಟ್ಟೆ’ ಎಂದು ನಸುನಗುತ್ತಾರೆ ಜೆಹರಾ.
ಸಾಗರ ವೀಣೆಯ ರಚನೆ
ಸಾಗರವೀಣೆಯು ಮೇಲ್ನೋಟಕ್ಕೆ ಎರಡು ಕೊಡಗಳಿರುವ ವೀಣೆಯಂತೆಯೇ ಇದ್ದರೂ ರಾಚನಿಕವಾಗಿ ತುಂಬ ಭಿನ್ನತೆಯಿಂದ ಕೂಡಿದೆ. ಈ ರಾಚನಿಕ ಭಿನ್ನತೆಯೇ ಇದನ್ನು ಕಂಪನಗಳನ್ನು ಹುಟ್ಟುಹಾಕುವ ಇನ್ನಿತರ ತಂತಿ ವಾದ್ಯಗಳಿಂದ ಪ್ರತ್ಯೇಕಿಸಿ, ಅನುರಣನಗೊಳ್ಳುವ ವಾದ್ಯವನ್ನಾಗಿ ರೂಪಿಸಿದೆ. 1994ರಲ್ಲಿ ಸಾಗರವೀಣೆಯ ನಾಲ್ಕನೆಯ ಪ್ರೋಟೋಟೈಪ್ ಅಭಿವೃದ್ಧಿಪಡಿಸಿದರು. ಇದರಲ್ಲಿ ಕಂಪಿಸುವ ಹಾಗೂ ಅನುರಣನಗೊಳ್ಳುವ ಭಾಗಗಳು ಪ್ರತ್ಯೇಕವಾಗಿವೆ, ಹೀಗಾಗಿ ನಾದವು ತುಂಬ ಘನವಾಗಿದ್ದು, ಸಾತತ್ಯ ಹಾಗೂ ಸ್ಪಷ್ಟತೆ ಎರಡೂ ವೃದ್ಧಿಸುವಂತೆ ಮಾಡಿದೆ.
ಮಿಜ್ರಬ್‌ನಿಂದ ತಂತಿಯನ್ನು ಮೀಟಿದಾಗ ಆ ಸ್ವರ ಹಿಂದೆ ಉಳಿದು, ಅದರ ಕಂಪನಗಳು ಪ್ರತಿಧ್ವನಿಸುವ ರೀತಿಯಲ್ಲಿ ಅನುರಣಿಸುವ ಕೋಶಗಳನ್ನು (ಎರಡು ತುಮ್ಬಾಗಳು, ಒಂದು ದಂತಿ, 2 ಅನುರಣಿಸುವ ಪಾದ ಅಥವಾ ಬೇಸ್) ವಿನ್ಯಾಸಪಡಿಸಿ, ಪರಸ್ಪರ ಜೋಡಿಸಲಾಗಿದೆ.
ಜವಾರಿಯ (ಬ್ರಿಜ್) ಮೇಲಿರುವ ತಂತಿಯನ್ನು ಮೀಟಿದಾಗ, ಹೇಗೆ ವರ್ತಿಸುತ್ತದೆ, ಅದು ಹೊರಹೊಮ್ಮಿಸುವ ಶಬ್ದದ ಗುಣಲಕ್ಷಣಗಳೇನು ಎಂಬುದನ್ನು ಕಂಡುಕೊಳ್ಳುವುದಕ್ಕೆ ರಜಾ ತುಂಬ ಸಮಯ ಕಳೆದರು. ವಾದ್ಯದ ಈ ಬಹುಮುಖ್ಯವಾದ ಭಾಗದ ಮೇಲೆ ಅವರೇ ಸ್ವತಃ ಕಡಿಮೆಯೆಂದರೂ ನಲ್ವತ್ತು ವರ್ಷ ಕಾಲ ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಬಳಸುವುದಕ್ಕೆ ವಿವಿಧ ವಸ್ತುಗಳ ಕುರಿತು ಶೋಧನೆ ನಡೆಸಿದ್ದಾರೆ.
ಈಗ ಬಳಸುತ್ತಿರುವ ಜವಾರಿಯು ಬೇರೆ ಬೇರೆ ಸಾಮಗ್ರಿ ಹಾಗೂ ಅಂಟುಪದಾರ್ಥಗಳ (ಅಡ್ಹೆಸಿವ್) ಸಮ್ಮಿಶ್ರಣವಾಗಿದ್ದು, ಇದು ಶಬ್ದದ ಶಕ್ತಿಯನ್ನು ವಾದ್ಯದೊಳಗೆ ಪರಿಣಾಮಕಾರಿಯಾಗಿ ವರ್ಗಾಯಿಸುತ್ತದೆ. ವಾದ್ಯದ ಕೆಳಭಾಗದ ಕೊಡದ ಆಕೃತಿಯು ಸಂಕೀರ್ಣ ಅನುರಣನಗಳನ್ನು ಹುಟ್ಟುಹಾಕಲು ಸಹಾಯಕವಾಗಿದೆ. ಇದೇ ನಾವು ಕೇಳುವ ಸಂಗೀತಕ್ಕೆ ಮೂಲಸಾಮಗ್ರಿಯಾಗುವ ಒಂದು ಸ್ವರವಾಗುತ್ತದೆ. ಎಡಗೈಯಲ್ಲಿ ಮೀಟಲು ಬಳಸುವ ಹಿತ್ತಾಳೆಯ ‘ವಾಟ್ಟ’ವನ್ನು ಕೂಡ ರಜಾ ಅವರೇ ಅಭಿವೃದ್ಧಿಪಡಿಸಿದ್ದಾರೆ.
1994ರಲ್ಲಿ ವಾದ್ಯದ ಗಾತ್ರ, ಬಳಸುವ ಸಾಮಗ್ರಿ ಇತ್ಯಾದಿಗಳನ್ನು ಪ್ರಮಾಣೀಕರಣಗೊಳಿಸಿದ ನಂತರ 2015-16ರವರೆಗೂ ರಜಾ ಅನಾರೋಗ್ಯಕ್ಕೀಡಾಗುವವರೆಗೂ ಚಿಕ್ಕಪುಟ್ಟ ಮಾರ್ಪಾಡುಗಳೊಡನೆ ಒಂದರ ನಂತರ ಇನ್ನೊಂದರಂತೆ 17 ಆವೃತ್ತಿಗಳನ್ನು ಸಿದ್ಧಪಡಿಸಿದರು. ಆಯಾ ಹಂತದಲ್ಲಿ ರೂಪುಗೊಂಡ ವಾದ್ಯದಲ್ಲಿ ಜೆಹರಾ ಆಗೀಗ ಸಾರ್ವಜನಿಕ ಕಛೇರಿಗಳನ್ನು ನೀಡುತ್ತಿದ್ದರು. ಭಾರತದಲ್ಲಿಯೂ ನಾಲ್ಕಾರು ಕಡೆ ನಡೆದ ಅವರ ಕಛೇರಿಯನ್ನು ಕಲಾರಸಿಕರು ಬಹುವಾಗಿ ಮೆಚ್ಚಿಕೊಂಡಿದ್ದರು.
ಅಂದಹಾಗೆ ತುಮ್ಬಾ ಅಥವಾ ಕೊಡಗಳಿಗಾಗಿ ರಜಾ ಅವರ ಹುಡುಕಾಟ ಮಿರಜಿನವರೆಗೂ ನಡೆದಿತ್ತು. ತೊಂಬತ್ತರ ದಶಕದ ಆರಂಭದಲ್ಲಿ ರಜಾ ಅವರ ಹೆಂಡತಿ ಮಿರಜಿಗೆ ಭೇಟಿ ನೀಡಿ, ಮರದ ಕೊಡಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಆ ಕೊಡಗಳ ಆಕಾರ ಹಾಗೂ ನಾದವನ್ನು ಹುಟ್ಟುಹಾಕುವ ಗುಣ ರಜಾ ಅವರಿಗೆ ಅಗತ್ಯವಾಗಿದ್ದ ರೀತಿಯಲ್ಲಿರಲಿಲ್ಲ, ಹೀಗಾಗಿ ಅವುಗಳನ್ನು ಬಳಸಿಕೊಳ್ಳಲು ಆಗಲಿಲ್ಲ.
‘ಸಾಗರ ವೀಣೆಯನ್ನು ರೂಪುಗೊಳಿಸುವ ಪ್ರಕ್ರಿಯೆ ತುಂಬ ತೀವ್ರವಾಗಿ ನಡೆದಿದ್ದು ಕಳೆದ 10-12 ವರ್ಷಗಳಲ್ಲಿ. ಈ ಕಾಲಘಟ್ಟದಲ್ಲಿ ನನ್ನ ಸ್ವಂತ ನುಡಿಸಾಣಿಕೆಯೂ ಹಿಂದೆ ಸರಿಯಿತು. ಕಠಿಣವಾದ ಸಮಯ... ಆದರೆ ಹೊಂದಿಕೊಳ್ಳಬೇಕಿತ್ತು. ದಶಕಗಳ ಅವಧಿಯಲ್ಲಿಯೇ ವಾದ್ಯವೊಂದು ಅಭಿವೃದ್ಧಿಯಾಗುವುದನ್ನು ನೋಡುವ ಸುಯೋಗ ಯಾರಿಗೆ ಲಭಿಸುತ್ತದೆ! ವಾದ್ಯಗಳು ವಿಕಾಸಗೊಳ್ಳುತ್ತ, ರೂಪುಗೊಳ್ಳುವುದಕ್ಕೆ ಶತಮಾನಗಳೇ ಬೇಕಾಗುತ್ತವೆ. ಕೊನೆಯದಾಗಿ ಮಾರ್ಪಾಟುಗೊಂಡ ಈ ವಾದ್ಯವನ್ನು ಮುಂದಿನ ದಿನಗಳಲ್ಲಿ ಶ್ರುತಿ ಸಾಗರ್ ಎಂದು ಕರೆಯಬೇಕೆಂದು ರಜಾ ಬಯಸಿದ್ದಾರೆ. ಕಳೆದೆರಡು ವರ್ಷಗಳಿಂದ ಇದರ ನುಡಿಸಾಣಿಕೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೇನೆ, ವಾದ್ಯದೊಂದಿಗೆ, ರಾಗಗಳೊಂದಿಗೆ ಮತ್ತೆ ನಂಟು ಗಟ್ಟಿಗೊಳಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಜೆಹರಾ.
ಲಾಹೋರಿನಲ್ಲಿ ವಾಸಿಸುವ ನೂರ್ ಜೆಹರಾರೊಂದಿಗೆ ಮಾತನಾಡುವುದೇ ಒಂದು ಆಪ್ತಭಾವದ, ಅಕ್ಕರೆಯ ಸಿಂಚನದ ಅನುಭವ. ಯಾವುದೇ ಹಮ್ಮುಬಿಮ್ಮುಗಳಿಲ್ಲದೇ, ಸಹಜವಾಗಿ, ಸರಳವಾಗಿ ಸಾಗರ ವೀಣೆಯು ಅಭಿವೃದ್ಧಿಗೊಳ್ಳುತ್ತ ಸಾಗಿದ ಪ್ರಕ್ರಿಯೆಯನ್ನು, ತಮ್ಮ ಕಲ್ಪನೆಯ ಸ್ವರದ, ನಾದದ ಹುಡುಕಾಟದಲ್ಲಿ ದಣಿವರಿಯದೇ ದುಡಿದ ರಜಾ ಕಾಜಿಮರ ಬದ್ಧತೆ, ಶ್ರದ್ಧೆಯನ್ನು ಮಾತಿನಲ್ಲಿ ಕಟ್ಟಿಕೊಡುತ್ತಾರೆ.
ಸುರಬಹಾರಿನಿಂದ ಆರಂಭಗೊಂಡ ತಂದೆ-ಮಗಳ ಸ್ವರಪಯಣ, ನಾದಶೋಧ ಸಾಗರ ವೀಣೆಯ ಆವಿಷ್ಕಾರದವರೆಗೆ ಹಲವು ಪದರಗಳಲ್ಲಿ ಹುದುಗಿದೆ. ಇಂಥದೊಂದು ಅಪೂರ್ವ, ಅಪರೂಪದ ವಾದ್ಯವೊಂದು ನಮ್ಮ ಪಕ್ಕದ ದೇಶದಲ್ಲಿಯೇ ರೂಪುಗೊಂಡಿರುವುದು ಉಪಖಂಡದ ಸಂಗೀತ ಪರಂಪರೆ ಅವಿಚ್ಛಿನ್ನವಾಗಿ ಸಾಗಿಬರುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.