ADVERTISEMENT

ಬೆಂಕಿಯಲ್ಲಿ ಅರಳುತ್ತಿರುವ ‘ಜನ್ನತ್’

ಜಗದೀಶ ಅಂಗಡಿ
Published 15 ಸೆಪ್ಟೆಂಬರ್ 2019, 11:31 IST
Last Updated 15 ಸೆಪ್ಟೆಂಬರ್ 2019, 11:31 IST
ಜನ್ನತ್‌
ಜನ್ನತ್‌   

ಕನಸುಗಳಿಗೆ ಕೊಳ್ಳಿಯಿಟ್ಟ ಬೆಂಗಳೂರಿನತ್ತ ಹೋಗಲೇಬಾರದೆಂದು ನಿರ್ಧರಿಸಿದ ಗಾಯಕಿ ಜನ್ನತ್‌ ಕನಸುಗಳನ್ನು ನನಸಾಗಿಸಿದ್ದು ಅದೇ ಬೆಂಗಳೂರು.

ಇಪ್ಪತ್ತಮೂರು ವರ್ಷದ ಜನ್ನತ್ ನಾಸ್ ಅಲಿಯಾಸ್ ನಸ್ರೀನ್ ಶೇಖ್ ಯಾರೆಂದು ಬಹುತೇಕರಿಗೆ ಗೊತ್ತಿರುವುದು ಅನುಮಾನ. ತನ್ನದೆಂಬ ಎಲ್ಲವನ್ನೂ ಹಾಗೂ ತನ್ನವರೆಲ್ಲರನ್ನೂ ಎದುರುಹಾಕಿಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.

ಜನ್ನತ್ ಅಪ್ಪಟ ಸಂಪ್ರದಾಯ ಮುಸ್ಲಿಂ ಕುಟುಂಬದ ಕುಡಿ. ಹೆತ್ತವರ ವಿರೋಧದ ನಡುವೆಯೂ ಕಲಿತದ್ದು ಕರ್ನಾಟಕ ಶಾಸ್ತ್ರೀಯ ಸಂಗೀತ. ಕ್ರಿಶ್ಚಿಯನ್‌ ಗೀತೆಗಳು, ಇಸ್ಲಾಮಿಕ್ ಪ್ರಾರ್ಥನಾ ಗೀತೆಗಳು, ದೇವರ ನಾಮ ಹಾಗೂ ವಚನಗಳು ಎಲ್ಲಾ ಬಗೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಕನ್ನಡ, ಹಿಂದಿ, ತೆಲುಗು, ಮರಾಠಿ, ಕೊಂಕಣಿ, ಮಲಯಾಳಂ ಹಾಗೂ ತಮಿಳು ಹಾಡುಗಳನ್ನು ಮನಮುಟ್ಟುವಂತೆ ಹಾಡುತ್ತಾರೆ.

ADVERTISEMENT

ಇವರ ಕನಸು ಹಿನ್ನಲೆಗಾಯಕಿಯಾಗುವುದು. ಇವರು ಹಾಡಿರುವ 'ಐಗಿರಿ ನಂದಿನಿ' ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಈಗ ಟಾಪ್ ಹಿಟ್.ಹೊಸಪೇಟೆಯ ಶೇಖ್ ಹಾರೋನ್ ಹಾಗೂ ರಝಿಯಾ ಅವರ ಐದನೆ ಮಗಳು ಜನ್ನತ್‌.

‘ನನಗೆ ಬುದ್ದಿ ಬಂದಾಗಿನಿಂದಲೂ ಸಂಗೀತದ ಕಡೆಗೆ ಅತೀವ ಸೆಳೆತ. ಐದನೇ ತರಗತಿಯಲ್ಲಿ ಇದ್ದಾಗ ನನ್ನ ಕನ್ನಡ ಮೇಷ್ಟ್ರು ಹಾಗೂ ಅವರ ಹೆಂಡತಿ ಚೆನ್ನಾಗಿ ಹಾಡುತ್ತೇನೆಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಂದು ನಾನು ಹಾಡಿದ ಭಕ್ತಿಗೀತೆಗಳು ಹಾಗೂ ಕುವೆಂಪು ಅವರ 'ಓ! ನನ್ನ ಚೇತನ!" ಭಾವಗೀತೆ ಎಲ್ಲರನ್ನೂ ಮನಸೆಳೆದವು' ಎಂದು ಆಕೆ ನೆನಪಿಸಿಕೊಳ್ಳುತ್ತಾರೆ.

‘ಮುಸ್ಲಿಂ ಜನರು ಹಿಂದೂ ಸಂಗೀತ ಕಲಿಯಬಾರದು ಎಂದು ಮನೆಯವರು ವಿರೋಧಿಸಿದರು. ಪಿಯುಸಿಯ ನಂತರ ನರ್ಸರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿದೆ. ಸಂಗೀತ ಕಲಿಕೆಗೆ ಬೇಕಾಗುವ ದುಡ್ಡನ್ನು ನಾನೇ ದುಡಿಯುತ್ತೇನೆ. ಸಂಗೀತ ಕಲಿಯಲು ಮಾತ್ರ ಅನುಮತಿ ನೀಡಿ ಎಂದು ಪರಿಪರಿಯಾಗಿ ಬೇಡಿಕೊಂಡಾಗ ತಾಯಿ ಒಪ್ಪಿದರು’ ಎಂದು ಜನ್ನತ್ ಅಂದಿನ ಸಂಕಷ್ಟದ ದಿನಗಳನ್ನು ವಿವರಿಸುತ್ತಾಳೆ.

ಜನ್ನತ್ ಸಂಗೀತ ಅಭ್ಯಾಸ ವೀಣಾ ಎಂಬ ಶಿಕ್ಷಕಿಯ ಮನೆಯಲ್ಲಿ ಆರಂಭವಾಯಿತು. ವೀಣಾ ಮೇಡಂ ಜನ್ನತ್‌ನ ಹಾಡಿನ ವಿಡಿಯೋ ಒಂದನ್ನು ಝಿ ಟಿವಿಯ ‘ರಿಯಾಲಿಟಿ ಶೋ’ ಆಡಿಷನ್‍ಗೆ ಕಳುಹಿಸಿದರು. ಅವರನ್ನು ನೇರವಾಗಿ ಅಂತಿಮ ಹಂತಕ್ಕೆ ಆಯ್ಕೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದರು. ಆದರೆ ನಡೆದದ್ದೇ ಬೇರೆ.

2016ರ ಫೆಬ್ರುವರಿ 1ರಂದು ಜನ್ನತ್ ಹಾಗೂ ಆಕೆಯ ತಾಯಿ ತೋರಣಗಲ್ಲಿನ ರೈಲು ನಿಲ್ದಾಣಕ್ಕೆ ಬಂದಿದ್ದರು. ಜನ್ನತ್ ರೈಲು ಹತ್ತಿದಳು. ಹತ್ತುವ ಭರದಲ್ಲಿ ಚಲಿಸಲಾರಂಭಿಸಿದ ರೈಲಿನಿಂದ ಆಕೆಯ ತಾಯಿ ಕೆಳಕ್ಕೆ ಬಿದ್ದು, ಸ್ಥಳದಲ್ಲಿಯೇ ಹೃದಯಾಘಾತವಾಗಿ ಕೊನೆಯುಸಿರೆಳೆದರು.

ನಂತರದ ದಿನಗಳು ಆಕೆಗೆ ನರಕ ಸದೃಶ್ಯ. ತಾಯಿಯನ್ನು ಬಲಿಪಡೆದ ಹೆಣ್ಣು ಎಂಬ ಹೀಯಾಳಿಕೆ. ಹೆಂಡತಿಯ ಸಾವಿಗೆ ಮಗಳೇ ಕಾರಣ ಎಂದು ದೂರಿ ಕುಡಿತಕ್ಕೆ ಬಿದ್ದ ತಂದೆ. ಆರೆಂಟು ತಿಂಗಳಿನಲ್ಲಿ ತಂದೆ ಕೂಡ ನಿಧನರಾದರು. ಜನ್ನತ್‍ಳ ಬದುಕು ಬೆಂಕಿಯಿಂದ ಬಾಣಲೆಗೆ ಬಿತ್ತು. ಬೆಂಗಳೂರಿನ ಸಹವಾಸವೇ ಬೇಡ ಎಂದು ನಿರ್ಧರಿಸಿಬಿಟ್ಟರು.

ಜನ್ನತ್ ಸಂಗೀತ ಬಿಟ್ಟರೂ ಸಂಗೀತ ಆಕೆಯನ್ನು ಬಿಡಲೇ ಇಲ್ಲ. ಒಳಗಿನ ಅದಮ್ಯ ಆಸೆಯನ್ನು ಹತ್ತಿಕ್ಕಲು ಅವಳಿಗೆ ಸಾಧ್ಯವೇ ಆಗಲಿಲ್ಲ. ಆಗ ಆಕೆಯ ನೆರವಿಗೆ ಬಂದದ್ದು ಆಕೆಯ ಅಕ್ಕ ನಾಜನೀನ್ ಶೇಖ್.

‘ಅಕ್ಕನ ಸಹಾಯದಿಂದ ಮಾರ್ಚ್‌ 2017ರಲ್ಲಿ ಬೆಂಗಳೂರಿಗೆ ಬಂದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಗೀತ ನಿರ್ದೇಶಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಹಾಗೆ ಸಿಕ್ಕವರೇ ಅರಕೆರೆಯಲ್ಲಿನ ಗುರುಕುಲ ಸ್ಕೂಲ್ ಆಫ್ ಮ್ಯೂಸಿಕ್‍ನ ಅರುಣ್ ವಿ. ಶ್ರಿನಿವಾಸ್. ಅಲ್ಲಿ ಒಂದು ವರ್ಷ ಸಂಗೀತ ಶಿಕ್ಷಕಿಯಾಗಿ ದುಡಿದೆ. ನಂತರ ಅಲ್ಲಿ ಕೆಲಸ ಬಿಟ್ಟೆ’ ಎನ್ನುತ್ತಾರೆ. ಕೆಲ ತಿಂಗಳುಗಳ ಕಾಲ ಮಕ್ಕಳ ಮನೆಗೆ ಹೋಗಿ ಸಂಗೀತ ಪಾಠ ಮಾಡಿದರು.

ನಾಲ್ಕು ತಿಂಗಳ ಹಿಂದೆ ಮೈಕೋ ಲೇಔಟ್‍ನಲ್ಲಿರುವ ಆರಾಧನಾ ಅಕಾಡೆಮಿಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇರಿಕೊಂಡ ಜನ್ನತ್ ಮಕ್ಕಳಿಗೆ ಕ್ರಿಶ್ಚಿಯನ್‌ ಹಾಡುಗಳನ್ನು ಹೇಳಿಕೊಡುತ್ತಿದ್ದಾರೆ. ಸಮಯ ಸಿಕ್ಕಾಗ ವೃದ್ದಾಶ್ರಮಗಳಲ್ಲಿ ಭಜನೆ ಹಾಡುತ್ತಾರೆ. ಫೇಸ್‍ಬುಕ್ ಮೂಲಕ ಕನ್ನಡ ಸಂಗೀತ ನಿರ್ದೇಶಕ ಕೆ. ಎಂ. ಇಂದ್ರ ಪರಿಚಯವಾದ ನಂತರ ಆಕೆಯ ಅದೃಷ್ಟ ಬದಲಾಗಿದೆ. ಆಕೆಯ ಕಲೆ, ಶ್ರಮ ಹಾಗೂ ಪ್ರತಿಭೆ ಗುರುತಿಸಿದ ಇಂದ್ರ ಅವರು ಆಕೆಯಿಂದ ‘ಐಗಿರಿ ನಂದಿನಿ’ ಹಾಡನ್ನು ಹಾಡಿಸಿ ಯೂ ಟ್ಯೂಬ್‍ಗೆ ಅಪಲೋಡ್ ಮಾಡಿದ್ದಾರೆ. ಅದು ಈಗ ವೈರಲ್ ಆಗಿದೆ.

ನಸ್ರೀನ್ ಶೇಖ್ಈ ಗ ತಮ್ಮ ಹೆಸರನ್ನು ಜನ್ನತ್‌ ನಾಸ್‌ ಎಂದು ಬದಲಾಯಿಸಿಕೊಂಡಿದ್ದಾರೆ. ಜನ್ನತ್ ಎಂದರೆ ಸ್ವರ್ಗ. ನಸ್ರೀನ್ ಹೆಸರಿನ ಮೊದಲೆರಡು ಅಕ್ಷರ ಸೇರಿಸಿ ಜನ್ನತ್ ನಾಸ್ ಎಂದು ಇಟ್ಟುಕೊಂಡೆ ಎನ್ನುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ಕೆಂಗಣ್ಣಿಗೂ ಜನ್ನತ್ ಗುರಿಯಾಗಿದ್ದಾಳೆ. ‘ನಾನು ಯಾವುದೇ ತಪ್ಪು ಕೆಲಸ ಮಾಡಿಲ್ಲ. ಸಂಗೀತವೇ ದೇವರು’ ಎಂದು ಜನ್ನತ್‌ ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಈ ಲಿಂಕ್ ಮೂಲಕ ಜನ್ನತ್ ನಾಸ್ ಹಾಡಿರುವ ‘ಐಗಿರಿ ನಂದಿನಿ’ ಹಾಡನ್ನು ನೋಡಬಹುದು- #MahishasuraMardhini #JannatNazir #AigiriNadhini

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.