ADVERTISEMENT

ಪಂಡಿತ್ ರಾಜೀವ ತಾರಾನಾಥ್‌ ನೆನಪು: ತುಂಗಾತೀರದಿಂದ ಕಾವೇರಿ ತಟಕ್ಕೆ...

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 4:11 IST
Last Updated 12 ಜೂನ್ 2024, 4:11 IST
<div class="paragraphs"><p>ರಾಜೀವ ತಾರಾನಾಥ್‌ </p></div>

ರಾಜೀವ ತಾರಾನಾಥ್‌

   

ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅ.17ರಂದು ತಾರಾನಾಥ– ಸುಮತಿಬಾಯಿ ದಂಪತಿ ಪುತ್ರರಾಗಿ ಜನಿಸಿದ ರಾಜೀವರು, ಸಂಗೀತದ ಜೊತೆಗೆ ಇಂಗ್ಲಿಷ್‌, ಉರ್ದು ಹಾಗೂ ಸಂಸ್ಕೃತ ಪಾಠಗಳನ್ನು ತಂದೆಯಿಂದಲೇ ಕಲಿತರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್‌, ಪಿಎಚ್‌ಡಿ ಪದವಿ ಪಡೆದ ನಂತರ ಮೈಸೂರು, ಧಾರವಾಡ, ಬೆಂಗಳೂರು, ಪುಣೆಯ ಕಾಲೇಜುಗಳಲ್ಲಿ ಹಾಗೂ ಹೈದರಾಬಾದ್‌ ‘ಸಿಐಇಎಫ್‌ಎಲ್‌’ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಸಾಹಿತ್ಯ ವಿಮರ್ಶಾ ವಲಯದಲ್ಲೂ ಹೆಸರು ಮಾಡಿದ್ದರು.

ಸಿಡ್ನಿಯ ಒಪೇರಾ ಹೌಸ್‌ನಲ್ಲಿ ಸಂಗೀತ ಕಛೇರಿ ನೀಡಿದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶ್ವದ ವಿವಿಧೆಡೆ ಕಛೇರಿ ನಡೆಸಿದ್ದರು. ಪಂಡಿತ್‌ ರವಿಶಂಕರ್ ಅವರೊಂದಿಗೂ ಸಂಗೀತ ಕಛೇರಿ ನೀಡಿದ್ದರು. ಯೆಮನ್‌ ದೇಶದ ಏಡನ್ ದೂರದರ್ಶನ ಕೇಂದ್ರ ಅವರ ಬಗ್ಗೆ ‘ಫಿನ್ನನ್ ಮಿನ್‌ ಅಲ್ ಹಿಂದ್‌’ ಸಾಕ್ಷ್ಯಚಿತ್ರ ನಿರ್ಮಿಸಿ ಗೌರವಿಸಿದೆ. ಕರ್ನಾಟಕ ಸರ್ಕಾರವೂ 1983ರಲ್ಲಿ ‘ಸರೋದ್‌ ಸಾಮ್ರಾಟ ಡಾ.ರಾಜೀವ ತಾರನಾಥ’ ಸಾಕ್ಷ್ಯಚಿತ್ರ ತಯಾರಿಸಿದೆ.

ADVERTISEMENT

‘ಸಂಸ್ಕಾರ’, ‘ಪಲ್ಲವಿ’, ‘ಖಂಡವಿದೆಕೋ ಮಾಂಸವಿದೆಕೋ’, ‘ಅನುರೂಪ’, ‘ಪೇಪರ್‌ ಬೋಟ್ಸ್’, ‘ಶೃಂಗಾರಮಾಸ’, ‘ಆಗುಂತಕ’, ‘ಕಾಂಚನಾ ಸೀತಾ’, ‘ಕಡವು’ ಚಲನಚಿತ್ರಗಳಿಗೆ ಸಂಗೀತ ನೀಡಿದ್ದರು. 1993ರಲ್ಲಿ ಕರ್ನಾಟಕ ಕಲಾಶ್ರೀ, 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಚೌಡಯ್ಯ ಪ್ರಶಸ್ತಿ, 2000ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, 2018ರಲ್ಲಿ ಸಂಗೀತ್ ವಿದ್ವಾನ್, ನಾಡೋಜ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ, 2019ರಲ್ಲಿ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ತಾರಾನಾಥರ ಸಂಗೀತಯಾನ

1938–42: ತಂದೆ ಪಂಡಿತ ತಾರಾನಾಥರಿಂದ ತಬಲಾ ಹಾಗೂ ಆಯುರ್ವೇದ, ಸಾವನೂರು ಕೃಷ್ಣಚಾರ್ಯ, ವೆಂಕಟರಾವ್‌ ರಾಮದುರ್ಗಕರ್‌, ಪಂಚಾಕ್ಷರಿ ಗವಾಯಿ ಅವರಿಂದ ಹಿಂದೂಸ್ಥಾನಿ ಸಂಗೀತ ಕಲಿಕೆ

1942–48: ಗ್ವಾಲಿಯರ್‌ ಘರಾನಾದ ಶಂಕರರಾವ್ ದೇವಗಿರಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಲಿಕೆ

1949: ಸೀನಿಯರ್ ಕೇಂಬ್ರಿಜ್‌ ಪರೀಕ್ಷೆಯಲ್ಲಿ ಉತ್ತೀರ್ಣ

1950–52: ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಇಂಟರ್‌ ಮೀಡಿಯಟ್‌

1953: ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಸರೋದ್‌ ಗುರು ಉಸ್ತಾದ್‌ ಅಲಿ ಅಕ್ಬರ್ ಖಾನ್ ಅವರ ಸಂಗೀತ ಕಛೇರಿ ಕೇಳಿ ಸರೋದ್‌ ಕಲಿಯಲು ನಿರ್ಧಾರ

1955: ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿ.ಎ ಇಂಗ್ಲಿಷ್‌ ಆನರ್ಸ್ ಪದವಿ. ಮೊದಲ ರ‍್ಯಾಂಕ್‌ನಲ್ಲಿ ಉತ್ತೀರ್ಣ

1955–60: ಕೋಲ್ಕತ್ತಾದಲ್ಲಿ ಅಲಿ ಅಕ್ಬರ್‌ ಖಾನ್ ಕಾಲೇಜ್‌ ಆಫ್ ಮ್ಯೂಸಿಕ್‌ನಲ್ಲಿ ಅನ್ನಪೂರ್ಣ ದೇವಿ ಅವರಿಂದ ಸರೋದ್‌ ಕಲಿಕೆ. ಅಲಿ ಅಕ್ಬರ್ ಖಾನ್ ಅವರೊಂದಿಗೆ ಹಲವು ಚಿತ್ರಗಳಿಗೆ ಕೆಲಸ

1960–62: ಮೈಸೂರಿನ ಮಹಾರಾಜ ಕಾಲೇಜಿ ನಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ

1963: ರಾಯಚೂರಿನಲ್ಲಿ ಉಪನ್ಯಾಸಕರಾಗಿ ಸೇವೆ. ಮಾಧವಿ ಅವರೊಂದಿಗೆ ವಿವಾಹ. ಪುತ್ರ ಚೇತನ್‌ ಜನನ

1964: ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಉಪನ್ಯಾಸಕ

1965–68: ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಶನ್‌ನಲ್ಲಿ ಉಪನ್ಯಾಸಕ. ಪ್ರೊ.ಸಿ.ಡಿ.ನರಸಿಂಹಯ್ಯ ಅವರ ಮಾರ್ಗದರ್ಶನ ದಲ್ಲಿ ಪಿಎಚ್‌ಡಿ ಪದವಿ ಪೂರ್ಣ

1974–81: ಹೈದರಾಬಾದ್‌ನ ಸಿಐಇಎಫ್‌ಎಲ್‌ನಲ್ಲಿ ಪ್ರಾಧ್ಯಾಪಕ

1975; ‘ಪಲ್ಲವಿ’ ಸಿನಿಮಾಕ್ಕೆ ರಾಷ್ಟ್ರೀಯ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ

1980: ಯೆಮನ್‌ನ ಏಡನ್‌ನಲ್ಲಿ ಇಂಗ್ಲಿಷ್‌ ಪ್ರಾಧ್ಯಾ‍ಪಕ

1981–82: ಪುಣೆ ಇಂಡಿಯನ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಚಿತ್ರ ಸಂಗೀತ ವಿಭಾಗದ ‍ಪ್ರಾಧ್ಯಾಪಕ

1982: ಎಲ್ಲ ಪ್ರಾಧ್ಯಾಪಕ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ, ಸರೋದ್‌ ವಾದನಕ್ಕೆ ಸಂಪೂರ್ಣ ಸಮರ್ಪಣೆ

1995–2005: ಅಮೆರಿಕದ ಲಾಸ್‌ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್ ದಿ ಪರ್ಫಾರ್ಮಿಂಗ್‌ ಆರ್ಟ್ಸ್‌ನಲ್ಲಿ ಸಂಗೀತ ಪ್ರಾಧ್ಯಾಪಕ

ಸಾಹಿತ್ಯದಲ್ಲಿ ಯಾವುದೇ ಮಾನದಂಡ ಇಲ್ಲ. ಆದರೆ ಸಂಗೀತದಲ್ಲಿ ಹಾಗಲ್ಲ. ಇಲ್ಲಿ ಪ್ರಮಾಣವಿದೆ.

ಬ್ಯಾರೆಯವ್ರ, ಹಿಂದಿನವರ ಸಂಗೀತ ಭಾಳಾ ಕೇಳ್ಬೇಕು... ಇಲ್ಲಿ ಕಿವಿಯಾಗ ಇಟ್ಟುಕೋಬೇಕು, ಕಿವಿಯಿಂದ ಸೋರಿ ಅದು ಮಿದುಳಿಗೆ ಹೋಗಬೇಕು. ಸಂಗೀತದಲ್ಲಿ ನಮ್ಮದು ಅನ್ನೋದು ಇಲ್ವೇ ಇಲ್ಲ, ಎಲ್ಲ ಹಿಂದಿನಿಂದ ಬಂದಿದ್ದು.

ಒಂದು ನದಿ ಉಗಮವಾಗಬೇಕಿದ್ದರೆ ತುಂಬ ಚಿಕ್ಕದಾಗಿರುತ್ತೆ, ಆದರೆ ಮುಂದೆ ಹರೀತಾ ಹರೀತಾ ದೊಡ್ಡದಾಗುತ್ತದೆ. ಕಾವೇರಿ ಉಗಮ ನೋಡಿ, ಚೊಂಬಿನಷ್ಟು ನೀರು ಇರುತ್ತೆ. ಆದರೆ ಮುಂದೆ ಶ್ರೀರಂಗಂನಲ್ಲಿ ಹ್ಯಾಗೆ ದೊಡ್ಡದಾಗಿದೆ. ಹಾಗೆ ರಾಗ ಸೌಖ್ಯದ ಬೇರೆ ಬೇರೆ ಪಕಳೆಗಳು ಸಿಗುತಾ ಹೋಗುತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.