ADVERTISEMENT

ಪ್ರಜಾವಾಣಿ ಸಾಧಕರು 2023 | ಅರುಣ್‌ ಕುಮಾರ್ - ನಾದದ ಬೆನ್ನೇರಿ...

ಪ್ರಜಾವಾಣಿ ವಿಶೇಷ
Published 1 ಜನವರಿ 2023, 5:17 IST
Last Updated 1 ಜನವರಿ 2023, 5:17 IST
ಅರುಣ್‌ ಕುಮಾರ್‌
ಅರುಣ್‌ ಕುಮಾರ್‌   

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು:ಅರುಣ್‌ ಕುಮಾರ್

ವೃತ್ತಿ:ವೀಣೆ ತಯಾರಿಕೆ

ADVERTISEMENT

ಸಾಧನೆ:ಕಲಾ ಸೇವೆ

ರಾಜ್ಯದಲ್ಲಿ ಹಲಸಿನ ಮರದ ದಿಮ್ಮಿಗಳನ್ನು ಕೊರೆದು ವೀಣೆ ತಯಾರಿಸುವ ಏಕೈಕ ಗ್ರಾಮವೆಂದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರ. ಈ ಊರಿನ ಹಳೆ ಚಿಗುರು ಮತ್ತು ಹೊಸ ಬೇರಿನ ನಡುವಿನ ಕೊಂಡಿಯಂತಿದ್ದಾರೆ ಅರುಣ್‌ ಕುಮಾರ್.

ಹುಟ್ಟಿದ ಹಳ್ಳಿಯಲ್ಲೇ ಮಹತ್ತರವಾದುದೇನಾದರೂ ಸಾಧಿಸಿ ದೆಹಲಿಯೇ ಇತ್ತ ತಿರುಗಿ ನೋಡುವಂತೆ ಮಾಡಬೇಕೆನ್ನುವ ಕನಸು ಹೊತ್ತ ಯುವಕ ಅವರು. ಹದವಾಗಿ ಒಣಗಿದ ಹಲಸಿನ ದಿಮ್ಮಿಗಳ ಮೇಲೆ ಅಪ್ಪ ಹಾಕುತ್ತಿದ್ದ ಉಳಿಪೆಟ್ಟುಗಳ ನಾದವೇ ಜೋಗುಳವಾಗಿ ಅವರ ಬಾಲ್ಯ ಕಳೆದಿತ್ತು.

ಬಾಲ್ಯದಲ್ಲಿ ತೊಟ್ಟಿಲಿನಿಂದಾಚೆಗೆ ಕಣ್ಣು ಬಿಟ್ಟ ಅವರಿಗೆ ಕಂಡಿದ್ದು ವೀಣೆಯ ಮೇಲೆ ಅಪ್ಪ ಬಿಡಿಸುತ್ತಿದ್ದ ಚಿತ್ತಾರಗಳು. ಬಿ.ಎ ಪದವಿ ಬಳಿಕ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ಕಾರ್ಖಾನೆಯೊಂದರಲ್ಲಿ ಕೆಲ ಸಮಯ ಕಾರ್ಮಿಕರಾಗಿ ದುಡಿದರು. ಮರದ ಪೆಟ್ಟಿನ ಏಟಿಗೆ ಶ್ರುತಿಯಾಗಿದ್ದ ಕಿವಿಗಳಿಗೆ ಕಾರ್ಖಾನೆಯ ಸದ್ದು ಒಗ್ಗಲಿಲ್ಲ. ಮತ್ತೆ ಮನೆಗೆ ಹಿಂದಿರುಗಿ ಅಪ್ಪನೊಂದಿಗೆ ನಿಂತರು. ಈಗ ಸ್ವತಂತ್ರವಾಗಿ ವೀಣೆ ತಯಾರಿಸುವಷ್ಟು ಕುಶಲಮತಿಯಾಗಿದ್ದಾರೆ.

ಸಿಂಪಾಡಿಪುರಕ್ಕೆ ವೀಣೆ ತಯಾರಿಕೆ ವಿದ್ಯೆ ತಂದ ಪೆನ್ನೋಬಳಯ್ಯ ಅವರ ಪ್ರಿಯಶಿಷ್ಯ ನಾಗಯ್ಯ ತಮ್ಮ ವಿದ್ಯೆಯನ್ನು ಅರುಣ್‌ ಕುಮಾರ್‌ಗೆ ಧಾರೆ ಎರೆದಿದ್ದಾರೆ. ವೀಣೆ ತಯಾರಿಕೆಯು ಸೂಕ್ಷ್ಮ ಕಸುಬು. ಅಪ್ಪನೇ ಗುರುವಾದರೂ ಎಲ್ಲರಿಗೂ ಅದರ ಕಲಿಕೆಯ ಪಟ್ಟುಗಳು ದಕ್ಕುವುದು ಸುಲಭ ಸಾಧ್ಯವಿಲ್ಲ. ಆದರೆ, ಅವರಿಗೆ ಮನೆಯಲ್ಲಿ ವಿದ್ಯೆಯೂ ಇದೆ; ಶ್ರದ್ಧೆಯೂ ಇದೆ. ಹೀಗಾಗಿಯೇ ವೀಣೆ ತಯಾರಿಕೆ ಎಂಬ ಕುಶಲ ಕಲೆಯು ತಲೆಮಾರುಗಳನ್ನು ದಾಟಿ ಮುಂದುವರಿದಿದೆ.

‘ಅಪ್ಪನಷ್ಟು ಚೆನ್ನಾಗಿ ಕಲೆ ಒಲಿಸಿಕೊಂಡರೆ ಸಾಕು’ ಎಂಬುದು ಅವರ ಮನದ ಮಾತು.

‘ವೀಣೆ ತಯಾರಿಸೋದು ಅಂದ್ರೆ ಸುಮ್ಮನೆ ಅಲ್ಲ. ತಾಯಿ ಶಾರದೆಯ ಕೃಪೆ ಬೇಕು ಸರ್...’ ಎನ್ನುವ ಅವರಿಗೆ ಪುಟಾಣಿ ವೀಣೆಗಳನ್ನು ಸಂಗ್ರಹಿಸುವ ಹವ್ಯಾಸವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.