ಶುಜಾತ್ ಖಾನ್‍ರವರು, ಅಪ್ರತಿಮ ಸಿತಾರ್ ವಾದಕ-ದೈತ್ಯ ಪ್ರತಿಭೆ, ಪಂ.ವಿಲಾಯತ್ ಖಾನ್‍ರ ಮಗ. ತಂದೆಯ ಕಠಿಣವಾದ ತರಬೇತಿಯಲ್ಲಿ ವಿದ್ಯಾರ್ಜನೆ ಮಾಡಿ, ತನ್ನದಾದ ಒಂದು ಸಣ್ಣ ‘ಜಾಗ-ಸ್ಥಾನ’ಕ್ಕಾಗಿ ಜೀವನವಿಡೀ ಹೋರಾಡಿದವರು. ಈ ಬೈಠಕ್‌ನಲ್ಲಿ ತಮ್ಮ ಬದುಕಿನ ಪುಟಗಳನ್ನೇ ತೆರೆದಿಟ್ಟಿದ್ದಾರೆ ಖಾನ್ ಸಾಹೇಬರು...
ಸಂ ಗೀತಗಾರರನ್ನು ಸಂಗೀತದ ಮೂಲಕ ಮಾತ್ರ ನೋಡಿ, ಅರ್ಥೈಸಿಕೊಳ್ಳುವ ಪರಿಪಾಟ ನಮ್ಮಲ್ಲಿದೆ. ಸಂಗೀತಗಾರರ ಆಂತರ್ಯವನ್ನು, ಸಂಗೀತದ ಕುರಿತ ಅವರ ಚಿಂತನೆ, ಅವರು ಅಭ್ಯಾಸ ಮಾಡಿದ ಕ್ರಮವನ್ನು, ಇಂದಿನ ಸಂಗೀತದ ಕುರಿತ ಅವರ ಅನಿಸಿಕೆಯನ್ನು ನೇರವಾಗಿ ಅವರಿಂದಲೇ ಕೇಳಿ ತಿಳಿಯುವ ಕಾರ್ಯಕ್ರಮ ಪಂ.ಅರವಿಂದ ಪಾರೀಖ್ ಅವರು ನಡೆಸುವ ‘ಬೈಠಕ್ ಸರಣಿ’.
ಪಂ.ಅರವಿಂದ ಪಾರೀಖ್, ಉಸ್ತಾದ್ ವಿಲಾಯತ್ ಖಾನ್ ಅವರ ಹಿರಿಯ ಶಿಷ್ಯರು, ಉಸ್ತಾದರ ಒಡನಾಡಿಗಳಾಗಿದ್ದವರು. ಚಿಂತನಶೀಲ ಸಂಗೀತಗಾರರಾದ ಇವರು, ತಮ್ಮ ಇಳಿವಯಸ್ಸಿನಲ್ಲಿ ಮುಂಬೈಯ ತಮ್ಮ ನಿವಾಸದಲ್ಲಿ ವಿದ್ಯಾರ್ಥಿ ಬಳಗ ಹಾಗೂ ಕೆಲವು ಆಹ್ವಾನಿತ ಶ್ರೋತೃಗಳ ಮುಂದೆ, ಸಂಗೀತ ಕಲಾವಿದರನ್ನು ಮಾತು-ಸಂಗೀತದ ಮೂಲಕ ಅನಾವರಣಗೊಳಿಸುವ ಅಪರೂಪದ ‘ಬೈಠಕ್’ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಈ ಎಲ್ಲ ಬೈಠಕ್ ಸರಣಿಗಳು ಯುಟ್ಯೂಬ್‍ನಲ್ಲಿ ಲಭ್ಯವಿವೆ.
ಈ ‘ಬೈಠಕ್’ ಮಾಲಿಕೆಯಲ್ಲಿ, ಪಂ.ಅಜಯ್ ಚಕ್ರವರ್ತಿ, ಪಂ.ಉಲ್ಲಾಸ್ ಕಶಾಲ್‍ಕರ್, ಪಂ.ಅನಿಂದೊ ಚಟರ್ಜಿ, ಪಂ.ಯೋಗೇಶ್ ಸಂಶಿ ಮುಂತಾದವರೆಲ್ಲಾ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಈ ಸರಣಿಯಲ್ಲಿ ತಮ್ಮ ಮನಸಿನಾಳದ ಮಾತು ಹಾಗೂ ಸಂಗೀತದ ಮೂಲಕ ನಮ್ಮನ್ನು ಹಿಡಿದಿಟ್ಟು, ಕ್ಷಣಕಾಲ ಸ್ತಬ್ಧರನ್ನಾಗಿಸಿದ್ದು ಉಸ್ತಾದ್ ಶುಜಾತ್ ಖಾನ್.
ಶುಜಾತ್ ಖಾನ್‍ರವರು, ಅಪ್ರತಿಮ ಸಿತಾರ್ ವಾದಕ-ದೈತ್ಯ ಪ್ರತಿಭೆ, ಪಂ.ವಿಲಾಯತ್ ಖಾನ್‍ರ ಮಗ. ಬಹು ಗೌರವಾನ್ವಿತವಾದ ಇಮ್ದಾದ್ ಖಾನಿ ಘರಾಣೆಯ ಪ್ರತಿನಿಧಿಗಳಾಗಿ, ವಿಶ್ವವಿಖ್ಯಾತರಾಗಿ, ಅತ್ಯಂತ ಶ್ರೀಮಂತ ವಿಲಾಸಿ ಜೀವನ ನಡೆಸಿ, ಬಾಳಿದ ವಿಲಾಯತ್ ಖಾನ್‌ರಂಥ ಬೃಹದಾಕಾರದ ಆಲದಮರದ ಆಶ್ರಯದಲ್ಲಿ ಹುಟ್ಟಿಕೊಂಡ ವೃಕ್ಷ, ಶುಜಾತ್ ಖಾನ್. ಸಣ್ಣ ವಯಸ್ಸಿನಲ್ಲೇ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡು, ತಂದೆಯ ಕಠಿಣವಾದ ತರಬೇತಿಯಲ್ಲಿ ವಿದ್ಯಾರ್ಜನೆ ಮಾಡಿ, ತನ್ನದಾದ ಒಂದು ಸಣ್ಣ ‘ಜಾಗ-ಸ್ಥಾನ’ಕ್ಕಾಗಿ ಜೀವನವಿಡೀ ಹೋರಾಡಿದವರು.
ತಾವು ಬಹುವಾಗಿ ಆದರಿಸುವ, ‘ಚಾಚಾ’ ಎಂದೇ ಸಂಬೋಧಿಸುವ ಪಾರೀಖ್ ಅವರ ಸಮಕ್ಷಮದಲ್ಲಿ ತಮ್ಮ ಹಿಂದಣವನ್ನು ನಿರ್ಲಿಪ್ತತೆಯಿಂದ, ನಿರ್ಭಾವುಕತನದಿಂದ ನೋಡಿ, ತಮ್ಮ ಜೀವನದಿಂದ ತಾವೇ ಹೊರಗುಳಿದು- ನೋಡಿ, ವಿವೇಚಿಸುವ ಪ್ರಯತ್ನವನ್ನು ಶುಜಾತ್ ಮಾಡಿದ್ದಾರೆ. ಈ ವಿಚಾರದಿಂದಾಗಿಯೇ ನಮಗವರು ಹತ್ತಿರವಾಗುತ್ತಾರೆ.
ಉದ್ದಕ್ಕೂ ಮುಖಾಮುಖಿಯಾದ ದ್ವಂದ್ವ, ಪ್ರಶ್ನೆಗಳನ್ನು ಎದುರಿಸುತ್ತಾ, ಯಾವ ಸಂದರ್ಭದಲ್ಲೂ ತಮ್ಮ ಸಂಗೀತ ಹಾಗೂ ವ್ಯಕ್ತಿತ್ವ ಜೊಳ್ಳಾಗದಂತೆ ಸಾಂಗೀತಿಕವಾಗಿ, ತಾತ್ವಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಶುಜಾತ್ ಖಾನ್‍ರವರು ನೆಲೆಯಾದ ರೀತಿ ಅದ್ಭುತವೆನಿಸುತ್ತದೆ. ಇತಿಹಾಸವನ್ನು ಅವಲೋಕಿಸಿದಾಗ ಮಹಾತ್ಮರೆನಿಸಿದ ಗಾಂಧೀಜಿಯ ಮಗನಾದ ಹರಿಲಾಲ, ಕುಮಾರ ಗಂಧರ್ವರ ಅಸಾಧಾರಣ ಪ್ರತಿಭಾವಂತ ಮಗ ಮುಕುಲ್ ಶಿವಪುತ್ರ ಇವರೆಲ್ಲರೂ ತಮ್ಮ ಮೇಲೆ ಚಾಚಿರುವ ನೆರಳಿನಿಂದ ಹೊರಬಂದು ಬೇರೂರಲು ಹೆಣಗಾಡಿದ್ದನ್ನು ಕಾಣಬಹುದು. ಹೀಗೆ ತಮ್ಮ ನೆಲೆಗಾಗಿ ಹೋರಾಡಿದವರು ಹಲವರಿದ್ದರೂ ಈ ಹೋರಾಟದಲ್ಲಿ ತಮ್ಮನ್ನು ಕಳೆದುಕೊಳ್ಳದೆ, ಪಡೆದವರು ಮಾತ್ರ ಕೆಲವರೇ ಎಂದೆನ್ನಬಹುದು. ಶುಜಾತ್, ಅವರಲ್ಲೊಬ್ಬರು.
ಪಾರೀಖ್ ಅವರು ಕೇಳಿದ ಪ್ರಶ್ನೆಗಳಿಗೆ ಶುಜಾತ್ ಕೊಟ್ಟ ಉತ್ತರಗಳಲ್ಲಿನ ಪ್ರಮುಖವಾದ ಅಂಶಗಳನ್ನು ಇಲ್ಲಿ ಅವರದೇ ಮಾತಿನಲ್ಲಿ ಅವಲೋಕಿಸಬಹುದು.
ಬಾಲ್ಯದ ಬಗ್ಗೆ, ತಮ್ಮ ಪೂರ್ವಜರಿಂದ ಬಂದ ವಾದನ ಶೈಲಿಯನ್ನು ಅಭ್ಯಾಸ ಮಾಡಿದ ರೀತಿಯ ಕುರಿತು ಹೇಳಿ…
ನಮ್ಮ ಘರಾಣೆಯ ಹುಟ್ಟು, ವಿಶೇಷಗಳ ಕುರಿತು ಮಾತನಾಡುವಷ್ಟು ನಾನು ದೊಡ್ಡವನಲ್ಲವಾದರೂ, ತಂದೆಯ ನುಡಿಸುವಿಕೆ ಬಹಳ ಶ್ರೇಷ್ಠವಾದದ್ದು ಎಂದು ಹೇಳಬಲ್ಲೆ. ನಮ್ಮ ದೇಶದಲ್ಲಿ ಪಂ.ರವಿಶಂಕರ್ ಹಾಗೂ ಉಸ್ತಾದ್ ವಿಲಾಯತ್ ಖಾನ್‍ರ ಶೈಲಿಗಳು ಬಹುಮಾನ್ಯತೆ ಪಡೆದವು. ನಾನು ಯಾವ ಪರಂಪರೆಗೆ ಸೇರಿದ್ದೇನೋ ಅದರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ.
ನಾನು, ವಿಲಾಯತ್ ಖಾನರ ಮಗನಾದ ಬಗ್ಗೆ ನನ್ನಲ್ಲಿ ಏನು ವಿಚಾರವಿದೆ ಎಂಬುದನ್ನು ಜಗತ್ತು ಅರಿತಿಲ್ಲ. ಹುಟ್ಟಿನಿಂದ ನನ್ನ ಬಾಯಿಯಲ್ಲಿದ್ದ ಚಿನ್ನದ ಚಮಚ ಅಷ್ಟೇ ಎಲ್ಲರೂ ನೋಡಿದ್ದಾರೆ. ಅದರಲ್ಲಿದ್ದದ್ದು ಜೇನೋ ಅಥವಾ ಕಹಿಯೋ ಎಂಬುದು ಯಾರಿಗೂ ಗೊತ್ತಿಲ್ಲ. ತಂದೆ ನನಗೆ ಬೆಳಗ್ಗೆ 4 ಗಂಟೆಗೆ ಎಬ್ಬಿಸಿ ಪಾಠ ಹೇಳುತ್ತಿದ್ದರು. ಆಮೇಲೆ ಶಾಲೆ ಇತ್ಯಾದಿ. ನನ್ನ ಬಾಲ್ಯ 6 ವರ್ಷಕ್ಕೆ ಮುಗಿದುಹೋಯಿತು. ಆ ಸಮಯದಲ್ಲಿ ನಾವು ಮುಂಬೈನಿಂದ ಶಿಮ್ಲಾಕ್ಕೆ ಹೋದೆವು. ಅಲ್ಲಿ ಒಂಟಿಯಾದ ಬಹುದೊಡ್ಡ ಬಂಗಲೆ, ಆಳುಕಾಳುಗಳು, 4, 5 ದೊಡ್ಡ ಕಾರುಗಳು, ಮನೆಗೆ ಬರುವ ದೊಡ್ಡ ದೊಡ್ಡ ಕಲಾವಿದರು, ಉಸ್ತಾದರ ವಿದೇಶಿ ಪ್ರಯಾಣಗಳು ಇವೆಲ್ಲವು ಇದ್ದರೂ ಒಬ್ಬಂಟಿತನವಿತ್ತು. ಸಂಗೀತವನ್ನು ಬಿಟ್ಟರೆ, ಹೊರಗಿನ ಪ್ರಪಂಚದ ಜೊತೆ ಸಂಪರ್ಕವಿರಲಿಲ್ಲ. ಈಗಿನಂತೆ ಆಗ ದಿನಪತ್ರಿಕೆ, ರೇಡಿಯೊ, ಟಿ.ವಿ, ಇಂಟರ್ನೆಟ್ ಏನೂ ಇರಲಿಲ್ಲ, ಸ್ವಲ್ಪ ರಿಲಾಕ್ಸ್ ಎಂದರೆ ಉಸ್ತಾದರು ನುಡಿಸುವ, ಪೀಲೂ, ಪಹಾಡಿ ಥರದ ಹಗುರವಾದ ರಾಗಗಳಷ್ಟೆ.
ಬೆಳೆದಂತೆ, ವಿಲಾಯತ್ ಖಾನರ ಮಗ ಎನ್ನುವ ಛಾಯೆ ಎಷ್ಟು ದಟ್ಟವಾಗಿ ಕಾಡಿತೆಂದರೆ, ನಾನು ಕಾಲೂರಿ ಬದುಕುವುದೂ ಕಷ್ಟವಾಗಿತ್ತು. ಎಲ್ಲಾದರೂ ಹೋಗಿ, ನನಗೆ ಒಂದಾದರೂ ಕಾರ್ಯಕ್ರಮ ಕೊಡಿ ಎಂದು ಕೇಳಿದಾಗಲೂ ‘ನಿನಗೆ ಯಾಕಪ್ಪಾ ಕಾರ್ಯಕ್ರಮ, ವಿಲಾಯತ್ ಖಾನರ ಮಗ ನೀನು’ ಅನ್ನುವ ಪ್ರತಿಕ್ರಿಯೆಯೇ ಬರುತ್ತಿತ್ತು. ನಾನೂ, ನನ್ನ ಜೀವನವನ್ನು ಎಲ್ಲರಂತೆ ಶುರುವಿನಿಂದಲೇ ಆರಂಭಿಸುವುದು ಸಾಧ್ಯವಾಗುತ್ತಿರಲಿಲ್ಲ’. ‘ನಿಮ್ಮ ತಂದೆ ಎಂಥ ಝಿಂಝೋಟಿ ಕೇಳಿಸಿದ್ದರು, ಅದನ್ನೇ ಒಮ್ಮೆ ಕೇಳಿಸಿಬಿಡು’ ಎನ್ನುವ ನಿರೀಕ್ಷೆ, ನನ್ನಿಂದ ನನ್ನ ಬದುಕನ್ನು ಕಸಿದುಕೊಳ್ಳುವಂಥವಾಗಿದ್ದವು. ನನಗೆ ನನ್ನ ತಂದೆ ಬಗ್ಗೆ ಅಪಾರವಾದ ಗೌರವವಿದೆ. ಅವರು ನನಗೆ ಪರಂಪರೆ ಕೊಟ್ಟಿದ್ದಾರೆ, ರಕ್ತ ಕೊಟ್ಟಿದ್ದಾರೆ, ವಿದ್ಯೆ ಕೊಟ್ಟಿದ್ದಾರೆ. ಆದರೆ, ಅದನ್ನು ಬಳಸಿಕೊಂಡು ನಾನು ಏನು ಮಾಡಿದ್ದೇನೆ ಅನ್ನುವುದನ್ನು ಯಾರಾದರೂ ಗಮನಿಸಲಿ ಅನ್ನುವುದು ನನ್ನ ಕೋರಿಕೆ.
ಇಂದಿನ ತಲೆಮಾರು ಹಾಗೂ ನಮ್ಮ ಘರಾಣೆಯ ಭವಿಷ್ಯವನ್ನು ಹೇಗೆ ಕಾಣುವಿರಿ?
ಇತ್ತೀಚಿಗಿನ 4, 5 ವರ್ಷಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತದೆಡೆ ಬರುತ್ತಿದ್ದಾರೆ. ಇದು ಒಳ್ಳೆಯ ಸೂಚನೆ. ನಾನು ಸುಮಾರು 20 ವಿದ್ಯಾರ್ಥಿಗಳಿಗೆ ಸಿತಾರ್ ಕಲಿಸುತ್ತಿದ್ದೇನೆ. ನೀವೂ (ಪಾರೀಖ್ ಅವರು) 30ಕ್ಕೂ ಜಾಸ್ತಿ ವಿದ್ಯಾರ್ಥಿಗಳನ್ನು ಹೊಂದಿದ್ದೀರಿ. ಅವರೆಲ್ಲರೂ ಪ್ರತಿಭೆ ಹೊಂದಿದ್ದಾರೆ. ಅವರಿಗೆ ಬೇಕಾದ ವಿಚಾರಗಳು ನಮ್ಮಿಂದ ಸಿಗುತ್ತಿವೆ. ಒಳಗಿನ ‘ಬೆಂಕಿ’ ಉರಿದು ಹೊರಬರಲು ಒಂದು ಗಳಿಗೆ ಬರಬೇಕಷ್ಟೆ. ಆ ಗಳಿಗೆ, ಯಾರಲ್ಲಿ ಬೇಕಾದರೂ ಯಾವಾಗ ಬೇಕಾದರೂ ಬರಬಹುದು. ಹಾಗೆ ಆಗಿಯೇ ಆಗುತ್ತದೆ. ಒಳಗಿನಿಂದ ಅನಿಸಿ, ಸ್ಫೂರ್ತಿ ಆಂತರಿಕವಾಗಿ ಬಂದಾಗ ಒಳ್ಳೆಯ ಕಲಾವಿದನು ಹುಟ್ಟುತ್ತಾನೆ. ಎಷ್ಟೊಂದು ವಿದ್ಯೆ ಕಲಿತು ರಾಶಿ ಹಾಕಿದರೂ,ಅದಕ್ಕೆ ಬೇಕಾದ ರಿಯಾಜ್ ಇಲ್ಲವಾದಲ್ಲಿ, ಕಲಾವಿದನಾಗಲು ಸಾಧ್ಯವಿಲ್ಲ.
ಸಂಗೀತಕ್ಕೆ ಖಂಡಿತಾ ಭವಿಷ್ಯವಿದೆ. ಇನ್ನು ನಮ್ಮ ಘರಾಣೆಯ ಬಗ್ಗೆ ಹೇಳುವುದಾದರೆ, ನನ್ನ ಮಕ್ಕಳು ಯಾರೂ ಸಂಗೀತಕ್ಕೆ ಬಂದಿಲ್ಲ. ಯಾರೆಲ್ಲಾ ನಮ್ಮ ಬಳಿ ಕಲಿಯುತ್ತಿದ್ದಾರೋ ಅವರೆಲ್ಲರೂ ನಮ್ಮ ಮಕ್ಕಳೇ, ನಮ್ಮ ಪರಂಪರೆಯನ್ನು ಮುಂದುವರಿಸುವವರೇ.
(ಮಾತಿನ ನಡುವಿನಲ್ಲಿ ಶುಜಾತ್ ಅವರು ರಾಗ ಯಮನ್‌ನಲ್ಲಿ ಆಲಾಪ್, ಜೋಡ್, ಝಾಲಾ, ಗತ್‌ಗಳನ್ನು ಬಹು ಸುಂದರವಾಗಿ ನುಡಿಸಿದರು. ಆ ಬಳಿಕ-) ಈಗ ನಾನು ಏನು ನುಡಿಸಿದೆ, ಅದು ಮ್ಯಾಜಿಕ್ ಅಲ್ಲ, ನಿಮಗೂ ಇದು ಸಾಧ್ಯವಿದೆ. ಆ ಸಮಯ ಬರುವವರೆಗೆ ಒಳಗಿನ ಜಿದ್ದನ್ನು ಜೀವಂತವಾಗಿಟ್ಟುಕೊಳ್ಳಬೇಕು. ಒಂದು ರಾಗದ ಮೂಲಕ ವಾತಾವರಣ (ಮೊಹಲ್) ನಿರ್ಮಾಣವಾಗುವ ಬಗೆ ಒಲಿಯಬೇಕಷ್ಟೆ.
ನನ್ನ ನುಡಿಸುವಿಕೆಯನ್ನು ನೀವೆಲ್ಲಾ ಕೇಳಿದಿರಿ. ನನ್ನದು ‘ಮಧ್ಯದ ದಾರಿ’, ಜಾಸ್ತಿ ತಂತ್ರಕಾರಿಗೂ ಹೋಗದ, ಬಹಳ ಸೀದಾವೂ ಅಲ್ಲದ, ಎರಡರ ಮಿಶ್ರಿತ ಶೈಲಿಯನ್ನು ಮಾಡಬಯಸುತ್ತೇನೆ. ನುಡಿಸುವ ಮೂಡ್‌ನಲ್ಲಿ ಎಲ್ಲಾದರೂ ಒಂದು ಕಡೆ ತಿಹಾಯ್ ಮೂಡಿದರೆ, ನುಡಿಸುತ್ತೇನೆ. ಇಲ್ಲವಾದಲ್ಲಿ ಆ ಗಳಿಗೆಯ ಸೃಷ್ಟಿ ಕಾರ್ಯದಲ್ಲಿ ಮುಳುಗಿ ‘ಆಮದ್’ ಮೂಲಕ ರಾಗವನ್ನು ಬೆಳೆಸುತ್ತೇನೆ. ತಯಾರಿಸಿಟ್ಟುಕೊಂಡಿದ್ದ ತಿಹಾಯ್ ನುಡಿಸುವುದಾದರೆ, ಶ್ರೋತೃಗಳು ಕಾರ್ಯಕ್ರಮಕ್ಕೆ ಯಾಕೆ ಬರಬೇಕು? ಅವರನ್ನೂ ಸೃಷ್ಟಿಕಾರ್ಯದ ಭಾಗವಾಗಿಸುತ್ತಾ ನಾವು ಮುಂದೆ ಸಾಗುವಲ್ಲೇ ಭಾರತೀಯ ಸಂಗೀತದ ಹೆಚ್ಚುಗಾರಿಕೆ ಇದೆ.
ಇಂದು ಎಲ್ಲಾ ಕಡೆ ಪ್ರಸಿದ್ಧವಾಗುತ್ತಿರುವ ಫ್ಯೂಷನ್ ಸಂಗೀತದ ಕುರಿತು ಹೇಳುವಿರಾ?
ಫ್ಯೂಷನ್ ಸಂಗೀತವನ್ನು ನುರಿತ ಕಲಾವಿದರು ನುಡಿಸಿದಾಗ ಅದೂ ಆನಂದವನ್ನು ಕೊಡುತ್ತದೆ. ಸಾಧಾರಣ ಸಂಗೀತಗಾರರು ನುಡಿಸಿದಾಗ ಹಿಂಸೆಯಾಗುತ್ತದೆ. ಮುಖ್ಯವಾಗಿ ಫ್ಯೂಷನ್‌ನಲ್ಲಿ, ಮೆಲೊಡಿಗಿಂತ (ಮಾಧುರ್ಯ) ಜಾಸ್ತಿ ರಿದಂಗೆ(ಲಯ) ಪ್ರಾಮುಖ್ಯತೆ ಇರುತ್ತದೆ. ಅದು, ಮಾಧುರ್ಯದ ಮೇಲೆ ದಾಳಿ ಮಾಡಿದಂತಿರುತ್ತದೆ. ಇಲ್ಲಿ ಶ್ರೋತೃಗಳಿಗೆ ಒಳ್ಳೆಯದು ಕೆಟ್ಟದ್ದರ ಮಧ್ಯದ ಅಂತರವನ್ನು ಗುರುತಿಸಲು ಸಾಧ್ಯವಾಗದು. ಒಂದು ಹಂತದ ಕಲಿಕೆಯ ನಂತರ, ಇನ್ನು ಮುಂದೆ ತಮಗೆ ಗಂಭೀರವಾಗಿ ಸಂಗೀತ ಮುಂದುವರಿಸಲಾಗದು, ಕಲಿತ ಎಲ್ಲರಿಗೂ ಇಲ್ಲಿ ಅವಕಾಶಗಳು ಬೇಕಷ್ಟಿಲ್ಲ ಎಂಬುದು ಅರಿವಾದಾಗ ಸಾಮಾನ್ಯವಾಗಿ, ಹೊಟ್ಟೆಪಾಡಿಗಾಗಿಯೋ, ಅವಕಾಶಗಳನ್ನು ಮಾಡಿಕೊಳ್ಳಲೋ ಯುವಜನತೆ ಫ್ಯೂಷನ್ ಮೊರೆಹೋಗುತ್ತಾರೆ.
***
ತಮ್ಮ ಮಾತಿನುದ್ದಕ್ಕೂ ಅತ್ಯಂತ ಸಹಜತೆ, ಸರಳತೆಯಿಂದ ಹಾಗೂ ಮಾತಿನಲ್ಲಿನ ಪ್ರಾಮಾಣಿಕತೆಯಿಂದ ಶುಜಾತ್ ಆಪ್ತರಾಗುತ್ತಾರೆ. ತಮ್ಮ ಮಾತನ್ನು ‘ಆಯಿಲ್ ಪೇಂಟಿಂಗ್ ಹಾಗೂ ಸಂಗೀತಗಾರರನ್ನು ದೂರದಿಂದ ಮಾತ್ರ ನೋಡಬೇಕು’ ಎನ್ನುವ ವಾಕ್ಯದಿಂದ ಆರಂಭಿಸಿದ ಅವರು, ಇವೆರಡನ್ನು ಹತ್ತಿರದಿಂದ ನೋಡಿದಾಗ ಅದರ ಸೃಷ್ಟಿಯ ಹಿಂದಿನ ಯಾತ್ರೆಯ ಗೆರೆಗಳೆಲ್ಲಾ ಗೋಚರವಾಗುತ್ತವೆ. ಅದಕ್ಕಾಗಿಯೇ ಸಂಗೀತವನ್ನು ಕೇಳಿ ಆನಂದಿಸಿ ಹೊರಟು ಹೋಗಬೇಕು ಅನ್ನುವ ಮಾತು ಚಾಲ್ತಿಯಲ್ಲಿದೆ ಎನ್ನುತ್ತಾರೆ. ತಮ್ಮ ಮಾತಿನುದ್ದಕ್ಕೂ ಅವರು ಮತ್ತೆ ಮತ್ತೆ ಹೇಳಿದ್ದು, ‘ನನಗೆದುರಾದ ಸನ್ನಿವೇಶಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಾ ಕಲಾವಿದನಾದೆ, ಎಲ್ಲೂ ವಿರೋಧಿಸಿ ಹೋರಾಡಲಿಲ್ಲ’ ಎಂಬುದನ್ನು. ‘ಉಸ್ತಾದರ ಜೊತೆಗೆ ಇನ್ನು ಸ್ವಲ್ಪ ಕಾಲ ಇದ್ದಿದ್ದರೆ ನಾನು ಇನ್ನೂ ಏನೋ ಆಗಿರಬಹುದಿತ್ತೇನೋ, ಆದರೆ ಆ ಸನ್ನಿವೇಶ ಹಾಗಿತ್ತು. ಎಲ್ಲರಿಗೂ ಒಂದಲ್ಲ ಒಂದು ಅಂಥ ಸನ್ನಿವೇಶ ಜೀವನದಲ್ಲಿ ಎದುರಾಗುತ್ತದೆ. ಜಗತ್ತು ನನ್ನನ್ನು ಯಾವ ಜಾಗದಲ್ಲಿ ನೋಡಬಯಸುತ್ತದೆಯೋ, ಅಲ್ಲಿ ನಾನು ಇರಲಾರೆ. ನನಗೆ ಬೇಕಾದದ್ದು ಒಂದು ಸ್ವಲ್ಪ ಪ್ರೀತಿ, ಆತ್ಮೀಯತೆ. ಅದನ್ನು ಅರ್ಥಮಾಡಿಕೊಂಡರೆ ಸಾಕು. ಒಳ್ಳೆಯ ಸಂಗೀತವನ್ನೇ ಕೇಳಿಸುತ್ತೇನೆ’ ಎನ್ನುವ ಶುಜಾತ್ ಖಾನ್ ನಿಷ್ಕಳಂಕ ನಗುವಿನೊಂದಿಗೆ ಮನಸ್ಸನ್ನು ಬಿಚ್ಚಿಡುತ್ತಾರೆ, ನಮ್ಮನ್ನು ತಟ್ಟುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.