ADVERTISEMENT

ತಿಳಿ ನೀಲದಲ್ಲಿ ತಾ ಲೀನವಾಗಿ...

ಸುಗಮ ಸಂಗೀತದ ಚೇತನವಾಗಿದ್ದ ಸುಬ್ಬಣ್ಣ ಉಳಿಸಿದ ನೆನಪು ಅಪಾರ

ಮಾಲತಿ ಶರ್ಮಾ
Published 12 ಆಗಸ್ಟ್ 2022, 20:53 IST
Last Updated 12 ಆಗಸ್ಟ್ 2022, 20:53 IST
   

‘ಆರ್‌ ಯೂ ಸಿಂಗರ್‌’ ಎಂಬ ಪ್ರಶ್ನೆ ಬಂದಿದ್ದೇ ತಡ, ‘ಕೋಡಗನ ಕೋಳಿ ನುಂಗಿತ್ತಾ...’ ಹಾಡನ್ನು ಹಾಡಿಯೇಬಿಟ್ಟರವರು. ಚೆನ್ನೈನ ಅಮೆರಿಕ ವೀಸಾ ಕಚೇರಿಯ ಅಧಿಕಾರಿಗಳಿಗೆ ಹಾಡಿನಲ್ಲೇ ಉತ್ತರಿಸಿದ್ದರು ಸುಬ್ಬಣ್ಣ.

ಫೀನಿಕ್ಸ್‌ನಲ್ಲಿ 1998ರಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಮುನ್ನ ವೀಸಾ ಪರಿಶೀಲನೆ ಸಂದರ್ಭ ನಡೆದ ಘಟನೆ ಇದು.

ಸುಬ್ಬಣ್ಣ ಅಂದರೆ ಹಾಗೆಯೇ. ಅವರು ಮರೆತುಹೋಗುವುದಂತೂ ಸಾಧ್ಯವೇ ಇಲ್ಲ. ‘ಏನಮ್ಮಾ ತಂಗೀ... ಮನೆ ಕಡೆ ಬಂದೇ ಇಲ್ವಲ್ಲಮ್ಮಾ... ಊಟ ಹಾಕಿಸ್ತೀನಿ ಅಂದವಳು ಕರೀಲೇ ಇಲ್ವಲ್ಲಮ್ಮಾ? ಗಸಗಸೆ ಪಾಯಸ ಮಾಡು. ಆದ್ರೆ, ನಮ್ಮ ಶಾಂತೂಗೆ (ಶಾಂತಮ್ಮ, ಸುಬ್ಬಣ್ಣ ಅವರ ಪತ್ನಿ) ಹೇಳ್ಬೇಡ, ಆಯ್ತಾ. ಗೊತ್ತಾದರೆ ನನಗೆ ಶುಗರ್‌ ಇದ್ದೂ ಪಾಯಸ ತಿಂದೆ ಅಂತ ಕೋಪಿಸ್ಕೊಳ್ತಾಳೆ...’ ಅಂತೆಲ್ಲ ಹೇಳೋರು.

ADVERTISEMENT

ಇಂಥ ಅದೆಷ್ಟೋ ಕಕ್ಕುಲಾತಿಯ, ಆಪ್ತತೆಯ, ಮಗುವಿನ ಮುಗ್ಧತೆಯ ಮಾತುಗಳು ಸುಬ್ಬಣ್ಣ ಅವರಿಂದ ಕೇಳಿದ್ದಿದೆ. ಹಾಗಾಗಿ ನಾವೆಲ್ಲರೂ ಒಂದೇ ಮನೆಯವರಾಗಿಬಿಟ್ಟಿದ್ದೆವು. ತುಂಬಾ ವಿಶ್ವಾಸಿ. ಈ ಮಲೆನಾಡಿಗರ ವ್ಯಕ್ತಿತ್ವವೇ ಹಾಗೆಯೇ ಏನೋ. ತುಂಬಾ ಹಚ್ಚಿಕೊಂಡುಬಿಟ್ಟಿದ್ದರು.

ಹಾಡಿನ ಸಾಹಿತ್ಯಕ್ಕೆ ತಕ್ಕಹಾಗೆ ರಾಗ ಸಂಯೋಜನೆ ಮತ್ತು ಗಾಯನ, ಅದರಲ್ಲೊಂದು ಸಹಜತೆ ಸುಬ್ಬಣ್ಣನವರ ವೈಶಿಷ್ಟ್ಯ. ಶರೀಫರ ಗೀತೆಗಳಿಗೆ ತಮ್ಮ ವಿಶಿಷ್ಟ ಧ್ವನಿಯ ಮೂಲಕವೇ ಅವುಗಳು ಮತ್ತಷ್ಟು ಮನೆ ಮಾತಾಗುವಂತೆ ಛಾಪು ಮೂಡಿಸಿದ್ದರು. ಸುಬ್ಬಣ್ಣ ಮತ್ತು ಅಶ್ವತ್ಥ್‌ ಅವರ ಧ್ವನಿಯಲ್ಲಿ ಶರೀಫರ ಗೀತೆಗಳ ಶಕ್ತಿಯೇ ಬೇರೆಯಾಗಿತ್ತು.

ಕುವೆಂಪು ಅವರ ಓ ನನ್ನ ಚೇತನವನ್ನು ಏಕ ಗಾಯಕರ ಬದಲು ಗಂಡು– ಹೆಣ್ಣು ಧ್ವನಿಗಳಲ್ಲಿ ಮೂಡಿಬರುವಂತೆ ಸಂಯೋಜಿದ್ದನ್ನು ಕೇಳಿದ್ದೀರಲ್ಲಾ? ಏನಾದರೂ ಸರಿಯೇ... ಮೊದಲು ಮಾನವನಾಗು ಗೀತೆಯನ್ನು ಬೇಸ್‌ ಧ್ವನಿಯಲ್ಲಿ ಹಾಡುತ್ತಾ ಅದರ ಸಂದೇಶ ಬೋಧನೆಯನ್ನು ಪರಿಣಾಮಕಾರಿಯಾಗಿ ಶ್ರೋತೃವಿಗೆ ತಲುಪಿಸಿದ್ದವರೂ ಅವರು. ಆನಂದಮಯ ಈ ಜಗಹೃದಯ... ಗೀತೆಯೂ ಇದೇ ಸಾಲಿಗೆ ಸೇರುತ್ತದೆ.

ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್‌, ಬಾಳಪ್ಪ ಹುಕ್ಕೇರಿ ಮತ್ತು ಸುಬ್ಬಣ್ಣ ಸುಗಮ ಸಂಗೀತದ ಐದು ಸ್ತಂಭಗಳಂತಿದ್ದವರು. ಕೊನೆಯ ಸ್ತಂಭ ಇಂದು ಕಳಚಿದೆ ಎಂದು ಸುಬ್ಬಣ್ಣನವರ ಸೊಸೆ ಅರ್ಚನಾ ಉಡುಪ ಹೇಳಿದ್ದು ಅಕ್ಷರಶಃ ನಿಜ.

ಪ್ರತೀ ಫೋನ್‌ ಕರೆಯ ಸಂದರ್ಭದಲ್ಲೂ ಅವರ ಮಾತು ಹಾಡಿನೊಂದಿಗೆ ಕೊನೆಗೊಳ್ಳುತ್ತಿತ್ತು. ‘ಏನಾದರೂ ಆಗು, ಮೊದಲು ಮಾನವನಾಗು...’ ಎಂದು ತಮ್ಮ ಶ್ರೀಮಂತ ಕಂಠದಲ್ಲಿ ಹಾಡಿ ಮುಗಿಸುತ್ತಿದ್ದರು.

ಹೀಗೆ, ಶರೀಫಜ್ಜನ ಕೋಡಗನ ಕೋಳಿ ನುಂಗಿತ್ತಾ ಇರಲಿ, ಕುವೆಂಪು ಗೀತೆಯೇ ಇರಲಿ, ಸುಬ್ಬಣ್ಣನಿಗೆ ಹಾಡಬೇಕು ಅಷ್ಟೆ. ಸುಬ್ರಹ್ಮಣ್ಯ ಅವರು ಬೆಂಗಳೂರಿಗೆ ಬಂದ ಮೇಲೆ ಸುಬ್ಬಣ್ಣ ಆದರು. ಹೆಸರಿನ ಮುಂದೆ ಶಿವಮೊಗ್ಗವೂ ಸೇರಿಕೊಂಡಿತು. ಹೀಗೆ ಅವರು ಶಿವಮೊಗ್ಗ ಸುಬ್ಬಣ್ಣನಾದ ಮೇಲೆ ಹಿಂದಿರುಗಿ ನೋಡಲೇ ಇಲ್ಲ.

ಅದೆಷ್ಟೋ ವೇದಿಕೆಗಳಲ್ಲಿ ನಾವು, ಇತರ ಕಲಾವಿದರು ಒಂದು ಹಾಡಿನ ಬಳಿಕ ಸ್ವಲ್ಪ ಅಂತರ ತೆಗೆದುಕೊಳ್ಳುವುದು, ಧ್ವನಿ ವ್ಯತ್ಯಾಸ ಆಗುವುದು ನಡೆಯುತ್ತಿರುತ್ತದೆ. ಆದರೆ, ಸುಬ್ಬಣ್ಣ ಹಾಗಲ್ಲ. ಅವರ ಮೊದಲ ಹಾಡಿನಿಂದ ಹಿಡಿದು, ಕೊನೆಯ ಹಾಡಿನವರೆಗೂ ಅದೇ ಕಸುವು, ಹುಮ್ಮಸ್ಸು ಇರುತ್ತಿತ್ತು.

ನಾನು, ನನ್ನದು ಎಂಬ ಅಹಂ, ಅವರಿಗಾಗಲಿ ಅವರ ಮನೆಯವರು ಯಾರಿಗೂ ಇಲ್ಲವೇ ಇಲ್ಲ. ಹಾಗಾಗಿ ಸುಬ್ಬಣ್ಣನದು ಮಗುವಿನ ಮುಗ್ಧತೆ, ಮುಕ್ತತೆ. ಹಾಗಾಗಿಯೇ ಅವರು ಅದ್ಭುತ ವ್ಯಕ್ತಿಯಾಗಿ ತುಂಬಾ ಹತ್ತಿರವಾಗಿದ್ದರು.

ಹಾಡಿದರೆ ಇಷ್ಟು ದುಡ್ಡು ಬರುತ್ತದೆ ಎಂದುಯಾವತ್ತೂ ಲೆಕ್ಕಹಾಕಿ ಹಾಡಿದವರಂತೂ ಅವರಲ್ಲ. ಹಾಡಬೇಕು ಅಷ್ಟೇ ಅನ್ನುವ ಪ್ಯಾಷನ್‌ ಇದ್ದವರು ಅವರಾಗಿದ್ದರು.ಇಂಥ ಸುಬ್ಬಣ್ಣನಿಗೆ ಕೋಪ ಬರುವುದೂ ಇಲ್ಲವೆಂದೇನಿಲ್ಲ. ಒಮ್ಮೆ ಅವರನ್ನು ನಾನು ಆಕಾಶವಾಣಿಯಲ್ಲಿ ಸಂದರ್ಶನ ಮಾಡುತ್ತಿದ್ದೆ. ಆಗ ಅವರನ್ನು ಶಿವಮೊಗ್ಗ ಸುಬ್ಬಣ್ಣ ಎಂದು ಪರಿಚಯಿಸುತ್ತಾ ಹೋದೆ. ತಕ್ಷಣವೇ ಸಣ್ಣಗೆ ಮುನಿಸಿಕೊಂಡ ಅವರು, ‘ಡಾ.ಶಿವಮೊಗ್ಗ ಸುಬ್ಬಣ್ಣ ಎಂದು ಹೇಳು, ಏನಾಗುತ್ತದೆ ನೋಡೋಣ’ ಎಂದುಬಿಟ್ಟರು. ಅಂದರೆ ಏನು ಹೇಳಬೇಕೋ ಅದನ್ನು ನೇರವಾಗಿ ಹೇಳಿಯೇಬಿಡುವವರು. ಮತ್ತೊಂದು ಕ್ಷಣಕ್ಕೆ ಅಂಥದ್ದೇನು ಆಗಿಯೇ ಇಲ್ಲವೇನೋ ಎಂಬಂತೆ ಎಲ್ಲವನ್ನೂ ಮರೆಸಿಬಿಡುವವರು.

ಅವರ ಕುಟುಂಬದವರಿಗೂ ಅದೇ ಸಂಸ್ಕಾರ ಬಂದಿದೆ. ಅವರ ಸೊಸೆ, ಗಾಯಕಿ ಅರ್ಚನಾ ಅಂತೂ ನನ್ನ ಮಗಳ ಹಾಗೆ ಕಾಣುತ್ತಾಳೆ.ಸುಬ್ಬಣ್ಣ ಜೊತೆ ವೇದಿಕೆಯಲ್ಲಿ, ಆಕಾಶವಾಣಿಯಲ್ಲಿ ಒಮ್ಮೆ ಹಾಡಿದ್ದೇನೆ. ಭಾವಗೀತೆಗಳ ಸುವರ್ಣ ಕಾಲದಿಂದ ಅವರ ಒಡನಾಟದ ನೆನಪುಗಳು ಬಗೆದಷ್ಟೂ ಇವೆ. ನಿತ್ಯ ಹಸುರಾಗಿ. ಅವರ ಮಾತು, ಗೀತೆ ಅನುರಣಿಸುತ್ತಲೇ ಇವೆ.

ನಿರೂಪಣೆ: ಶರತ್‌ ಹೆಗ್ಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.