ಕಿರಾಣಾ – ಘರಾಣೆಯ ಒಳಗಿದ್ದುಕೊಂಡೇ, ಆ ಘರಾಣೆಯ ದೀಪವನ್ನು ಸದಾ ಬೆಳಗುತ್ತಲೇ, ಕಳೆದ ಏಳು ದಶಕಗಳಿಂದ ಪ್ರತಿಯೊಂದನ್ನೂ ಪ್ರಶ್ನಿಸುತ್ತಾ, ಒರೆಗೆ ಹಚ್ಚುತ್ತಾ ಬಂದಿರುವ ಹಿರಿಯ ಗಾಯಕಿ ಡಾ. ಪ್ರಭಾ ಅತ್ರೆಯವರ ಆಳದಲ್ಲಿ ಇಂದಿಗೂ ಸಂಗೀತದ ಶಾಸ್ತ್ರಗಳನ್ನು ಮರುವ್ಯಾಖ್ಯಾನಿಸುವ, ಸುಧಾರಣೆಯ ದಿಕ್ಕಿನಲ್ಲಿ ಆಲೋಚಿಸುವ, ಹೊಸ ಚಿಂತನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಅದೇ ಕ್ರಾಂತಿಕಾರಿ ಸ್ವಭಾವ ಹುದುಗಿದೆ. ಸೆ. 13ರಂದು 90 ವರ್ಷ ಪೂರೈಸಲಿರುವ ಈ ಸಾಧಕಿ ಹಿಂದೂಸ್ತಾನಿ ಸಂಗೀತದಲ್ಲಿ ರಾಗ-ರಸ ಹಾಗೂ ರಾಗ-ಸಮಯ ಪರಿಕಲ್ಪನೆಯ ಕುರಿತು ತಮ್ಮ ಕೆಲವು ಚಿಂತನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸಂಗೀತ ಬಂಧುಗಳಿಗೆ ಅವರು ಕೇಳಿದ ಈ ಹರಿತವಾದ ಪ್ರಶ್ನೆಗಳಿಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಾರ್ಕಿಕ ಉತ್ತರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.
**
ಪರಂಪರೆಯು ನಿಂತ ನೀರಲ್ಲ ಎನ್ನುವುದು ನಮಗೆಲ್ಲ ಅರಿವಿದೆ. ಅದು ಕಾಲದೊಂದಿಗೆ ಹರಿಯುತ್ತಿರುವ ನದಿಯಂತೆ, ಹೊಸ ಪ್ರವೃತ್ತಿಗಳನ್ನು ತನ್ನೊಳಗೆ ಕರಗಿಸಿಕೊಳ್ಳುತ್ತ, ಹಳತಾದ ರೂಢಿಗಳನ್ನು ಬಿಸಾಕುತ್ತದೆ. ನಾವು ಇಂದಿನ ಸಂಗೀತ ಪ್ರಸ್ತುತಿಗಳನ್ನು ಪ್ರಸ್ತುತ ಕಾಲದ ಸಂದರ್ಭದಲ್ಲಿ ಪರೀಕ್ಷಿಸಬೇಕಿದೆ. ನಮ್ಮ ಸಂಗೀತವನ್ನು ಇನ್ನಷ್ಟು ಸಮೃದ್ಧಗೊಳಿಸಲು ಅಗತ್ಯವಾದ ಬದಲಾವಣೆಗಳನ್ನು ತಾರ್ಕಿಕತೆ ಹಾಗೂ ವೈಜ್ಞಾನಿಕ ತಳಹದಿಯ ಆಧಾರದ ಮೇಲೆ ಮಾಡಬೇಕಿದೆ ಎಂದು ನಿಮಗನ್ನಿಸುವುದಿಲ್ಲವೇ?
ರಾಗ-ರಸ ಮತ್ತು ರಾಗ-ಸಮಯ
ಸಂಗೀತವನ್ನು ಕಲೆಯ ಅತ್ಯಂತ ಶುದ್ಧ ಸ್ವರೂಪ ಎಂದು ಪರಿಗಣಿಸುತ್ತೇವೆ. ಅದು ಈ ವಿಶ್ವದಲ್ಲಿ ಏನನ್ನೂ ಪ್ರತಿನಿಧಿಸುವುದಿಲ್ಲ. ಸಂಗೀತಕ್ಕೆ ಅದರದ್ದೇ ಆದ ಭಾಷೆ ಹಾಗೂ ಅರ್ಥವಿದೆ. ಅದರ ಅಮೂರ್ತ ಲಕ್ಷಣವು ವಿಶ್ವದಲ್ಲಿ ಎಲ್ಲ ‘ಪರಿಚಿತ’ ವಸ್ತುಗಳಿಂದಲೂ ಅದನ್ನು ಪ್ರತ್ಯೇಕಗೊಳಿಸುತ್ತದೆ. ಮನುಷ್ಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಂಗೀತವನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಬಳಸಿದ್ದಾರೆ. ಹೀಗೆ ಸಂಗೀತದಲ್ಲಿನ ಅಮೂರ್ತತೆಯು ಮನುಷ್ಯರಿಗೆ ನಿಶ್ಚಿತ ರೂಪದ್ದೂ, ನಿರ್ದಿಷ್ಟವೂ ಆಯಿತು. ಭಾರತೀಯ ಸಂಗೀತ ಪದ್ಧತಿಯಲ್ಲಿ ರಾಗದ ಪರಿಕಲ್ಪನೆಯು ಸಂಗೀತದ ಅಮೂರ್ತ ಗುಣವನ್ನು ಉತ್ತಮವಾಗಿ ಪ್ರತಿನಿಧಿಸುತ್ತದೆ. ರಾಗವನ್ನು ಅದರ ಬರಿದಾದ ಅಥವಾ ನಗ್ನ ಸ್ವರೂಪದಲ್ಲಿ ಕಾಣುವುದು ಕಲಾವಿದರು ಹಾಗೂ ಸಾಮಾನ್ಯ ಕೇಳುಗರು, ಇಬ್ಬರಿಗೂ ಕಷ್ಟವೇ.
ಏನಾದರೊಂದು ‘ಪರಿಚಿತ’ ವಸ್ತುವಿನ ಜೊತೆಗೆ ರಾಗದ ಸಂಬಂಧ ಕಲ್ಪಿಸುವುದು ರಾಗಕ್ಕೆ ಸ್ವರೂಪವೊಂದನ್ನು ನೀಡಲು ಕಲಾವಿದರಿಗೆ ಸಹಾಯ ಮಾಡುತ್ತದೆ. ಹೀಗಾಗಿ ಕಲಾವಿದರು ಸಿದ್ಧಾಂತ ಹಾಗೂ ತಂತ್ರಗಳ ಉತ್ತಮ ಜ್ಞಾನವನ್ನು ಹೊಂದಿದ್ದರೂ, ರಾಗವೊಂದನ್ನು ಸೃಜಿಸುವ ಪ್ರಕ್ರಿಯೆಯಲ್ಲಿ ರಾಗದೊಳಗಿನ ‘ಅಮೂರ್ತತೆ’ಯನ್ನು ‘ನಿಶ್ಚಿತ ರೂಪ’ಕ್ಕೆ ರೂಪಾಂತರಿಸುವುದಕ್ಕಾಗಿ ಹೊರಗಿನ ಸಹಾಯವನ್ನು ಅರಸುತ್ತಾರೆ.
ರಾಗ-ರಸ ಹಾಗೂ ದಿನದ ಯಾವ ಸಮಯದಲ್ಲಿ ಯಾವ ರಾಗ ಹಾಡಬೇಕೆಂಬ ರಾಗ-ಸಮಯದ ಪರಿಕಲ್ಪನೆಯು ರಾಗದಲ್ಲಿರುವ ‘ಅಮೂರ್ತ’ಕ್ಕೆ ಒಂದು ‘ನಿಶ್ಚಿತ ರೂಪ’ವನ್ನು ಕೊಡುವ ಪ್ರಯತ್ನವಾಗಿದೆ. ಧ್ವನಿಮಾಧುರ್ಯವನ್ನು ದೇವರು, ಋತುಗಳು, ದಿನದ ಗಂಟೆಗಳು ಇತ್ಯಾದಿಗಳ ಜೊತೆಗೆ ಗುರುತಿಸುತ್ತ, ರಸ ಅಥವಾ ಮೂಡ್‌ಗಳು ಮಾಧುರ್ಯಕ್ಕೆ ಕಾರಣ ಎನ್ನುತ್ತೇವೆ. ಇದು ಸಂಗೀತವನ್ನು ಅದರ ಒಂದು ವಿಶಿಷ್ಟ ಲಕ್ಷಣದೊಂದಿಗೆ ಸೃಜಿಸುವುದಕ್ಕೆ ಸಹಾಯ ಮಾಡಿದೆ.
ಹಿಂದಿನ ಕಾಲದಲ್ಲಿ ಮನುಷ್ಯರು ನಿಸರ್ಗಕ್ಕೆ ಬಹು ಹತ್ತಿರವಿದ್ದರು ಎಂಬ ಅಂಶವು ಬಹುಶಃ ಒಂದುರಾಗ ಹಾಗೂ ಒಂದು ನಿರ್ದಿಷ್ಟ ಸಮಯದ ನಡುವಣ ಸಂಬಂಧವನ್ನು ವಿವರಿಸಬಹುದು. ಇಂದು ಮನುಷ್ಯ ನಿಸರ್ಗದಿಂದ ಬಹುದೂರ ಸಾಗಿದ್ದು, ಗೋಡೆಗಳ ನಡುವೆ, ಕೃತಕ ಪರಿಸರದಲ್ಲಿ ಬದುಕುತ್ತಿದ್ದಾನೆ. ಮನುಷ್ಯನ ಜೀವನಶೈಲಿ ಹಾಗೂ ಹವ್ಯಾಸಗಳು ಸಾಕಷ್ಟು ಬದಲಾಗಿವೆ. ಇಂತಹ ಸನ್ನಿವೇಶಗಳಲ್ಲಿ, ನಾವು ಸಮಯದೊಂದಿಗೆ ರಾಗದ ಸಂಬಂಧವನ್ನು ಕಲ್ಪಿಸಬಹುದೇ?
ಕೆಲವು ದೃಶ್ಯಗಳು, ಮೌಖಿಕ ಸಂವಹನ ಅಥವಾ ಏನಾದರೂ ಹಿಂದಿನ ಸಂಬಂಧಗಳು ಇದ್ದಾಗ ಸಂಗೀತದೊಳಗಣ ಅಮೂರ್ತವನ್ನು ಅನುಭವಿಸಬಲ್ಲೆವು. ಸಮಯ ಸಿದ್ಧಾಂತವು ವಿಶೇಷವಾಗಿ ಒಂದೇ ಬಗೆಯ ಲಕ್ಷಣಗಳನ್ನುಳ್ಳ ಸ್ವರ ಪ್ರಸ್ತಾರಗಳ ನಡುವೆ ವ್ಯತ್ಯಾಸ ಕಂಡುಕೊಳ್ಳಲು ಅಗತ್ಯವಾದ ಸಂದರ್ಭ ಒದಗಿಸಿತು.
ರಸಾನುಭೂತಿಯ ಭಾವನೆಗಳು ಮುಖ್ಯವಾಗಿ ಧ್ವನಿಯ ಭಾವಗರ್ಭಿತತೆ, ಸಾಂಗೀತಕ ಅಂಶಗಳ ಪ್ರಸ್ತುತಿ ಮತ್ತು ಸಂಗೀತದ ಗತಿಯ ಮೂಲಕ ಹುಟ್ಟುತ್ತವೆ ಎಂದು ಸಂಗೀತಾನುಭವದ ಆಧುನಿಕ ಸಿದ್ಧಾಂತವು ಪ್ರತಿಪಾದಿಸುತ್ತದೆ. ಸಂಗೀತದಲ್ಲಿ ಮೌಖಿಕ ಪಠ್ಯ, ದೃಶ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿದರೆ, ಅದು ಕೂಡ ನಿರ್ದಿಷ್ಟವಾದ ರಸ ಅಥವಾ ಮೂಡ್ ಹುಟ್ಟುಹಾಕಲು ಸಹಕಾರಿ. ರಾಗವೊಂದು ಆಲಾಪ, ತಾನ್, ಸರಗಮ್ ಅಥವಾ ಬೋಲ್‌ಗಳು, ಇವುಗಳಲ್ಲಿ ಯಾವುದನ್ನು ಬಳಸುತ್ತಿದೆ ಎಂಬುದನ್ನು ಅವಲಂಬಿಸಿ ಒಂದೇ ಮೂಡ್‌ನ ವಿವಿಧ ಛಾಯೆಗಳನ್ನು ವ್ಯಕ್ತಪಡಿಸಬಲ್ಲದು. ಆದಾಗ್ಯೂ ಗತಿಯು ಮೂಡ್ ಹುಟ್ಟು ಹಾಕುವಲ್ಲಿ ಮಹತ್ವದ ಪಾತ್ರವನ್ನು ವಹಿಸಬಲ್ಲದು.
ರಾಗ-ರಸ ಮತ್ತು ರಾಗ ಸಮಯ ಸಿದ್ಧಾಂತದ ಹಿನ್ನೆಲೆಯಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ:
* ರಾಗಗಳು ನಿರ್ದಿಷ್ಟ ರಸವನ್ನು ಉಂಟು ಮಾಡುತ್ತದೆ ಎನ್ನುತ್ತೇವೆ. ಆದರೆ ಎಷ್ಟೋ ಸಲ ಬಂದಿಶ್‌ಗಳ ವಿಷಯವಸ್ತು ಅಂದರೆ ಹಾಡಿನ ಪಠ್ಯವು ರಸಕ್ಕೆ ವಿರುದ್ಧವಾಗಿರುತ್ತದೆ. ಉದಾಹರಣೆಗೆ ಭೈರವಿ ರಾಗವು ಕರುಣ ರಸವನ್ನುಂಟು ಮಾಡುತ್ತದೆ. ಭೈರವಿಯಲ್ಲಿ ಹಾಡಿನ ವೈವಿಧ್ಯಮಯ ವಿಷಯವಸ್ತುವು ರಾಗಕ್ಕೆ ಅರ್ಥವನ್ನು ಕೊಡುತ್ತಿರುವಂತೆ ತೋರುತ್ತದೆ ಹಾಗೂ ಕೇಳುಗರು ಇದನ್ನು ಆನಂದದಿಂದ ಆಲಿಸುತ್ತಾರೆ. ಭೈರವಿ ರಾಗವನ್ನು ಯಾವುದೇ ಸಮಯದಲ್ಲಾದರೂ ಹಾಡಬಹುದು.
* ಹೆಚ್ಚು ಕಡಿಮೆ ಎಲ್ಲ ರಾಗಗಳು, ಯಾವುದೇ ಸಮಯದಲ್ಲಾದರೂ, ವೇಗದ ಗತಿಗೆ ಬರುತ್ತಿದ್ದಂತೆ ಒಂದು ಲವಲವಿಕೆಯ, ಉಲ್ಲಾಸದ ವಾತಾವರಣವನ್ನು ಹುಟ್ಟುಹಾಕುತ್ತವೆ.
* ವರ್ಷಗಳು ಕಳೆದಂತೆ, ಕೆಲವು ರಾಗಗಳು ತಮ್ಮ ಹಳೆಯ ಹೆಸರನ್ನು ಉಳಿಸಿಕೊಂಡೇ, ಸಾಕಷ್ಟು ಬದಲಾಗಿವೆ. ಹಾಗಿದ್ದಾಗ ಅವುಗಳ ರಸ ಹಾಗೂ ಸಮಯವೂ ಬದಲಾದವೇ?
* ಭಿನ್ನರಸಗಳನ್ನು ಹೊಂದಿದ ಎರಡು ಅಥವಾ ಮೂರು ರಾಗಗಳ ಸಂಯೋಜನೆಯಿಂದ ಹುಟ್ಟಿದ ಮಿಶ್ರರಾಗಗಳ ರಸ ಹಾಗೂ ಸಮಯ ಯಾವುದಿರುತ್ತದೆ?
* ಹೊಸದಾಗಿ ಸೃಜಿಸಿದ ರಾಗದ ರಸ ಹಾಗೂ ಸಮಯ ಯಾವುದಿರುತ್ತದೆ?
* ಶ್ರೋತೃಗಳು - ಭಾರತೀಯ ಅಥವಾ ವಿದೇಶೀ ಕೇಳುಗರು ಒಂದು ನಿರ್ದಿಷ್ಟ ಸಮಯದಲ್ಲಿ ರಾಗವೊಂದರ ರಸವನ್ನು ಒಂದೇ ರೀತಿಯಾಗಿ ಅನುಭವಿಸುತ್ತಾರೆಯೇ?
* ಒಂದೇ ರಾಗವನ್ನು ವಿವಿಧ ಕಲಾವಿದರು ಪ್ರಸ್ತುತಪಡಿಸಿದಾಗ ಅಥವಾ ಒಂದೇ ಕಲಾವಿದ ಅದೇ ರಾಗವನ್ನು ಬೇರೆ ಬೇರೆ ಸಮಯದಲ್ಲಿ ಪ್ರಸ್ತುತಪಡಿಸಿದರೆ, ಪ್ರತಿಯೊಬ್ಬ ಕೇಳುಗನಿಗೂ ಒಂದೇ ಬಗೆಯ ಅನುಭವ ಸಿಗುತ್ತದೆಯೇ?
ಈ ಎಲ್ಲವೂ ರಾಗ-ಲಕ್ಷಣ ಹಾಗೂ ರಾಗದ ಮೂಡ್ ತನ್ನದೇ ಆದ ಸಂಗೀತದ ಸಂಗತಿಗಳು ಹಾಗೂ ಅದರ ನಿರೂಪಣೆಯೊಂದಿಗೆ ಒಂದು ಅಂತರ್ಗತವಾದ ಸಂಬಂಧವನ್ನು ಹೊಂದಿವೆ ಎಂಬುದನ್ನು ಸಾಬೀತುಪಡಿಸುತ್ತವೆ. ಪ್ರತಿಯೊಂದು ರಾಗದ ವಿಶಿಷ್ಟ ಚಹರೆಯನ್ನು ಹೇಳುವಂತಹ ಸಂಗತಿಗಳು ಹಾಗೂ ಅವುಗಳ ವಿನ್ಯಾಸವು ಅದಕ್ಕೆ ಸಂಗೀತಾತ್ಮಕ ಅನನ್ಯತೆ ಮತ್ತು ಸೌಂದರ್ಯವನ್ನು ನೀಡಿ, ರಸಾನುಭೂತಿಯ ಭಾವನೆಗಳನ್ನು ಹುಟ್ಟುಹಾಕುತ್ತದೆ.
ಈ ರಸಾನುಭೂತಿಯ ಭಾವನೆಗಳು ಕಲಾವಿದರ ಅಥವಾ ಕೇಳುಗರ ಮನಸ್ಥಿತಿಯನ್ನು ಅವಲಂಬಿಸಿ ಒಂದು ನಿರ್ದಿಷ್ಟ ರಸವಾಗಿ ಅಥವಾ ಮೂಡ್ ಆಗಿ ಪರಿವರ್ತನೆಯಾಗುತ್ತದೆ.
ರಾಗ ಸಮಯದ ಸಿದ್ಧಾಂತವು ಇಂದು ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ಕುರಿತು ಚಿಂತನೆಗೆ ಹಚ್ಚುವ ಹಲವಾರು ಬೇರೆ ಸಂಗತಿಗಳೂ ಇವೆ.
1) ರೇಡಿಯೊ, ಟಿವಿ ಮತ್ತು ರೆಕಾರ್ಡಿಂಗ್ ಕಂಪನಿಗಳು ಯಾವ ಸಮಯದಲ್ಲಾದರೂ ಯಾವ ರಾಗವನ್ನಾದರೂ ಧ್ವನಿ ಮುದ್ರಿಸಿಕೊಳ್ಳುತ್ತವೆ. ಇದು ರಾಗದ ಪ್ರಸ್ತುತಿಯ ಮೇಲೆ ಯಾವುದೇ ಪರಿಣಾಮವನ್ನು ಉಂಟುಮಾಡಿದಂತೆ ಕಾಣುವುದಿಲ್ಲ. ಅಷ್ಟೇ ಅಲ್ಲ, ರೇಡಿಯೊ ಹಾಗೂ ಟಿವಿಗಳು ಯಾವುದೇ ಸಮಯದಲ್ಲಾದರೂ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೀಗೆ ಧ್ವನಿ ಮುದ್ರಿಸಿಕೊಂಡಿದ್ದನ್ನು ಪ್ರಸಾರಮಾಡುತ್ತವೆ. ಸಾರ್ವಜನಿಕ ಕಛೇರಿಗಳಲ್ಲಿ ಮಾತ್ರವೇ ರಾಗದ ಮೂಡ್ ಹುಟ್ಟುಹಾಕಲು ಇಂಥ ಸಮಯದಲ್ಲಿ ಇಂಥದೇ ರಾಗವನ್ನು ಪ್ರಸ್ತುತಪಡಿಸಬೇಕೆಂದು ನಿರ್ಬಂಧ ವಿಧಿಸಲಾಗಿದೆ.
2) ಕಲಾವಿದರು ತಮ್ಮ ಅನುಕೂಲತೆಗೆ ಅನುಗುಣವಾಗಿ ಯಾವುದೇ ರಾಗವನ್ನು ಯಾವುದೇ ಸಮಯದಲ್ಲಾದರೂ ಅಭ್ಯಾಸ ಮಾಡುತ್ತಾರೆ, ಅದು ರಾಗದ ಮೂಡನ್ನು ಅಥವಾ ಅದರ ಲಕ್ಷಣವನ್ನು ಪರಿಣಾಮಿಸಿದಂತೆ ಅಥವಾ ಕುಂದಿಸಿದಂತೆ ತೋರುವುದಿಲ್ಲ.
3) ಮಿಶ್ರರಾಗಗಳ ಕುರಿತು ಏನು ಹೇಳಬಹುದು? ಭೈರವಿ-ಬಹಾರ್ ಮತ್ತು ಯಮನಿ-ಬಿಲಾವಲ್ ರಾಗಗಳನ್ನು ಬೆಳಗ್ಗೆ ಮಾತ್ರವೇ ಏಕೆ ಪ್ರಸ್ತುತಪಡಿಸಬೇಕು? ಬಹಾರ್ ಹಾಗೂ ಯಮನ್ ರಾತ್ರಿಯ ರಾಗಗಳು. ಹಾಗಿದ್ದಾಗ ಇವುಗಳ ಮಿಶ್ರರಾಗಗಳನ್ನೂ ರಾತ್ರಿ ಏಕೆ ಪ್ರಸ್ತುತಪಡಿಸಬಾರದು?
4) ಶುದ್ಧರಾಗವನ್ನು ಆಧರಿಸಿದ ಸಿನಿಮಾ ಸಂಗೀತ, ನಾಟ್ಯ ಸಂಗೀತ ಅಥವಾ ರಂಗಗೀತೆಗಳನ್ನು ಅಥವಾ ಭಕ್ತಿಗೀತೆಗಳನ್ನು ಆಲಿಸುವಾಗ, ಈ ರಾಗ-ಸಮಯದ ನಿಯಮವು ನಮ್ಮ ಮನಸ್ಸಿನಲ್ಲಿ ಎಳ್ಳಷ್ಟೂ ಸುಳಿಯುವುದಿಲ್ಲ. ಪ್ರತಿಯಾಗಿ ನಾವು ಯಾವುದೇ ರಾಗವನ್ನು ಯಾವುದೇ ಸಮಯದಲ್ಲಾದರೂ ಆನಂದಿಸುತ್ತೇವೆ, ಅಲ್ಲವೇ?
5) ಕರ್ನಾಟಕ ಸಂಗೀತವು ಪರಂಪರೆಗೆ ಹೆಚ್ಚು ಬದ್ಧವಾಗಿದೆ ಎಂದು ಪರಿಗಣಿಸಲಾಗಿದೆ; ಆದಾಗ್ಯೂ ಅದು ಸಮಯ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ. ಆದರೆ, ಹೊಂದಾಣಿಕೆಯ ಲಕ್ಷಣವಿರುವ ಹಿಂದೂಸ್ತಾನಿ ಸಂಗೀತ ಮಾತ್ರ ಇನ್ನೂ ಸಮಯ ಸಿದ್ಧಾಂತವನ್ನೇ ಪ್ರತಿಪಾದಿಸುತ್ತಿದೆ!
ಸಮಯ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಕಛೇರಿಯ ಸಮಯದಿಂದ ಹೊರಗುಳಿಯುವ ಅಪರೂಪದ ರಾಗಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಇದು ಭಾರತೀಯ ಸಂಗೀತಕ್ಕೆ ಅಪಾರ ನಷ್ಟವಲ್ಲವೇ?
ಈ ಎಲ್ಲಾ ಪ್ರಶ್ನೆಗಳನ್ನು ವೈಜ್ಞಾನಿಕವಾಗಿ, ತಾರ್ಕಿಕವಾಗಿ ಒರೆಗೆ ಹಚ್ಚುವ ಅಗತ್ಯವಿದೆ.
ಇಂದು ರಾಗ-ರಸ ಹಾಗೂ ರಾಗ-ಸಮಯ ಪರಿಕಲ್ಪನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಿಂತ ಹೆಚ್ಚಾಗಿ ರೂಢಿಗತ ಪರಂಪರೆಗೆ ಜೋತು ಬಿದ್ದ ಕಾರಣದಿಂದ ಉಲ್ಲೇಖಿಸಲಾಗುತ್ತದೆ. ಈ ಪರಿಕಲ್ಪನೆಗಳು ಹಿಂದಿನಿಂದ ಬಂದ ಸಂಪ್ರದಾಯಗಳು ಎಂಬ ಕಾರಣದಿಂದಾಗಿ ನಮ್ಮ ಆತ್ಮದಾಳದಲ್ಲಿ ಹುದುಗಿಹೋಗಿವೆ. ಕಾಲ ಸರಿದಂತೆ ಅವು ತಮ್ಮ ಪ್ರಸ್ತುತತೆಯನ್ನು, ಸಂದರ್ಭವನ್ನು ಕಳೆದುಕೊಂಡಿವೆ, ಆದರೆ ಅವುಗಳನ್ನು ಇನ್ನೂ ಕುರುಡಾಗಿ ಪಾಲಿಸುತ್ತಿದ್ದೇವೆ. ಅವುಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವುದು ಬೇಡವೇ? ಪರಂಪರೆಯೇ ಹೊಸ ಮಾರ್ಗಗಳನ್ನು ಹುಟ್ಟುಹಾಕುತ್ತದೆ. ಪರಂಪರೆಯು ಪ್ರಗತಿ ಹಾಗೂ ಬೆಳವಣಿಗೆಗೆ ಅಡ್ಡಿಯಾಗ ತೊಡಗಿದರೆ, ಆಗ ಅದನ್ನು ಬದಲಾದ ಸಂದರ್ಭದಲ್ಲಿ ಮರುವ್ಯಾಖ್ಯಾನಿಸುವ ಅಗತ್ಯವಿದೆ. ಅಂತಹ ಸನ್ನಿವೇಶಗಳಲ್ಲಿ, ಪರಂಪರೆಯು ಭಗ್ನವಾಗುವುದಿಲ್ಲ ಅಥವಾ ಊನಗೊಳ್ಳುವುದಿಲ್ಲ, ಬದಲಾಗಿ ಹೊಸ ದಿಕ್ಕುಗಳನ್ನು ತೋರಿಸಲು ಪುನರುಜ್ಜೀವನಗೊಳ್ಳುತ್ತದೆ.
ಹೀಗಾಗಿ ಕಛೇರಿಯಲ್ಲಿ ರಾಗಗಳ ಪ್ರಸ್ತುತಿಯ ಸಮಯ ಮುಖ್ಯವಲ್ಲ; ಪ್ರಸ್ತುತಿಯ ಗುಣಮಟ್ಟ ಹಾಗೂ ಪ್ರಭಾವವು ಮುಖ್ಯ. ರಸ ಹಾಗೂ ಸಮಯವನ್ನು ಲೆಕ್ಕಿಸದೆ, ರಾಗ-ರೂಪವು ಉತ್ತಮವಾಗಿ ಹೊರಹೊಮ್ಮಬೇಕು; ಜೊತೆಗೆ ಕಲಾವಿದ ಹಾಗೂ ಕೇಳುಗರಿಬ್ಬರಿಗೂ ಅದು ಆನಂದಾನುಭೂತಿಯನ್ನು ನೀಡುವಂತಿರಬೇಕು.
ಕನ್ನಡಕ್ಕೆ: ಸುಮಂಗಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.