ವಿಜಯಭಾಸ್ಕರ್ ಅವರ ಮನೆ ಇದ್ದಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ. ಮನೆ ಸಮೀಪವಿದ್ದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಲೆಗ್ ಹಾರ‍್ಮೋನಿಯಂ ಮೂಲಕ ಸಂಗೀತ ನೀಡುತ್ತಿದ್ದ ಕ್ರಮ ಅವರನ್ನು ಬಲುವಾಗಿ ಆಕರ್ಷಿಸಿತು. ತಂದೆಯ ಅರಿವಿಗೆ ಬಾರದಂತೆ ಸಂಗೀತವನ್ನು ಕಲಿತಿದ್ದರು ವಿಜಯಭಾಸ್ಕರ್. ಲೀನ್ ಹಂಟ್ ಅವರಿಂದ ಪಾಶ್ಚಾತ್ಯ ಸಂಗೀತ ಕೂಡ ಕಲಿತರು. ಮುಂದೆ ಬಾಲಿವುಡ್‌ಗೆ ಹೋಗಿ ನೌಷಾದ್, ಮದನ್ ಮೋಹನ್ ಬಳಿ ಕೆಲಸ ಮಾಡಿದರು. ಹಿಂದಿಯ ಟಾಪ್ ಹೀರೊ ದಿಲೀಪ್ ಕುಮಾರ್ ಅವರು ವಿಜಯಭಾಸ್ಕರ್ ಅವರ ಪಿಯಾನೊ ಕೈಚಳಕ ನೋಡಿ ‘ನಿಮಗೆ ಮುಂಬೈನಲ್ಲಿ ಮನೆ ಕೊಡಿಸ್ತೀನಿ, ನನ್ನ ಸಿನಿಮಾಗಳಿಗೆ ನಿಮ್ಮನ್ನೇ ರೆಕಮೆಂಡ್ ಮಾಡ್ತೀನಿ’ ಎಂದಿದ್ದರು. ಮುಂಬೈನಲ್ಲಿ ಪರಿಚಿತರಾಗಿದ್ದ ಬಿ.ಆರ್.ಕೃಷ್ಣಮೂರ್ತಿ, ‘ಕನ್ನಡದಲ್ಲಿ ಸಿನಿಮಾ ಮಾಡ್ತಾ ಇದ್ದೀನಿ, ನಿಮ್ಮ ಸಹಾಯ ಬೇಕು’ ಎಂದು ಕೇಳಿದರು. ಅವರಿಗೆ ನೆರವಾಗುವ ಸಲುವಾಗಿ ಬಂದ ವಿಜಯಭಾಸ್ಕರ್ ಕನ್ನಡಕ್ಕೆ ದಕ್ಕಿದರು.
ವಿಜಯಭಾಸ್ಕರ್ ಮೇಲ್ನೋಟಕ್ಕೆ ಅಂತರ್ಮುಖಿ ಎನ್ನಿಸಿದರೂ ಸ್ನೇಹಿತರೊಂದಿಗೆ ಬೆರೆಯುವ ಸ್ವಭಾವದವರು. ಯಾರನ್ನೂ ಅಷ್ಟು ಸುಲಭವಾಗಿ ಹಚ್ಚಿಕೊಳ್ಳುತ್ತಿರಲಿಲ್ಲ. ಹಚ್ಚಿಕೊಂಡರೆ ಆ ಸಂಬಂಧವನ್ನು ಕಡಿದು ಕೊಳ್ಳುವವರಲ್ಲ. ವಿಜಯಭಾಸ್ಕರ್ ಹತ್ತಾರು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ ಕುಟುಂಬಕ್ಕೆ ಸಮಯವನ್ನು ಕೊಡುತ್ತಿದ್ದರು. ಅವರ ಸಂಗೀತ ಸಂಯೋಜನೆ ಹೆಚ್ಚಾಗಿ ಮದ್ರಾಸಿನಲ್ಲಿದ್ದರೆ ಪಾಮ್ ಗ್ರೂವ್ ಹೋಟಲ್‌ನಲ್ಲಿಯೂ, ಬೆಂಗಳೂರಿನಲ್ಲಿದ್ದರೆ ಹೋಟೆಲ್ ಜನಾರ್ದನದಲ್ಲಿ ನಡೆಯುತ್ತಿತ್ತು. ಅವರು ಕಥೆ ರೂಪುಗೊಳ್ಳುವ ಸಮಯದಿಂದಲೇ ಸ್ವರೂಪವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮದ್ರಾಸಿನ ಫಿಲಂ ಸೆಂಟರ್‌ನಲ್ಲಿ ಸುಸಜ್ಜಿತ ಸಂಗೀತ ವಿಭಾಗವನ್ನು ಕಟ್ಟಿ ಬೆಳೆಸಿದಂತಹ ಹೆಗ್ಗಳಿಕೆ ಅವರದು. 60-70 ವಾದ್ಯಗಳನ್ನು ಬಳಸಿ ಸಂಗೀತ ನೀಡುವಂತೆ ಮಿತ ವಾದ್ಯಗಳ ಮೂಲಕ ಪರಿಣಾಮವನ್ನು ತರುವುದೂ ಕೂಡ ಅವರಿಗೆ ಸಾಧ್ಯವಿತ್ತು.
ವಿಜಯಭಾಸ್ಕರ್ ‘ಗೆಜ್ಜೆಪೂಜೆ’ ಚಿತ್ರದ ‘ಪಂಚಮ ವೇದ ಪ್ರೇಮದ ನಾದ’ ಗೀತೆಯಲ್ಲಿ ಚತುಶ್ರುತ ರಿಷಭದ ಬದಲು ಶುದ್ಧ ರಿಷಭ ಬಳಸಿದರು. ಈ ಗೀತೆ ಸಂಯೋಜಿತವಾಗಿರುವ ಅಭೇರಿ ಅಥವಾ ಭೀಮ್ ಪಲಾಸ್ ಶ್ರೀಕೃಷ್ಣನೇ ಸೃಷ್ಟಿಸಿದ ಎಂದು ನಂಬಲಾದ ದೈವಿಕ ಪ್ರೇಮವನ್ನು ಹೇಳುತ್ತದೆ ಎಂದು ನಂಬಲಾದ ರಾಗ. ಚಿತ್ರದಲ್ಲಿ ಪ್ರೇಮ ಅಪೂರ್ಣವಾಗುತ್ತದೆ ಎನ್ನುವುದನ್ನು ಸೂಚಿಸುವ ಸಲುವಾಗಿ ಈ ಪ್ರಯೋಗವನ್ನೇ ಮಾಡಿದರು. ಇದೇ ರಾಗದಲ್ಲಿ ಚಿತ್ರದ ಇನ್ನೊಂದು ಗೀತೆ ‘ಗಗನವು ಎಲ್ಲೋ’ವನ್ನು ಸಂಯೋಜಿಸಿದರು. ಇದು ನಾಯಕಿಯ ಪ್ರೇಮದ ಉತ್ಕರ್ಷವನ್ನು ಹೇಳುವ ಗೀತೆ. ಇದನ್ನು ಸೂಚಿಸುವ ಸಲುವಾಗಿ ಜೀವ ಸ್ವರ ರಿಷಭವನ್ನೇ ಕೈ ಬಿಟ್ಟರು. (ಆರೋಹಣ ಸ ಗ2 ಮ1 ಪ ನಿ2 ಸ, ಅವರೋಹಣ ಸ ನಿ2 ಪ ಮ2 ಗ2) ಭೀಮ್ ಪಲಾಸ್ ಔಢವ ಸಂಪೂರ್ಣ ರಾಗವಾಗಿರುವುದರ ಲಕ್ಷಣಗಳನ್ನು ಬಳಸಿ ಕೊಂಡಿದ್ದಾರೆ.
ಇದರಂತೆ ಅವರು ವಿಜಾತಿ ಸ್ವರಗಳನ್ನು ಬಳಸುವಲ್ಲಿ ಕೂಡ ವೈಶಿಷ್ಟ್ಯವನ್ನು ತೋರಿದ್ದಾರೆ. ‘ನಾಂದಿ’ ಚಿತ್ರದ ‘ಹಾಡೊಂದು ಹಾಡುವೆ’ ಗೀತೆ ಮಧ್ಯಮಾವತಿಯಲ್ಲಿ ಸಂಯೋಜಿತವಾಗಿದ್ದರೂ ಈ ರಾಗದಲ್ಲಿ ಇಲ್ಲದ ಗ 2 ಬಂದಿದೆ. ಇದು ಗೀತೆಗೆ ಬೇಕಾದ ಭಾವನಾತ್ಮಕ ಚೌಕಟ್ಟನ್ನು ನಿರ್ಮಿಸಿದೆ. ‘ಮಗುವೇ ನಿನ್ನ ಹೂನಗೆ’ ಚಿತ್ರದ ಇನ್ನೊಂದು ವಿಶಿಷ್ಟವಾದ ಗೀತೆ. ಇಲ್ಲಿ ಜೋಗಳದ ಸಂಭ್ರಮದಲ್ಲಿಯೇ ನೋವಿನ ಎಳೆ ಕೂಡ ಬರುವಂತೆ ಸ್ವರ ಸಂಯೋಜನೆ ಮಾಡಿದ್ದಾರೆ. ಸಾರಮತಿ ವಿಜಯಭಾಸ್ಕರ್ ಅವರಿಗೆ ಬಹಳ ಪ್ರಿಯವಾದಂತಹ ರಾಗ. ಈ ರಾಗದಲ್ಲಿ ಅವರು ರಾಗ ಸಂಯೋಜನೆ ಮಾಡಿದ ‘ಭಾರತ ಭೂಶಿರ ಮಂದಿರ ಸುಂದರಿ’ (ಉಪಾಸನೆ) ‘ಎಲ್ಲೆಲ್ಲೂ ಸಂಗೀತವೆ’ (ಮಲಯ ಮಾರುತ) ಎರಡೂ ಪ್ರಯೋಗಶೀಲ ಗೀತೆಗಳೇ ಆಗಿವೆ.
ಮದ್ರಾಸಿನ ಅಶೋಕ ನಗರದ ವಿಶಾಲವಾದ ಮನೆಯಲ್ಲಿದ್ದಾಗ ಮನೆಯೇ ಮುಚ್ಚಿ ಹೋಗುವಷ್ಟು ಗಿಡಗಳನ್ನು ಬೆಳೆಸಿದ್ದರು. ಅವುಗಳ ಜೊತೆಗೆ ಒಡನಾಡುತ್ತಾ ಸಂಗೀತವನ್ನು ಅರಸುತ್ತಿದ್ದರು. ಅವರ ಬಳಿ ಹಸಿರು ಬಣ್ಣದ ಮಾರುತಿ ಕಾರು ಇತ್ತು. ಅದನ್ನು ಅವರೇ ಡ್ರೈವ್ ಮಾಡುತ್ತಿದ್ದರು. ಬೇಸರವಾದಾಗ ಮರೀನಾ ಬೀಚ್‌ಗೆ ಹೋಗಿ ಕಾಲ ಕಳೆಯುವುದು ಅವರ ಅಭ್ಯಾಸವಾಗಿತ್ತು. ಕನ್ನಡದಲ್ಲಿ ಸಾಕಷ್ಟು ಪ್ರತಿಭಾವಂತ ಗಾಯಕರಿದ್ದಾರೆ. ಅವರಿಗೆ ಅವಕಾಶಗಳು ಸಿಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅವರು, ತಮ್ಮ ಚಿತ್ರಗಳಲ್ಲಿ ಅನೇಕ ಹೊಸ ಗಾಯಕರಿಗೆ ಅವಕಾಶಗಳನ್ನು ನೀಡಿದ್ದರು. ಕನ್ನಡ ಚಿತ್ರರಂಗ ಬೆಂಗಳೂರಿನಲ್ಲಿಯೇ ನೆಲೆ ನಿಲ್ಲಬೇಕು. ಆಗ ಕನ್ನಡ ವಾದ್ಯಗಾರರಿಗೆ ಅವಕಾಶ ಸಿಕ್ಕುತ್ತದೆ ಎಂದು ಪ್ರತಿಪಾದಿಸಿದ್ದರು. ಸಂಕೇತ್ ಸ್ಟುಡಿಯೋ ಆದಾಗ ಬಹಳ ಸಂಭ್ರಮಿಸಿದ್ದರು. ಹೋಟೆಲ್ ರೂಂನಲ್ಲಿ ಸಂಗೀತ ಸಂಯೋಜನೆ ಮಾಡುವ ಆಗಿನ ಪದ್ದತಿಯ ಕುರಿತು ಅವರಿಗೆ ವಿರೋಧವೇನು ಇರಲಿಲ್ಲ. ಸ್ಟುಡಿಯೋಗಳಲ್ಲಿ ಕಾಲ್‌ಶೀಟ್ ದುಬಾರಿಯಾಗಿದ್ದ ಕಾರಣ ಇದು ಅನಿವಾರ್ಯವಾಗಿತ್ತು. ಹಾಡು ಹುಟ್ಟುವುದಕ್ಕೆ ಇಂತಹ ಸ್ಥಳವೇ ಬೇಕು ಎಂದೇನು ಇಲ್ಲ ಎನ್ನುವುದು ಅವರ ವಿಚಾರಧಾರೆ.
ವಿಜಯಭಾಸ್ಕರ್ ಅವರಿಗೆ ಬೆಂಗಳೂರಿಗೆ ಬರುವ ಹಂಬಲ ಮೂಡಿ ಚೆನ್ನೈನಲ್ಲಿ ಸ್ವಂತ ಮನೆ ಇದ್ದರೂ ಜೆ.ಪಿ.ನಗರದಲ್ಲಿ ತಮ್ಮ ಕಲ್ಪನೆಯ ಮನೆಯನ್ನು ಕಟ್ಟಿಸಿಕೊಂಡು ಇಲ್ಲಿಯೇ ವಾಸಕ್ಕೆ ಬಂದರು. ಆದರೆ 2002ರ ಮಾರ್ಚ್ 3ರಂದು ತೀವ್ರ ಹೃದಯಾಘಾತದಿಂದ ನಿಧನರಾದರು. ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗ ಅವರಿಂದ ಪಡೆಯಬೇಕಾದ ಬಹಳಷ್ಟನ್ನು ಕಳೆದುಕೊಂಡಿತು. ಅವರು ಮಧುರವಾಗಿ ಮೂಡಿಸಿದ ಸಾವಿರಾರು ಹಾಡುಗಳು ಮಾತ್ರ ಇಂದಿಗೂ ಅವರ ನೆನಪಾಗಿ ನಮ್ಮ ಜೊತೆಯಲ್ಲಿ ಉಳಿದು ಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.