ADVERTISEMENT

ಸ್ವರ ಸೌರಭದಿಂದ ’ಗುರು ಸ್ಮೃತಿ’ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 23:26 IST
Last Updated 19 ಜುಲೈ 2024, 23:26 IST
   

ಬೆಂಗಳೂರು: ಸ್ವರ ಸೌರಭವು ವಾರ್ಷಿಕ ಸಂಗೀತ ಕಾರ್ಯಕ್ರಮ ’ಗುರು ಸ್ಮೃತಿ’ಯನ್ನು ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಹಭಾಗಿತ್ವದಲ್ಲಿ ಆಚರಿಸುತ್ತಿದೆ. 

ಕಾರ್ಯಕ್ರಮದಲ್ಲಿ ಪ್ರಸಿದ್ಧ ವಾಯೋಲಿನ್‌ ವಾದಕ ನಾಡಯೋಗಿ ವಿದ್ವಾನ್ ವಿ.ವಿ.ಸುಬ್ರಮಣ್ಯರಿಗೆ ’ಸಾಧನಾಚಾರ್ಯ’ ಬಿರದು ನೀಡಿ ಗೌರವಿಸಲಾಗುತ್ತದೆ. ಅವರು ಮಗ ವಿದ್ವಾನ್ ವಿ.ವಿ.ಎಸ್. ಮುರುಳಿ ಜೊತೆಗೂಡಿ ಪ್ರದರ್ಶನ ನೀಡಲಿದ್ದಾರೆ.

ವಿದ್ವಾನ್ ಎ.ರೇಣುಕಾ ಪ್ರಸಾದ್, ವಿದ್ವಾನ್ ಬಿ.ಎಸ್. ಪುರುಷೋತ್ತಮ್ ಅವರು ಕೂಡ ವಾಯೋಲಿನ್‌ ಪ್ರದರ್ಶನ ನಡೆಸಿಕೊಡಲಿದ್ದಾರೆ. ಮಾಧುರಿ ಕೌಶಿಕ್ ಹಾಗೂ ತಂಡ ಗಾಯನ ಪ್ರದರ್ಶನ ನೀಡಲಿದ್ದಾರೆ.

ADVERTISEMENT

ಈ ಹಿಂದೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪದ್ಮಭೂಷಣ ಡಾ.ಎಂ.ಬಾಲಮುರುಳಿ ಕೃಷ್ಣ, ಪದ್ಮಭೂಷಣ ಡಾ.ಎಲ್.ಸುಭ್ರಮಣ್ಯಂ, ಪದ್ಮಭೂಷಣ ಎನ್.ರಾಜಮ್,  ಪದ್ಮಭೂಷಣ ಪ್ರೊ.ಟಿ.ಎನ್.ಕೃಷ್ಣನ್, ಪ್ರೊ.ರಾಮರತ್ನಮ್, ಪದ್ಮಭೂಷಣ ಡಾ.ಆರ್.ಕೆ. ಶ್ರೀಕಾಂತ್ ಅವರಿಗೆ ’ಸಾಧನಾಚಾರ್ಯ’ ಬಿರದು ನೀಡಲಾಗಿತ್ತು.

ಸುಗಮ ಸಂಗೀತವನ್ನು ಪ್ರಚಾರ ಮಾಡಲು ಸಂಗೀತ ಶಿಕ್ಷಣ, ಕಾರ್ಯಕ್ರಮ, ವಾದ್ಯಗಳ ತರಬೇತಿ, ಸಂಗೀತ ತರಬೇತಿ ಕಾರ್ಯಗಾರ, ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಎರಡು ದಶಕಗಳಿಂದ ಸ್ವರ ಸೌರಭ ನಡೆಸಿಕೊಂಡು ಬಂದಿದೆ. 

ಪ್ರಸಿದ್ದ ವಾಯೋಲಿನ್ ವಾದಕ ಆರ್.ಆರ್. ಕೇಶವಮೂರ್ತಿ ಅವರು ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡುವ ಮೂಲಕ, ಈ ಕ್ಷೇತ್ರದಲ್ಲಿ ಅವರು ನೆಲೆಯೂರಲು ಕಾರಣರಾಗಿದ್ದಾರೆ. ಅವರು ಸಂಗೀತದ ಕುರಿತು ಬರೆದಿರುವ 13 ಪುಸ್ತಕಗಳು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ. ಅವರ ಆಶಯದಂತೆ ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಂಗೀತದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. 

ಜಯನಗರದ 8ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ಸಭಾಂಗಣದಲ್ಲಿ ಜುಲೈ.20ರ ಸಂಜೆ 4ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ಸಂಗೀತಾಸಕ್ತರು ಭಾಗವಹಿಸುವಂತೆ ಕೋರಿದ್ದಾರೆ. ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ನಾಡರಂಜನಿ ಸಂಗೀತ ಸಭಾ ಕಾರ್ಯದರ್ಶಿ ಜಿ.ಬಾಬು ಹಾಗೂ ಶಿಕ್ಷಣವಾದಿ ಶಾಮಸುಂದರ ಶರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.