ADVERTISEMENT

ಎಂ.ಎಸ್. ಶೀಲಾಗೆ ವೀಣೆ ರಾಜಾರಾವ್‌ ಪ್ರಶಸ್ತಿ ಪ್ರದಾನ

ನಾದಲೋಕ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:45 IST
Last Updated 28 ಡಿಸೆಂಬರ್ 2018, 19:45 IST
ಎಂ.ಎಸ್‌.ಶೀಲಾ
ಎಂ.ಎಸ್‌.ಶೀಲಾ   

ಮೈಸೂರು ವೀಣಾ ಪರಂಪರೆಯಲ್ಲಿ ಗಾನ ಕಲಾಭೂಷಣ ಎಲ್. ರಾಜಾರಾವ್ (1909- 1979) ಅವರು ಸೃಜನಶೀಲ ಪ್ರಯೋಗಗಳಿಗೆ ಹೆಸರಾದ ಪ್ರತಿಭಾವಂತ ಕಲಾವಿದ.

ವೈಣಿಕ, ಗಾಯಕ, ಬೋಧಕ, ಲೇಖಕ, ವಾಗ್ಗೇಯಕಾರ, ಸಂಗೀತಶಾಸ್ತ್ರಜ್ಞ, ಚಿತ್ರಕಾರ, ರಂಗಭೂಮಿ ನಟ, ಮುದ್ರಕ-ಪ್ರಕಾಶಕ ಹೀಗೆ ಹಲವಾರು ನೆಲೆಗಳಲ್ಲಿ ಅವರದು ಬಹುಮುಖ ಕಲಾರಾಧನೆ. ಸಂಗೀತಶಾಸ್ತ್ರ ಕುರಿತು ಅವರು ಕನ್ನಡದಲ್ಲಿ ಬರೆದ ಪುಸ್ತಕಗಳು ಇಂದಿಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿವೆ.

ಶರಣರ ವಚನಗಳು, ದಾಸರ ಪದಗಳು ಮತ್ತು ಕನ್ನಡ ಗೀತೆಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವ ಮೂಲಕ ‘ಕನ್ನಡ ಸಂಗೀತ'ವನ್ನು ಬೆಳೆಸುವ ಅವರ ಪ್ರಯತ್ನ ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಗೌರವದ ಸ್ಥಾನ ಪಡೆಯುತ್ತದೆ.

ADVERTISEMENT

ಈ ಸಂಗೀತ ಸಾಧಕರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ, ಅವರ ಗಮನಾರ್ಹ ಕೊಡುಗೆಯ ಸ್ಮರಣೆಗಾಗಿ ಸ್ಥಾಪಿತವಾದ ಗಾನಕಲಾಭೂಷಣ ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ' ಯನ್ನು ಇದುವರೆಗೆ ಸಂಗೀತದ ಮೇರು ಪ್ರತಿಭಾವಂತರಾದ ಗಾನಕಲಾಭೂಷಣ ಆರ್. ವಿಶ್ವೇಶ್ವರನ್, ಪದ್ಮಭೂಷಣ ಆರ್.ಕೆ. ಶ್ರೀಕಂಠನ್, ಪದ್ಮಶ್ರೀ ಕದ್ರಿ ಗೋಪಾಲನಾಥ್, ಸಂಗೀತ ಸಾಮ್ರಾಟ್ ಚಿತ್ರವೀಣಾ ಎನ್. ರವಿಕಿರಣ್, ಮಹಾಮಹೋಪಾಧ್ಯಾಯ ಡಾ. ಆರ್. ಸತ್ಯನಾರಾಯಣ, ಗಾನಕಲಾಭೂಷಣ ರಾಜಲಕ್ಷ್ಮೀ ತಿರುನಾರಾಯಣನ್ ಮತ್ತು ಸಂಗೀತ ರತ್ನ ಡಾ. ರಾಧಾ ವಿಶ್ವನಾಥನ್, ರುದ್ರಪಟ್ಟಣಂ ಸಹೋದರರಾದ ಸಂಗೀತಕಲಾರತ್ನ ಶ್ರೀ ಆರ್.ಎನ್. ತ್ಯಾಗರಾಜನ್ ಮತ್ತು ಸಂಗೀತಕಲಾರತ್ನ ಡಾ.ಆರ್.ಎನ್. ತಾರಾನಾಥನ್ ಅವರಿಗೆ ಅವರಿಗೆ ನೀಡಿ ಗೌರವಿಸಲಾಗಿದೆ.

2018 ರ ಪ್ರಶಸ್ತಿಯನ್ನು ಸಂಗೀತ 'ಕಲಾರತ್ನ ವಿದುಷಿ ಎಂ.ಎಸ್. ಶೀಲಾ ಅವರಿಗೆ ನೀಡಲಾಗುತ್ತಿದೆ.

ವಿದುಷಿ ಎಂ.ಎಸ್. ಶೀಲಾ
ಶಾಸ್ತ್ರೀಯತೆಯ ಚೌಕಟ್ಟಿನಲ್ಲಿ ಮನೋಧರ್ಮ ಸಂಗೀತವನ್ನು ಅರಳಿಸುವ ಕರ್ನಾಟಕ ಸಂಗೀತದ ಅಭಿಜಾತ ಕಲಾವಿದೆ ಶೀಲಾ. ಸಂಗೀತಗಾರರ ಮನೆತನದಲ್ಲಿ ಹುಟ್ಟಿದ ಅವರು ತಮ್ಮ ತಾಯಿ ವಿದುಷಿ ಎಂ.ಎನ್. ರತ್ನ ಅವರಿಂದ ಪ್ರಾರಂಭಿಕ ಶಿಕ್ಷಣ ಪಡೆದು, ನಂತರ ತ್ಯಾಗರಾಜರ ಪರಂಪರೆಗೆ ಸೇರಿದ ಪದ್ಮಭೂಷಣ, ಸಂಗೀತ ಕಲಾನಿಧಿ ಡಾ. ಆರ್.ಕೆ. ಶ್ರೀಕಂಠನ್ ಅವರ ಪ್ರಧಾನ ಶಿಷ್ಯರಲ್ಲಿ ಒಬ್ಬರಾಗಿ ಉನ್ನತ ಶಿಕ್ಷಣ ಪಡೆದು ತಮ್ಮ ಸಂಗೀತ ಪ್ರತಿಭೆಯಿಂದ ಬೆಳಗುತ್ತಿದ್ದಾರೆ.

ಗಾಯಕಿಯಾಗಿ ಮತ್ತು ಬೋಧಕಿಯಾಗಿ ಅವರು ನಿರಂತರ ನಾದಾನ್ವೇಷಣೆಯಲ್ಲಿ ತೊಡಗಿದ್ದಾರೆ. ದೇಶದ ವಿವಿಧ ರಾಜ್ಯಗಳು ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಸಂಗೀತ ಕಛೇರಿಗಳು, ಸಂಗೀತ ಕಾರ್ಯಾಗಾರಗಳು, ಏಕರಾಗ ಮತ್ತು ಏಕ ವಾಗ್ಗೇಯಕಾರ ಸಂಗೀತ ಕಾರ್ಯಕ್ರಮಗಳು ಮುಂತಾದುವನ್ನು ಪ್ರಸ್ತುತ ಪಡಿಸುವ ಮೂಲಕ ವಿದುಷಿ ಶೀಲಾ ಸಂಗೀತ ಸಂಚಾರದಲ್ಲಿ ನಿರತರಾಗಿದ್ದಾರೆ.

ನಮ್ಮ ನಾಡಿನ ಸಂಗೀತ ಪರಂಪರೆಯ ರಕ್ಷಣೆಯಲ್ಲಿ ಬಹಳ ಆಸಕ್ತರಾಗಿರುವ ಅವರು `ಹಂಸಧ್ವನಿ ಕ್ರಿಯೇಷನ್ಸ್' ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ವೈವಿಧ್ಯಮಯ ಸಂಗೀತದ ಧ್ವನಿಮುದ್ರಿಕೆಗಳನ್ನು ರೂಪಿಸುತ್ತಿದ್ದಾರೆ.

ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವದ ಜೊತೆಗೆ, ದೇಶದ ಹಲವಾರು ಸಂಗೀತ ಸಂಸ್ಥೆಗಳ ಮನ್ನಣೆಗಳು ಅವರನ್ನು ಅರಸಿ ಬಂದಿವೆ.

ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ: ಪುರಸ್ಕೃತರು– ಎಂ.ಎಸ್‌.ಶೀಲಾ,ಅಧ್ಯಕ್ಷತೆ ಮತ್ತು ಪ್ರಶಸ್ತಿ ಪ್ರದಾನ–ಕನ್ನಡದ ಪ್ರಸಿದ್ಧ ಕವಿ ಮತ್ತು ವಿಮರ್ಶಕಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಮುಖ್ಯ ಅತಿಥಿ– ಹಿಂದುಸ್ತಾನಿ ಸಂಗೀತದ ಖ್ಯಾತ ಕಲಾವಿದಮುದ್ದುಮೋಹನ್, ಸಂಗೀತ ಕಾರ್ಯಕ್ರಮ– ವಿದುಷಿ ಯೋಗವಂದನ - ವೀಣೆ, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ - ಮೃದಂಗ, ವಿದ್ವಾನ್ ಆನೂರು ಸುನಾದ್ - ಖಂಜಿರ, ಸ್ಥಳ– ಪತ್ತಿ ಸಭಾಂಗಣ, ಶ್ರೀರಾಮ ಮಂದಿರ,1ನೇ ಮುಖ್ಯ ರಸ್ತೆ,ನರಸಿಂಹರಾಜ ಕಾಲೊನಿ.ಇದೇ 30ರಂದು (ಭಾನುವಾರ) ಸಂಜೆ 5.

ವೀಣೆ ಎಲ್‌.ರಾಜಾರಾವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.