ADVERTISEMENT

ಶಂಕರ ವೀಣೆಯಲ್ಲಿ ತಾನ–ತರಾನ

ಉಮಾ ಅನಂತ್
Published 2 ಡಿಸೆಂಬರ್ 2023, 0:30 IST
Last Updated 2 ಡಿಸೆಂಬರ್ 2023, 0:30 IST
<div class="paragraphs"><p>ವಿದುಷಿ ಕಮಲಾ ಶಂಕರ್</p></div>

ವಿದುಷಿ ಕಮಲಾ ಶಂಕರ್

   

ಸರಸ್ವತಿ ವೀಣೆ, ಚಿತ್ರವೀಣೆ, ಮೋಹನ ವೀಣೆ, ವಿಪಂಚಿ ವೀಣೆ... ಒಂದೇ ಎರಡೇ. ಇದೇ ಸಾಲಿಗೆ ಸೇರಿದ ಶಂಕರ ವೀಣೆ ವಿಶಿಷ್ಟ ನಾದ ಕೊಡುವ ತಂತಿವಾದ್ಯ. ಈ ವೀಣೆಯ ಪ್ರತಿಪಾದಕಿ ಹಿಂದೂಸ್ತಾನಿ ಸಂಗೀತ ವಿದುಷಿ ಕಮಲಾ ಶಂಕರ್. ಉತ್ತರ ಪ್ರದೇಶದ ವಾರಾಣಸಿಯವರಾದ ಕಮಲಾ, ಸ್ಲೈಡ್ ಗಿಟಾರ್‌ ಅಥವಾ ಹವಾಯಿಯನ್ ಗಿಟಾರ್‌ ಎಂಬ ತಂತಿವಾದ್ಯವನ್ನು ಮಾರ್ಪಡಿಸಿ ಹೊಸ ಶಂಕರ ವೀಣೆಯನ್ನು ಅನ್ವೇಷಿಸಿದ್ದು, ದೇಶದಲ್ಲೇ ಈ ವೀಣಾ ಪ್ರಕಾರವನ್ನು ನುಡಿಸುವ ವಿರಳ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಂಕರ ವೀಣೆಯಲ್ಲಿ ನುಡಿಸಾಣಿಕೆ ಕ್ರಮ ವಿಭಿನ್ನ. ಮಧುರಾತಿಮಧುರ ನಾದ ಕೊಡುವ ಈ ವೀಣೆಯ ‘ಗಾಯಕಿ ಅಂಗ್‌’ನಲ್ಲಿ ವಿಶೇಷ ನೈಪುಣ್ಯ ಪಡೆದಿರುವ ಕಮಲಾ ಕಳೆದ 42 ವರ್ಷಗಳಿಂದ ಈ ವಾದ್ಯ ನುಡಿಸುತ್ತಿದ್ದಾರೆ. ಸ್ಲೈಡ್‌ ಗಿಟಾರ್‌ ವಾದ್ಯಕ್ಕೆ ಇನ್ನಷ್ಟು ಸುಧಾರಿತ ರೂಪ ನೀಡಿ ‘ಶಂಕರ ವೀಣೆ’ ಎಂದು ಹೆಸರಿಟ್ಟದ್ದು 2001ರಲ್ಲಿ.

ADVERTISEMENT

ಆಕಾಶವಾಣಿಯ ಟಾಪ್‌ ಗ್ರೇಡ್‌ ಕಲಾವಿದೆಯಾಗಿರುವ ಕಮಲಾ, ತಾನ್‌ಸೇನ್‌ ಸಮಾರೋಹ್, ಸಂಕಟ್‌ ಮೋಚನ್, ಸವಾಯ್‌ ಗಂಧರ್ವ ಉತ್ಸವ,

ಉಸ್ತಾದ್‌ ಅಲ್ಲಾವುದ್ದೀನ್ ಖಾನ್‌ ಸಂಗೀತ ಸಮಾರೋಹಗಳಲ್ಲಿ ಕಛೇರಿ ನೀಡಿದ್ದಲ್ಲದೆ. ಯುರೋಪ್‌ನ ಬುಡಾಪೆಸ್ಟ್‌ ಉತ್ಸವ, ಆಸ್ಟ್ರೇಲಿಯಾ, ಅಬುಧಾಬಿ, ದುಬೈ, ಕುವೈತ್, ಅಮರಿಕ, ಲಂಡನ್‌ಗಳಲ್ಲಿ ಈ ತಂತಿವಾದ್ಯದ ಸವಿಯನ್ನು ಉಣಬಡಿಸಿದ್ದಾರೆ.

‘ನಮ್ಮದು ಸಂಗೀತ ಪರಂಪರೆಯ ಕುಟುಂಬವೇನಲ್ಲ. ನನ್ನ ತಾಯಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುತ್ತಿದ್ದರು. ಆದರೆ ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಂಡದ್ದು ನಾನೇ ಮೊದಲು. ಗಿಟಾರ್‌ ವಾದ್ಯದತ್ತ ಚಿಕ್ಕವಳಿದ್ದಾಗಲೇ ಆಕರ್ಷಿತಳಾದೆ.

ಗಿಟಾರ್‌ನಲ್ಲಿ ಗಾಯಕಿ ಅಂಗ (ಗಾಯನದಂತೇ ನುಡಿಸಾಣಿಕೆ) ಹಾಗೂ ತಂತ್ರಕಾರಿ ಅಂಶಗಳನ್ನು ಚೆನ್ನಾಗಿ ಒಡಮೂಡಿಸಬಹುದು ಎಂದು ಕಂಡುಕೊಂಡೆ. ಈ ತಂತಿವಾದ್ಯದಲ್ಲೇ ಹೆಚ್ಚಿನ ಅಧ್ಯಯನ ಮಾಡಿದ ಫಲವೇ ‘ಶಂಕರ ವೀಣೆ’ಯ ಉಗಮ’ ಎಂದು ಹೇಳುತ್ತಾರೆ ವಿದುಷಿ ಕಮಲಾ.

‘ಶಂಕರ ವೀಣೆಯನ್ನು ವಿಶೇಷವಾಗಿ ರೂಪಿಸಿದ್ದೇನೆ. ಮರದಿಂದ ತಯಾರಿಸಿದ್ದು 22 ತಂತಿ ಅಳವಡಿಸಲಾಗಿದೆ. ಇದರ ‘ಟೋನಲ್ ಕ್ವಾಲಿಟಿ’ ವಿಭಿನ್ನ. ‘ಗಾಯಕಿ ಅಂಗ್‌’ ಸೂಕ್ತವಾಗುವಂತೆ ರಚಿಸಲಾಗಿದೆ. ಇದರಲ್ಲಿ ಹಿಂದೂಸ್ತಾನಿ ಸಂಗೀತವಲ್ಲದೆ ಭಜನ್‌, ಠುಮ್ರಿ, ಬಾಲಿವುಡ್‌ ಹಾಡುಗಳನ್ನು ಮಧುರಾತಿಮಧುರವಾಗಿ ನುಡಿಸಬಹುದು’ ಎಂದು ವಾದ್ಯದ ರಚನೆಯನ್ನು ವಿವರಿಸುತ್ತಾರೆ ಅವರು.

‘ನನಗೆ ರವೀಂದ್ರ ಸಂಗೀತ (ಮ್ಯೂಸಿಕ್‌ ಆಫ್‌ ಬೆಂಗಾಲ್‌) ಬಹಳ ಇಷ್ಟ. ಇದನ್ನು ಶಂಕರ ವೀಣೆಯಲ್ಲಿ ಚೆನ್ನಾಗಿ ನುಡಿಸಬಹುದು’ ಎಂದೂ ಹೇಳುತ್ತಾರೆ ಈ ವಿದುಷಿ. www.drkamalashankar.com ವೆಬ್‌ಸೈಟ್‌ನಲ್ಲಿ ಇವರ ಶಂಕರ ವೀಣೆ ಕಛೇರಿಗಳನ್ನು ಆಸ್ವಾದಿಸಬಹುದು.

ಭಾನುವಾರ ಬೆಂಗಳೂರಿನಲ್ಲಿ...

ಭಾನುವಾರ (ಡಿ. 3) ಬೆಂಗಳೂರಿನ ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌ ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿರುವ ಸಿ. ಅಶ್ವಥ್‌  ಸಭಾಭವನದಲ್ಲಿ ಆಯೋಜಿಸಿರುವ ‘ಸ್ವರ ಸಂಭ್ರಮ’ ಕಾರ್ಯಕ್ರಮದಲ್ಲಿ ಶಂಕರ ವೀಣೆ ಹಾಗೂ ಹಾರ್ಮೋನಿಯಂ ವಾದಕ ರವೀಂದ್ರ ಕಾಟೋಟಿ ಅವರ ಜುಗಲ್‌ಬಂದಿ ಕಛೇರಿಯಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.