ತಾಯಿ ಭುವನೇಶ್ವರಿಯನ್ನು ಪಿಟೀಲು ನಾದದಲ್ಲಿ ಒಲಿಸಿ ‘ಪ್ರಜಾವಾಣಿ ದಸರಾ ಸಂಗೀತ ಮಹೋತ್ಸವ’ಕ್ಕೆ ಮುನ್ನುಡಿ ಬರೆದವರು ಮೈಸೂರು ಮಂಜುನಾಥ್ ಹಾಗೂ ಅವರ ಪುತ್ರ ಸುಮಂತ್ ಮಂಜುನಾಥ್. ಈ ಜೋಡಿ ಮಲ್ಲಿಗೆಯ ಕಂಪಿನ ನಾಡಿನಲ್ಲಿ ರಾಗಗಳ ಹೊನಲನ್ನು ಹರಿಸಿ ಕೇಳುಗರಿಗೆ ‘ಸಂಗೀತ ಸಾಂತ್ವನ’ ನೀಡಿದರು.
ನವರಾತ್ರಿ ಎಂದರೆ ಅದು ಶಕ್ತಿದೇವತೆಯ ಪೂಜೆ. ಇಲ್ಲಿ ನಾದದೇವತೆಯೂ ಆರಾದಿಸಲ್ಪಡುತ್ತಾಳೆ. ರಾಗ, ನಾದ, ಭಾವ, ಗತಿ, ನಡೆ, ಸ್ಥಾಯಿ.. ಎಲ್ಲವೂ ಅದ್ಭುತ ರಸಪಾಕವಾಗಿ ಅವತರಿಸುತ್ತದೆ. ನವರಾತ್ರಿಯ ದಿನಗಳಲ್ಲಿ ನೊಂದ ಮನಗಳಿಗೆ ಸಾಂತ್ವನ ನೀಡಲೆಂದೇ ‘ಪ್ರಜಾವಾಣಿ ಬಳಗ’ ದಸರಾ ಸಂಗೀತ ಮಹೋತ್ಸವ ಆಯೋಜಿಸುತ್ತಿದೆ. ಇದಕ್ಕೆ ಶನಿವಾರ ಮುಸ್ಸಂಜೆ ಮುನ್ನುಡಿ ಬರೆದದ್ದು ಮಲ್ಲಿಗೆ ಕಂಪಿನ ಮೈಸೂರಿನ ವಿಶ್ವವಿಖ್ಯಾತ ಕಲಾವಿದರಾದ ವಿದ್ವಾನ್ ಮೈಸೂರು ಮಂಜುನಾಥ್ ಹಾಗೂ ಅವರ ಸುಪುತ್ರ ಸುಮಂತ್ ಮಂಜುನಾಥ್ ಅವರು ಪಿಟೀಲು ಯುಗಳ ವಾದನ ನಡೆಸಿಕೊಡುವ ಮೂಲಕ.
‘ಇಡೀ ಜಗತ್ತಿನಲ್ಲಿ ಒಂದೇ ಭಾಷೆ, ಒಂದೇ ಧರ್ಮ ಎಂಬುದು ಇದ್ದರೆ ಅದು ನಿಸ್ಸಂದೇಹವಾಗಿ ಸಂಗೀತ ಮಾತ್ರ’ ಎನ್ನುತ್ತಲೇ ಜಾಗತಿಕ ಧರ್ಮವನ್ನು ಸಂಗೀತದ ಮನೋಧರ್ಮದೊಂದಿಗೆ ಬೆಸೆದರು ಮೈಸೂರು ಮಂಜುನಾಥ್. ಅಲ್ಲದೆ ಸುಪ್ರಸಿದ್ಧ ರಾಗ ‘ಮೋಹನ ಕಲ್ಯಾಣಿ’ಯನ್ನು ಆಯ್ದುಕೊಂಡು ದೇವಿ ಭುವನೇಶ್ವರಿಯನ್ನು ಆರಾಧಿಸುವ ‘ಭುವನೇಶ್ವರಿಯ ನೆನೆಮಾನಸವೇ..’ ಎಂಬ ಕೃತಿಯನ್ನು ಆದಿತಾಳದಲ್ಲಿ ನುಡಿಸಿದರು. ಔಡವ–ಸಂಪೂರ್ಣ ಸ್ವರ ಸಮೂಹವನ್ನು ಹೊಂದಿರುವ ಹಾಗೂ 65ನೇ ಮೇಳಕರ್ತ ರಾಗ ‘ಮೇಚಕಲ್ಯಾಣಿ’ಯಲ್ಲಿ ಜನ್ಯವಾಗಿರುವ ಈ ಜನಪ್ರಿಯ ರಾಗ ಪಿಟೀಲಿನ ಎಳೆ ಎಳೆಯಲ್ಲೂ ಮಾರ್ದನಿಸಿದಾಗ ಅಲ್ಲಿ ಜಗತ್ತಿನ ನೋವೆಲ್ಲ ಮಾಯವಾದಂತಹ ಅನುಭವ!
ಮುಂದೆ ವಲಚಿ ರಾಗದಲ್ಲಿ ಅನುರಣಿಸಿದ್ದು ‘ಜಾಲಂಧರ ಸುಪೀಟಸ್ಥೆ ಜಪಾ ಕುಸುಮ ಬಾಸುರೆ...’ ಮುತ್ತಯ್ಯ ಭಾಗವತರು ರಚಿಸಿದ ಅಪರೂಪದ ಕೃತಿ. ಹದಿನಾರನೇ ಮೇಳಕರ್ತ ‘ಚಕ್ರವಾಕ’ದಲ್ಲಿ ಜನ್ಯವಾಗಿರುವ ಈ ರಾಗಕ್ಕೆ ಹಿತಮಿತವಾದ ಆಲಾಪವನ್ನೂ ಸೇರಿಸಿದರು. ರೂಪಕ ತಾಳದಲ್ಲಿರುವ ಈ ಕೃತಿಯ ಸೊಬಗನ್ನು ಹೆಚ್ಚಿಸಿದ ಇಬ್ಬರು ವಾದಕರ ಪಿಟೀಲಿನ ನಾದ ಕೇಳಲು ಅತ್ಯಂತ ಆಪ್ಯಾಯಮಾನವಾಗಿತ್ತು.
ಕಛೇರಿಯ ಮುಖ್ಯ ಭಾಗವಾಗಿ ಮತ್ತೊಂದು ಜನಪ್ರಿಯ ಕೃತಿ ‘ಭಜರೇ ಮಾನಸ’ ಅಭೇರಿ ರಾಗ ಆದಿತಾಳದಲ್ಲಿ ಮೊಳಗಿತು. ಸವಿಸ್ತಾರವಾಗಿ ರಾಗಾಲಾಪ ಮಾಡಿ ಕೃತಿಯ ಅಂದವನ್ನು ಹೆಚ್ಚಿಸಿದ ಈ ಪಿಟೀಲುಗಳ ನಾದದ ಎಳೆಎಳೆಯೂ ‘ಹಲಸಿನ ಹಣ್ಣಿನ ತೊಳೆಯನ್ನು ಜೇನಿನಲ್ಲಿ ಅದ್ದಿ ತಿಂದ’ ಅನುಭವ ನೀಡಿತು. ಕೊನೆಯಲ್ಲಿ ಈ ಕೃತಿಗೆ ಅದ್ಭುತ ‘ತನಿ’ಯನ್ನೂ ಬಿಟ್ಟರು. ತನಿಯಾವರ್ತನದಲ್ಲಿ ಮೃದಂಗ ವಾದಕ ತುಮಕೂರು ರವಿಶಂಕರ್ ಲಯದ ಮಾಧರ್ಯವನ್ನು ಕೇಳುಗರಿಗೆ ಉಣಬಡಿಸಿದರು. ಈ ರಾಗ ಕೇಳುಗರನ್ನು ಸಂಪೂರ್ಣವಾಗಿ ನಾದದಲೆಯಲ್ಲಿ ಮಿಂದೇಳುವಂತೆ ಮಾಡಿತು.
ಕೊನೆಯದಾಗಿ ಶುದ್ಧಧನ್ಯಾಸಿ ರಾಗ ಆದಿತಾಳದ ‘ಹಿಮಗಿರಿ ತನಯೆ ಹೇಮಲತೇ...’ ಎಂಬ ಸುಪ್ರಸಿದ್ಧ ಕೃತಿ ರಾಗ ನುಡಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದ ಕಛೇರಿಯನ್ನು ಸಂಪನ್ನಗೊಳಿಸಿದರು. ತಂಬೂರದಲ್ಲಿ ಮಂಜುನಾಥ್ ಅವರ ಸುಪುತ್ರಿ ಮಾಲವಿ ಸಹಕರಿಸಿ ಇಡೀ ಕುಟುಂಬ ನಾದೋಪಾಸನೆಯಲ್ಲಿ ತೊಡಗಿಸಿಕೊಂಡದ್ದು ಕೂಡ ವಿಶೇಷವೇ ಆಗಿತ್ತು. ’ಸಂಗೀತ ಎನ್ನುವುದು ನೊಂದ ಮನಕ್ಕೆ ನೀಡುವ ಔಷಧಿ’ ಎಂದು ಸಂಗೀತೋತ್ಸವ ಉದ್ಘಾಟಿಸಿದ ಪಂ.ರಾಜೀವ್ ತಾರಾನಾಥ್ ಹೇಳಿದ ಮಾತನ್ನು ಅಕ್ಷರಶಃ ನೆನಪಿಸಿದಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.