ADVERTISEMENT

ಯಾವ ನಾನು?

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಕಲೆ: ಸೃಜನ್‌
ಕಲೆ: ಸೃಜನ್‌   

ನನ್ನ ಮಾತು ಇಲ್ಲಿ ಯಾರಿಗೂ

ಅರ್ಥವಾಗುವುದಿಲ್ಲ.

ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,

ADVERTISEMENT

‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದು

ನಿಮ್ಮ ಬೇರುಗಳನ್ನು ಕತ್ತರಿಸಿದ ಅವರ

ಉದ್ಧಟತನದ ಬಗ್ಗೆ ನಿಮಗೆ ಅರಿವಿಲ್ಲ.

ನೀವೀಗ ಯೋಚಿಸುತ್ತಿರಬಹುದು

ಇಲ್ಲಿ ನೀರು ಕುಡಿಯುವುದಕ್ಕೆ ನನ್ನ ಹಕ್ಕಾದರೂ ಏನು?

ಈ ನೆಲವನ್ನೇ ಮನೆಯೆಂದುಕೊಂಡರೂ

‘ನೀನು ಇಲ್ಲಿಯವನಲ್ಲ’ ಎಂದು ಸಾರಿ ಹೇಳುವ

ದೇಶದವರನ್ನು ಮನುಷ್ಯರೆನ್ನಲು ಹೇಗೆ ಸಾಧ್ಯ?

ಸಹಪಾಠಿಗಳು ಪರದೇಸಿ ಎಂದು ಕರೆದಾಗ

ಅವರಾಡುವ ಮಾತು ನನಗೂ ತಿಳಿಯುತ್ತದೆ

ಎಂದೇಕೆ ಅವರಿಗೆ ತಿಳಿಯುವುದಿಲ್ಲ?

ಹಸಿವು ಎಲ್ಲರಿಗೂ ಒಂದೇ ಅಲ್ಲವೇ?

ನನ್ನ ಕಾಲುಗಳು ಅವರಿಗಷ್ಟೇ ಗೊತ್ತಿರುವ

ದಾರಿಗಳಲ್ಲಿ ಸಂಚರಿಸದೇ ಇರಬಹುದು.

ಆದರೇನು? ಇಷ್ಟು ವರುಷ ಇದೇ ನೆಲದಲ್ಲಿ

ನನ್ನ ಕನಸುಗಳ ಬಿತ್ತಿದ್ದೇನೆ.

ಕೆಲವೊಮ್ಮೆ ಈ ಕಾಂಕ್ರೀಟ್ ಗೋಡೆಗಳಲ್ಲಿ ಹುದುಗಿ

‘ಇನ್ನೂ ಬದುಕಿದ್ದೇನೆ’ ಎಂದು ಕಿರುಚಬೇಕೆನಿಸುತ್ತದೆ.

ಆದರೇನು? ನನ್ನ ದೇಹ ಒಂದೇ ನೆಲದ ಹೂವಲ್ಲ

ಯಾರ ಭೂಮಿ ಅಥವಾ ಯಾವ ಆಕಾಶ ನನ್ನದು?

ಯಾವ ಸಮುದ್ರ ಅಥವಾ ಗಾಳಿ ನನ್ನದು?

ನಾನು ಒಬ್ಬನೋ ಅಥವಾ ಹಲವೋ?

ಬೆರೆತುಹೋಗದ ಜಗತ್ತುಗಳ ಬೆಸೆದಿರುವ

ಸೇತುವೆ ನಾನೆಂದು ತಿಳಿಯಲು

ಖುಷಿ ಮತ್ತು ದುಃಖ ಏಕಕಾಲಕ್ಕೆ ಆಗುತ್ತದೆ.

ಕಂಬಳಿಯ ಕೆಳಗೆ ದೂಡಿದ ಹಲವಾರು ದೂಳಿನ

ಕಣಗಳಲ್ಲಿ ನಾನೂ ಒಬ್ಬನೆಂದು,

ತಂದೆ ತಾಯಿಗಳಿಂದ ದೂರವಾದ ಮಕ್ಕಳಲ್ಲಿ

ನಾನೂ ಒಬ್ಬನೆಂದು ನನಗೆ ತಿಳಿದಿದೆ.

ನನ್ನದೇ ಹಲವುಗಳಲ್ಲಿ ಯಾವುದನ್ನಾರಿಸಿಕೊಂಡು

ನಾನಾಗಬೇಕೆಂದು ತಿಳಿಯುತ್ತಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.