ಹಸಿವಿನಿಂದಿದ್ದ ಹಕ್ಕಿಗೊಂದು
ನಿದ್ದೆಗೆ ಜಾರಿದ ಮೊಸಳೆ ಕಂಡಿತ್ತು
ಅದರ ಹಲ್ಲಿನ ಸಂದಿಯಲ್ಲಿ
ಆಹಾರದ ತುಣುಕನು ನೋಡಿತ್ತು
ಮೊಸಳೆ ಏಳುವುದರೊಳಗೆ
ತಿನ್ನುವ ಆಸೆ ಅದಕೆ ಮೂಡಿತ್ತು
ಮೆಲ್ಲ ಮೆಲ್ಲನೆ ಹಾರಿ ಬಂದು
ಬಾಯಿಯ ಹತ್ತಿರ ನಿಂತಿತ್ತು
ನಿಧಾನವಾಗಿ ಕೊಕ್ಕನು ಚಾಚಿ
ರುಚಿಯ ನೋಡುವುದರಲ್ಲಿತ್ತು
ಮೊಸಳೆಯು ಕಣ್ಣು ಮಿಟುಕಿಸಿದ್ದ ಕಂಡು
ಭಯದಿ ನಡುಗತೊಡಗಿತ್ತು.
‘ಹೆದರಬೇಡ ತಮ್ಮಾ, ಅದು ನಿನ್ನದೇ ಪಾಲು’
ಎಂದು ಮೊಸಳೆ ನುಡಿದಿತ್ತು
ನಂಬಲು ಆಗದೆ ಬಿಡಲೂ ಆಗದೆ
ಯೋಚಿಸುತ್ತಾ ಹಕ್ಕಿ ನಿಂತಿತ್ತು
ಆಹಾರವನು ಹೆಕ್ಕಿ ತಿಂದ ಹಕ್ಕಿ
ಮೊಸಳೆಗೆ ಧನ್ಯವಾದ ಹೇಳಿತ್ತು
ಬಾಯಿ ಸ್ವಚ್ಚವಾದ ಖುಷಿಯಲಿ
ಮೊಸಳೆ ಮುಗುಳು ನಗೆ ಬೀರಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.