ADVERTISEMENT

ಚನ್ನಪ್ಪ ಅಂಗಡಿ ಅವರ ಕವನ: ದ್ವಿಜ...

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2024, 1:23 IST
Last Updated 15 ಸೆಪ್ಟೆಂಬರ್ 2024, 1:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅವ್ವನ ಇನ್ನೊಂದು ಹೆಸರೇ ಬೂಬು
ಆಗ.
ಈಗ,
ಬೆಳೆದು ನಿಂತವನು
ಕಳೆದುಕೊಂಡವನು
ತಿಳಿದುಕೊಂಡವನು
ಹೊಸ್ತಿಲ ಒಳಗಿನದನ್ನು
ತಿಳಿಯದ ಕತ್ತಲನ್ನು
ಗೋಡೆಯ ಆಚೆಯನ್ನು
ಆಚೆಯ ಈಚೆಯನ್ನು

ಒಂದೊಂದು ಬಣ್ಣಕೆ
ಒಂದೊಂದು ಅರ್ಥ
ಒಂದೊಂದು ಬದಿಗೆ
ಒಂದೊಂದು ಪಂಥ
ಒಂದೊಂದು ದಿಕ್ಕಿಗೆ
ಒಂದೊಂದು ಗುಮಾನಿ
ಹಿಂದೆಂದೂ ಹೊಳೆಯದ
ಆ ಈ ಅಕ್ಷರಗಳು

ADVERTISEMENT

ಮುಂದೆಂದೋ ಧುತ್ತೆಂದು
ನಾಮರೂಪ ಪಡೆದು
ನಾನು ಬೇರೆ ನೀನು ಬೇರೆ
ಬೂಬು ಬೇರೆ ಅವ್ವ ಬೇರೆ
ಜಾತಿಯಿಂದ ಜಾತಕದಿಂದ
ನೀತಿಯಿಂದ ಸೂತಕದಿಂದ

ಬಿಸಿ ರಕ್ತ ಹಸಿ ರಕ್ತ
ಬಿಳಿ ರಕ್ತ ಇಳಿ ರಕ್ತ
ಕಣ್ಣು ಮಂಜು ಕೈಯ ಪಂಜು
ಕಣ್ಣುಗಳೆರಡು
ಬಿಂಬ
ಒಂದು
ಅವ್ವನಾಗಲು ಸಾಧ್ಯವಿಲ್ಲ ಸಾಬರ ಬೂಬು
ಎಂಬುದಕೆ ಹುಡುಕಬೇಕಾಗಿದೆ ಸಬೂಬು

ಯುಗಧರ್ಮ...

ಚೈತ್ರ ಚಿಗುರು ಸೊಬಗಿನ ಮುನ್ನುಡಿಯು ಯುಗಾದಿ ಹಬ್ಬ
ಮಾವುಬೇವು ತಳಿರುತೋರಣ ಕುಣಿಸುತಿವೆ ಖುಷೀಲಿ ಹುಬ್ಬ
ದೇವ-ದಿಂಡಿರು ಪೂಜೆ-ಪುನಸ್ಕಾರ ನಾಡತುಂಬ ಸಾಲುಹಬ್ಬ
ಪ್ರಕೃತಿಯನು ಪೂಜಿಸುವುದು ಯುಗಾದಿಯೆಂಬ ಹಾಡುಗಬ್ಬ |

ಸುಡುವ ಸೂರ್ಯನ ಕಂಡು ಕಡುನೋವನುಂಡ ಭೂಮಿ
ಅಗ್ನಿಜ್ವಾಲೆಯ ನುಂಗಿ ವಿರಮಿಸುತಲಿರುವ ಪರಮ ಸಂಯಮಿ
ನೆನೆದಂತೆ ಬರುತಿಹವು ತಿಥಿಗಳು ಅಷ್ಟಮಿ ನವಮಿ ದಶಮಿ
ಕೋಗಿಲೆಯ ಕೊರಳಲಿ ಬಂಧಿಯಾದಳು ಅಮರಪ್ರೇಮಿ |

ಪ್ರಭವ ವಿಭವ ಕ್ಷಯ ಅಕ್ಷಯ ಸರದಿಯಲಿ ಸಂವತ್ಸರ
ಹುಟ್ಟು ಸಾವು ಪ್ರಕೃತಿಯೊಲುಮೆ ಕಾಲವೆಂದು ನಿರಂತರ
ಪ್ರಮೋದ ವಿನೋದ ವಿಳಂಬಿ ವಿರೋಧ ತರತರ
ಬೇವುಬೆಲ್ಲ ನೋವುನಲಿವು ಏಳುಬೀಳು ಭವಾಂತರ |

ಗಿಡಗಿಡದಲು ಮುಗುಳು ಹೂಹೀಚುಕಾಯಿಯ ಒಗರು
ಅಡ್ಡಮಳೆಗೆ ಬಾಯ್ದೆರೆದ ಚರಾಚರಗಳಿಗೆಂತ ಪೊಗರು
ಬಿಸಿಲ ಬಿಸಿಯು ಮಳೆಯ ಹಸಿಯು ಜೀವಸ್ಫೂರ್ತಿ ಮರ್ಮ
ಬಾಳ ಹರಿವು ಬದುಕ ತಿರುವು ನಮ್ಮನಿಮ್ಮ ಯುಗಧರ್ಮ |

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.