ADVERTISEMENT

ಮಕ್ಕಳ ಪದ್ಯ: ಕ-ಚ-ಟ-ತ-ಪ ಹಾಡು...

ಅಕ್ಷತಾ ಕೃಷ್ಣಮೂರ್ತಿ
Published 14 ನವೆಂಬರ್ 2021, 3:19 IST
Last Updated 14 ನವೆಂಬರ್ 2021, 3:19 IST
PA-Paapu
PA-Paapu   

ಕರಿಕರಿ
ಕಾಗೆ
ಕಿರಿಕಿರಿ ಮಾಡುತ
ಕೀಲು ಗೊಂಬೆಯಾಗಿತ್ತು
ಕುಹು ಕುಹು
ಕೂಗಲು ಆಗದೆ ಇರಲು
ಕೃ ಕೃ ರಾಗವ ಹಾಡಿತ್ತು
ಕೆಲಸದ ನಡುವೆ
ಕೇಕೆಯ ಹಾಕುತ
ಕೈ ಕೈ ಕುಲುಕಿತ್ತು
ಕೊಕ್ಕಿನ ತುದಿಗೆ
ಕೋಳಿ ಮಾಂಸ ಸಿಕ್ಕಿಸಿಕೊಂಡಿತ್ತು
ಕೌದಿಯ ಹೊದ್ದ ಕಾಗೆಗೀಗ
ಕಂಬಳಿ ಬೇಕಿತ್ತು
ಕಃ ಕಃ ಎನ್ನುತ ಕೆಮ್ಮಿದಾಗ
ಮಾಂಸ ಜಾರಿತ್ತು
ಕ ದಿಂದ ಕಃ ವರೆಗೆ
ಕಾಗೆಯ ಡೈರಿ
ಹೀಗೆ ಮುಗಿದಿತ್ತು


ADVERTISEMENT

ಚಕೋರ ಹಕ್ಕಿಯೆ ಕೇಳು
ಚಾಮರ ಬೀಸುವ ಹಾಡು
ಚಿಗುರು ತುಂಬುವ ಗತ್ತು
ಚೀಕು ಪದಗಳ ಹೊತ್ತು
ಚುಕ್ಕಿಯು ನಗುತ ನಿಂತಿಹಳಿಲ್ಲಿ
ಚೂರು ನಗೆಯ ಸುತ್ತಲು ಚೆಲ್ಲಿ
ಚೆಲುವಿನ ಆಟಕೆ ಕರೆಯುವಳು
ಚೇತನ ತುಂಬುತ ನಲಿಯುವಳು
ಚೃ ಚೃ ಎಂದು ಹಾಡಿತ್ತೀಗ
ಚೈತ್ರನು ಕಾಣಲು ಬಂದಿಹನೀಗ
ಚೊಚ್ಚಲ ಪ್ರೀತಿಯ ಹಂಚಿಹನು
ಚೋದ್ಯದ ಆಟವ ಆಡುವನು
ಚೌಕಿಮನೆಯಲಿ ನಗುವಿತ್ತು
ಚಂದಿರ ತಣ್ಣಗೆ ಮರಳಿತ್ತು
ಚಃ ದ ಪರಿಮಳ ಮನೆ ತುಂಬಿತ್ತು

ಟಪೋರಿ ಪೋರಿ ಕಣ್ಣು ಹೊಡೆದು
ಟಾಟಾ ಎಂದಿತ್ತ
ಟಿಕ್ಲಿ ಪೌಡರ್ ಲಿಪಸ್ಟಿಕ್ ಬಡಿದು
ಟೀಕುಟಾಕು ಆಗಿತ್ತ
ಟುವಾಲು ವ್ಯಾನಿಟಿ ಬ್ಯಾಗನು ಹಾಕಿ
ಟೂರಿಂಗ ಟಾಕೀಜಿಗೆ ಹೋಗಿತ್ತ
ಟೃ ಟೃ ಎಂದು ಪಕ್ಕದ್ಮನೆ ಆಂಟಿ ಕಣ್ ಕೆಂಪು ಮಾಡಿತ್ತ
ಟೆಂಗಾ ಎಂದು ಹೆಬ್ಬೆಟ್ಟ ತೋರ್ಸಿ ಕೀಟಲೆ ಮಾಡಿತ್ತ
ಟೇಲರ್ ಆಗಿ ಹೊಲಿಗೆ ಕಲಿತು
ಟೈಸನ್‌ಗೆ ಅಂಗಿ ಹೊಲೆದಿತ್ತ
ಟೊಣಪ ಎನ್ನುತ ನಾಯಿಮರಿಗೊಂದು
ಟೋಪಿಯ ಹಾಕಿತ್ತ
ಟೌನ್‌ಶಿಪ್‌ ತಿರುಗಿ
ಟಂ ಟಂ ಗಾಡಿ ಏರಿ ಬಿನ್ನಾಣ ಮಾಡುತ್ತಿತ್ತ
ಟಃ ಟಃ ಹಾಡು ಹಾಡುತ್ತಿತ್ತ

ತಳಪ ಎಂಬ ಊರು ಇಲ್ಲೆ ಹತ್ರ ಇದೇರಿ
ತಾಯಿ ಜೊತೆ ಅಣ್ಣ ತಮ್ಮ ಮಾಣಿ ಇದ್ದಾರ್ರಿ
ತಿನ್ನಲು ಕೊಡು ಎನ್ನುತ ಮಾಣಿ ಬಂದಾನ್ರಿ
ತೀಜೋರಿಲಿ ಒಂದೇ ಪ್ಯಾಕು ಜೀಲೆಬಿ ಇತ್ತೂರಿ
ತುಮಿ ಹಮಿ ಎನ್ನುತ್ತ ಜಗಳ ಆಡ್ಯಾರ್ರಿ
ತೂತಿರೊ ಜೀಲೆಬಿಗೆ ಭಾರಿ ಬೇಡಿಕೇರಿ
ತೃಪ್ತಿಯಿಂದ ತಿನ್ನೊಕಂತು ಇವ್ರು ಬಿಡೊಲ್ಲಾರಿ
ತೆಪ್ಪಗಿದ್ದ ಮಾಣಿ ಮಾತ್ರ ಹುಷಾರ್ ಆಗ್ಯಾನ್ರಿ
ತೇರಿನ ದಿನವೆ ದೊಡ್ಡ ಪರೀಕ್ಷೆ ಪಾಸ್ ಮಾಡ್ಯಾನ್ರಿ
ತೈನಿ ಮಾಡಾಕ ಹತ್ತಾನ್ರಿ ದುಡ್ ಗಳ್ಸಾಕ ಹತ್ತಾನ್ರಿ
ತೊಡೆ ತಟ್ಟಿ
ತೋಟದ ಕೆಲ್ಸ ಪಸಂದ ಮಾಡ್ಯಾನ್ರಿ
ತೌರು ಈಗ ಮೊದಲಿಗಿಂತ ಚಂದ್ ಆಗೇದ್ರಿ
ತಂಪು ಸುತ್ತಮುತ್ತ ಎದ್ದು ಹಸಿರು ಉಂಟಲ್ರಿ
ತಃ ತಃ ಎನ್ನುತ್ತ ಈ ಕಥೆ ಮುಗಿಸುವಾ ರೀ

ಪಟಪಟ ಬಡಿಯುವ
ಪಾಪು ಕಣ್ಣು
ಪಿಳಿಪಿಳಿ ನೋಡಿತ್ತು
ಪೀಪಿಯ ಊದಿ
ಪುಳಕದಿಂದಲಿ
ಪೂನಗೆ ಚೆಲ್ಲಿ
ಪೃ ಪೃ ಎಂದಿತ್ತು
ಪೆಟ್ಟಿಗೆ ಒಳಗಿನ
ಪೇರಲೆ ಹಣ್ಣು
ಪೈಜಾಮು ಸೇರಿತ್ತು
ಪೊತ್ತು ಪೊತ್ತಿಗೂ
ಪೋಷಾಕು ಪೋರಿ
ಪೌಡರ್ ಹಚ್ಚಿತ್ತು
ಪಂಚಮಿ ಹಬ್ಬಕ್ಕೆ ಕರೆದಿತ್ತು
ಪಃ ಎನ್ನುತ್ತು ನಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.