ತಬ್ಬಲಾಗುತ್ತಿರಲಿಲ್ಲ
ಬಾರೆ ಹೊಲದ ಬದದ
ಮುತ್ತುಗದ ಮರದ ಬಡ್ಡೆಯನ್ನು
ಸಮ ಐದಾರು ಆಳುಗಳು ತಬ್ಬಿದರೂ...!
ಸಿಟುರು ಪಟರೆ ಚಕ್ಕೆ ಪರೆ ಬಿಡುವ
ಧಿರಿಸು ಧಿಮ್ಮಿ ಗರ್ಭಸೀಳಿದ
ರೆಂಬೆ ಕೊನರು ಕೊಂಬೆಗಳು
ಮೂಡಿ ಮುಕ್ಕಳಿಸುತ್ತಿದ್ದವು
ಚಂದ್ರಚಕೋರ ಹಸಿರೆಲೆ ಅರಳಿಸುತ್ತ.
ಮೀರಿಸುತ್ತಿದ್ದವು
ಮುತ್ತುಗಮರದ ಎಲೆಗಳು
ಶಿರಭಾಗು ಸುಳಿಬಾಳೆ ಎಲೆಗಳನ್ನೂ
ಬಿಡುಬೀಸು ಮದಗಜ ಹಿಂಡು ಕಿವಿಗಳಗಲ ಅರಳಿ
ಕರ್ಣನಪ್ಪ ಬಿಡುವ
ಎಳೆಬಿಸಿಲು ಚೂರಿ ಬಿರುಬಿಸಿಲು
ಬೆರಗು ಬಣ್ಣ ಹೊಮ್ಮುತ್ತ
ನಳನಳಿಸುತ್ತಿದ್ದವು ಅಚ್ಚ ಹಸಿರು ಘಮಲಿನಲ್ಲಿ.
ಹೆಣ್ಣಿಲೆ ಗ೦ಡೆಲೆಗಳಿವೆ
ಸುಗ್ಗಿಸರಮಾಲೆ ಮುತ್ತುಗದ ಎಲೆಗಳಲ್ಲು.
ಝಗಝಗ ಝಗಿಸು ಗೊಂಪೆ
ಗಿಣಿಮೂಗು ತುದಿಚೂಪು ಗಂಡೆಲೆಗಳು
ಸೆಟೆದು ನಿಂತಿರುತ್ತವೆ ಅವತರಿಸಿ.
ಹರಡಿಕೊಂಡಿರುತ್ತವೆ ಹಿಂಡಿಂಡು ಹೆಣ್ಣೆಲೆಗಳು ಗಂಡೆಲೆಗಳ ಬೆನ್ನಿಗಂಟಿಕೊಂಡು
ಝಂಪೆ ಝಂಪೆ ಗೊಂಚಲಲ್ಲಿ.
ಮಗುನ್ ಮಾರಿಯಾದ್ರೂ ಮಾಳ್ಯಾವ್ ಮಾಡಿ
ಹಿರೀಕರಿಗೆ ಹೀರ್ಗಾರ್ ತಾಳಿ ಇಟ್ಟು
ಧೂಪ ಧೂಮಲೀಲೆ ಪೂಜೆ
ಎಡೆ ಇಡುವ ಪಕ್ಷದಲ್ಲಿ
ಹಾಸುಣ್ಣುವ ಹಾಸು ಎಲೆಯ ಕಟ್ಟುವುದು
ನಲಿನಲಿವ ಹೆಣ್ಣು ಎಲೆಗಳಲ್ಲಿ.
ಮನೆಮಂದಿ ಉಪವಾಸ ವ್ರತ ಮಾಡಿ
ಸಿಹಿ-ಕಾರ ಸಕಲೆಂಟು ತಿಂಡಿತೀರ್ಥಗಳ
ಬಂಧುಬಳಗ ಸಮ್ಮುಖ
ಮುಟ್ಟು ಚಿಟ್ಟಾಗದ
ಹನ್ನೆರಡು ಎಡೆಗೆ ಇಡುವ
ಹಸಿರು ಜೊನ್ನೆಗಳ ಕಟ್ಟುವುದು
ತೊಟ್ಟು ಮುರಿದ ತುದಿಚೂಪು ಗಂಡೆಲೆಯಲ್ಲಿ.
ಸಿಗಿದ ಹಂಚಿಕಡ್ಡಿಯಲ್ಲಿ
ಬಗ್ಗಿ ಬಳುಕಾಡು ಹಸಿ ಎರಡು ಗಂಡೆಲೆಗಳಲ್ಲಿ
ತುಣುಕು ಜಂಬರವು ನುಸಿಯದಂತೆ
ತಳಕಟ್ಟಿ ಚೌಕಾಕಾರ
ಅಪ್ಪ ಕಟ್ಟುವ ಜೊನ್ನೆಗಳು
ಹಬ್ಬ ಕಟ್ಟುತಿತ್ತು ಕಣ್ಣಿಗೆ.
ಬೆಂದು ಬೆಸಣೆ ಬಿಡುವ
ನೆಣದ ಬಾಡೆಸರಿರಲಿ
ಮೂಗು ಮೂಗುತಿ ಕೆಂಪು
ಕ್ಹ...ಕ್ಹ...ಕ್ವ...ಕ್ವ...ಕಾಕು ಹಾಕುವ
ಎಂಥಾ ಹ್ಯಾಟೆ ಕಡತಗಳೇ ಇರಲಿ
ಕೊಕೊ... ಕೊಕ್ಕೊ.. ಕೊ..... ಕೊಕ್ಕೊ
ಮುದ್ದು ಮಾಡಿ ಮೇವು ತಿನ್ನಿಸಿ
ರೆಕ್ಕೆ ಬಡಿದು ಕೊಕ್ಕು ಕವುಚಿ
ಕ್ಷಣಾರ್ಧದಲ್ಲಿ ಪತರುಗುಟ್ಟಿಸಿ
ಕೊರಕೊರ ಪರಪರ ಮೆಟ್ಟಿ
ಮೊಟ್ಟೆ ಇಕ್ಕಿಸುವ
ಥಕ್ಕತ್ತೈ ಜೂಲು ಜೋಡಿ ಹುಂಜ
ಕೋಳಿ ಹೆಸರಿರಲಿ
ಕುಚ್ಚು ಕೊರವ ಔಲು ಚೇಣಿ
ಅಥವಾ ಕರ್‍ಮೀನು ಹೆಸರಿರಲಿ
ಹಲಸು ಬಡುಕು ಸೋರೆ
ಅವರೆ ತೊಗರಿ ಉರುಳಿ ಕಾಳೆಸರಿರಲಿ
ದಂಟು ಕನ್ನೆ ಪುಂಡಿ ಸೆಣಬು ಸೊಪ್ಪೆಸರ
ಬಸಿಸಾರು ಒಂದೆಸರಿರಲಿ
ಅವ್ವ ತಿರುತಿರುವಿ ಬುಡುವ
ಬಿದುರು ದಸಿ ಮುಕ್ಕಣ್ಣ
ತೆಂಗುಚಿಪ್ಪು ಸುಡುಸುಡು ಸೌಟು ಸಾರನ್ನು
ಕುಕ್ಕಲಿ ಕಾವಲಿ ಕೂರಿಸುತಿತ್ತು
ಘಮ್ಮನೆಯ ರಮ್ಮನೆಯ
ಮುತ್ತುಗದ ಜೋಡೆಲೆ ಜೊನ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.