ADVERTISEMENT

ಮುತ್ತುರತ್ನಗಳ ಸಾಗರ: ಅಗಲಿದ ಕವಿ ಜರಗನಹಳ್ಳಿ ಶಿವಶಂಕರ್‌ ಸಾಹಿತ್ಯದ ಅವಲೋಕನ

ದೊಡ್ಡರಂಗೇಗೌಡ
Published 9 ಮೇ 2021, 6:11 IST
Last Updated 9 ಮೇ 2021, 6:11 IST
ಜರಗನಹಳ್ಳಿ ಶಿವಶಂಕರ್‌
ಜರಗನಹಳ್ಳಿ ಶಿವಶಂಕರ್‌   

ನವಮಾಸ ಬೇಕು, ಹುಟ್ಟಿ ಬರುವುದಕ್ಕೆ
ಕ್ಷಣ ಮಾತ್ರ ಸಾಕು ಬಿಟ್ಟು ಹೋಗುವುದಕ್ಕೆ
***
ಕೆಸರಿಗೆ ಪಾಪ... ಹೆರಿಗೆ ನೋವು; ಬಂತು ಕಾಡಿತು ಕಮಲ ಹುಟ್ಟಿತು
ಕೆಸರು ತಿಳಿಯಾಗಿ, ಎಸಳಿನ ಮೇಲೆ ಮುತ್ತಾಗಿ ನಕ್ಕಿತು!
***
ದೊಡ್ಡ ದೊಡ್ಡ ಮರಗಳು ನೀಡುವ ಹಲಸು ಮಾವು
ಉಳಿಯಲಾರವು ಒಂದೆರಡು ವಾರಗಳೂ;
ಸಣ್ಣ ಸಣ್ಣ ಪೈರುಗಳು ನೀಡುವ ಕಾಳುಗಳು
ರಾಗಿ ಜೋಳ ಧಾನ್ಯಗಳು... ಉಳಿಯುತ್ತವೆ.
ಹತ್ತಾರು ವರ್ಷಗಳು

***
ಮೇಲೆ ಉಲ್ಲೇಖಿಸಿದ ಮೂರು ಹನಿಗವನಗಳನ್ನು ಕನ್ನಡಕ್ಕೆ ಕೊಟ್ಟವರು ಕವಿ ಜರಗನಹಳ್ಳಿ ಶಿವಶಂಕರ್. ಇಂಥ ನೂರಾರು ಹನಿಗವನಗಳು ಅವರ ಸೃಜನಶೀಲ ಬತ್ತಳಿಕೆಯಲ್ಲಿ ಜೀವಂತವಾಗಿವೆ. ಕೆಲವೇ ಮಾತುಗಳಲ್ಲಿ ಹಲವು ಅರ್ಥಗಳನ್ನು ಬಿಂಬಿಸಬಲ್ಲ ಕಾವ್ಯ ಕೃಷಿ ಶಿವಶಂಕರ್ ಅವರದು. ನಾನು ಅವರನ್ನು ಮೂರು ದಶಕಗಳಿಂದ ಚೆನ್ನಾಗಿ ಬಲ್ಲೆ.

ಎತ್ತರದ ನಿಲುವು; ಸದೃಢ ಶರೀರ. ಆಜಾನುಬಾಹು. ಆರಿಸಿಕೊಂಡದ್ದು ಪುಟ್ಟ ಪುಟ್ಟ ಕವಿತೆ ಬರೆಯುವರ ಕಾವ್ಯಕೃಷಿ ಕಾಯಕ. ಕಿರಿದರಲ್ಲಿ ಪಿರಿದರ್ಥ! ಸಂಕ್ಷಿಪ್ತತೆ ಎಂಬುದು ಅಷ್ಟು ಸುಲಭವೇನಲ್ಲ. ಸಾವಿರ ಪದಗಳು ಕಟ್ಟುವ ಕಡೆ ಒಂದು ಮುತ್ತು ಕಟ್ಟಿ ಎಲ್ಲ ಸಹೃದಯರ ಗಮನ ಸೆಳೆಯುತ್ತಾರೆ. ಇದು ಎಲ್ಲರಿಗೂ ಸಿದ್ಧಿಸುವ ಕಲೆ ಅಲ್ಲ! ಆದರೆ ಜರಗನಹಳ್ಳಿಯಲ್ಲಿ ಈ ಕಾವ್ಯ ಕೌಶಲ ಕರಗತವಾಗಿದೆ.

ADVERTISEMENT

ಬೆಳಕು ನೀಡದ ನಕ್ಷತ್ರಗಳು
ಸಾಗರದಲ್ಲಿ ದಿಕ್ಸೂಚಿಗಳು!

***

ಅಕ್ಷರ ಎಂದರೆ ಭಾಷೆ ಬರೆವ ವ್ಯಾಪಾರ ಅಲ್ಲ
ಬಿಚ್ಚಿಟ್ಟ ಭಂಡಾರ! ಬಚ್ಚಿಟ್ಟ ಸಾಗರ

* * *
ಕವಿ ಶಿವಶಂಕರ್ ಮಾತು ಆಲದ ಬೀಜದ ಹಾಗೆ. ಆಕಾರದಲ್ಲಿ ತೃಣ: ವಾಗರ್ಥ ಮಣಗಟ್ಟಲೆ; ಟನ್‌ಗಟ್ಟಲೆ!
ನೇಣು ಎನ್ನುವುದು
ಗೇಣು ಹಗ್ಗ
ಪ್ರಾಣ ಎನ್ನುವುದು
ಅದಕ್ಕೆಷ್ಟು ಅಗ್ಗ?
* * *
ಹುಲ್ಲು, ಹಸಿರು ತಿನ್ನುವ ಆನೆಯದಂತ
ಅರಮನೆಯ ಸೇರಿತು
ಹುಲ್ಲೆ, ಹಸು ತಿನ್ನುವ ಹುಲಿಯ ಚರ್ಮ
ಆಶ್ರಮ ಸೇರಿತು!
***
ಹುಟ್ಟಿದ ಮೊದಲು ಕಣ್ಣಿಗೆ ಕಾಣದ ಒಂದು ಕಣ;
ಸತ್ತ ಮೇಲೆ ಒಂದು ದಿನವೂ ಉಳಿಯದ ಹೆಣ!
ಬದುಕಿರುವಾಗ ಬ್ರಹ್ಮಾಂಡವನ್ನೆ ಬಯಸುವ ಗುಣ

* * *
ಹೀಗೆ ನಮ್ಮ ನಲ್ಮೆಯ ಕವಿ ಜರಗನಹಳ್ಳಿ ಶಿವಶಂಕರ್ ಕೇವಲ ಸಾಮಾಜಿಕವಾಗಿ ಬರೆಯದೆ ಆಧ್ಯಾತ್ಮಿಕವಾಗಿಯೂ ಬರೆಯುತ್ತಾರೆ, ತಾತ್ವಿಕವಾಗಿ ಚಿಂತಿಸುತ್ತಾರೆ, ದಾರ್ಶನಿಕರ ಹಾಗೆ ಕಾವ್ಯಕಾಣ್ಕೆ ನೀಡುತ್ತಾರೆ.

ಕೇವಲ ಚುಟುಕು ಕವಿಯಾಗಿ ಉಳಿಯದೆ ಕೆಲವು ಮನೋಜ್ಞ ವಚನಗಳನ್ನು ಬರೆದಿದ್ದಾರೆ. ತನ್ಮೂಲಕ ವಚನಕಾರರ ಸಾಲಿಗೆ ಸೇರಿದ್ದಾರೆ. ಇದೊಂದು ವಿಶೇಷ ಸಂಗತಿ.

ಅನ್ನದ ಹಸಿವು ಮಣ್ಣು ತೀರಿಸಿತು
ಒಡಲಿನ ದಾಹ ಹೆಣ್ಣು ತೀರಿಸಿತು
ನೀರು ಗಾಳಿ ಬೆಳಕು ಪ್ರಾಣ ಉಳಿಸಿತು
ನಿನ್ನನ್ನು ಅರಿಯುವ ಹಸಿವು ಸಾವಿಗೂ ಆಚೆ
ಹಾಗೆ ಉಳಿಯಿತು.... ತಂದೆ ನಂಜುಂಡ

ಕವಿ ಕೇವಲ ಭಾವುಕ ಅಲ್ಲ; ರೂಪಕಗಳ ಸೃಷ್ಟಿಕರ್ತ ಕೂಡ. ಸಾಮಾನ್ಯ ಗ್ರಹಿಕೆಯಾಚೆ ಬಹುದೂರ ಸಾಗಿ ಅಸಾಮಾನ್ಯ ಪದವನ್ನು ಕೆತ್ತಿ ಕಡೆಯುತ್ತಾನೆ. ಸ್ಫೂರ್ತಿಯಿಂದ ಓತಪ್ರೋತ ಭಾವಧಾರೆ ಒಮ್ಮೆಗೇ ಚಿಮ್ಮುವುದು ಒಂದು ಬಗೆ. ಲೋಕಾನುಭವವನ್ನು ಪಡೆದ ಕವಿಯ ಸೂಕ್ಷ್ಮಾತಿಸೂಕ್ಷ್ಮ ಗ್ರಹಿಕೆ. ಚಿಂತನ ಮಂಥನದ ಕುಲುಮೆಯಲ್ಲಿ ಕುದಿಕುದಿದು ಆ ಮೂಸೆಯಿಂದ ಹೊರಬಂದ ರನ್ನಗವನ: ಈ ವಚನವೆಂಬ ಅಪರಂಜಿ ಚಿನ್ನ!

ಮಣ್ಣನ್ನು ಮನಸೋ ತುಳಿದು ನಡೆದಾಡುತ್ತೇವೆ
ಕಸ ಸುರಿದು ಮಲಿನಗೊಳಿಸುತ್ತೇವೆ-
ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಗೆ
ಅಡ್ಡ ಬಿದ್ದು ಬಸ್ಕಿ ಹೊಡೆದು
ಭಕ್ತಿಯನ್ನು ಪ್ರದರ್ಶಿಸುತ್ತೇವೆ
ಮೂಲ ಮಣ್ಣನ್ನೇ ಮರೆತುಬಿಡುತ್ತೇವೆ
ಕ್ಷಮಿಸು ತಂದೆ.... ನಂಜುಂಡ

***

ಶಿವಶಂಕರ್ ಅನೇಕ ಕವಿತೆಗಳನ್ನು ಬರೆದಿದ್ದಾರೆ; ಕವನ ಸಂಕಲನವನ್ನು ಹೊರತಂದಿದ್ದಾರೆ. ಅವರು ಒಳ್ಳೆಯ ಕವಿ ಅನ್ನುವುದಕ್ಕೆ ನನ್ನ ದೃಷ್ಟಿಯಲ್ಲಿ ಈ ಒಂದು ಕವಿತೆ ಸಾಕು. ಇದು ಅತ್ಯುತ್ತಮ ನಿದರ್ಶನ.

(ಕವಿತೆ- ತಿಪ್ಪೆ / ನದಿ:ಕೃತಿ)
ತಿಪ್ಪೆಯಿಂದ ಎದ್ದು ಬಂದ
ನಮ್ಮ ಸಸ್ಯ ದೇವರು;
ಪೈರಿನಿಂದ ಹುಟ್ಟಿ ಬಂದ
ನಮ್ಮ ಅನ್ನ ದೇವರು;
ಗಿಡದಿಂದ ಅರಳಿ ನಿಂತ
ನಮ್ಮ ಹೂವ ದೇವರು
ಮರದಿಂದ ಹೊಮ್ಮಿ ಬಂದ
ನಮ್ಮ ಹಣ್ಣ ದೇವರು
ಸಕಲ ಜೀವರಾಶಿ ಒಡಲ
ಹೊಕ್ಕಿ ತಿಪ್ಪೆಯಾದ
ನಮ್ಮ ದೇವರು
ಇದು ದಾರ್ಶನಿಕ ಕವಿತೆ; ಲೌಕಿಕದಲ್ಲಿ ಅಲೌಕಿಕ ಗ್ರಹಿಕೆ ಅನುಭಾವ.
ಮದುವೆ ಮನೆಯಲ್ಲಿ....ಮೆಹಂದಿ ಮಂದಿ
ಮಂಟಪವೆಲ್ಲ ತುಂಬಿ ತುಳುಕುವ ಪರಿಮಳ
ಹೂದಾನಿ ತುಂತುರು.... ಅಲೆ ಅಲೆಯ ಅತ್ತರು!
ಮದುವೆ ಮುಗಿದಂತೆಲ್ಲಾ ಹೆಣ್ಣು ಹಡೆದವರು
ಮಗಳ ಬೀಳ್ಕೊಡಲು ಬಿಕ್ಕಿ ಬಿಕ್ಕಿ ಅತ್ತರು

ಶಿವಶಂಕರ್ ಬೇರೆ ಕವಿಗಳಿಗಿಂತ ಭಿನ್ನ. ನಿಜ ಜೀವನದಲ್ಲಿ ಬಹಳ ಧಾರಾಳ. ಊಟ ತಿಂಡಿ ಕೊಡುಗೆ ಉಪಚಾರ ಪ್ರೀತಿ, ಸ್ನೇಹ, ವಿಶ್ವಾಸ ಅವರು ಸಭೆ ಸಮಾರಂಭಗಳಲ್ಲಿ “ದಾಸೋಹ” ನೀಡುತ್ತಾರೆ. ಅದಕ್ಕೂ ಮಿಗಿಲಾಗಿ ಕನ್ನಡ ಜನತೆಗೆ “ಕಾವ್ಯ ದಾಸೋಹ”ನೀಡಿದ್ದಾರೆ.
ಕವಿತೆಯ ಹುಟ್ಟನ್ನು ಬಹಳ ಮಾರ್ಮಿಕವಾಗಿ ಈ ಕವಿ ಬಣ್ಣಿಸಿದ್ದಾರೆ- ಯಾವುದು ಈ ಕವಿತೆ? ಯಾವ ಊರಲ್ಲಿ ಉಳಿಯುತ್ತೆ? ಎಲ್ಲಿಂದ ಹೇಗೆ ಬರುತ್ತೆ? ಅಂದರೆ-

ಸತ್ತ ನನ್ನ ಅಜ್ಜಿಯಂತೆ ಕಾಣುತ್ತೆ!
ಅಜ್ಜಿಯ ಅಜ್ಜಿಯ ಅಜ್ಜಿಯ
ಹೀಗೆ ತುಂಬಾ ವಯಸ್ಸಾದಂತೆ, ಸುಕ್ಕುಗಟ್ಟಿದ ಮೈತುಂಬ
ಗೆರೆಗೆರೆಯಲ್ಲೂ ತುಂಬಿಕೊಂಡಿದೆ. ಕನ್ನಡದ ದಿವ್ಯ ಚರಿತೆ!

ಜರಗನಹಳ್ಳಿ ಶಿವಶಂಕರ್ ಹಳೆಯ ಭಾಷೆಯನ್ನು ಮಡಿ ಮಾಡಿ (ಭತ್ತದ ಗದ್ದೆ ಮಾಡಿ) ಹೊಸದಾಗಿ ಹೊಳೆಯಿಸುತ್ತಾರೆ. ಅದು ಅವರ ಅಭಿವ್ಯಕ್ತಿಯ ಚಾಕಚಕ್ಯತೆ, ಧಾಟಿಯ ಮಾರ್ಮಿಕ ಗುಣ.

ಶ್ರದ್ಧಾವಂತರೂ, ಕೂಡು ಕುಟುಂಬದಲ್ಲಿ ನಂಬಿಕೆ ಇರುವವರೂ, ಧಾರ್ಮಿಕ ನಡೆಗಳ ಬಗೆಗೆ ಆಸಕ್ತರೂ, ವಿಚಾರಪ್ರಿಯರು., ವಚನ ವಾಙ್ಮಯದ ಪ್ರಚಾರಕರೂ ಆದ ಶಿವಶಂಕರ್ ಆಧುನಿಕರು ಕೂಡ!

ಹವಳದ ನುಡಿಗಳ ಹಡೆಯಬಲ್ಲ ಶಕ್ತಿ ಇವರಿಗಿದೆ
ಇವರ ಕಾವ್ಯ ಕೃಷಿಗೆ ದಣಿವಿಲ್ಲ; ಪುಟಿವ ಕಾರಂಜಿ ಶಕ್ತಿ ಇದೆ.
ಇಂದು ಕನ್ನಡ ಸಾಕಷ್ಟು ಬೆಳೆದಿದೆ; ನಿಜ ಆದರೆ ಅಭಿಮಾನ ಬೆಳೆದಿಲ್ಲ. ಶಿವಶಂಕರ್ ಕನ್ನಡ ಪ್ರೇಮ ಅಪಾರ, ಅನನ್ಯ ಅದ್ವಿತೀಯ.
ಕನ್ನಡವೆಂದರೆ ಅದೇ ನನಗೆ ಬ್ರಹ್ಮಾಂಡ
ಕನ್ನಡಾಮೃತ ಸವಿಯಲು ನಾನಾಗುವೆ ಗರುಡ

* * *
ಕನ್ನಡವೆಂದರೆ ಜನುಮ ಜನುಮಗಳ ಪುಣ್ಯ
ಅದು ಕನ್ನಡಾಂಬೆ ಕರುಣಿಸಿರುವ ಕಾರುಣ್ಯ

ಈ ಹಿರಿಯ ಕವಿಯ ಅನುಭಾವ ಸಿರಿ ದೊಡ್ಡದು, ಆದರ್ಶವಾದದ್ದು! ಮೃಣ್ಮಯ ದಾಟಿ ಚಿನ್ಮಯವಾಗುವ ಕಾವ್ಯಝರಿ ಇವರ ಅಭಿವ್ಯಕ್ತಿ ಪರಿ!
ಉದಾ- ಹಗಲಿನ ಆಹಾರ.... ಇರುಳು
ಇರುಳಿನ ಆಹಾರ.... ಹಗಲು!
ಒಂದನೊಂದು ತಿಂದು
ವಿಸರ್ಜಿಸುವ ಮಲಕ್ಕೆ
“ಕಾಲ” ಎಂಬ ಹೆಸರು

ಕಾಲವನ್ನು ಕನ್ನಡದ ಎಷ್ಟೋ ಕವಿಗಳು ಸೂತ್ರೀಕರಿಸಿದ್ದಾರೆ. ವ್ಯಾಖ್ಯಾನಿಸಿದ್ದಾರೆ. ಆದರೆ ಶ್ರೀ ಶಿವಶಂಕರರಂತೆ ಅನೂಹ್ಯ ರೀತಿ ಅರ್ಥೈಸಿದ ಕವಿ ಇವರೊಬ್ಬರೇ! ಕೆಲವು ಅಮೂಲ್ಯ ಸೃಜನೆಗಳನ್ನು ಸಹೃದಯ ರಸಿಕರ ಆವಾಹನೆಗೆ ತಂದಿದ್ದಾರೆ. ಅವರ ಮೆಚ್ಚುಗೆಯ ನಲ್ಮೆ ಅಭಿಮಾನಗಳ ವಾರಿಧಿಯಲ್ಲಿ ಮಿಂದಿದ್ದಾರೆ.

ಕಾರಣ : ಮೊನಚು ಮಾತು; ದಿಟ್ಟ ಹೊಸತನ ಸ್ಪಷ್ಟ ದಿಟ್ಟಿ...
ಅಪೂರ್ಹ ಹೊಳಹು: ಅನನ್ಯ ವಾಗರ್ಥದಾಚೆಯ ಧ್ವನಿ!
ನಿದರ್ಶನ – ಗಿಡ ನನ್ನದು, ಮರ ನನ್ನದು
ತೋಟ ತೋಪು ಕಾಡು ನನ್ನದು
ಎಂದವರ ಕೈಗೆ ಹಿಡಿಯಲು ಸಿಕ್ಕಿದ್ದು ಕೊನೆಗೆ
ಒಂದು ಸಣ್ಣ ಊರುಗೋಲು ಬಡಿಗೆ
(ಮಳೆ ಸಂಕಲನ)

ಕನ್ನಡ ಕಾವ್ಯ ಕಣಜದಲ್ಲಿ ಶಿವಶಂಕರ್ ಅವರು ಗಟ್ಟಿಕಾಳು... ಬೀಜದ ಕಾಳು! ಇದು ತಾಯಿ ಸರಸ್ವತಿ ಹೆಮ್ಮೆಪಡಬೇಕಾದ ಸಂಗತಿ. ಎಷ್ಟೆಷ್ಟೋ ಬರೆಯಬೇಕಾಗಿಲ್ಲ. ನಾಲ್ಕು ಸಾಲು ಚಿರಂತನವಾಗಿ ಉಳಿವಂಥಾ ಮುತ್ತಿನಂಥ ಮಾತು ಹೆತ್ತರೆ ಸಾಕು!!
ಕೆಲವು ಅಪರೂಪದ ಹನಿಗವನಗಳು: ನನ್ನ ಅಭಿರುಚಿಯ ಆಯ್ಕೆ
ಏರಿದರೆ ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ ಎರಡು ಮೂರಡಿ ಮೇಲೆ
ಜಾರಿದರೆ ಗೋರಿ, ಸಮಾಧಿ, ಬೃಂದಾವನ
ಹೆಚ್ಚೆಂದರೆ ಎರಡು ಮೂರಡಿ ಕೆಳಗೆ!
* * *
ಹತ್ತಾರು ವರುಷ ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು ನೂರಾರು ವರುಷ
* * *
ನೂರು ವರುಷ ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ ಮೂರು ದಿವಸ

ಇದು ಶಿವಶಂಕರ್ ಸಾಮರ್ಥ್ಯ. ಅವರ ಕಾವ್ಯ ಬತ್ತಳಿಕೆಯಲ್ಲಿ ಇನ್ನೂ ಇಂಥ ಎಷ್ಟು ಬಾಣಗಳಿವೆಯೋ! ತಾಯಿ ಭುವನೇಶ್ವರಿಯೇ ಉತ್ತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.