ADVERTISEMENT

ಗಾಂಧಿ ಕೇಸ್

ವೈದೇಹಿ
Published 27 ಜುಲೈ 2019, 19:30 IST
Last Updated 27 ಜುಲೈ 2019, 19:30 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ಅಲ್ಲೆ ಇದ್ದ ಇಲ್ಲೆ ಇದ್ದ

ಎಲ್ಲಿ ಅಂದರಲ್ಲಿ ಇದ್ದ

ಈಗಂದರೆ ಈಗ ಇದ್ದ

ADVERTISEMENT

ಆಗ ಈಗ ಏಗಳಿದ್ದ

ತನಗೆ ತಾನೆ ವೈದ್ಯನಿದ್ದ

ಸತ್ಯ ಪಥ್ಯ ನುಡಿಯುತಿದ್ದ

ಉಪ-ವಾಸದಲ್ಲಿ ಇದ್ದು

ಮದ್ದುಗಿದ್ದು ಹೇಳುತಿದ್ದ

ಎಲ್ಲರ ಕಿಸೇಲಿದ್ದಂತೆ ಇದ್ದ

ಅಜ್ಜನಂತೆ ಅಜ್ಜಿಯಂತೆ

ಕರೆವುದೆ ಸೈ ಬರುತ್ತಿದ್ದ

ಊದ್ದನಗೆ ಚೆಲ್ಲುತಿದ್ದ

ದಾರಿ ಕಾಣದಲ್ಲಿ ತೋರಿ

ನಮ್ಮ ಜೊತೆಗೇ ನಡೆಸುತಿದ್ದ

ರಾಜೀ ಪಂಚಾತಿಕೆಯಲಿ

ಇನ್ನಿಲ್ಲದ ಜಾಣನಿದ್ದ

ಮನೆಮನೆಮನೆ ಗೋಡೆಗಳಲಿ

ಮನಮನಗಳ ಭಿತ್ತಿಗಳಲಿ

ರಾರಾಜಿಸುತಿದ್ದ

ಬರುವವರನು ಹರ್ಷದಿಂದ

ಬನ್ನಿ ಬನ್ನಿ ಎನ್ನುತಿದ್ದ

ಮಾತಿಗಿಳಿದು ಮಾತಿಗೆಳೆದು

ಮೌನಕೆ ಶರಣಾಗುತಿದ್ದ

***

ಚರ್ಚೆಗೊಂದು ವಸ್ತುವಂತೆ

ಜಗಳಕೊಂದು ಕೋಳಿಯಂತೆ

ಚಕಮಕಿಯ ಒಳಗೆ ಹೊರಗೆ

ಗರಗರಗರ ತಿರುಗುತಿದ್ದ

ವಿತರ್ಕ ತರ್ಕ ಗಿರಣಿಯೊಳಗೆ

ಪುಡಿ ಪುಡಿ ಪುಡಿ ಆಗುತಿದ್ದ

ನಿಂತ ಗಾಂಧಿ ಕುಂತ ಗಾಂಧಿ

ಅಂಥ ಗಾಂಧಿ ಇಂಥ ಗಾಂಧಿ

ಎಂಥ ಗಾಂಧಿ ಎಂದು ನಿತ್ಯ

ತೋದು ತೇದು ಕೊರಡಿನಂತೆ

ಸಪುರ ಗಂಧ ಬೆತ್ತದಂತೆ

ಕೋಲು ಹಿಡಿದ ಕೋಲಿನಂತೆ

ಬೀಸಿ ಬರುವ ಚಾಟಿಯಂತೆ

ಆಗಸಕ್ಕೆ ದೃಷ್ಟಿ ನೆಟ್ಟ

ಮಳೆಕಾಣದ ಮೇಟಿಯಂತೆ

ಬೆಟ್ಟೆ ಜನಕೆ ಬಿಟ್ಟಿ ಸಿಕ್ಕ

ಅಪರಂಜಿಯ ಗಟ್ಟಿಯಂತೆ

ಸುಮ್ಮನೆ ಸುಮ್ಮಾನನಿದ್ದ

ಟೊಪ್ಪಿ ತೊಟ್ಟೂ ತಪ್ಪಿದಲ್ಲಿ

ನಿದ್ದೆಗೆಡಿಸಿ ನಿಷ್ಠೆ ನೆನೆಸಿ

ಆತ್ಮಸಾಕ್ಷಿ ಕೇಳುತಿದ್ದ

ರಾಮಬಾಣ ಬಿಡುತ್ತಿದ್ದ

ಇದ್ದ ಆಗಿದ್ದ ಇದ್ದ

ಇದ್ದ ಹಾಗಿದ್ದ ಇದ್ದ

***

ಹಾಗಿದ್ದಂವ ಹೀಗಿದ್ದಂವ

ಅಂತಿದ್ದವ ಇಂತಿದ್ದಂವ

ಮನ ಮನೆಗಳ ಗೋಡೆಯಿಂದ

ಎಂದು ಇಳಿದು ಹೋದ?

ಹೇಗೆ ಜಾರಿ ಹೋದ?

ಎಂತು ಮಾಯವಾದ?

ಕಿಸೆ ಕಿಸೆಗಳಿಂದ ಹೇಗೆ

ಹೊರಗೆ ಹಾರಿ ಹೋದ?

ಉಪ-ವಾಸ ತ್ಯಜಿಸಿ ಎಲ್ಲಿ

ದೂರ ವಾಸ ಹೋದ?

ಕಾಣುತಿದ್ದಂತೆ ಗಾಂಧಿ

ಹೇಗೆ ಕಾಣೆಯಾದ?

ಹೇಬಿಯಸ್ ಕಾರ್ಪಸ್!

ಅರ್ಜಿ - ಕೇಸ್!

ಹಾಕಿದವರು ಎಲ್ಲಿ?

ಯಾರು ವಾದಿ? ಪ್ರತಿವಾದಿ?

ಕೋರ್ಟ್ ನಡೀತಿದೆ ಎಲ್ಲೋ

ಶೂನ್ಯವೇಳೆ! ಶ್ಶ್!sss. . . .

ಸೈಲೆನ್ಸ್ ಸೈಲೆನ್ಸ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.