ಆತುರದಲ್ಲಿ ಕಿತ್ತಳೆ ತಿನ್ನುತ
ಬೀಜ ನುಂಗಿದನು ಕಿಟ್ಟ
ಏನಾಗುವುದೋ ತನ್ನಯ ಹೊಟ್ಟೆಗೆ
ಯೋಚಿಸಿ ಕಣ್ಣೀರಿಟ್ಟ
ಬೀಜವು ಬೆಳೆದು ಮರವಾಗುವುದು
ತನ್ನ ಹೊಟ್ಟೆಯಲ್ಲಿ
ಬೆಳೆಯುವ ಹಂತದಿ ಜಾಗೆಯು ಸಾಲದೆ
ಬರುವುದು ಉದರವ ಸೀಳಿ
ರಾಮು, ಶ್ಯಾಮು ಓಡಿಬಂದರು
ಅಳುತಿಹ ಗೆಳೆಯನ ಕಂಡು
ಬಿಕ್ಕುತ ಕಿಟ್ಟನು ವಿಷಯವ ಹೇಳಿದ
ಕೇಳಲು ಏನಾಯ್ತೆಂದು
ಇಬ್ಬರೂ ಗೆಳೆಯರು ತಿಳಿಹೇಳಿದರು
ನಿಜವು ಬೀಜ ಮರವಾಗುವುದು
ಆದರೆ ಭೂಮಿಯ ಮೇಲೆ ಸಾಧ್ಯವು
ಹೊಟ್ಟೆಯಲೆಂದೂ ಬೆಳೆಯದದು
ತಿಂದದ್ದುಂಟು ಹಣ್ಣಿನ ಬೀಜ
ನಿನ್ನ ಹಾಗೆ ನಾವೂ ಕೂಡ
ಗಿಡ, ಮರ ಯಾವುದು ಬೆಳೆದಿಲ್ಲ
ಗೆಳೆಯ ಹೆದರಬೇಡ
ಗೆಳೆಯರ ಮಾತು ಕೇಳಿದ ಮೇಲೆ
ಧೈರ್ಯವು ಬಂತು ಕಿಟ್ಟನಿಗೆ
ನಾಚಿದ ತನ್ನಯ ಮೊದ್ದುತನಕ್ಕೆ
ತಾ ಅಳಬೇಕಿತ್ತೆ ಹೀಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.