ಸ್ವಾತಂತ್ರ್ಯ
ಎಲ್ಲಿತ್ತೋ ದೂರದಲ್ಲಿ, ತೋರಿತ್ತು ಸ್ವರ್ಗದಂತೆ
ಇಳಿದರೆ ಗಂಗೆಯಂತೆ ಹಸಿರಾಗುವ ಕನಸು
ಸುಳಿದಂತೆ ಸೊಗಸು
ವಿಶೇಷವಿದು
ಹಗಲೋ, ರಾತ್ರಿಯೋ, ದೊರಕಿದ್ದು ಸಂಭ್ರಮ
ಹುಚ್ಚೆದ್ದು ಕುಣಿದಾಯಿತು
ಹಚ್ಚಹಸಿರಾದಂತೆ ಬಯಲು
ಸುರಿದಂತೆ ಸುಮವು, ಹರಿದಂತೆ ಹೊನಲು
ಭ್ರಮೆ ಕರಗಿಹೋಯ್ತೆ ಈಗ,
ಅಥವಾ ಮರೆತುಹೋಯಿತೇ ಜವಾಬ್ದಾರಿ
ಸುಮಮಳೆ ಯಾವ ಗಾಳಿಗೆ ತೂರಿಹೋಯಿತು
ಪ್ರಹಸನವಾಯಿತೇ ಪ್ರಜಾಪ್ರಭುತ್ವ
ಕಲುಷಿತವಾಯಿತೇ ಸಂವಿಧಾನ ದೇಗುಲ
ಧರ್ಮ ಜಾತಿಯಲಿ ಸೀಳಿಹೋಯಿತೇ ಮನುಕುಲ
ಬುದ್ದಿವಂತರ ಮೌನದಲಿ
ಸ್ವಾತಂತ್ರ್ಯವಿದೆ ಅಂತರಾಳದಲಿ
ಪಿಸುಮಾತಾಡಿದಂತೆ
ಕೂಗುಲು ಬರದ ನೆರಳಿನಲಿ
ಸಾಗುತ್ತಿದೆ ಹೀಗೆಯೇ ನೆನ್ನೆಯಂತೆ
ನಾಳೆಗಳಿಗೆ ದುರ್ಬಿನು ಹಿಡಿದು
ಸಾಗುವ ದಾರಿ ಹಿರಿದಾದರೂ
ಗಮ್ಯ ಸೇರಿಸಲಿ
ಏಗುವ ಮನಬರಲಿ
ಸಕಲ ಜನಹಿತಕೆ
ಮಾಗಲಿ ಮನ ಎಲ್ಲರ ಒಳಗೊಳ್ಳುವಿಕೆಗೆ
ಇರಲಿ
ಸಮಯವಿದೆ ಸಕಲಕ್ಕೂ
ಅರಳುತ್ತದೆ ಪ್ರಭೆ
ಸ್ವರ್ಗವಲ್ಲದಿದ್ದರೂ, ಸುರಿಯುತ್ತದೆ ಸುಖ ಕೆಲವು
ಸರಿಯುತ್ತದೆ ನೋವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.