ADVERTISEMENT

ರೂಪ ಹಾಸನ ಬರೆದ ಕವಿತೆ: ಜುಗಲ್ ಬಂದಿ!

ರೂಪ ಹಾಸನ
Published 28 ಜನವರಿ 2023, 19:31 IST
Last Updated 28 ಜನವರಿ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಕ್ಕಿ ಹಾಡಿನ ಜಾಡು ಹಿಡಿದು
ಹಕ್ಕಿ ಹೆಜ್ಜೆಯಲಿ ಹೆಜ್ಜೆಯೂರಿ
ನಡೆ ನಡೆಯುತ್ತಲೇ ಹಾರಲು ಕಲಿತಿದ್ದಷ್ಟೇ!

ತಲುಪಿದ್ದು ದಟ್ಟ ಕಾನನ
ಕಾಲಾತೀತ ಕಾನನ!
ಜನ್ಮದಲ್ಲೇ ನಾನೆಂದಿಗೂ ಕಾಣದಿದ್ದ

ಚಿತ್ತ ಭಿತ್ತಿಯೊಳಗೇ ಅಡಗಿದ್ದ
ಆ ಕಾನನ ತಲುಪಿಬಿಟ್ಟಿದ್ದೆ!
ಆ ಕ್ಷಣವನ್ನು ಧರಿಸಿದ್ದಷ್ಟೇ...

ADVERTISEMENT

ಕಾನನದ ಹಸಿರು ಹೂವು ಸುಗಂಧ
ಗಾಳಿಯ ಮಾಟ, ನೀರಿನ ಆಟ
ಮಣ್ಣಿನ ನೋಟ, ಕಣ್ಣಿನ ಕೂಟ
ಅನುಭವಗಳಾಗರ ಸುಮ್ಮನೆ!

ಹೊತ್ತಿಲ್ಲ ಗೊತ್ತಿಲ್ಲ
ದಾರಿಯಿಲ್ಲ ಗುರಿಯಿಲ್ಲ!
ನನ್ನೊಳಗೆ ಕಾನನವೋ, ಕಾನನದೊಳಗೆ ನಾನೋ?
ನಂಬುವುದಾದರೂ ಹೇಗೆ
ಮಾಟ ಮಂತ್ರ ಮಾಯ!

ಕಾನನದ್ದೇ ವಿಕ್ಷಿಪ್ತ ಮೌನ.
ಮೌನವೆಂದೆನೇ? ಜೊತೆಗೇ ವಿಲಕ್ಷಣ ಸದ್ದು!
ಜುಳು ಜುಳು ನದಿಯ ಹರಿವಿನ ಉಲಿ
ಥರಥರದ ಹಕ್ಕಿ ಹಾಡು

ಮಳೆ ಸೋನೆಯ ಎಡಬಿಡದ ನಿನಾದ
ಮರದೆಲೆ ಎಲೆಯ 'ಸುಂಯ್' ಗಾನ,
ಯಾವುದೋ ಕೀಟದ ಝೇಂಕಾರ, ಕ್ರಿಮಿಯ ಲೊಚಗುಟ್ಟು,
ಹುಳು ಹುಪ್ಪಟೆ ತೆವಳುತ್ತಾ

ಇಬ್ಬನಿಯು ತೊಟ್ಟಿಕ್ಕಿ
ಸೂರ್ಯ ರಶ್ಮಿ ಮುತ್ತಿಕ್ಕಿ... ಎಲ್ಲೆಡೆ,
ಶಿವ ಶಿವೆಯರ ಆಟ ನೋಟ!

ಒಣಗಿದೆಲೆ ಮೇಲೆ ಸರೀಸೃಪಗಳ ಸರಬರ ಸರಿದಾಟ
ಆನೆಗಳ ನೋವಿನ ಘೀಳು
ಸಿಂಹ ಘರ್ಜನೆ, ಹುಲಿಯಾರ್ಭಟ,
ಜುಂಯ್‌ಗುಡುವ ಜೇನು, ಕಾಡುನಾಯಿಯ ಬೊಗಳು
ನರಿಯ ಊಳು, ದಾರಿ ಸೀಳು

ನೆರಳು ಬೆಳಕು ಕತ್ತಲು
ಮೋಡದಾಚೆಯಿಂದ ಚುಕ್ಕೆ ಚಂದ್ರಮ
ನಿಶಿತ ರಾತ್ರಿಗೆ ದೀಪದ ಸೊಡರು.

ಕಾಲಾತೀತ ಕಾನನದೊಂದಿಗೆ
ಕಾಲಬದ್ಧರ ಜುಗಲ್ ಬಂದಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.