ADVERTISEMENT

ಜ್ಯೋತಿ ಗುರುಪ್ರಸಾದ ಅವರ ಕವಿತೆ: ನಿನ್ನ ಪ್ರೇಮದ ಕಣ್ಣುಗಳ ಅರಸಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 16:26 IST
Last Updated 23 ಡಿಸೆಂಬರ್ 2023, 16:26 IST
   

ನಿನ್ನನ್ನು ಒಳಗೊಂಡ ಒಲವ ರೂಪಕ
ನನ್ನ ಒಡಲು
ಎಷ್ಟೆಲ್ಲ ಬರೆದೆ ನಿನ್ನೊಲವ ಧ್ಯಾನದಲ್ಲಿ!
ಮಳೆ, ಮಣ್ಣಿನ ಕಂಪು
ಸ್ಪರ್ಶ, ಗಂಧ, ಗಾಳಿ, ಹೂವು, ಹಣ್ಣು
ಎಲ್ಲವೂ ವಸ್ತುಗಳಾಗಿ
ಮಿಂಚಿ ಮಿಂಚಿ ಕೋರೈಸಿದವು

ಶತಶತಮಾನಗಳಿಂದ
ನಿನ್ನ ನಿರೀಕ್ಷಿಸುತ್ತ ಇರುವ
ನಂಬಿಕೆಯ ಪ್ರಣಯಿನಿಯೊಲು
ಮಿಡಿಯುತ್ತಲೇ ಹೋದೆ
ಅರಿವಿಗೆ ಬಂದರೂ ಬಾರದ ನಟನೆಯ
ಜಾಣ ಮಾತ್ರ ನೀನಾದೆ

ನಿನ್ನೊಲವ ಧ್ಯಾನದಲ್ಲಿ
ಗಟ್ಟಿಯಾದ ಹೃದಯ
ಕೇಳಿಸುತ್ತಿರುವ ಪ್ರತಿ ಸದ್ದಿನಲ್ಲೂ
ಒಲವೆಂದರೇನೆಂದು ಜಗತ್ತಿಗೆ ಸಾರುವ
ಸತ್ಯದ ಝೇಂಕಾರವಿದೆ
ಒಂದು ಹೆಣ್ಣು ಎಷ್ಟರಮಟ್ಟಿಗೆ
ಪ್ರೇಮಕ್ಕೆ ತೆತ್ತುಕೊಳ್ಳುತ್ತಾಳೆ
ಎಂಬ ಸಂಸ್ಕೃತಿಯ ಸಂದೇಶವಿದೆ

ADVERTISEMENT

ಇಂದಲ್ಲ ನಾಳೆ ನಿನ್ನ ಮುಖವಾಡ
ಕಳಚೀತು
ಮುಖವಾಡದ ಹಿಂದಿನ ಮುಖದಲ್ಲಿ
ನನಗಾಗಿ ಇರುವ ಪ್ರೇಮದ ಕಣ್ಣುಗಳು ಇದ್ದರೆ
ನನ್ನ ಸಂಧಿಸೀತು ಎಂಬ
ಕೊನೆಯಾಸೆ ಬಿಟ್ಟರೆ
ನನ್ನ ಜೀವನದಲ್ಲಿ
ಮಹಾಕ್ರಾಂತಿಯೆಂಬುದೇನೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.