ADVERTISEMENT

ದೀಪಾವಳಿ ಕವನ ಸ್ಪರ್ಧೆ–2024: ನದಿ ಹಾದಿ ತಪ್ಪಿದ್ದರೆ….!?

ತೀರ್ಪುಗಾರರ ಮೆಚ್ಚುಗೆ ಪಡೆದ ಕವನ

ಅಕ್ಷತಾ ಕೃಷ್ಣಮೂರ್ತಿ
Published 16 ನವೆಂಬರ್ 2024, 23:30 IST
Last Updated 16 ನವೆಂಬರ್ 2024, 23:30 IST
ಅಕ್ಷತಾ
ಅಕ್ಷತಾ   

ನದಿ ಹಾದಿ ತಪ್ಪಿದ್ದರೆ

ಅನಾದಿಯ ದಾರಿ ಕರಗಿ

ಕಾಡು ಮಲಗಿ

ADVERTISEMENT

ಪ್ರಾಣಿಗಳೆಲ್ಲ ಸೆರೆಯಾಗಿ

ಕೊನೆಗೊಮ್ಮೆ ಸಮಾಧಿಯಾಗಿ

ಋತುಗಳು ಎಗರಾಡಿ

ಬೈದು ಹೊಡೆದಾಡಿ

ಸಾಯುತ್ತಿದ್ದವು

ಹಕ್ಕಿಗಳು ಬಿಡಾರ

ಬದಲಿಸಿ ಪದೆ ಪದೆ

ಎಲ್ಲಿ ಬೇಕಂದಲ್ಲಿ ಬಿಳಿಲು

ಬಿಟ್ಟು ನಿಂತ ಮರ

ತೇಲಿ

ಯಾವ ಹರಕತ್ತು ಇಲ್ಲದೆ

ಶಕ್ತಿ ತೋರಿಸುವ ಆಟ

ಆಡುತ್ತಿತ್ತು ನೀರು

ಹಾದಿ ತಪ್ಪಿದ್ದರೆ ನದಿ

ಊರ ಹಿರಿಕಿರಿಯರೆಲ್ಲ

ಮಲಗಿಬಿಡುತ್ತಿದ್ದರು

ಬಾಗಿಲು ಬಡಿಯುತ್ತಿರುವವನ

ಗುರ್ತಿಸಲು ಸೋಲುತ್ತಿದ್ದವು

ಮುಚ್ಚಿದ ಮನೆಯ

ಚಿಲಕಗಳು

ತೀರದ ಹೆಜ್ಜೆ ಗುರುತುಗಳು

ತೀರಿ

ತೋಂಡಿ ಮಾತುಗಳೆಲ್ಲ

ಒದ್ದೆಯಾಗಿ

ಇದ್ದ ಬಿದ್ದ ಅಣೆಕಟ್ಟುಗಳೆಲ್ಲ

ರಸ್ತೆಯಾಗಿ

ಜನ ಸಂಚಾರ

ಮುಕ್ತ ಮುಕ್ತ

ನದಿ ಹಾದಿ ತಪ್ಪಿದರೆ

ಸಮುದ್ರ ಕಣ್ಣೀರಿಟ್ಟು

ಮತ್ತೂ ಉಪ್ಪು

ಆಸರಿಕೆ ನೀಗಲು

ಒದ್ದಾಡಿ

ಹಾದಿ ಕಾದು ಕಾದು

ಸಂಗಮ ಬರಿದಾಗಿ

ಸಮುದ್ರವೂ ಒಂಟಿ.

ಇಷ್ಟಾಗಿಯೂ ಒತ್ತಾಯವಾಗಿ

ನದಿ

ಹಾದಿ ತಪ್ಪಿಸಿದರೆ

ಹೊಸನೆಲದೊಡನೆ

ಹೊಂದಿಕೊಳ್ಳಲಾಗದ

ತಹತಹಿಕೆ

ಎದ್ದು

ರವಿಗೆ

ಸರ್ವಸ್ವ ಒಡ್ಡಿ

ಕೊನೆಗೊಂದು ದಿನ

ಸರಸ್ವತಿಯ ತಂಗಿಯಾಗಿ

ಬರಿಯ ಗೆರೆಗಳಾಗುತ್ತಿದ್ದವು

ನಕಾಶೆಯಲ್ಲಿ.

ಅಂತಿಮವಾಗಿ

ನದಿ ನೀರಿನಿಂದ ಮುಚ್ಚಿಹೋದ

ನೆಲದ ತುಂಡೊಂದು

ನನ್ನೊಳಗೂ ಇದೆ

ಅಂದುಕೊಂಡಾಗಲೇ

ಹಾದಿ ತಪ್ಪಿದ ನದಿಯೊಂದು

ಎಲ್ಲರೆದೆಯೊಳಗೂ

ಎಗ್ಗಿಲ್ಲದೆ

ಹರಿದಾಡಿದ್ದು.

ಅಕ್ಷತಾ ಕೃಷ್ಣಮೂರ್ತಿ
ಮೂಲ ಸೌಕರ್ಯಗಳ ಕೊರತೆ ಇರುವ ಉತ್ತರ ಕನ್ನಡ ಜಿಲ್ಲೆಯ ದಟ್ಟಕಾಡಿನಲ್ಲಿ 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ. ಬುಡಕಟ್ಟು ಮಕ್ಕಳಿಗೆ ಪಾಠ ಮಾಡುತ್ತ ಕಥೆ, ಕವನ ಬರೆಯುತ್ತ ಸಾಹಿತ್ಯದಲ್ಲಿ ತೊಡಗಿಸಿಕೊಂಡವರು. ಗಡಿ ಭಾಗದ ಪ್ರಾಥಮಿಕ ಶಾಲೆಗಳ ಮಹತ್ತತೆ ಎತ್ತಿ ಹಿಡಿಯುವ ಅಂಕಣ ಇಸ್ಕೂಲು ಬರೆದು ನಾಡಿನಾದ್ಯಂತ ಗಮನ ಸೆಳೆದವರು. ಕಥೆ, ಕವನ ವಿಮರ್ಶೆ, ಸಂಪಾದಿತ ಕೃತಿ ಹೊರತಂದಿದ್ದಾರೆ. ಮಯೂರವರ್ಮ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದಿರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.