ಅವಳು ಯಾವುದೊ ಎರಡು ಸಾಲನ್ನಷ್ಟೇ
ನನಗೆ ಕಳುಹಿಸುತ್ತಾಳೆ..
ಕೆಲವು ಪದ ಕೆಂಪು ಕೆಲವಕ್ಕೆ ಸುಸ್ತು
ಕೆಲವಕ್ಕೆ ಅದೇನೊ ಯಾತನೆ..
ನನ್ನ ಬಳಿಯ ಎರಡು ಸಾಲನ್ನು
ಹಾಗೆಯೇ ಮುಟ್ಟಿಸುತ್ತೇನೆ ಅವಳಿಗೆ
ತೊಳೆಯುತ್ತಾಳೆ ಕೆಂಪನ್ನು
ನನ್ನ ಪದಗಳನ್ನು ಹಚ್ಚಿಹಚ್ಚಿ
ಕೆಲವು ಅಕ್ಷರಗಳನ್ನು ತೇಯ್ದು ಹಚ್ಚುತ್ತಾಳೆ
ಸುಸ್ತಾದ ಪದಗಳ ಬೆನ್ನಿಗೆ..
ಮತ್ತೆ ಬರುತ್ತವೆ ಅವಳದೆ ಮತ್ತೆರಡು
ಸಾಲುಗಳು ನನ್ನ ಹುಡುಕಿಕೊಂಡು
ಕೇಳುತ್ತದೆ ಒಂದು ಪದ ಕೈತುತ್ತು
ಇನ್ನೊಂದು ಕಾಡುತ್ತದೆ ಹಾಡಿಗೆ
ಮತ್ತೊಂದು ಬಯಸುತ್ತದೆ ನನ್ನ ತೋಳನ್ನು
ಎರಡೇ ಎರಡು ಸಾಲುಗಳಲ್ಲಿ
ಎಲ್ಲವನ್ನೂ ಜತನ ಮಾಡಿ
ಮತ್ತೆರಡು ಸಾಲುಗಳನ್ನು ಸೇರಿಸಿ
ಅವಳ ವಿಳಾಸದ ಕೈಗಿಡುತ್ತೇನೆ..
ಅವು ಅವಳೊಳಗಿನ ಹಣತೆಯ
ಬತ್ತಿ ನೀವಿ ಅದರ ತುದಿಗೆ
ಕಿಡಿಯ ಮುತ್ತನಿಟ್ಟು ನಗುತ್ತವೆ..
ಬೆಳಕಿನಲ್ಲಿ ಅವಳೂ ಕರಗುತ್ತಾಳೆ
ಮತ್ತು ನನ್ನ ಪದಗಳೂ..!
*
ಅವಳ ಸಾಲುಗಳನ್ನು ಅದರ
ಕೆಳಗೆ ನನ್ನ ಸಾಲುಗಳನ್ನು
ಜೋಡಿಸಿಕೊಂಡು
ಲೋಕ ಕವಿತೆ ಹೊಸೆದುಕೊಂಡಿದೆ
ಕವಿತೆ ಎಂದೂ ಕಟ್ಟಿದವರದ್ದಲ್ಲ
ಅದು ಮುಟ್ಟಿದವರದ್ದು
'ಮುಟ್ಟು' ಮುಟ್ಟಲಿ ಕವಿತೆ
*
ಮತ್ತೆರಡು ದಿನ ಕಾಯುತ್ತೇನೆ
ಅವಳ ಸಾಲುಗಳು
ಬಾಗಿಲು ಬಡಿಯುವುದಿಲ್ಲ
ನಿರಮ್ಮಳವಾಗುತ್ತದೆ ಮನಸು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.