ಆ ಸಂಜೆಗಳೂ ಈಗಿನಂತೇ
ಇದ್ದವು
ಚೈತ್ರಕ್ಕೆ ಒಣಗಿ ಬಾಗಿದ
ಹುಲ್ಲುಕಣೆ
ಶ್ರಾವಣದಲ್ಲಿ ಹನಿಸೇಕ ತಾಕಿದ
ಎಸಳು
ಮಾಗಿಗೆ ಬರೀ ಕಚಗುಳಿ
ಅದೇ ಅಂಗಳ…ಅದೇ ದಾಸವಾಳ
ಮಾತು ಅವ್ಯಾಹತ
ತಂತು ತಕಧಿಮಿತ
ಗಿಳಿಹಿಂಡು ಹಾರಿದ್ದು
ಹೊಸ ಹೂವು ಅರಳಿದ್ದು
ಹಳೆ ಹುಡುಗಿ ನಕ್ಕಿದ್ದು
ಮಂತ್ರದ ಮತ್ತೊಂದು
ಅರ್ಥ ಹೊಳೆದಿದ್ದು
ನಮಾಝಿನಲ್ಲೇ ನೆನಪು
ನುಗ್ಗಿ ಬಂದದ್ದು
ಮಸೀದಿಗೆ ನಮಸ್ಕರಿಸಿದ್ದು
ಕವಿತೆ ಹುಟ್ಟಿದ್ದು
ಕತೆಯೇ ಎದುರಾದದ್ದು
ಜೀವ ಹಗುರೆನಿಸಿದ್ದು ದೂರ ಭಾರವಾದದ್ದು
ನಡುನಡುವೆ ಧುಮ್ಮಿಕ್ಕಿ ನೆರೆಯೆದ್ದು
ಲವ್ ಯೂ ಹೇಳಿಕೊಂಡಿದ್ದು
ಮುತ್ತುಗಳ ತೂರಿಬಿಟ್ಟಿದ್ದು
ಬಿಕ್ಕಿದ್ದು ಸೊಕ್ಕಿದ್ದು ಉಕ್ಕಿದ್ದು ನಕ್ಕಿದ್ದು..
ಈಗಲೂ ಹಾಗೇ
ಅದೇ ಹೊರ ಅಂಗಳದಲ್ಲಿ
ನಡೆದೂ..ನಿಂತು...ಕುಂತು
ಮಾತಾಗುತ್ತೇವೆ
ಅಂದಿನಂತೆ
ಸರ್ವಶಕ್ತನಿಗೊಂದು
ರೂಪಿಟ್ಟರೆ ಪರಿಮಿತಿ ಸಿಕ್ಕಂತೆ,
ನಾವು ನಿರಾಕಾರನಿಗೊಲಿದವರು
ಎನ್ನುತ್ತಾನವನು
ಬರುವ ತಿಂಗಳು ಯೋಗಮಾಸ
ಸೂರ್ಯನಮಸ್ಕಾರ ಇನ್ನಾದರೂ ಕಡ್ಡಾಯ
ಮಾಡಲಿ
ಎನ್ನುತ್ತೇನೆ ನಾನು
ಸೂರ್ಯ ಸೃಷ್ಟಿಯಲ್ಲಿ ಸಾಯುವ ಸರಕು
ನಮಸ್ಕರಿಸುವುದು ಧರ್ಮಕ್ಕಪಚಾರ
ಎನ್ನುತ್ತಾನೆ ಅವನು
ತುಟಿಯೊಣಗಿ ಕಣ್ಣು ತುಂಬಿ
ಇವನವನಲ್ಲವಾ ನೋಡುತ್ತೇನೆ ನಾನು
ಹರಿದ ಕಲ್ಲಂಗಡಿಯಿಂದ ಸುರಿದಿದ್ದು
ನೆತ್ತರು ಎನ್ನುತ್ತಾನವನು
ಸತ್ತವನ ತೊಡೆಯಿಂದ ಹರಿದಿದ್ದು
ರಸವಾ ಎನ್ನುತ್ತೇನೆ ನಾನು
ನಿನ್ನ ಜನ್ನತ್ತಿನಿಂದಲೇ ಈ
ಅಪಸವ್ಯವೆಲ್ಲ ಗೊಣಗುತ್ತೇನೆ
ನಾನು
ಚಡ್ಡಿಗುಂಪಿಗೆ ಯಾವಾಗ ದೋಸ್ತಿಯಾದೆ
ಕೆಣಕುತ್ತಾನೆ ಅವನು
ಕರಿ ಬಟ್ಟೆ ಕಾರಣ ನಿಷೇದ
ಹಲಾಲು ತೆರವು ಇತ್ಯಾದಿ
ಎನ್ನುತ್ತೇನೆ ನಾನು
ಆಳುವವರಲ್ಲಿ ತಾಯೆದೆಯಿರದಿದ್ದರೆ
ಹೀಗೇ ರಕ್ತಪಾತ ಎನ್ನುತ್ತಾನೆ ಅವನು
ಮಸೀದಿ ಮುಗಿಯುತ್ತಲೂ
ಮಚ್ಚು ಸಾಣಿ ಹಿಡಿಯುವ ಕೆಲಸಕ್ಕೆ
ಹೊರಡುತ್ತಾರೆ ಮಕ್ಕಳು
ಸಿಡಿಮದ್ದು ತಯಾರಿಸುವ ರಸವಿದ್ಯೆ
ಹೇಳಿರಬಹುದೇ ಉಪನಿಷತ್ತು
ಹುಡುಕುತ್ತಾರೆ ಇವರು
ಸಮನ್ವಯ ಮಂತ್ರದ ಮೊದಲ
ಬೆಳೆಯನ್ನೇ ಹೊಳೆವ ಮಚ್ಚಿನಿಂದ
ತರಿದು ಸಾಣಿ ಕೆಲಸ ಬೇಷಾಯಿತೇ
ನೋಡುವಾಗೆಲ್ಲ
ಕೊಸರಾಡುವ ಹೊಸಬಾಂಬು
ಬಿತ್ತಲು ದಟ್ಟಣೆಯತ್ತ
ಚಿತ್ತೈಸುತ್ತಾರೆ ಇವರು
ಬ್ರಾಹ್ಮಿ ಕಾಲಕ್ಕೆ
ಒತ್ತಿಕೊಂಡು ಬೀಳುತ್ತಿದ್ದ ಮಳೆಬಿಲ್ಲಿನಂಥ
ಹೊಸಮುಗುಳಿನಂಥ
ಕನಸುಗಳಿಗೆಲ್ಲ ಗಾಯವಾಗಿ ನೆತ್ತರಿಳಿಯುತ್ತಿದೆ ಈಗ
ಮುದ್ದಿನ
ಮದ್ದು ದೊರಕಬಹುದೆಂದು
ದಿಟ್ಟಿ ಕೂಡಿಸದೆ ಒಬ್ಬರನ್ನೊಬ್ಬರು ನೋಡಿ
ಕಾಯುತ್ತೇವೆ, ಕಂಗಾಲಾಗುತ್ತೇವೆ.
ಎದೆಯೊಳಗೆ ವಿಷಾದ, ರುದ್ರಭೂಮಿ ಅಂಗಳ
ಮಚ್ಚು ಹಿಡಿದು ಸರ್ಕೀಟು ಮಾಡುವ
ಹೆಣಗಳಿಗೆ ಕೆರೆ ದಡ ಆಡಿಸುವ ಖಯಾಲಿ
ಸಂಜೆಯ ಹೊಂಬಣ್ಣದ ಮಾತು ರದ್ದಿ
ನಡುವೆ ಜುಳುಜುಳು ರಾಜಾಕಾಲುವೆ
ಇದೋ...ಈಗ
ನಿನ್ನದೇ ಅಹಮ್ಮಿನ ಮಚ್ಚು ನಿನ್ನ ಕೊರಳು ಕತ್ತರಿಸಲಾರಂಬಿಸಿದೆ
ಬಿಕ್ಕಬೇಡ ಎನ್ನುತ್ತಾ ವ್ಯಂಗ್ಯದ ನಗು
ನಕ್ಕ ನನ್ನ ಮೇಲರಿಮೆಯ ಉಸುಬು
ಏಳದಂತೆ ಸೆಳೆದುಕೊಳ್ಳುತ್ತಿದೆ
ಅಗಲುತ್ತಾ ಅಸಹಾಯಕರಾಗುತ್ತಿದ್ದೇವೆ
‘ಒಲುಮೆ ಕಾಯಬೇಕಿತ್ತಲ್ಲಾ’ ಬಡಬಡಿಸುತ್ತೇವೆ
ಸಖ...
ಏಳುಯುಗ ಕಳೆದು ಏಳುದಿನ ಮುಗಿದು
ಏಳುಘಳಿಗೆಗೆ ಸರಿಯಾಗಿ ಹುಟ್ಟಿಬರುತ್ತೇವೆ
ಮತ್ತೆ ನಾವು
ಹೊಳೆಹೊಳೆಯುತ್ತ
ಬೆಳಕಿನಂತೆ ಬತ್ತಲಿನಂತೆ ಪರಿಮಳದಂತೆ
ಪರಿಶುದ್ಧದಂತೆ!
ಒಬ್ಬರನ್ನೊಬ್ಬರು ಪ್ರೇಮಿಸುವುದಕ್ಕಾಗಿಯೇ;
ಇನ್ನಿಲ್ಲದಂತೆ!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.