ನಿತ್ಯ ನೂರಾರು ಊರು ಮುಟ್ಟಿಸಿ
ದಣಿದು ನಿಲ್ದಾಣದಲ್ಲಿ ನಿದ್ರಿಸುತ್ತಿರುವ
ಬಸ್ಸಿನ ಗಾಲಿಗಳಿಗೆ ನನ್ಹೆಸರು ಬರೆಯುತ್ತೇನೆ
ಗಾಲಿಗಳು ಉರುಳಿದಂತೆ
ಕಾಣದೂರು ಸುತ್ತುವ ನನ್ನ ಕನಸಿಗೆ
ಸೂಟು ಬೂಟು ಕೋಟು ಕನ್ನಡಕ ಮೂಡುತ್ತವೆ
ತರತರದ ಹೆಸರು ರೂಪ ರುಚಿ ಜನ
ಕಸಪೊರಕೆಯ ಗರಿಗರಿಗಳಲ್ಲಿ
ವೇಷಕಟ್ಟುತ್ತವೆ ಮನೋರಂಗದಲ್ಲಿ
ಹತ್ತಿಳಿವ ಪಯಣಿಗರ ಕಂಡೂ ಕಂಡು
ದೂರದೂರುಗಳ ಕಾಣುವ ಹೆಬ್ಬಯಕೆ
ಅವ್ವನ ಸೆರಗಿನ ಜೋಲಿಯಲ್ಲೇ ಅವತರಿಸಿಬಿಟ್ಟಿತು
ರೆಕ್ಕೆ ಬಲಿಯುವಷ್ಟರಲ್ಲೇ ವಂಶದ ಪೊರಕೆಯ
ಉತ್ತರಾಧಿಕಾರ ಅನಾಯಾಸವಾಗಿ ನನಗೇ ದಕ್ಕಿ
ಕನಸು ನಿಲ್ದಾಣದಲ್ಲೇ ಗಿರಕಿಹೊಡೆಯತೊಡಗಿತು..!
ನಿಲ್ದಾಣದಲ್ಲಿ ನಿಲ್ಲುವ ಬಸ್ಸುಗಳ ಹಣೆಬರೆಹ
ನಿಧಾನವಾಗಿ ಓದಬಲ್ಲೆ!
ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆಳೆದು ತಂದು
ಬೆತ್ತ ಪುಡಿಗಟ್ಟಿದ ಮೇಷ್ಟ್ರು ಕೃಪೆಯಿಂದ!
ಒಂದೊಂದು ದಿನ ಒಂದೊಂದು ಊರಿಗೆ
ಹೋಗಿ ಬರುವ ಬಸ್ಸಿನ ಗಾಲಿಗೆ
ಹೆಸರು ಬರೆಯುತ್ತೇನೆ ನೀಲಿ ಶಾಯಿಯಲ್ಲಿ
ಪೇಪರ್ ಹುಡುಗರ ಕಣ್ಣಿಗೂ ಬೀಳದಂತೆ
ಬ್ರಾಹ್ಮೀ ಮುಹೂರ್ತದಲ್ಲಿ...
ಹೋಗಿ ಬರುತ್ತೇನೆ ನಿತ್ಯ ನಾಮರೂಪದಿ
ಬೆಂಗಳೂರು ಮೈಸೂರು ರಾಯಚೂರು
ಮಂಗಳೂರು ಕಾಸರಗೋಡಿನವರೆಗೂ
ವಿಮಾನ ನಿಲ್ದಾಣದಲ್ಲಿ ಕಸಗುಡಿಸುವ
ಯೋಗ ಒಲಿದು ಬಂದಿದ್ದರೆ!?
ದೇಶ ಖಂಡ ಸಾಗರಗಳಾಚೆಗೂ
ಹೀಗೆ ಸಲೀಸು ಸಂಚರಿಸಬಹುದಿತ್ತು!!
ದೇಗುಲದ ಸ್ವಚ್ಛತೆಗೆ ನೇಮಕವಾದ
ದಾಯಾದಿ ಚಂದ್ರ ಪಂಚವಾದ್ಯಗಳ ಸದ್ದಿನಲಿ
ಖುದ್ದಾಗಿ ತನ್ನ್ಹೆಸರು ದಾಖಲಿಸಿ ಸೀದ
ಸ್ವರ್ಗದವರೆಗೂ ಹೋಗಿಬರುತ್ತಾನೇನೋ!!
ಓ... ಮುಲ್ಲಾ ಕೂಗಿದ
ಮೇಸ್ತ್ರಿ ಬರುವುದರೊಳಗೆ
ನಿಲ್ದಾಣವೆಲ್ಲಾ ಝಳಝಳ ಬೆಳಗಬೇಕು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.