ತನ್ನ ಮಾತೇ ಮಾತು ತನ್ನ ದೈವವೇ ದೈವ
ತನ್ನ ಮತವೇ ಮತವೆಂಬ ಹಮ್ಮು ಹಠದಲಿ
ಕಳೆದುಕೊಂಡಿತು ನಾಡು ಅಪಾರ ಸುಖ ಬಲಿ
ಮೇಲು ಕೀಳೆಂಬ ತಾರತಮ್ಯದ ಅಸಹ್ಯ ಕೆಂಡ
ಬಲು ನೊಂದು ಮನೆ ಮಠ ಬೆಂದು ಕಣ್ಣೀರನುಂಡ
ಮಂದಿಯ ಕೇಳುವವರಾರು ಸಂಕಟ ಪ್ರಚಂಡ
ಹಿಂಸೆಯಲಿ ನೆತ್ತರಲಿ ನಿಟ್ಟುಸಿರಿನಲಿ ಎಲ್ಲಿದೆ ದಾರಿ
ಸುಖ ಶಾಂತಿ ನೆಮ್ಮದಿಯು ಬಿಸಿಲುಗುದುರೆ ಸವಾರಿ
ಶೈವ ವೈಷ್ಣವರು ಶರಣರು ಶ್ರಮಣರು ಸಿಖ್ಖರು
ಮಹಮದೀಯರು ಕ್ರೈಸ್ತರು ಬೌದ್ಧರು ಎಲ್ಲರು
ಅವರವರ ಗುಡಿಯಲವರ ಪ್ರಾರ್ಥನೆ ಸಲಿಸುತಿರಲಿ
ಭಾರತಾಂಬೆಯ ಪೂಜಿಸಲು ಎಂದೂ ಮರೆಯದಿರಲಿ
ಕೋಪತಾಪಗಳಿಂದ ಈರ್ಷ್ಯೆ ದ್ವೇಷಗಳಿಂದಲಿ
ಮುಕ್ತರಾಗುತ ಸೇರಿ ನಾಡತೇರನು ಎಳೆಯುತಿರಲಿ
ಹಿಂದೂ ದೇಶವಿದು ಎಂದೂ ಹೋಳಾಗದಿರಲಿ
ವಂದೇ ಮಾತರಂ ಆಸೇತು ಮೊಳಗುತಿರಲಿ
ಧರ್ಮ ಯಾವುದೆ ಇರಲಿ ಹತ್ತು ಮತ್ತೆ ಬರಲಿ
ಸಮನ್ವಯದ ಹಣತೆಯದು ನಿತ್ಯ ಬೆಳಗುತಿರಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.