ಅಂದು..
ಗುಡಿಸಲಲಿ ಕುಳಿತು,
ದೀಪದ ಬುಡ್ಡಿಯಿಟ್ಟು ಓದಲು ಕುಳಿತರೆ,
ಜೋಪಾನವೆನ್ನುತ್ತಿದ್ದಳು ನನ್ನವ್ವ!
ನಿದ್ದೆಗಣ್ಣಲಿ ದೀಪ ಬೀಳಿಸಿ,
ಬೆಂಕಿ ಹಚ್ಚಿ ಬಿಡುವನೇನೊ ಮನೆಗೆ,
ಎಂಬ ಆತಂಕ ನನ್ನವ್ವನಿಗೆ!
ಇಂದು..
ಸದಾ ಎಚ್ಚರದ ಸಿಸಿಟಿವಿ ಕಣ್ಣು,
ಗರಿಗಳಿಲ್ಲದ ಕಬ್ಬಿಣ-ಸಿಮೆಂಟುಗಳ ಮನೆ,
ಆದರೂ ಬೆಂಕಿ ಹಚ್ಚುವ ಚಾಳಿ ನನಗೆ!
ಅಂದು..
ಒಲೆಯೂದಿ ಕಣ್ಣೀರಿಟ್ಟು ಮಾಡಿದಡುಗೂಟ,
ಹೊಟ್ಟೆ ತುಂಬಿಸುತಿತ್ತೆಂಬ ಖುಷಿಯೆನಗೆ,
ಇಂದು..
ಲೈಟರ್ ಗೀರಿ ಕುಕ್ಕರ್ ಕೂಗಿಸಿ,
ಅವರಿವರ ಕಣ್ಣೀರಿಡಿಸಿ ಮಾಡಿದಡುಗೂಟ,
ಜೀರ್ಣವಾಗುತ್ತಿಲ್ಲವಲ್ಲ ಎಂಬ ಕೊರಗೆನಗೆ!
ಅಂದು..
ಸೊಳ್ಳೆ ತಿಗಣೆಗಳ ಕಾಟ,
ಎಲ್ಲೆಲ್ಲೂ ಇರುವೆಗಳ ಓಡಾಟ,
ಹಾವು ಚೇಳುಗಳು ಬಂದಾವು ಎಂಬ ಪೀಕಲಾಟ,
ಆದರೂ ನಿದ್ದೆಗಿರಲಿಲ್ಲ ಭಂಗ!
ಇಂದು..
ಸಜಾತಿಯ ಸಹಜೀವಿಗಳದೇ ಕಾಟ,
ಮನಸಿನ ತುಂಬಾ ಜಂಜಾಟ!
ಅಂದು..
ಕೆಮ್ಮಣ್ಣ ನೆಲಕೆ ಸಗಣಿಯ ಲೇಪನ,
ಈಚಲು ಗರಿಗಳಿಂದಾದ ಚಾಪೆ,
ಅರಿದ ಬಟ್ಟೆಗಳಿಂದಾದ ದಿಂಬು,
ಆದರೂ ಮೈಚಾಚಿದರೆ ಕಣ್ತುಂಬಾ ನಿದ್ದೆ!
ಇಂದು..
ಬ್ರಾಂಡೆಡ್ ಹಾಸಿಗೆಯ ಮೇಲೆ
ಮಲಗಿದರೂ ಕಣ್ಣಿಗತ್ತದು ನಿದ್ದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.