ADVERTISEMENT

ಡಾ.ಲಕ್ಷ್ಮಣ ವಿ.ಎ ಅವರ ಕವನ: ಪರಿಮಳದ ಬಾಕಿ ಮೊತ್ತ..

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ 2024ರಲ್ಲಿ ಮೆಚ್ಚುಗೆ ಪಡೆದ ಕವನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 2:45 IST
Last Updated 10 ನವೆಂಬರ್ 2024, 2:45 IST
<div class="paragraphs"><p>ಪರಿಮಳ</p></div>

ಪರಿಮಳ

   

ಮಾಗಿಯ ಚುಮುಗುಡುವ

ಚಳಿಯಲಿ ಅಂಗಳದಲಿ ಈಗಷ್ಟೇ ಅರಳುತಿರುವ ರಂಗೋಲಿ-ಹೂ.

ADVERTISEMENT

ಹುಡುಗಿ ಬೆರಳು-ದಳ.
ಕೈ ಥೇಟು-ದೇಟು; ಮೈ ತುಂಬಾ
ನವಿರು ಮುಳ್ಳು; ಮಳ್ಳ ಮುಂಜಾನೆಯಿಬ್ಬನಿ
ಯ ಹೊದ್ದ ಅವಳ ಬೆಳ್ಳನೆಯ ದಾವಣಿ.

ಇವಳು
ಸುಳಿದಾಡುವ ಗೋಕುಲದ ತುಂಬೆಲ್ಲಾ ಪುನುಗು ಪರಿಮಳ.

ರಾತ್ರಿ ಇವಳ ಕನಸಿನಲಿ ಮೂಡಿದ ಚುಕ್ಕಿ
ಗಳ ಹೆಕ್ಕಿ ;
ಹಗಲು ಸೆಗಣಿ ಸಾರಿಸಿದ ಅಂಗಳದಲಿ ಸಾಲಾಗಿ ಹರವಿ ಆ ಚುಕ್ಕಿ
ತನಗೆ ಬೇಕಾದ ಆಕಾರಕೆ ಬಾಗಿಸಿ ಜೋಡಿಸಿ
ಬಿಡಿಸುತ್ತಾಳೊಂದು ಸ್ವಚ್ಛಂದ ಹಾರುವ ಬಾನಾಡಿ ಹೂ ಹಕ್ಕಿ.

ಈ ಹೂ ಹಗುರ ಹುಡುಗಿ ಮೈ ಬಳಕು ಬಳ್ಳಿ;
ಚಿಗುರು ಚಿತ್ತಾರ.
ಇವಳು ಚುಕ್ಕಿ ಶುರುವಿಟ್ಟಲ್ಲಿ ಮೂಡುವ ಬೆಳಗು;
ಮುಗಿವಲ್ಲಿ ಮುಳುಗು.
ಭುವಿಯಂಚೇ ಗಡಿ; ಬಾಗು ಬಾನೇ ಮೇರೆ.

-ಮೀರುವ ಮಾತೇ ಇಲ್ಲ;
ಇವಳು ಸುಮ್ಮನೆ ಗೆರೆ ಎಳೆವಲ್ಲೆಲ್ಲಾ ಹರಿದಾಡುವ ಯಮುನೆ.
ನದಿ ಬಯಲು ಬದಿ
ಒಲವ ಒಲೆ ಹೂಡಿ ಉಂಡ ಗೋಕುಲ
ಮೆಲ್ಲುಸಿರಿನಲಿ ತೂಗುವ ಜಗದ ತೊಟ್ಟಿಲು;
ಅಲೆ ಅಲೆ ಕೊಳಲ ಜೋಗುಳ.
ಒಳ ಮನೆಯೊಳಗೆ ಮಳ್ಳ ಬೆಕ್ಕಿನ
ಕಕ್ಕುಲಾತಿ;
ಆಹಾ! ಅದೇನು ಪ್ರೀತಿ.
ಕುಡಿಗಣ್ಣಲ್ಲೇ ಹೊಳೆ ಮಿಂಚು. ಮಣಿಸರಕು ಮುತ್ತು ಮುಂಗೈ ಬಳೆ ಹೊಳೆವ ಕಾಂತಿ.

ಹೀಗೆ ಹುಟ್ಟಿ ಹಾಗೆ ಬೆಳೆದ ಹೂ ಹುಡುಗಿ
ಈಗ ಥೇಟ್ ಬಾನಾಡಿ ;
ಒಂದು ದಿನ ಕಾಲೇಜಿಗೆ
ಬಂದಳು ನೋಡಿ, ಓಡೋಡಿ!
ಅಂಕಲಿಪಿಯ
ಕಣ್ಣಿನೊಳಗೆ ಈಗ ಬರಿ ಅಂಕಗಳದ್ದೇ ಭೀತಿ.

ಯಾರ ತೆವಲಿ
-ಗೆ ಯಾರೋ ಎಳೆದ
ಗಡಿ ಗೆರೆ ಅಂಕೆ ಶಂಕೆಯ ತಂತಿ ಬೇಲಿ.
ಭೂಪಟದ ಗೆರೆ ಗಡಿಯಂಚು ಮೀರಿ
ಬಣ್ಣ ಬಳಿದುದಕೆ ಛಡಿಯೇಟು
ಬಳಕು ಬಳ್ಳಿ ಈಗ ಈ ಒಳಗತ್ತಲ ಕೋಣೆಯೊಳಗೆ;
ಕತ್ತು ಬೇಲಿಯಾಚೆ
ತೂಗುವಂತಿಲ್ಲ ತೊನೆದಾಡುವಂತಿಲ್ಲ.

ತೂಕ ಮಾಡಿದಷ್ಟೆ ನಗು ಕೇಕೆ ;
ಅಳತೆ ಮೀರುವ ಹಾಗಿಲ್ಲ ಅಳು ಕೂಡ.
ತೂಕ ಮತ್ತು ಅಳತೆ ಮಾಪನಕೂ
ಪ್ರತ್ಯೇಕ ಬೇಹುಗಾರಿಕಾ ಇಲಾಖೆ.

ಅಬ್ಬಬ್ಬ! ಸೂಜಿ ಮೊನೆಯಂತಹ
ಎರಡು ಚುಕ್ಕಿ ಜೋಡಿಸುವ ಗಡಿ ಗೆರೆ
ಯಾಚೆ ಏನಿದೆ ? ಬರಿದೆ ಮಣ್ಣು:

ಕಂಗಾಲು ಮಥುರೆ!

ಕಂಪಿಸುವ ಕೊರಳ ದೊಗರು ದನಿ;
ಕೊಳಲ ಕಣ್ಣಿನೊಳಗೆ ಸುರಿವ ಹನಿಗಂಬನಿ.
ಢಂ!! ಢಮಾರ್ ಬೆಂಕಿಯುಗುಳು ಬಾಯಿ ಬಾಂಬಿನ
ಸದ್ದಿಗೇ ಸುಟ್ಟು ಹೋಗಿವೆ ಯಶೋಧರೆಯ ಎದೆ ಹಾಲು;
ನೆಲ ಮಾಳಿಗೆಯ ಕತ್ತಲೆಯೊಳಗೆ
ಹಸಿದು ಮೊಲೆ ತೊಟ್ಟಿಗೆ ಹಂಬಲಿಸುವ ಹೂ ಹಸುಳೆ ಎಳಸುದುಟಿಗಳು.


ಇಂತಹದೇ ಚುಮುಗುಡುವ
ಚಳಿಯೊಳಗೆ ಕಡಪಾ ಕಣ್ಣೂರು ಕೋಲಾರ
ಹೊಸೂರು ಮೈಸೂರು ಮದರಾಸು
ಸೀಮೆಗಳಿಂದ ಚಿತ್ತ ಚಿತ್ತಾರದ ಹೂವುಗಳು
ರಾತ್ರೋ ರಾತ್ರಿ ರೈಲು ಬಸ್ಸು ಲಾರಿ ಹತ್ತಿ;
ಕಾಮಾಟಿಪುರದ ಮುಗ್ಗುಲು ಹಿಡಿದ ಸಿಂಗಲ್ ಬೆಡ್ಡುಗಳಲಿ ನರಳಿ
ನುಜ್ಜು ಗುಜ್ಜಾಗಿ ನಲುಗಿದ ಹೂ ಪಕಳೆಗಳ
ಭಾರದ ಮೊಬಲಗು ಮಾತ್ರ ಜಮೆಯಾಗಿದೆ
ರಖವಾಲಿಗಳ ಅಕೌಂಟಿನಲಿ !

ಆ ಹೂವ 'ಪರಿಮಳದ ಬಾಕಿ ಮೊತ್ತ'
ಮಾತ್ರ ಯಾರಿಂದಲೂ ಚುಕ್ತ
ಮಾಡಲಾಗಿಲ್ಲ;
ಅಂದಿಗೂ ಇಂದಿಗೂ ಯುಗ ಯುಗಗಳಿಂದಿಲೂ!

***

ಕವಿ ಪರಿಚಯ
ಡಾ.ಲಕ್ಷ್ಮಣ ವಿ.ಎ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದಾರೆ. ಪ್ರವೃತ್ತಿಯಲ್ಲಿ ಕವಿ, ಕತೆಗಾರ, ಪ್ರಬಂಧಕಾರ, ಅಂಕಣಕಾರ. ಇವರ ಕಥೆ ಮತ್ತು ಕವನ ಸಂಕಲನಗಳಿಗೆ ಬಹುಮಾನಗಳು ದೊರೆತಿವೆ. 2023 ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಇವರ ‘ಪರಿಮಳದ ಬಾಕಿ ಮೊತ್ತ’ ಮೆಚ್ಚುಗೆ ಪಡೆದ ಕವನ.

ಡಾ.ಲಕ್ಷ್ಮಣ ವಿ.ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.