ಮಳೆಯೆಂದರೆ ಬರಿ ಹನಿಯಾ ;ಮೋಡದಿಂದುರುವ ಪನ್ನೀರ ಪಕಳೆಯಾ,
ಎಲೆಯ ಮೇಲಿನ ಇಬ್ಬನಿಯಾ ಅಥವಾ
ಕಳೆದುಕೊಂಡವರ ಕಂಬನಿಯಾ?
ಎಲ್ಲವೂ......
ಮಳೆಯೆಂದರೆ ಎಲ್ಲವೂ.
ಮಳೆಯೆಂದರೆ ಮಲೆನಾಡ ಪರಿಸರದ
ಸೊಬಗಿನಂದದ ಚೆಲುವ ತೇರು ;
ಬಯಲುಸೀಮೆಗೆ ಭರಪೂರ ನೀರ ಹರಿವು,
ಪೈರಿನ ಚಿಗುರು.
ನಿಸರ್ಗ ನಿರ್ಮಿತ ಜಲಪಾತ
ಮೈದುಂಬಿ ಹರಿವ ನದಿಯ
ಮೂಲಸೆಲೆ ಮಳೆ. ಹಳೆ ಕೊಳೆಯ
ತೊಳೆಯುವ ಸ್ವಚ್ಛತಾ ರಾಯಭಾರಿ.
ಮಳೆಯ ಒಡನಾಟವೆ ಹಾಗೆ ;
ಅಲ್ಲಿ ಒಲವು ಮೂಡುತ್ತದೆ
ಹೃದಯ ಮಿಡಿಉತ್ತದೆ.
ಸಂಜೆಗೆಂಪಿನ ಹಾದಿಯಲ್ಲಿ
ಹೂ ವನಗಳ ನಡುವಲ್ಲಿ
ಭಾವನೆಗಳ ಹಿಡಿತದಿಂದ
ಹೊರಬರುವ ಮಧುರ ಸಮಯ.
ಒಂಟಿ ಕವಿತೆಯೊಂದು
ಈ ಮಹಾಮಳೆಯಲ್ಲಿ
ಕಹೆದುಹೋದ ತನ್ನದೇ
ಸಾಲೊಂದನ್ನು ಹುಡುಕುತ್ತಾ ಹೊರಟಿದೆ.
ಆ ಸಾಲಿನಲ್ಲಿ ಹೇಳದೊಂದು ಸುಂದರ
ಭಾವವಿತ್ತಂತೆ ಕಳೆಯುವ ಮೊದಲು.
ಈಗ ಅದೆಲ್ಲಿ ಅಂತ ಹುಡುಕುವುದು?
ಮಳೆ ಎಲ್ಲವನ್ನೂ ನೀಡಲಿ ;
ಕವಿತೆಗೆ ಸಾಲನ್ನೂ, ಕಳೆದುಕೊಂಡವರಿಗೆ
ಹೊಸ ಭರವಸೆಯ ಬೆಳಕನ್ನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.