ADVERTISEMENT

ಲಲಿತಾ ಸಿದ್ಧಬಸವಯ್ಯ ಅವರ ಕವನ: ತೊರೆಯ ದಿಕ್ಕಿಗೆ ಈಜು

ನಿಧನರಾದ ಮಹಾನಟಿ ಲೀಲಾವತಿ ಅಮ್ಮನವರ ಕುರಿತ ಕವನ

ಲಲಿತಾ ಸಿದ್ಧಬಸವಯ್ಯ
Published 10 ಡಿಸೆಂಬರ್ 2023, 0:30 IST
Last Updated 10 ಡಿಸೆಂಬರ್ 2023, 0:30 IST
<div class="paragraphs"><p>ಕನ್ನಡ ಚಿತ್ರರಂಗದ ಮೇರುನಟಿ ಲೀಲಾವತಿ ಅವರು ಅಸ್ತಂಗತರಾಗಿದ್ದಾರೆ. 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ ವಿಭಿನ್ನ ಅಭಿನಯದಿಂದ ನೋಡುಗರ ಮನಸೆಳೆದಿದ್ದರು</p></div>

ಕನ್ನಡ ಚಿತ್ರರಂಗದ ಮೇರುನಟಿ ಲೀಲಾವತಿ ಅವರು ಅಸ್ತಂಗತರಾಗಿದ್ದಾರೆ. 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ ವಿಭಿನ್ನ ಅಭಿನಯದಿಂದ ನೋಡುಗರ ಮನಸೆಳೆದಿದ್ದರು

   

ಚಿತ್ರ ಕೃಪೆ–ಪ್ರಜಾವಾಣಿ ಸಂಗ್ರಹ ಚಿತ್ರ

ಅಭಿನಯವೆಂಬುದು
ಇವರಿಗೆ ಲೀಲೆ; ಕೈಯೊಳಗಿನ ಅರಗಿಣಿ
ಯನಾಡಿಸಿದಂತೆ ಲೀಲಾಜಾಲದ ಹೂ ಚೆಂಡಿನಾಟ
ಹರೆಯದ ಪ್ರೇಯಸಿ, ಅಟ್ಟುಂಬುವ ಮಡದಿ
ಚೆಲ್ಲಾಟದ ಚೆಲುವೆ ಯಾವುದಾದರೂ ಸೈ
ಅದರೊಳ ಹೊಕ್ಕು ಸಿಕ್ಕು ಬಿಡಿಸಿದಂತೆ
ಹಗುರಾಗಿ ಪಾತ್ರವನೆತ್ತಿ ಕೊಡುವ
ಕುಶಲೆ ಈ ಲೀಲಾವತಿ

ADVERTISEMENT

ಹೊಟ್ಟೆ ಪಾಡಿಗೆ ಬಂದೆ
ಎನ್ನುತ್ತಲೇ ಈ ದಿಟ್ಟೆ ಕಟ್ಟಿದಳು ಬದುಕ
ಹೊಟ್ಟೆ ಮಗನ ಬೆನ್ನಿಗೆ ಕಟ್ಟಿಕೊಂಡು
ಏಕದಿಟ್ಟಿಯಲಿ ಹೆಜ್ಜೆ ; ಅತ್ತಿತ್ತಲುಗದ
ವೃತ್ತಿ ನಿಷ್ಠೆ ; ಕಿರಿಯರು ಕಲಿಯಬೇಕು
ಹಿರಿಯರು ನೆನೆದು ಕೈ ಮುಗಿಯಬೇಕು
ಮುಂದೆ ರಂಗಕ್ಕಿಳಿವವರಿಗೆ
ಓದಲೆ ಬೇಕಾದ ಬರೆಯದ ಪುಸ್ತಕ
ಇವರ ನೋಡಿ ಅಡಿಗಳನಿರಿಸಿ
ಕಲಿತು ಕರಗತಗೊಳಿಸಿರಿ

ಅಮ್ಮನಾಗಿದ್ದು ಎಷ್ಟು ಸಲೀಸು
ಹಾಡಿದ್ದು ಕುಣಿದಿದ್ದು ಶೃಂಗಾರಕೊಲಿದಿದ್ದು
ಮುಗಿದ ಪುಟವೆನಿಸುವ ಮೊದಲೆ
ಅಮ್ಮ ಚಿಕ್ಕಮ್ಮ‌ ಅತ್ತೆ
ಕೊನೆಗೆ ಗದರುವ ಅಜ್ಜಿ
ಯಾಗಿಯೂ ನಮ್ಮಗಳ ನೋಟ
ಕದ್ದಂಥ ನಿಮಗೆ ನಮನ
ಹೊಂದಾಣಿಕೆಯೆಂಬುದು ಅಷ್ಟು ಕಷ್ಟ
ವೇನಲ್ಲವೆಂದು ತೋರಿಸಿಕೊಟ್ಟಿರಿ
ಪಟ್ಟು ಹಿಡಿವುದ ಬಿಟ್ಟು
ತೊರೆಯ ದಿಕ್ಕಿಗೆ ಈಜು
ವುದೇ ನಿಜದಲ್ಲಿ ನಿಜವೆನ್ನುವುದ ದಾಖಲು ಮಾಡಿದಿರಿ

ಮೈ ತುಂಬ ಮಣ್ಣ ಶ್ರೀಗಂಧ
ವನು ಪೂಸಿ ಹಸಿರೆ ಉಸಿರಾಡಿದ
ಸತ್ಯದ ಮಣ್ಣಿನ ಮಗಳು ನೀವು
ಕಂಡುದ್ದ ಬೆಳೆದು ಉಂಡುದ್ದ ಹಂಚಿ
ಇದ್ದಲ್ಲೆ ಜಗವ ಕಂಡ ಅನುಭಾವಿ
ನೆರೆಯ ಜನವನು ಒಳಗೊಂಡು
‌‍ಜೀವ ಜೀವಕು ಅನ್ನರಸವನಿತ್ತ
ಅನ್ನಮ್ಮ ಪ್ರಾಣಿಪ್ರಿಯೆ

ಟೆಂಟೊಳಗೆ
ನಿಮ್ಮನ್ನು ನೋಡಿ ಸಿನಿಮಾ
ಎಂಬ ಜಾದೂವಿಗೆ ಮರುಳಾಗಿ
ನನ್ನಂಥ ಅದೆಷ್ಟು ನೋಡುಗಣ್ಣುಗಳು
ಕಂಡವೋ ಸೊಗಸು ಕನಸುಗಳ
ಕಾಲ ಸರಿದಂತೆ ಮಸುಕಾಗದ
ಮುಖವಾಗಿ ಉಳಿದಿರಿ
ಹೇಳಿಕೊಳಲು ಬರದ ಅದೆಷ್ಟೋ
ಅಭಿಮಾನಿಗಳ ಎದೆಯ
ಚಿತ್ರವಾಗಿ

ಹೋಗಿ ಬನ್ನಿರಿ ತಾಯೀ
ಕನ್ನಡದ ಸೌಭಾಗ್ಯ ಮತ್ತೆ ತನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.