ರಾತ್ರಿ-
ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರ
ಮೈ ಮೆತ್ತಿಕೊಳ್ಳುವ ಪರಿಚಿತರಾದರೂ
ಬೆಳ್ಳಂ ಬೆಳಗ ಹಗಲಲಿ
ಜನ್ಮಾಂತರದ ಅಪರಿಚಿತರು
ಮನಸ್ಸಿನ ಸಂದಿಗೊಂದಿಗಳಲಿ
ಎಂದೂ ಹೆಜ್ಜೆಯಿಕ್ಕದ ನೀ
ರಮ್ಯಭಾವನೆಗಳ ನವಿರ
ಸ್ಪಂದನವೇನೆಂದೇ ತಿಳಿಯದ
ಕಡು ಅಪರಿಚಿತತೆಯ
ಅಯೋಮಯ ವ್ಯಸ್ತಪುರುಷ
ಬೆಳಕ ದೊಂದಿ
ಕೈಯಲಿದ್ದೂ ಎಣ್ಣೆಯನಿಕ್ಕಿ
ಬೆಳಕ ನೇಯಲಾರದ
ಅಕುಶಲಕರ್ಮಿ ನೀನೆಂದರೆ
ಕಟೋಕ್ತಿಯಲ್ಲ
ಕಣ್ಣಲ್ಲಿ ಕಣ್ಣು ಬೆರೆಸಿ
ತುಟಿಯ ನಗೆ ಹೆಕ್ಕಿ
ಕೆನ್ನೆ ಗುಣಿಯಲಿ ಹಾಸ್ಯದೊರತೆಯ
ರಸದುಂಬಿ ಹೃದಯಕ್ಕೆ ಕನ್ನ
ಹಾಕಲರಿಯದ
ಬರೀ ಆಕಾರದ ಡಿಂಬ
ಶಾಸ್ತ್ರಕೆ ಸಪ್ತಪದಿ ತುಳಿದ
ನೀನ್ಯಾರೋ ನಾನ್ಯಾರೋ
ಬದುಕ ಹೊಳೆಯಲಿ
ಜೊತೆಯಾಗಿ ಹುಟ್ಟ ಹಿಡಿದವರು
ಭರತ ಇಳಿತದ ಹಾದಿಗುಂಟ
ವಿಮುಖ ಪಯಣದ ಹೆಜ್ಜೆ
ಸರಸ-ಸುಮ್ಮಾನ ಸತ್ತ
ನಿರ್ವ್ಯಾಜ-ನಿರ್ಮೋಹ ನಿಟ್ಟುಸಿರು
ಗುರುತು ಗುರಿಯಿರದ ಪಯಣ
ಈ ನಮ್ಮ ಅಸಾಂಗತ್ಯ ದಾಂಪತ್ಯ
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.