ನನ್ನ ಮೈಗಂಟಿದ ಚರ್ಮ ನೀ ಇದ್ದೆ
ಉಸಿರಲ್ಲಿನ ಘಮವಾಗಿ ಲಯದೊಡಲಿನ ತಾಳವಾಗಿ
ಬಾಳ ಪಯಣದ ಕನಸಾಗಿ ಬದುಕಿನ ಭರವಸೆಯಾಗಿ.
ಈಗೇಕೆ ಕಾಡುವೆ ಈ ಪರಿಯಾಗಿ?
ಹೇಳಲೇ ಇಲ್ಲ ನೀನು ನಿನ್ನೊಳಗೆ
ನಾನೆಂಬ ಕಟು ಸತ್ಯವ
ಅಕ್ಕ, ಹೇಳು:ಇದು
ವಿಶ್ವಾಸ ಘಾತವೇ
ನಿನ್ನೊಳಗೆ ನಾನು, ನನ್ನೊಳಗೆ ನೀನು
ಈ ಬಂಧ ಸಂಬಂಧ
ಹೇಗೆ ಕಳಚಿಕೊಂಡು ದೂರಾದೆ?
ನಾನೆಂತು ಇಲ್ಲೇ ಉಳಿದು ಹೋದೆ?
ಹಾರಿ ಹೋದೆ ನೀನು ಸುಳಿವೇ ಕೊಡದೆ
ನಾನಿಲ್ಲೇ ಒಂಟಿ ಉಳಿದೇ ಹೋದೆ !
ಈಗ ಈ ಮನೆ ಮನದಲ್ಲಿ ಭಣಗುಡುವ ಮೌನ.
ನಿನ್ನ ಹೆಜ್ಜೆಯಲಿರದ ಗೆಜ್ಜೆಯ ದನಿಯ ಮೆಲು ಸದ್ದು
ಕೇಳಿಯೂ ಕೇಳಿಸದಂತೆ
ಇದ್ದದ್ದೇ ಸುಳ್ಳೆನುವ ಹಾಗೆ ಈಗಿಲ್ಲಿ
ಹರಡಿಕೊಂಡಿದೆ ನಿತಾಂತ ಮೌನ.
ನನ್ನೊಳಗಿನ ಜೀವರಸ ನೀನಿರದೆ ನಾನೀಗ
ರಸಹೀನ ಕಬ್ಬಿನ ಸಿಪ್ಪೆ.
ಅರಿಯದೇ ಹೋದೆ ನಿನ್ನಲ್ಲಿ ಅಡಗಿದ್ದ
ನನ್ನ ಜೀವ ಪಕ್ಷಿ ಈಗ ನಿಸ್ತೇಜ.
ಈಗಿರದ ನನ್ನ ಜೀವರಸವೇ
ನನ್ನ ರಕ್ತದ ಹನಿಯೇ
ನನ್ನ ಬಾಳ ಪಥ ಬದಲು ಮಾಡಿದ
ನನ್ನುಸಿರ ಸೂತ್ರಧಾರಳೇ
ಈಗಲಾದರೂ ಹೇಳಿಬಿಡು ನೀನು
ಹೋಗಿಯೇ ಬಿಟ್ಟೆ ಯಾಕೆ
ನನ್ನ ತಬ್ಬಲಿ ಮಾಡಿ.?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.